ಮಂಗಳೂರು : ಪೊಲೀಸ್ ಅಧಿಕಾರಿ ಶಾಂತರಾಮ್ ಕುಂದರ್ ವಿರುದ್ಧ ದೂರು ದಾಖಲು

Update: 2019-12-25 14:35 GMT
ಶಾಂತರಾಮ್ ಕುಂದರ್

ಮಂಗಳೂರು, ಡಿ.25: ‘ಫೈರ್ ಮಾಡಿದ್ರೂ ಒಬ್ಬರೂ ಸಾಯಲಿಲ್ಲ’ ಎಂದು ಹೇಳಿಕೆ ನೀಡಿದ್ದರು ಎನ್ನಲಾದ ಪೊಲೀಸ್ ಅಧಿಕಾರಿ ಶಾಂತರಾಮ್ ಕುಂದರ್ ವಿರುದ್ಧ ಬಂದರ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಡಿ.19ರಂದು ಮಂಗಳೂರು ನಗರದಲ್ಲಿ ಪೌರತ್ವ ಕಾಯ್ದೆಯ ವಿರುದ್ಧ ಪ್ರತಿಭಟನೆಯ ಸಂದರ್ಭ ದುರಂತ ಸಂಭವಿಸಿತ್ತು. ಘಟನೆಯಲ್ಲಿ ಇಬ್ಬರು ವ್ಯಕ್ತಿಗಳು ಪೊಲೀಸ್ ಗುಂಡಿಗೆ ಮೃತಪಟ್ಟಿದ್ದರು. ಗಲಭೆ ನಿಯಂತ್ರಿಸುವ ಸಂದರ್ಭ ಕದ್ರಿ ಠಾಣೆ ಇನ್‌ಸ್ಪೆಕ್ಟರ್ ಶಾಂತರಾಮ್ ಕುಂದರ್ ಅವರನ್ನು ಹೋಲುವ ಅಧಿಕಾರಿ ಬಂದರ್‌ನ ಕಚ್ಚಿ ಮೆಮನ್ ಮಸೀದಿ ಸಮೀಪ ಪ್ರತಿಭಟನಾಕಾರರಿಗೆ ಪೊಲೀಸರು ಗೋಲಿಬಾರ್ ನಡೆಸಿ ಅವರನ್ನು ಕೊಲ್ಲುವ ಕುರಿತು ಆತಂಕಕಾರಿ ಹೇಳಿಕೆ ನೀಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

‘ಅಲ್ಲಪ್ಪಾ, ಫೈರ್ ಮಾಡಿದ ಒಂದು ಗುಂಡು ಕೂಡ ಬೀಳಲಿಲ್ಲ, ಒಬ್ಬರೂ ಸಾಯಲಿಲ್ಲವಲ್ಲ’ ಎಂದು ಹೇಳಿ ಪೊಲೀಸ್ ಸಿಬ್ಬಂದಿಯನ್ನು ಪ್ರತಿಭಟನಾಕಾರರ ವಿರುದ್ಧ ಉದ್ರೇಕಿಸಿ ಹತ್ಯೆ ಮಾಡುವ ಕುರಿತು ಪ್ರಚೋದನೆ ನೀಡಿದ್ದರು. ಇದರಿಂದ ಪ್ರೇರಿತರಾದ ಪೊಲೀಸರು ನಂತರದಲ್ಲಿ ಗೋಲಿಬಾರ್ ನಡೆಸಿ ಇಬ್ಬರು ಅಮಾಯಕರ ಸಾವಿಗೆ ಕಾರಣಕರ್ತರಾಗಿದ್ದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಪೊಲೀಸ್ ಅಧಿಕಾರಿ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲು ದೂರಿನಲ್ಲಿ ಒತ್ತಾಯಿಸಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ವೀಡಿಯೊವೊಂದರ ಆಧಾರದಲ್ಲಿ ಹನೀಫ್ ಕಾಟಿಪಳ್ಳ ಮಂಗಳೂರು ಉತ್ತರ (ಬಂದರ್) ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News