ಪೊಲೀಸ್ ಗೋಲಿಬಾರ್ ಬಗ್ಗೆ ನ್ಯಾಯಾಂಗ ತನಿಖೆ ನಡೆಯಲಿ: ದಕ್ಷಿಣ ಕನ್ನಡ, ಉಡುಪಿ ಮುಸ್ಲಿಂ ಸೆಂಟ್ರಲ್ ಕಮಿಟಿ

Update: 2019-12-22 14:52 GMT

ಮಂಗಳೂರು, ಡಿ.22: ದೇಶಾದ್ಯಂತ ಸಿಎಎ ಮತ್ತು ಎನ್ ಆರ್‌ಸಿ ಯನ್ನು ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿದ್ದು,  ಮಂಗಳೂರಿನಲ್ಲೂ 2020ರ ಜನವರಿ 4ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ದಕ್ಷಿಣ ಕನ್ನಡ ಮತ್ತು ಉಡುಪಿ ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಕೆ.ಎಸ್.ಮುಹಮ್ಮದ್ ಮಸೂದ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಇದಕ್ಕೂ ಮೊದಲು ಡಿ.28ರಂದು ಪ್ರತಿಭಟನೆ ನಡೆಸುವುದಾಗಿ ನಿರ್ಧರಿಸಲಾಗಿತ್ತು. ಆದರೆ ಕ್ರಿಸ್ಮಸ್ ಹಿನ್ನೆಲೆಯಲ್ಲಿ ದಿನಾಂಕವನ್ನು ಜನವರಿ 4ಕ್ಕೆ ಮುಂದೂಡಲಾಗಿದೆ ಎಂದವರು ಮಾಹಿತಿ ನೀಡಿದರು.

ಡಿ.19ರಂದು ನಗರದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಲಾಠಿ ಚಾರ್ಜ್ ನಡೆಸಿದ ಪೊಲೀಸರು ಆನಂತರ ಗೋಲಿಬಾರ್ ನಡೆಸಿದ್ದಾರೆ. ಪೊಲೀಸ್ ಗೋಲಿಬಾರ್ ನಿಂದ ಇಬ್ಬರು ಮೃತಪಟ್ಟಿದ್ದು, ಪ್ರಕರಣದ ಸತ್ಯಾಂಶ ಹೊರಬರಬೇಕಾದರೆ ನ್ಯಾಯಾಂಗ ತನಿಖೆ ನಡೆಯಬೇಕು. ಇದರ ಹೊರತಾಗಿ ಬೇರೆ ಯಾವುದೇ ರೀತಿಯ ತನಿಖೆಯನ್ನು ನಾವು ಒಪ್ಪುವುದಿಲ್ಲ  ಪ್ರತಿಭಟನಕಾರರ ಮೇಲೆ ಗೋಲಿಬಾರ್ ಮಾಡಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೆ.ಎಸ್. ಮುಹಮ್ಮದ್ ಮಸೂದ್ ಆಗ್ರಹಿಸಿದರು.

