​ಆಸ್ಪತ್ರೆಯ ಕೊಠಡಿಗೆ ನುಗ್ಗಿ ಪೊಲೀಸರಿಂದ ವೀಡಿಯೊ ಚಿತ್ರೀಕರಣ: ಮಾಜಿ ಮೇಯರ್ ಅಶ್ರಫ್ ಆರೋಪ

Update: 2019-12-26 13:42 GMT

ಮಂಗಳೂರು, ಡಿ. 26: ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿ ಡಿ.19ರಂದು ನಗರದಲ್ಲಿ ನಡೆದ ಹಿಂಸಾಚಾರದಲ್ಲಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಮೇಯರ್ ಅಶ್ರಫ್ ಅವರ ಕೊಠಡಿಗೆ ನುಗ್ಗಿದ ಪೊಲೀಸರು ಚಿತ್ರೀಕರಣ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಈ ಬಗ್ಗೆ ‘ವಾರ್ತಾಭಾರತಿ’ಗೆ ಮಾಹಿತಿ ನೀಡಿರುವ ಅಶ್ರಫ್, ಡಿ.25ರಂದು ರಾತ್ರಿ ಸುಮಾರು 12 ಗಂಟೆಯ ವೇಳೆಗೆ ತಾನು ಮಲಗಿದ್ದ ಕೊಠಡಿಯ ಬಾಗಿಲನ್ನು ಬಡಿದಿದ್ದಾರೆ. ಕೋಣೆಯಲ್ಲಿ ತಾನು ಮತ್ತು ತನ್ನ ಪತ್ನಿ ಇದ್ದೆವು. ನಮ್ಮೊಂದಿಗೆ ಸೋದರಳಿಯ ವಾಸಿಂ ಕೂಡಾ ಇದ್ದರು. ನಾನು ಮತ್ತು ಪತ್ನಿ ನಿದ್ದೆ ಮಾಡುತ್ತಿದ್ದೆವು. ಬಾಗಿಲು ಬಡಿದ ಶಬ್ದ ಕೇಳಿ ಎಚ್ಚರದಲ್ಲಿದ್ದ ವಾಸಿಂ ಬಾಗಿಲು ತೆರೆದಿದ್ದಾರೆ. ಅಷ್ಟರಲ್ಲಿ ಪೊಲೀಸ್ ಸಮವಸ್ತ್ರದಲ್ಲಿದ್ದ ನಾಲ್ಕು ಮಂದಿ ಕೋಣೆಯೊಳಗೆ ವೀಡಿಯೊ ಚಿತ್ರೀಕರಣ ಮಾಡಿದ್ದಾರೆ. ಇದನ್ನು ಪ್ರಶ್ನಿಸಲಾಗದೆ ವಾಸಿಂ ಸುಮ್ಮನಾಗಿದ್ದ. ಪೊಲೀಸ್ ಸಮವಸ್ತ್ರಧಾರಿಗಳು ಮರಳಿದ ತಕ್ಷಣ ವಾಸಿಂ ನಮ್ಮನ್ನು ಎಬ್ಬಿಸಿ ವಿಷಯ ತಿಳಿಸಿದ್ದಾನೆ. ಹಾಗಾಗಿ ಈ ಬಗ್ಗೆ ಪೊಲೀಸ್ ಆಯುಕ್ತರು ಸ್ಪಷ್ಟಣೆ ನೀಡಬೇಕು. ಮಧ್ಯರಾತ್ರಿ ವೀಡಿಯೊ ಮಾಡಿದವರು ಯಾರು ಮತ್ತು ಯಾಕೆ ಎಂಬುದನ್ನು ಪೊಲೀಸ್ ಆಯುಕ್ತರು ಬಹಿರಂಗಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News