ತೆಕ್ಕಟ್ಟೆ: ಮಾಲಾಡಿಯಲ್ಲಿ ಮತ್ತೊಂದು ಚಿರತೆ ಸೆರೆ

Update: 2019-12-24 14:44 GMT

ಉಡುಪಿ, ಡಿ.23: ತೆಕ್ಕಟ್ಟೆ ಗ್ರಾಮದ ಮಾಲಾಡಿ ಎಂಬಲ್ಲಿರುವ ಹಾಡಿಯಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಮತ್ತೊಂದು ಚಿರತೆ ಸೆರೆಯಾಗಿದ್ದು, ಹೀಗೆ ಈ ಪರಿಸರದಲ್ಲಿ ಕಳೆದ ಒಂದೂವರೆ ವರ್ಷ ಅವಧಿಯಲ್ಲಿ ಒಟ್ಟು ನಾಲ್ಕು ಚಿರತೆಗಳು ಬೋನಿಗೆ ಬಿದ್ದಂತಾಗಿದೆ.

ಸ್ಥಳೀಯರ ದೂರಿನ ಹಿನ್ನೆಲೆಯಲ್ಲಿ ಡಿ.12ರಂದು ಕುಂದಾಪುರ ವಲಯ ಅರಣ್ಯ ಇಲಾಖೆಯವರು ಮಾಲಾಡಿಯಲ್ಲಿ ಬೋನು ಇರಿಸಿ ಚಿರತೆಯ ಸೆರೆಗೆ ಕಾರ್ಯಾಚರಣೆ ನಡೆಸಿದ್ದರು. ಬೇಟೆಗಾಗಿ ಬಂದ ನಾಲ್ಕು ವರ್ಷ ಪ್ರಾಯದ ಹೆಣ್ಣು ಚಿರತೆ ಈ ಬೋನಿನಲ್ಲಿ ಡಿ.23ರಂದು ರಾತ್ರಿ ವೇಳೆ ಸೆರೆಯಾಯಿತು.

ಈ ಬಗ್ಗೆ ಇಂದು ಬೆಳಗಿನ ಜಾವ 6:30ರ ಸುಮಾರಿಗೆ ಸ್ಥಳೀಯರು ನೀಡಿದ ಮಾಹಿತಿಯಂತೆ ಸ್ಥಳಕ್ಕೆ ತೆರಳಿದ ಅರಣ್ಯ ಇಲಾಖೆ ಯವರು ಬೋನು ಸಹಿತ ಚಿರತೆಯನ್ನು ಕೊಂಡೊಯ್ದು ಕುಂದಾಪುರ ಪಶು ವೈದ್ಯಾಧಿಕಾರಿಗಳಲ್ಲಿ ಪರೀಕ್ಷಿಸಿ ದರು. ನಂತರ ಮಧ್ಯಾಹ್ನ ವೇಳೆ ಚಿರತೆಯನ್ನು ಸುರಕ್ಷಿತವಾಗಿ ಕೊಲ್ಲೂರು ಅಭಯಾರಣ್ಯದಲ್ಲಿ ಬಿಡಲಾಯಿತು.

ಸ್ಥಳಕ್ಕೆ ತೆಕ್ಕಟ್ಟೆ ಗ್ರಾಪಂ ಅಧ್ಯಕ್ಷ ಶೇಖರ್ ಕಾಂಚನ್, ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಸದಸ್ಯರಾದ ಸಂಜೀವ ದೇವಾಡಿಗ, ವಿಜಯ ಭಂಡಾರಿ, ಕುಂದಾಪುರ ಉಪವಲಯ ಅರಣ್ಯಾಧಿಕಾರಿ ಉದಯ್, ಅರಣ್ಯ ವೀಕ್ಷಕ ಸೋಮೇಖರ್ ಭೇಟಿ ನೀಡಿದರು.

