ನಿಷೇಧಾಜ್ಞೆಯ ನಡುವೆ ಮದ್ಯಮಾರಾಟ: ಆರೋಪಿಗಳ ಬಂಧನ

Update: 2019-12-22 18:17 GMT

ಪುತ್ತೂರು: ನಿಷೇಧಾಜ್ಞೆಯ ನಡುವೆಯೂ ಎರಡು ಪ್ರತ್ಯೇಕ ಪ್ರಕರಣದಲ್ಲಿ ಶನಿವಾರ ಮನೆಯೊಂದರಲ್ಲಿ ಹಾಗೂ ಆಟೋ ರಿಕ್ಷಾದ ಒಳಗಡೆ ಮದ್ಯ ಮಾರಾಟ ನಡೆಸಿದ ಪ್ರಕರಣವನ್ನು ಪತ್ತೆ ಹಚ್ಚಿದ ನಗರ ಹಾಗೂ ಗ್ರಾಮಾಂತರ ಪೊಲೀಸರು ಮಾಲು ವಶಕ್ಕೆ ಪಡೆದುಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ

ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲ ಪಂಚೋಡಿ ಎಂಬಲ್ಲಿ ಮನೆಯಲ್ಲಿಯೇ ಅಕ್ರಮವಾಗಿ ಮದ್ಯ ಮಾರಾಟ ನಡೆಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿದ ಸಂಪ್ಯ ಗ್ರಾಮಾಂತರ ಪೊಲೀಸರು ಮಾನ ಪಾಟಾಳಿ(62) ಎಂಬಾತನನ್ನು ಬಂಧಿಸಿದ್ದಾರೆ ಹಾಗೂ ಮನೆಯಲ್ಲಿ ಮಾರಾಟಕ್ಕೆಂದು ದಾಸ್ತಾನು ಇರಿಸಲಾಗಿದ್ದ 7920 ಲೀಟರ್ ವಿಸ್ಕಿ, 5950 ಲೀಟರ್ ಬಿಯರ್ ಸೇರಿದಂತೆ ಒಟ್ಟು ರೂ. 3749 ಮೌಲ್ಯದ ವಸ್ತುಗಳನ್ನು ಮತ್ತು ರೂ. 750 ನಗದನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 

ಗ್ರಾಮಾಂತರ ಠಾಣೆಯ ಎಸ್‍ಐ ಸಕ್ತಿವೇಲು ನೇತೃತ್ವದ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಮಾನ ಪಾಟಾಳಿ ಅವರ ಪುತ್ರ ಲೋಕೇಶ್ ಎಂಬಾತ ಪರಾರಿಯಾಗಿರುವುದಾಗಿ ತಿಳಿದು ಬಂದಿದೆ. 

ಬಂಧಿತ ಆರೋಪಿ ಮಾನ ಪಾಟಾಳಿಯನ್ನು ರವಿವಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಧೀಶರು ಮಧ್ಯಂತರ ಜಾಮೀನು ಮಂಜೂರುಗೊಳಿಸಿದ್ದಾರೆ. 

ಇನ್ನೊಂದು ಪ್ರಕರಣದಲ್ಲಿ ಪುತ್ತೂರು ನಗರದ ದರ್ಬೆಯಲಿ ಅಟೋರಿಕ್ಷಾದ ಒಳಗಡೆ ಮದ್ಯ ಮಾರಾಟ ನಡೆಸುತ್ತಿರುವ ಪ್ರಕರಣವನ್ನು ಪತ್ತೆ ಹಚ್ಚಿದ ನಗರ ಪೊಲೀಸರು ಪುತ್ತೂರು ತಾಲೂಕಿನ ಕೆಮ್ಮಿಂಜೆ ಗ್ರಾಮದ ನೈತಾಡಿ ನಿವಾಸಿ ರಾಘವ ಯಾನೆ ತನಿಯ(35) ಮತ್ತು ಪಂಜಳ ನಿವಾಸಿ ಕೃಷ್ಣಪ್ಪ ಯಾನೆ ಅಂಗಾರ(40) ಎಂಬಿಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಂದ 140ಎಂ.ಎಲ್ ಮೈಸೂರು ಸ್ಯಾಂಡಲ್ ವಿಸ್ಕಿಯ 4 ಬಾಟೆಲ್‍ಗಳು, 90ಎಂಎಲ್‍ನ ಟೆಟ್ರಾಪ್ಯಾಕ್ ಸೇರಿದಂತೆ ಒಟ್ಟು ರೂ. 250 ಮೌಲ್ಯದ ಮದ್ಯ ಹಾಗೂ ಕೃತ್ಯಕ್ಕೆಕ ಬಳಸಿದ ರೂ. 80 ಸಾವಿರ ಮೌಲ್ಯದ ಅಟೋರಿಕ್ಷಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 

ನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ ಅವರ ನೇತೃತ್ವದಲ್ಲಿ ದಾಳಿ ಕಾರ್ಯಾಚರಣೆ ನಡೆಸಲಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News