ಉಡುಪಿ: ದ್ವಿತೀಯ ತ್ರೈಮಾಸಿಕದಲ್ಲಿ ಬ್ಯಾಂಕ್‌ಗಳ ವ್ಯವಹಾರ ಕುಸಿತ

Update: 2019-12-23 16:29 GMT

ಉಡುಪಿ, ಡಿ. 23: ಆರ್ಥಿಕ ವರ್ಷದ ದ್ವಿತೀಯ ತ್ರೈಮಾಸಿಕದಲ್ಲಿ (ಜುಲೈನಿಂದ ಸೆಪ್ಟಂಬರ್) ಉಡುಪಿ ಜಿಲ್ಲೆಯ ಬ್ಯಾಂಕಿಂಗ್ ವ್ಯವಹಾರದಲ್ಲಿ ಕುಸಿತ ಕಂಡು ಬಂದಿದೆ. ಹಿಂದಿನ ಸಾಲಿಗೆ ಹೋಲಿಸಿದರೆ ಬ್ಯಾಂಕುಗಳ ಠೇವಣಿಯಲ್ಲಿ 207 ಕೋಟಿ ರೂ. ಕಡಿಮೆಯಾಗಿದೆ ಎಂದು ಜಿಲ್ಲೆಯ ಲೀಡ್‌ಬ್ಯಾಂಕ್ ಆದ ಸಿಂಡಿಕೇಟ್ ಬ್ಯಾಂಕಿನ ನೇತೃತ್ವದಲ್ಲಿ ನಡೆದ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಸಭೆಗೆ ಮಾಹಿತಿ ನೀಡಲಾಯಿತು.

ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್ ಅವರ ಅಧ್ಯಕ್ಷತೆಯಲ್ಲಿ ಮಣಿಪಾಲದ ಜಿಪಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಈ ಮಾಹಿತಿ ನೀಡಿದ ಲೀಡ್ ಬ್ಯಾಂಕ್ ಮ್ಯಾನೇಜರ್ ರುದ್ರೇಶ್ ಡಿ.ಸಿ., ಕೆನರಾ ಬ್ಯಾಂಕ್ ಒಂದರಲ್ಲೇ 285 ಕೋಟಿರೂ.ಗಳ ಠೇವಣಿ ಕುಸಿತವಾಗಿದೆ. ಜಿಲ್ಲೆಯ ಏಳು ಬ್ಯಾಂಕ್ ಶಾಖೆಗಳಲ್ಲಿ ಈ ನೆಗಟೀವ್ ಪ್ರವೃತ್ತಿ ಕಂಡುಬಂದಿದೆ. ಆದರೆ ಉಳಿದ ಬ್ಯಾಂಕ್‌ಗಳ ಠೇವಣಿಯಲ್ಲಿ ಹೆಚ್ಚಳವಾಗಿದೆ ಎಂದರು.

ಸಿಂಡಿಕೇಟ್ ಬ್ಯಾಂಕಿನ ಪ್ರಾದೇಶಿಕ ಮ್ಯಾನೇಜರ್ ಸುಜಾತ ಅವರು ಪ್ರದಾನ ಭಾಷಣ ಮಾಡಿ, 2019-20ನೇ ಸಾಲಿನ ದ್ವಿತೀಯ ತ್ರೈಮಾಸಿಕದ ಜಿಲ್ಲೆಯ ಬ್ಯಾಂಕ್‌ಗಳ ಸಾಧನೆಗಳನ್ನು ವಿವರಿಸಿದರು. ಈ ಅವಧಿಯಲ್ಲಿ ಜಿಲ್ಲೆಯ ಬ್ಯಾಂಕ್‌ಗಳ ಠೇವಣಿ 24,427 ಕೋಟಿ ರೂ.ಇದ್ದು, ವಾರ್ಷಿಕವಾಗಿ ಶೇ.5.78ರ ಪ್ರಗತಿ ಸಾಧಿಸಿದೆ. ಇದೇ ಅವಧಿಯಲ್ಲಿ ಬ್ಯಾಂಕುಗಳು 11,914 ಕೋಟಿ ರೂ. ಸಾಲವನ್ನು ವಿತರಿಸಿದ್ದು, ಇದು ಒಟ್ಟಾರೆಯಾಗಿ ಶೇ.-0.91 ಆಗಿದೆ ಎಂದರು.