3 ತಿಂಗಳಲ್ಲಿ ಮೂರು ಚಿರತೆ: ಮಾಲಾಡಿ ಪರಿಸರದಲ್ಲಿ ಚಿರತೆಗಳು ಓಡಾಟ ನಡೆಸುತ್ತಿವೆ ಎಂದು ಸ್ಥಳೀಯರು ಅರಣ್ಯ ಇಲಾಖೆ ಯವರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ 2018ರ ಆಗಸ್ಟ್‌ನಲ್ಲಿ ಅರಣ್ಯ ಇಲಾಖೆಯವರು ಬೋನು ಇರಿಸಿ ಮೊದಲ ಚಿರತೆಯನ್ನು ಸೆರೆ ಹಿಡಿದಿದ್ದರು.

ನಂತರ 2019ರ ಅ.6ರಂದು ಇದೇ ಸ್ಥಳದಲ್ಲಿ ಇರಿಸಲಾದ ಬೋನಿಗೆ ಸುಮಾರು 10 ವರ್ಷ ಪ್ರಾಯದ ಗಂಡು ಚಿರತೆ ಬಿದ್ದಿತ್ತು. ಡಿ.12ರಂದು ಅಲ್ಲೇ ಇರಿಸಿದ್ದ ಬೋನಿಗೆ ಮೂರು ವರ್ಷ ಪ್ರಾಯದ ಹೆಣ್ಣು ಚಿರತೆ ಬಿತ್ತು. ಇದೀಗ ಇಂದು ನಾಲ್ಕನೆ ಚಿರತೆಯ ಸೆರೆಯಾಗಿದೆ. ಇಲ್ಲಿ ಕಳೆದ ಮೂರು ತಿಂಗಳಲ್ಲಿ ಒಟ್ಟು ಮೂರು ಚಿರತೆಯನ್ನು ಅರಣ್ಯ ಇಲಾಖೆಯವರು ಸೆರೆ ಹಿಡಿದು ಅಭಯಾರಣ್ಯಕ್ಕೆ ಬಿಟ್ಟಿದ್ದಾರೆ.

ಚಿರತೆಯ ಕಾಟದಿಂದ ಮಾಲಾಡಿ ಜನತೆ ಭಯಭೀತರಾಗಿದ್ದು, ಇನ್ನಷ್ಟು ಚಿರತೆಗಳು ಈ ಪ್ರದೇಶದಲ್ಲಿ ಇರಬಹುದು ಎಂಬ ಸಂಶಯವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಆದುದರಿಂದ ಮತ್ತೆ ಅದೇ ಸ್ಥಳದಲ್ಲಿ ಬೋನು ಇರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಈ ಪ್ರದೇಶದಲ್ಲಿ ಸರಕಾರಿ ಶಾಲೆ, ಅಂಗನವಾಡಿ ಹಾಗೂ ದೇವಸ್ಥಾನ ಸೇರಿದಂತೆ ಹಲವು ಮನೆಗಳಿದ್ದು, ಹಾಡುಹಗಲಲ್ಲೇ ಚಿರತೆ ಕಾಣ ಸಿಕ್ಕಿರುವುದ ರಿಂದ ಮಕ್ಕಳು, ಮಹಿಳೆಯರು ಸೇರಿದಂತೆ ಸ್ಥಳೀಯರು ಇಲ್ಲಿ ಓಡಾಡಲು ಭಯ ಪಡುತ್ತಿದ್ದಾರೆ. ಇಲ್ಲಿನ ಶಾಲಾ ಗೇಟಿನಲ್ಲಿ ಆಳವಡಿಸಲಾದ ರಟ್ಟಿನ ಬೋರ್ಡಿನಲ್ಲಿ ‘ಶಾಲಾ ವಠಾರ ನಿಧಾನವಾಗಿ ಚಲಿಸಿ...ಚಿರತೆಯಿದೆ ವೇಗ ವಾಗಿ ಚಲಿಸಿ’ ಎಂಬ ಬರಹ ಗಮನ ಸೆಳೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News