ಪೌರತ್ವ ತಿದ್ಧುಪಡಿ ಕಾಯ್ದೆಯಿಂದ ಮುಸ್ಲಿಮರನ್ನು ಮಾತ್ರ ಹೊರಗಿಡುವುದು ದೇಶದ ಸಂವಿಧಾನಕ್ಕೆ ವಿರುದ್ಧವಾಗಿರುವುದರಿಂದ ಈಗಾಗಲೆ ದೇಶದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. 30 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದವರನ್ನು, ಕಾರ್ಗಿಲ್‌ ಯೋಧರನ್ನು ಎನ್ ಆರ್‌ಸಿ ಪಟ್ಟಿಯಿಂದ ಹೊರಗಿಡಲಾಗಿದೆ. ಈ ರೀತಿಯ ಕಾಯ್ದೆಯನ್ನು ಜಾರಿ ಮಾಡುವುದರಿಂದ ದೇಶದಲ್ಲಿ ದಾಖಲೆಗಳನ್ನು ಹೊಂದಿಲ್ಲದ ದೇಶದ ಮೂಲ ನಿವಾಸಿಗಳಾಗಿರುವವರಿಗೆ ಬುಡಕಟ್ಟು ಜನರಿಗೆ, ಮುಸ್ಲಿಮರಿಗೆ ಹಾಗೂ ಇತರರಿಗೆ ತೊಂದರೆಗಳಾಗುತ್ತವೆ. ಆ ಕಾರಣದಿಂದ ಈ ಕಾಯ್ದೆಯನ್ನು ಮುಸ್ಲಿಂ ಸೆಂಟ್ರಲ್ ಕಮಿಟಿ ವಿರೋಧಿಸುತ್ತದೆ. ಮಂಗಳೂರಿನಲ್ಲಿ ಪೊಲೀಸ್ ಗೋಲಿಬಾರಿನಿಂದೆ ಮೃತಪಟ್ಟ ಸಂತ್ರಸ್ತರ ಕುಂಟುಂಬಕ್ಕೆ  ಗರಿಷ್ಠ ಪರಿಹಾರ ನೀಡಬೇಕು. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲಾ ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರಕಾರ ಭರಿಸಬೇಕು ಎಂದು ಮುಹಮ್ಮದ್ ಮಸೂದ್ ಆಗ್ರಹಿಸಿದ್ದಾರೆ.

ಪೊಲೀಸರಿಂದ ತಪ್ಪು ಮಾಹಿತಿ: ಮುಮ್ತಾಝ್ ಅಲಿ 

ಮಂಗಳೂರು ಗೋಲಿಬಾರ್ ಗೆ ಸಂಬಂಧಿಸಿ ಪೊಲೀಸರು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಮಂಗಳೂರಿನಲ್ಲಿ 52 ವರ್ಷಗಳಿಂದಲೂ ಮುಸ್ಲಿಂ ಸೆಂಟ್ರಲ್ ಕಮಿಟಿ ಸೇರಿದಂತೆ ವಿವಿಧ ಸಂಘಟನೆಗಳಿಂದ ಪ್ರತಿಭಟನೆಗಳು ನಡೆದಿವೆ. ಈ ಬಾರಿ ಡಿ.19ರಂದು ಪೌರತ್ವ ತಿದ್ದುಪಡಿ ಕಾಯಿದೆಯ ವಿರುದ್ಧ ಪ್ರತಿಭಟನೆಗೆ ಸಂಘಟನೆಯೊಂದಕ್ಕೆ ಪೊಲೀಸ್ ಕಮಿಷನರ್ ಅನುಮತಿ ನೀಡಿದ್ದರು. ಆ ಬಳಿಕ ಸೆಕ್ಷನ್ ಕಾರಣ ನೀಡಿ ಅನುಮತಿ ನಿರಾಕರಿಸಿದರು. ಡಿ.19ರಂದು ಪೌರತ್ವ ಕಾಯ್ದೆಯನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ 100-200ರಷ್ಟು ಜನ ಸೇರಿದ್ದರು. ಆದರೆ ಸಾವಿರಾರು ಜನ ಸೇರಿದ್ದರು ಎಂದು ಪೊಲೀಸರು ನೀಡುತ್ತಿರುವುದು ತಪ್ಪು ಮಾಹಿತಿ ಎಂದು ದ.ಕ. ಉಡುಪಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷ ಮುಮ್ತಾಝ್ ಅಲಿ ಹೇಳಿದರು.

