ಜ.5ರಂದು ಶ್ರೀಕೃಷ್ಣನ ಉತ್ಸವ ಮೂರ್ತಿಗೆ ಸ್ವರ್ಣ ತುಲಾಭಾರ

Update: 2019-12-24 16:58 GMT

ಉಡುಪಿ, ಡಿ.24: ಉಡುಪಿ ಶ್ರೀಕೃಷ್ಣ ಮಠದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಶ್ರೀಕೃಷ್ಣನ ಉತ್ಸವ ಮೂರ್ತಿಗೆ ಸ್ವರ್ಣ ತುಲಾಭಾರ ಕಾರ್ಯಕ್ರಮವನ್ನು ಜ.5ರಂದು ಸಂಜೆ 5ಗಂಟೆಗೆ ಹಮ್ಮಿಕೊಳ್ಳಲಾಗಿದೆ.

ಪರ್ಯಾಯ ಪಲಿಮಾರು ಮಠಾಧೀಶ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಮಠದಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಂಜೆ ಶ್ರೀಕೃಷ್ಣನ ಉತ್ಸವದ ಬಳಿಕ ಸೃಷ್ಟಿ ಕಲಾವಿದರ ನೃತ್ಯಗೋಷ್ಠಿಯ ಮಧ್ಯೆ ರಥಬೀದಿಯಲ್ಲಿ ಶ್ರೀಕೃಷ್ಣ ತುಲಾಭಾರ ನಡೆಸಲಾಗುವುದು. ಒಂದು ತೊಲೆ ಚಿನ್ನ ನೀಡುವ ಭಕ್ತರು ಸ್ವತಃ ತಕ್ಕಡಿಯಲ್ಲಿ ಹಾಕಲು ಅವಕಾಶ ನೀಡಲಾಗಿದೆ ಎಂದರು.

ಶ್ರೀಕೃಷ್ಣಮಠದ ಆವರಣದೊಳಗಿನ ಶ್ರೀಸುಬ್ರಹ್ಮಣ್ಯ ಸನ್ನಿಧಿಯಲ್ಲಿ ಜ.2ರಂದು ಗೋಪಾಲಕೃಷ್ಣ ಸಾಮಗ ನೇತೃತ್ವದಲ್ಲಿ ನಾಗಮಂಡಲೋತ್ಸವ ನಡೆಯಲಿದೆ. ಸುಮಾರು 2 ಕೆ.ಜಿ. ಚಿನ್ನ ಹಾಗೂ 30ಕೆ.ಜಿ. ಬೆಳ್ಳಿಯನ್ನು ಉಪಯೋಗಿಸಿ ಕೊಂಡು ನಿರ್ಮಿಸಲಾಗುತ್ತಿರುವ ಮುಖ್ಯಪ್ರಾಣ ಗುಡಿಯ ಸ್ವರ್ಣಗೋಪುರವನ್ನು ಜ.3ರಂದು ಸಮರ್ಪಿಸಲಾುವುದು ಎಂದು ಅವರು ತಿಳಿಸಿದರು.

ಮಹಾಭಾರತ ಪ್ರವಚನ ಮಾಲಿಕೆಯ ಮಂಗಳಾಚರಣೆ ಅಂಗವಾಗಿ ಡಿ.29 ರಿಂದ ಜ.16ರವರೆಗೆ ಪ್ರತಿದಿನ ಸಂಜೆ 4ರಿಂದ 5ರ ವರೆಗೆ ಶ್ರೀಕೃಷ್ಣಮಠದ ಚಂದ್ರಶಾಲೆಯಲ್ಲಿ ಮಹಾಭಾರತ ಸಾರದ ಪ್ರವಚನ ನೀಡುವ ಮೂಲಕ ‘ಭಾರತ ಮಕರಂದಾರ್ಪಣ’ವನ್ನು ಶ್ರೀಕೃಷ್ಣನಿಗೆ ಸಮರ್ಪಣೆ ಮಾಡಲಾಗು ವುದು. ಸಪ್ತಶಾಸ್ತ್ರೋತ್ಸವ ಪರಿಕಲ್ಪನೆಯಲ್ಲಿ ಜ.9ರಿಂದ 15ರವರೆಗೆ ಆಯೋಜಿಸ ಲಾದ ಸಪ್ರೋತ್ಸವದಲ್ಲಿ  ಪ್ರವಚನ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ವಿದ್ವಾಂಸ ಕೊರ್ಲಹಳ್ಳಿ ವೇಂಕಟೇಶಾಚಾರ್ಯ, ಗಿರೀಶ ಉಪಾಧ್ಯಾಯ, ಮಠದ ಪಿಆರ್‌ಒ ಶ್ರೀಶ ಭಟ್ ಕಡೆಕಾರ್ ಹಾಜರಿದ್ದರು.

ಸೂರ್ಯಗ್ರಹಣ: ಪೂಜಾ ಸಮಯದಲ್ಲಿ ಬದಲಾವಣೆ

ಡಿ.26 ಕಂಕಣ ಸೂರ್ಯಗ್ರಹಣದ ಹಿನ್ನಲೆಯಲ್ಲಿ ಶ್ರೀಕೃಷ್ಣಮಠದಲ್ಲಿ ಪೂಜಾ ವೇಳೆಯಲ್ಲಿ ಬದಲಾವಣೆ ಮಾಡಲಾಗಿದ್ದು, ಗ್ರಹಣದ ಮುನ್ನಾದಿನ ರಾತ್ರಿ ಪೂಜೆ ಸಂಜೆ 5:30ರಿಂದ ರಾತ್ರಿ 7:30ರೊಳಗೆ ನಡೆಸಲಾಗುವುದು. ರಾತ್ರಿ 8 ಗಂಟೆ ಬಳಿಕ ಭೋಜನ ನಿಷಿದ್ಧವಾದ ಹಿನ್ನೆಲೆಯಲ್ಲಿ ಅಂದು ರಾತ್ರಿ ಬೋಜನ ವ್ಯವಸ್ಥೆ ಇರುವುದಿಲ್ಲ. ಗ್ರಹಣಮೋಕ್ಷವಾದ ಮೇಲೆ ಅಪರಾಹ್ನ 3 ಗಂಟೆಯ ನಂತ ಭೋಜನ ಪ್ರಸಾದ ನೀಡಲಾಗುವುದು ಎಂದು ಪರ್ಯಾಯ ಪಲಿಮಾರು ಸ್ವಾಮೀಜಿ ತಿಳಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News