ಜಿಲ್ಲೆಯ ಬ್ಯಾಂಕುಗಳ ಸಾಲ ಮತ್ತು ಠೇವಣಿಯ ಅನುಪಾತ ಶೇ.48.77 ಆಗಿದ್ದು, ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ.0.2 (ಶೇ.48.89)ರಷ್ಟು ಕುಸಿದಿದೆ. ಆರ್‌ಬಿಐನ ಮಾನದಂಡದಂತೆ ಸಿಡಿ ಅನುಪಾತ ಶೇ.60 ಇರಬೇಕಿದ್ದು, ಜಿಲ್ಲೆಯ ಬ್ಯಾಂಕುಗಳು ಸಾಲ ನೀಡುವಲ್ಲಿ ತೀರಾ ಕಳಪೆ ಸಾಧನೆ ಮಾಡುತ್ತಿವೆ ಎಂದು ಆರ್‌ಬಿಐನ ಪ್ರತಿನಿಧಿ ಬೆಂಗಳೂರಿನ ಎಜಿಎಂ ಪಿ.ಕೆ. ಪಾಟ್ನಾಯಕ್ ತಿಳಿಸಿದರು.

ಈ ಅವಧಿಯಲ್ಲಿ ಕೆನರಾ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್‌ಗಳ ಸಾಧನೆ ತೀರಾ ಕಡಿಮೆ ಇದ್ದು, ಇವುಗಳು ಚುರುಕಾಗಿ ಕಾರ್ಯನಿರ್ವಹಿಸಬೇಕಾದ ಅಗತ್ಯವಿದೆ ಎಂದು ಅವರು ನುಡಿದರು. ರಾಷ್ಟ್ರೀಕೃತ ಬ್ಯಾಂಕುಗಳೇ ಜಿಲ್ಲೆಯಲ್ಲಿ ಹಿನ್ನಡೆ ಕಂಡಿವೆ ಎಂದವರು ಅಚ್ಚರಿ ವ್ಯಕ್ತಪಡಿಸಿದರು.

ಜುಲೈನಿಂದ ಮೂರು ತಿಂಗಳ ಅವಧಿಯಲ್ಲಿ ಜಿಲ್ಲೆಯ ಬ್ಯಾಂಕುಗಳು 2302 ಕೋಟಿ ರೂ. ಸಾಲವನ್ನು ವಿತರಿಸಿದ್ದು, ಇದು ಈ ಅವಧಿಯ ಗುರಿಯಾದ 3157 ಕೋಟಿ ರೂ.ನ ಶೇ.72.9 ಆಗಿದೆ ಎಂದು ಸುಜಾತ ತಿಳಿಸಿದರು. ಇವುಗಳಲ್ಲಿ ಕೃಷಿ ವಲಯಕ್ಕೆ 1248 ಕೋಟಿ ರೂ., ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯಕ್ಕೆ 680 ಕೋಟಿ ರೂ., ಶೈಕ್ಷಣಿಕ ಕ್ಷೇತ್ರಕ್ಕೆ 51 ಕೋಟಿ ರೂ., ಗೃಹ ನಿರ್ಮಾಣ ಕ್ಷೇತ್ರ 206 ಕೋಟಿ ರೂ.ಸಾಲವನ್ನು ವಿತರಿಸಲಾಗಿದೆ ಎಂದರು.

