ಮಂಗಳೂರು ಗೋಲಿಬಾರ್: ಪೊಲೀಸ್ ಆಯುಕ್ತರ ವಿರುದ್ಧ ಮಾನವ ಹಕ್ಕು ಆಯೋಗಕ್ಕೆ ದೂರು

Update: 2019-12-26 14:04 GMT

ಮಂಗಳೂರು: ಡಿ.19 ರಂದು ಮಂಗಳೂರು ಪೊಲೀಸ್ ಗೋಲಿಬಾರ್ ಗೆ ಇಬ್ಬರು ಬಲಿಯಾಗಿರುವ ಘಟನೆಗೆ ಸಂಬಂಧಿಸಿ ಮಂಗಳೂರು ಪೊಲೀಸ್ ಆಯುಕ್ತ ಹಾಗೂ ಇತರ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಮನವಿ ಸಲ್ಲಿಸಲಾಗಿದೆ.

ಬೆಂಗಳೂರಿನ ನ್ಯಾಯವಾದಿ ರಕ್ಷಿತ್ ಶಿವರಾಮ್, ಸಾಮಾಜಿಕ ಕಾರ್ಯಕರ್ತೆ ಲಾವನ್ಯ ಬಳ್ಳಾಲ್, ಬಂಟ್ವಾಳ ಪುರಸಭಾ ಸದಸ್ಯರಾದ ಲುಕ್ಮಾನ್ ಬಂಟ್ವಾಳ ಹಾಗು ಮೂನಿಶ್ ಅಲಿ ಅಹ್ಮದ್, ಈ ನಾಲ್ವರು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಿಗೆ ಗುರುವಾರ ಸಲ್ಲಿಸಿರುವ ಮನವಿಯಲ್ಲಿ ಮಂಗಳೂರು ಪೊಲೀಸ್ ಆಯುಕ್ತ ಮುಖ್ಯಮಂತ್ರಿಗಳ ಸೂಚನೆ ಹಾಗು ನ್ಯಾಯಾಲಯಗಳ ತೀರ್ಪುಗಳಿಗೆ ವಿರುದ್ಧವಾಗಿ ಗೋಲಿಬಾರ್ ಮಾಡುವ ಮೂಲಕ ಇಬ್ಬರ ಸಾವಿಗೆ ಹಾಗು ಹಲವಾರು ಮಂದಿ ಗಾಯಗೊಳ್ಳಲು ಕಾರಣರಾಗಿದ್ದು, ಮಂಗಳೂರು ನಗರದ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ್ದಾರೆ. ಹಾಗಾಗಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಡಿ.19ರಂದು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯೆದುರು ವಿದ್ಯಾರ್ಥಿಗಳು ಸೇರಿ ಸಿಎಎ ವಿರುದ್ಧ ಪ್ರತಿಭಟನೆ ನಡೆಸಲು ಪ್ರಾರಂಭಿಸಿದಾಗ ಪೊಲೀಸರು ಏಕಾಏಕಿಯಾಗಿ ಲಾಠಿಚಾರ್ಜ್ ನಡೆಸಿದ್ದಾರೆ. ಮಾತ್ರವಲ್ಲದೆ ಬ್ಯಾರಿ ಭಾಷಿಕರನ್ನು ಗುರಿಮಾಡಿ ಲಾಠಿ ಪ್ರಹಾರ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಭಟನೆಗೆ ಯಾವುದೇ ಸಂಬಂಧವಿಲ್ಲದ ದಾರಿಹೋಕರು, ಮಹಿಳೆಯರು, ಪತ್ರಕರ್ತರ ಮೇಲೂ ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ. ಈ ಮೊದಲು ಸಂಬಂಧಪಟ್ಟ ಯಾರಲ್ಲಿಯೂ ಚರ್ಚಿಸದೆ ಸೆಕ್ಷನ್ 144 ಅನ್ನು ವಿಧಿಸಿ ಭಯದ ವಾತಾವರಣ ಉಂಟು ಮಾಡಿದ್ದರು. ಲಾಠಿ ಚಾರ್ಜ್ ನಡೆಸಿದ ಬೆನ್ನಿಗೆ ನೀತಿ ನಿಯಮಗಳನ್ನು ಸರಿಯಾಗಿ ಪಾಲಿಸದೆ ಗೋಲಿಬಾರ್ ನಡೆಸಿ ಎರಡು ಜೀವಗಳನ್ನು ಬಲಿ ಪಡೆದಿದ್ದಾರೆ ಹಾಗು ಹಲವರನ್ನು ಗಂಭೀರವಾಗಿ ಗಾಯಗೊಳಿಸಿದ್ದಾರೆ. ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಇದರ ಬೆನ್ನಿಗೇ ಗೋಲಿಬಾರ್ ನಲ್ಲಿ ಗಾಯಗೊಂಡವರು ಇದ್ದ ಆಸ್ಪತ್ರೆಯೊಳಗೆ ನುಗ್ಗಿದ ಪೊಲೀಸರು ಅಲ್ಲಿದ್ದ ಜನರ ಮೇಲೂ ದಾಳಿ ಮಾಡಿದ್ದಾರೆ. ಇದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರೂ ರೋಗ ಉಲ್ಬಣಗೊಂಡು ಗಂಭೀರ ಸ್ಥಿತಿ ತಲುಪಿದ್ದಾರೆ. ಇದಾದ ಮೇಲೆ ನಗರದಲ್ಲಿ ಕರ್ಫ್ಯೂ ವಿಧಿಸಿ ಇಡೀ ಜನಜೀವನವನ್ನು ಅಸ್ತವ್ಯಸ್ತಗೊಳಿಸಿ ನಗರದ ವ್ಯಾಪಾರ ವಹಿವಾಟುಗಳನ್ನು ಬಂದ್ ಮಾಡಿಸಿದ್ದಾರೆ ಎಂದು ಮನವಿಯಲ್ಲಿ ದೂರಲಾಗಿದೆ.

ಆದ್ದರಿಂದ ನಿಯಮ ಉಲ್ಲಂಘಿಸಿ ಗೋಲಿಬಾರ್ ನಡೆಸಿರುವ ಪೊಲೀಸ್ ಆಯುಕ್ತರು ಹಾಗೂ ಇತರ ಪೊಲೀಸ್ ಅಧಿಕಾರಿಗಳ ವಿರುದ್ಧ ಮಾನವ ಹಕ್ಕು ಆಯೋಗ ಸ್ವಯಂಪ್ರೇರಿತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News