ಅನಂತಾಡಿ: "ಅನಂತ ಔಷಧಿ ವನ" ಶಾಸಕರಿಂದ ಲೋಕಾರ್ಪಣೆ

Update: 2019-12-27 10:14 GMT

ಬಂಟ್ವಾಳ, ಡಿ. 27: ಪ್ರಕೃತಿಯಿಂದ ಪಡೆದಷ್ಟನ್ನು ಮರಳಿ ನೀಡುವ ಕಾರ್ಯವಾದಾಗ ಪರಿಸರ ಸಮತೋಲನ ಎಂದು ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಹೇಳಿದ್ದಾರೆ.

ಅವರು ಶುಕ್ರವಾರ ಕರ್ನಾಟಕ ಅರಣ್ಯ ಇಲಾಖೆ, ದ.ಕ. ಜಿಲ್ಲಾ ಪಂಚಾಯತ್, ಸಾಮಾಜಿಕ ಅರಣ್ಯ ವಿಭಾಗ ಮಂಗಳೂರು, ಸಾಮಾಜಿಕ ಅರಣ್ಯ ವಲಯ ಬಂಟ್ವಾಳ ವತಿಯಿಂದ ಅನಂತಾಡಿ ಸಸ್ಯಕ್ಷೇತ್ರದಲ್ಲಿ ನಿರ್ಮಾಣವಾದ ಅನಂತ ಔಷಧಿ ವನ, ವೀರಕಂಬ ಕೆಲಿಂಜದಲ್ಲಿ ನಿರ್ಮಾಣವಾದ ವಲಯ ಅರಣ್ಯಾಧಿಕಾರಿಗಳ ಕಚೇರಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಅರಣ್ಯ ಸಂಪತ್ತು ನಶಿಸುತ್ತಿರುವ ಸಮಯದಲ್ಲಿ ಗಿಡಗಳನ್ನು ಹೆಚ್ಚುವ ಮಾಡುವ ಕಾರ್ಯವಾಗಬೇಕಾಗಿದೆ. ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಸಮಾಜಿಕ ಅರಣ್ಯದ ಬಗ್ಗೆ ಜನರಿಗೆ ಮನವರಿಕೆ ಮಾಡುವ ಕಾರ್ಯ ನಡೆಯಬೇಕಾಗಿದೆ. ಪ್ರಕೃತಿಗೆ ಹಾಗೂ ಮುಂದಿನ ಜನಾಂಗಕ್ಕೆ ಕೊಡುಗೆ ನೀಡುವ ನಿಟ್ಟಿನಲ್ಲಿ ಕೆಲಸವನ್ನು ಮಾಡಬೇಕು. ಮಕ್ಕಳ ಮೂಲಕ ಸಸಿಗಳನ್ನು ಬೆಳೆಸುವ ಕಾರ್ಯವಾದಾಗ ಭವಿಷ್ಯಕ್ಕೆ ಸಂಪತ್ತಾಗುತ್ತದೆ ಎಂದು ಹೇಳಿದರು.

ಮಂಗಳೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ಎಸ್. ನೆಟಾಲ್ಕರ್ ಮಾತನಾಡಿ, ಸಾಮಾಜಿ ಅರಣ್ಯ ವಿಭಾದಲ್ಲಿ ಪ್ರತಿ ತಾಲೂಕಿಗೆ ವಲಯ ಅರಣ್ಯಾಧಿಕಾರಿ ಕಚೇರಿ ಇದ್ದು, ವಿವಿಧ ಜಾತಿಯ ಗಿಡಗಳನ್ನು ಬೆಳೆಸಿ ರೈತರಿಗೆ ರಿಯಾಯಿತಿ ದರದಲ್ಲಿ ವಿರಣೆ ಮಾಡಲಾಗುತ್ತಿದೆ. ಅರಣ್ಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ರೈತರಿಗೂ ಪ್ರೋತ್ಸಾಹ ಮಾಡುವ ಕಾರ್ಯ ಇಲಾಖೆಯಿಂದ ನಡೆಯು ತ್ತಿದೆ. ಇಲಾಖೆ ಹಾಕಿಕೊಂಡ ಯೋಜನೆಗಳನ್ನು ರೈತರು ಬಳಿಸಕೊಳ್ಳಬೇಕು. ನಶಿಸಿ ಹೋಗುವ ಔಷಧೀಯ ಸಸ್ಯಗಳನ್ನು ಉಳಿಸಿದಾಗ ನಾಟಿ ವೈದ್ಯ ಪದ್ಧತಿಯೂ ಮುಂದುವರಿಯಲು ಸಾಧ್ಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಉಪಾಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ, ಸದಸ್ಯೆ ಗೀತಾ‌ ಚಂದ್ರಶೇಖರ್, ಅನಂತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸನತ್ ಕುಮಾರ್ ರೈ, ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ ತನಿಯಪ್ಪ ಗೌಡ, ವೀರಕಂಭ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಕೆಲಿಂಜ, ಸದಸ್ಯೆ ಭಾರತಿ, ಮಂಗಳೂರು ಉಪ ವಿಭಾಗ ಸಾಮಾಜಿಕ ಅರಣ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ವಿ.ಕರಿಕಾಲನ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಂಕರೇಗೌಡ, ಬಂಟ್ವಾಳ ವಲಯ ಅರಣ್ಯಾಧಿಕಾರಿ ಬಿ. ಸುರೇಶ್, ಸಾಮಾಜಿಕ ಅರಣ್ಯ ಪುತ್ತೂರು ವಲಯ ಅರಣ್ಯಾಧಿಕಾರಿ ವಿದ್ಯಾರಾಣಿ, ಬಂಟ್ವಾಳ ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ, ಉಪವಲಯ ಅರಣಾಧಿಕಾರಿ ರಂಜಿತಾ ಪಿ. ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News