ಈ ಮೂಲಕ ಆದ್ಯತಾ ವಲಯಕ್ಕೆ 2732 ಕೋಟಿ ರೂ.ಗಳ ಗುರಿಯಲ್ಲಿ 1981 ಕೋಟಿ ರೂ.ಗಳನ್ನು ವಿತರಿಸಲಾಗಿದೆ. ಆದ್ಯತೇತರ ವಲಯಕ್ಕೆ 425 ಕೋಟಿ ರೂ. ಗುರಿಯಲ್ಲಿ 321 ಕೋಟಿ ರೂ.ಗಳನ್ನು ವಿತರಿಸಲಾಗಿದೆ ಎಂದವರು ವಿವರಿಸಿದರು.
ಸಾಮಾಜದ ದುರ್ಬಲ ವರ್ಗದವರ ಸಬಲೀಕರಣಕ್ಕಾಗಿ ಒಟ್ಟು 39,100 ಪಲಾನುಭವಿಗಳಿಗೆ 3541 ಕೋಟಿ ರೂ. ಸಾಲ ವಿತರಿಸಲಾಗಿದೆ.ಇದರಲ್ಲಿ 33652 ಪರಿಶಿಷ್ಠ ಜಾತಿ ಮತ್ತು ಪಂಗಡದ ಫಲಾನುವಿಗಳ 508 ಕೋಟಿ ರೂ. ಒಳಗೊಂಡಿದೆ.

ಅಲ್ಪಸಂಖ್ಯಾತ ಸಮುದಾಯಗಳ 52147 ಫಲಾನುವಿಗಳಿಗೆ 1232 ಕೋಟಿ ರೂ.ಗಳ ಆರ್ಥಿಕ ಸಹಾಯ ನೀಡಲಾಗಿದೆ. 1,32,060 ಮಹಿಳಾ ಫಲಾನುವಿಗೆಳಿಗೆ 2458 ಕೋಟಿ ರೂ. ಆರ್ಥಿಕ ಸಹಾಯ ಒದಗಿಸಲಾಗಿದೆ. ಈ ಬಾರಿ 2,614 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ 51 ಕೋಟಿ ರೂ. ವಿತರಿಸಲಾಗಿದೆ ಎಂದು ತಿಳಿಸಿದರು.

ಬ್ಯಾಂಕಿಂಗ್ ಚಟುವಟಿಕೆಗೆ ಸಂಬಂಧಿಸಿದಂತೆ ಆರ್‌ಬಿಐನಿಂದ ಹೊರಡಿಸ ಲಾದ ಹೊಸ ಮಾರ್ಗಸೂಚಿ ಮತ್ತು ಸೂಚನೆಗಳ ಬಗ್ಗೆ ಮಾಹಿತಿ ನೀಡುತ್ತಾ ಜಿಲ್ಲೆಯ ಸಿಡಿ ಅನುಪಾತವನ್ನು ಹೆಚ್ಚಿಸುವಲ್ಲಿ ಜಿಲ್ಲೆಯ ಎಲ್ಲಾ ಬ್ಯಾಂಕ್‌ಗಳು ಶ್ರಮಿಸಬೇಕು. ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಪ್ರಚುರ ಪಡಿಸಬೇಕು ಎಂದು ಪಿ.ಕೆ. ಪಾಟ್ನಾಯಕ್ ನುಡಿದರು.

ಬ್ಯಾಂಕಿಂಗ್ ಚಟುವಟಿಕೆಗೆ ಸಂಬಂಧಿಸಿದಂತೆ ಆರ್‌ಬಿಐನಿಂದ ಹೊರಡಿಸ ಲಾದ ಹೊಸ ಮಾರ್ಗಸೂಚಿ ಮತ್ತು ಸೂಚನೆಗಳ ಬಗ್ಗೆ ಮಾಹಿತಿ ನೀಡುತ್ತಾ ಜಿಲ್ಲೆಯ ಸಿಡಿ ಅನುಪಾತವನ್ನು ಹೆಚ್ಚಿಸುವಲ್ಲಿ ಜಿಲ್ಲೆಯ ಎಲ್ಲಾ ಬ್ಯಾಂಕ್‌ಗಳು ಶ್ರಮಿಸಬೇಕು. ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಪ್ರಚುರ ಪಡಿಸಬೇಕು ಎಂದು ಪಿ.ಕೆ. ಪಾಟ್ನಾಯಕ್ ನುಡಿದರು. ನಬಾರ್ಡ್‌ನ ಎಜಿಎಂ ಎಸ್.ರಮೇಶ್ ಸಹ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News