ಕಂಕಣ ಸೂರ್ಯಗ್ರಹಣ: ಕಣ್ತುಂಬಿಕೊಂಡ ಜನರು

Update: 2019-12-26 07:13 GMT

ಮಂಗಳೂರು, ಡಿ.26: ಸೂರ್ಯಗ್ರಹಣವು ಇಂದು ಬೆಳಗ್ಗೆ 8:04ರಿಂದ ಆರಂಭಗೊಂಡಿದ್ದು, ಮಂಗಳೂರು ಸೇರಿದಂತೆ ವಿವಿಧೆಡೆ ಖಗೋಳಾಸಕ್ತರು, ವಿಜ್ಞಾನಿಗಳು, ವಿದ್ಯಾರ್ಥಿಗಳು ಮಸೂರ, ದೂರದರ್ಶಕ, ಸೌರ ಕನ್ನಡಕಗಳ ನೆರವಿನಿಂದ ಇದನ್ನು ವೀಕ್ಷಿಸುತ್ತಿದ್ದಾರೆ.

ಮಂಗಳೂರಿನಲ್ಲಿ ಸರ ಸುಮಾರು 9:24ರಿಂದ 9:25ರ ಅವಧಿಯಲ್ಲಿ ಕಂಕಣ ರೂಪದಲ್ಲಿ ಸೂರ್ಯ ಗ್ರಹಣ ಗೋಚರಿಸಿದೆ. ಸೇರಿದ್ದ ಜನರು ಹರ್ಷೋದ್ಘಾರದೊಂದಿಗೆ ಸೂರ್ಯ- ಚಂದ್ರನ ನೆರಳು ಬೆಳಕಿನ ಆಟವನ್ನು ಆಸ್ವಾದಿಸಿದರು. ಕಂಕಣ ಸೂರ್ಯಗ್ರಹಣ ನಡೆಯುತ್ತಿದ್ದಂತೆ ಹವಾಮಾನದಲ್ಲೂ ಬದಲಾವಣೆ ಕಂಡು ಬಂತು. ನೆರಳಿನ ಜತೆ ತಂಪಾದ ವಾತಾವರಣದಲ್ಲಿ ಖಗೋಳದ ಕೌತುಕ ವೀಕ್ಷಕರಿಗೆ ಮುದ ನೀಡಿತು. ಮಂಗಳೂರಿನಲ್ಲಿ ಶೇ.93ರಷ್ಟು ಪ್ರಮಾಣದಲ್ಲಿ ಕಂಕಣ ರೂಪ ಕಂಡುಬಂದಿದ್ದರೆ, ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಆಗಿತ್ತು.

ನಗರದ ಪಾದುವ ಕಾಲೇಜಿನಲ್ಲಿ ಕಂಕಣ ಸೂರ್ಯ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.ಟೆಲಿಸ್ಕೋಪ್ ಮೂಲಕ ಕಾಲೇಜಿನ ಕೊಠಡಿಯಲ್ಲಿ ಬೃಹತ್ ಪರದೆಯ ಮೇಲೆ ಸೂರ್ಯಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಬಾರೀ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಗ್ರಹಣವನ್ನು ವೀಕ್ಷಿಸುತ್ತಿದ್ದಾರೆ.

ಮಕ್ಕಳು ವಿಶೇಷ ಕನ್ನಡಕದ ಮೂಲಕ ಕಂಕಣ ಗ್ರಹಣ ವೀಕ್ಷಿಸುತ್ತಿದ್ದಾರೆ. ಉಳಿದಂತೆ ಪಣಂಬೂರು ಬೀಚ್‌ನಲ್ಲೂ ಕೆಲವರು ಗ್ರಹಣ ವೀಕ್ಷಣೆ ಮಾಡುತ್ತಿದ್ದಾರೆ.

ದ.ಕ. ಜಿಲ್ಲೆಯ ಮಸೀದಿಗಳಲ್ಲಿ ಸೂರ್ಯಗ್ರಹಣ ನಮಾಝ್

ಕಂಕಣ ಸೂರ್ಯಗ್ರಹಣದ ಹಿನ್ನಲೆಯಲ್ಲಿ ದ.ಕ. ಜಿಲ್ಲೆಯ ಬಹುತೇಕ ಮಸೀದಿಗಳಲ್ಲಿ ಇಂದು ಸೂರ್ಯಗ್ರಹಣ ನಮಾಝ್ ಮಾಡಲಾಯಿತು. ನಗದರ ಬಂದರ್ ಕೇಂದ್ರ ಜುಮಾ ಮಸೀದಿಯಲ್ಲ್ಲಿ ಬೆಳಗ್ಗೆ 9 ಗಂಟೆಗೆ ನಡೆದ ನಮಾಝ್ ಗೆ ಖತೀಬ್ ಸ್ವದಕತುಲ್ಲಾಹ್ ಫೈಝಿ ನೇತೃತ್ವ ನೀಡಿದರು.  ಪಂಪ್ ವೆಲ್ ತಕ್ವಾ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು. ಉಳಿದಂತೆ ನಗರ ಮತ್ತು ಗ್ರಾಮಾಂತರ ಪ್ರದೇಶಗಳ ಮಸೀದಿಗಳಲ್ಲಿ ನಮಾಝ್ ಮಾಡಲಾಯಿತು.

ದೇವಳಗಳಲ್ಲಿ ಭಜನೆ

ಸೂರ್ಯಗ್ರಹಣ ಪ್ರಯುಕ್ತ ಮಂಗಳೂರಿನ ದೇವಾಲಯಗಳಲ್ಲಿ ಪೂಜೆ ಸ್ಥಗಿತ, ಕದ್ರಿ ದೇವಸ್ಥಾನದಲ್ಲಿ ಭಜನೆ, ವಿಷ್ಣು ಸಹಸ್ರನಾಮ, ಗಣಪತಿ ಸ್ತೋತ್ರ, ರುದ್ರ ಪಠಣ ನಡೆಯಿತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News