ಡಿ. 27ರಂದು "ಪೌರತ್ವ ಕಾಯ್ದೆ ವಿರೋಧಿಸಿ ಸಂವಿಧಾನ ಉಳಿಸಿ" ಸಮಾವೇಶ

Update: 2019-12-24 11:48 GMT

ಬಂಟ್ವಾಳ, ಡಿ. 24: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಎನ್‍ಆರ್‍ಸಿ ಮತ್ತು ಸಿಎಎ ವಿರುದ್ಧ ವಿಟ್ಲ ಮುಸ್ಲಿಂ ಒಕ್ಕೂಟದ ವತಿಯಿಂದ ಡಿ.27ರ ಶುಕ್ರವಾರ ಮಧ್ಯಾಹ್ನ 2.30ಗಂಟೆಗೆ ವಿಟ್ಲ ಕೇಂದ್ರ ಜುಮಾ ಮಸೀದಿ ವಠಾರದಲ್ಲಿ "ಪೌರತ್ವ ಕಾಯ್ದೆ ವಿರೋಧಿಸಿ ಸಂವಿಧಾನ ಉಳಿಸಿ" ಎಂಬ ಧ್ಯೇಯದಡಿಯಲ್ಲಿ ಬೃಹತ್ "ಸಂರಕ್ಷಣಾ ಸಮಾವೇಶ" ನಡೆಯಲಿದ್ದು, ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ ಸೆಂಥಿಲ್ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ವಿಟ್ಲ ಮುಸ್ಲಿಂ ಒಕ್ಕೂಟದ ಗೌರವಾಧ್ಯಕ್ಷ ಎಂ.ಎಸ್. ಮುಹಮ್ಮದ್ ತಿಳಿಸಿದ್ದಾರೆ.

ಮಂಗಳವಾರ ವಿಟ್ಲ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಕ್ಷಣವೇ ಕಾಯ್ದೆಯನ್ನು ಹಿಂತೆಗೆಯಬೇಕು. ಇಲ್ಲದಿದ್ದಲ್ಲಿ ನಿರಂತರ ಹೋರಾಟ ನಡೆಯಲಿದ್ದು, ವಿಟ್ಲದಲ್ಲಿ ನಡೆಯುವ ಸಮಾವೇಶದಲ್ಲಿ ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ ಸೆಂಥಿಲ್ ಅವರು ಎನ್‍ಆರ್‍ಸಿ, ಸಿಎಎ ಬಗ್ಗೆ ಮಾಹಿತಿ ನೀಡುವರು. ಸಾಮಾಜಿಕ ಹೋರಾಟಗಾರ ನಿಕೇತ್ ರಾಜ್ ಮೌರ್ಯ, ಮುಖಂಡರಾದ ಅನೀಸ್ ಕೌಸರಿ, ಸಿರಾಜುದ್ದೀನ್ ಸಖಾಫಿ, ಅಶ್ರಫ್ ಎಕೆ, ಮೊದಲಾವರು ಉಪಸ್ಥಿತರಿರುವರು. ಸರ್ವಪಕ್ಷಗಳ ಮುಖಂಡರು, ವಿವಿಧ ಸಂಘಟನೆಗಳು ಸಾಥ್ ನೀಡಲಿದ್ದು, ಸುಮಾರು 3ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಮಾಹಿತಿ ನೀಡಿದರು.

ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸರುವ ಸಂವಿಧಾನ ವಿರೋಧಿ ಮಸೂದೆ ಎನ್‍ಆರ್‍ಸಿ ಹಾಗೂ ಸಿಎಎ ದೇಶದ ಅಲ್ಪಸಂಖ್ಯಾತ ಮುಸ್ಲಿಂ ಹಾಗೂ ಹಿಂದುಳಿದ ವರ್ಗಗಳನ್ನು ದೇಶದ ಮುಖ್ಯವಾಹಿನಿಯಿಂದ ಹೊರಗಿಟ್ಟು, ದೇಶವನ್ನು ಧರ್ಮಾಧಾರಿತವಾಗಿ ಒಡೆಯುವ ಷಡ್ಯಂತ್ರವಾಗಿದೆ. ಇದರ ಬಗ್ಗೆ ಪ್ರಧಾನಿ ಒಂದು ಹೇಳಿಕೆ ನೀಡಿದರೆ, ಗೃಹಸಚಿವ ಅಮಿತ್ ಶಾ ಇನ್ನೊಂದು ಹೇಳಿಕೆ ನೀಡುತ್ತಿದ್ದಾರೆ ಎಂದು ಅವರು ಹೇಳಿದರು.

ಈ ರೀತಿಯ ಗೊಂದಲ ವಾತಾವರಣದಿಂದ ದೇಶದ ನಾಗರೀಕರು ದಿನದೂಡುತ್ತಿರುವುದರೊಂದಿಗೆ ದೇಶ ಆರ್ಥಿಕ ಹಿಂಜರಿತನ ದಿಂದ ಜನರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ವಸ್ತುಗಳ ಬೆಲೆ ಗಗನಕ್ಕೇರಿದೆ. ಇದನ್ನು ಮರೆಮಾಚಲು ಕೇಂದ್ರ ಈ ವಿವಾದಿತ ಕಾಯ್ದೆಯನ್ನು ಜಾರಿಗೆ ತಂದಿದೆ. ಬಿಜೆಪಿ ಶಾಸಕರು ಸಂಸದರ ಮುಸಲ್ಮಾನರು ಪಾಕಿಸ್ತಾನಕ್ಕೆ ಹೋಗಲಿ ಎಂದು ಹೇಳಿಕೆ ನೀಡುತ್ತಿದ್ದು, ನವಾಝ್ ಶರೀಫ್ ಅವರ ಮಗನ ಹುಟ್ಟು ಹಬ್ಬಕ್ಕೆ ತೆರಳಿ ಶುಭಾ ಹಾರೈಸಲು ಪ್ರಧಾನ ಮಂತ್ರಿ ಮೋದಿ ಹೊರತು ಇಲ್ಲಿಯ ಅಲ್ಪಸಂಖ್ಯಾತರು ಹೋಗಿಲ್ಲ ಎಂದ ಅವರು, ದೇಶದಲ್ಲಿ ಸರ್ವಧರ್ಮಿಯರಿಗೆ ಬದುಕುವ ಹಕ್ಕು ಇದೆ. ನಾವು ಪಾಕಿಸ್ತಾನಕ್ಕೆ ಹೋಗುವುದಿಲ್ಲ ಬೇಕಾದರೆ ಅವರೇ ಹೋಗಲಿ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ವಿ.ಎಚ್ ಅಶ್ರಫ್, ಪ್ರಮುಖರಾದ ವಿ.ಎಸ್ ಇಬ್ರಾಹಿಂ ಒಕ್ಕೆತ್ತೂರು, ವಿಕೆಎಂ ಅಶ್ರಫ್, ಕಲಂದರ್ ಪರ್ತಿಪ್ಪಾಡಿ ಉಪಸ್ಥಿತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News