ಪ್ರತಿಭಟನೆ ನಡೆದ ರಸ್ತೆಯ ಪಕ್ಕದಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿರುವ ಬದ್ರಿಯಾ ಶಿಕ್ಷಣ ಸಂಸ್ಥೆಯಿದೆ. ಇನ್ನೊಂದು ಕಡೆ ಅಲ್ಲಿ ಸಾಕಷ್ಟು ಅಂಗಡಿಗಳಿವೆ. ಅಲ್ಲಿ ನೂರಾರು ಜನರು ಸೇರುತ್ತಾರೆ. ಇಂತಹ ಪ್ರದೇಶದಲ್ಲಿ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಬಳಿಕ ಈ ಬಗ್ಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಎಫ್‌ಐಆರ್‌ ನಲ್ಲೂ ತಪ್ಪು ಮಾಹಿತಿಯನ್ನು ನೀಡಿದ್ದಾರೆ. ಈ ಬಗ್ಗೆ ಸತ್ಯಾಂಶ ಏನೆಂದು ತಿಳಿಯಬೇಕಾದರೆ ಆ ಪರಿಸರದ ಸಿಸಿ ಕ್ಯಾಮರಾಗಳ ಮತ್ತು ಠಾಣೆಯಲ್ಲಿರುವ ಸಿಸಿ ಕ್ಯಾಮರಾಗಳ ದಾಖಲೆಗಳನ್ನು ಪರಿಶೀಲಿಸಬಹುದಾಗಿದೆ. ಮಂಗಳೂರಿನಲ್ಲಿ ಒಂದು ತಿಂಗಳ ಹಿಂದಿನಿಂದಲೇ ಎನ್‌ಆರ್‌ ಸಿ, ಸಿಎಎ ವಿರುದ್ಧ ಶಾಂತಿಯುತ ಪ್ರತಿಭಟನೆಗೆ ಅವಕಾಶವನ್ನು ಕೋರಿ ಮನವಿ ಮಾಡಲಾಗಿತ್ತು. ಆದರೆ ಅವಕಾಶ ನೀಡಿರಲಿಲ್ಲ ಎಂದು ಮಮ್ತಾಝ್ ಅಲಿ ತಿಳಿಸಿದ್ದಾರೆ.

ನಗರದ ಯುನಿಟಿ ಆಸ್ಪತ್ರೆಯಲ್ಲಿ 13 ಮಂದಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯ ಐಸಿಯು ಒಳಗೆ ಪೊಲೀಸರು ನುಗ್ಗಿ ಅಶ್ರುವಾಯ ಸಿಡಿಸಿರುವ ಘಟನೆ ಮಂಗಳೂರಿನಲ್ಲಿ ಹಿಂದೆಂದೂ ನಡೆದಿಲ್ಲ ಎಂದು ಮುಸ್ಲಿಂ ಸೆಂಟ್ರಲ್ ಕಮಿಟಿ ಪದಾಧಿಕಾರಿ ಹನೀಫ್ ಹಾಜಿ ತಿಳಿಸಿದ್ದಾರೆ.

"ನಾನು ಮಂಗಳೂರಿನಲ್ಲಿ ಹಲವು ವರ್ಷಗಳಿಂದ ಪ್ರತಿಭಟನೆ ನಡೆಯುತ್ತಿರುವುದನ್ನು ನೋಡಿದ್ದೇನೆ. ಆದರೆ ಈ ರೀತಿ ಪೊಲೀಸರಿಂದ ಗೋಲಿಬಾರ್ ನಡೆದಿರುವುದು ಇದೇ ಮೊದಲ ಬಾರಿ ಎಂದು ಮುಸ್ಲಿಂ ಸೆಂಟ್ರಲ್ ಕಮಿಟಿ ಮಖಂಡ ಕೋಡಿಜಾಲ್ ಇಬ್ರಾಹೀಂ ತಿಳಿಸಿದ್ದಾರೆ.

ಸುದ್ದಿಗೊಷ್ಠಿಯಲ್ಲಿ ಮಾಜಿ ಶಾಸಕ ಬಿ.ಎ.ಮೊಯ್ದಿನ್ ಬಾವ, ಜಿಲ್ಲಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ಮನಪಾ ಸದಸ್ಯ ಶಂಸುದ್ದೀನ್, ಮುಸ್ಲಿಂ ಸೆಂಟ್ರಲ್ ಕಮಿಟಿಯ ಪದಾಧಿಕಾರಿಗಳಾದ ಇಬ್ರಾಹೀಂ ಕೋಡಿಜಾಲ್, ಮುಮ್ತಾಝ್ ಅಲಿ, ಹನೀಫ್ ಹಾಜಿ, ರಫೀಉದ್ದೀನ್ ಕುದ್ರೋಳಿ, ಅಥಾವುಲ್ಲಾ ಕೋಕಟ್ಟೆ, ರಾಝಿಕ್, ಇಮ್ತಿಯಾಝ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News