ದೂರು ಸ್ವೀಕರಿಸಲು ಪೊಲೀಸರು ನಿರಾಕರಣೆ : ದ.ಕ. ಜಿಲ್ಲಾ ಪಿಯುಸಿಎಲ್ ಆರೋಪ

Update: 2019-12-27 14:30 GMT

ಮಂಗಳೂರು, ಡಿ. 27: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಡಿ.19ರಂದು ಮಂಗಳೂರಿನಲ್ಲಿ ನಡೆದ ಹಿಂಸಾಚಾರದ ಸಂದರ್ಭದ ‘ಗೋಲಿಬಾರ್’ ಕುರಿತಂತೆ ಬಂದರು ಪೊಲೀಸರು ಪ್ರಕರಣ ದಾಖಲಿಸಲು ನಿರಾಕರಿಸಿದ್ದಾರೆ ಎಂದು ದ.ಕ.ಜಿಲ್ಲಾ ಪಿಯುಸಿಎಲ್ ಅಧ್ಯಕ್ಷ ಈಶ್ವರರಾಜ್ ಆರೋಪಿಸಿದ್ದಾರೆ.

ಅಲ್ಲದೆ, ಈ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತರನ್ನು ಸಂಪರ್ಕಿಸಿ ಮುಂದಿನ ಹೋರಾಟದ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಗೋಲಿಬಾರ್‌ನಿಂದ ಇಬ್ಬರು ಮೃತಪಟ್ಟಿದ್ದಾರೆ. ಹಲವು ಮಂದಿ ಗಾಯಗೊಂಡಿದ್ದಾರೆ. ಪೊಲೀಸ್ ಕಾಯ್ದೆಯಡಿ ಗೋಲಿಬಾರ್‌ಗೆ ಕೆಲವು ನಿಯಮಾವಳಿ ಇದೆ. ಆದರೆ ಮಂಗಳೂರು ಪೊಲೀಸರು ಅದನ್ನೆಲ್ಲಾ ಗಾಳಿಗೆ ತೂರಿದ್ದಾರೆ. ಜಲೀಲ್‌ನ ಕಣ್ಣಿಗೆ ಮತ್ತು ನೌಶೀನ್‌ನ ಬೆನ್ನಿಗೆ ಗುಂಡೇಟು ಬಿದ್ದಿದೆ. ಗುಂಡೇಟಿಗೆ ಬಲಿಯಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡ ಬಗ್ಗೆ ಯಾವುದೇ ದಾಖಲೆ ಇಲ್ಲ. ಇದೆಲ್ಲಾ ಪೊಲೀಸರ ಉದ್ದೇಶಪೂರ್ವಕ ಕೃತ್ಯವಾಗಿದೆ. ಆ ಹಿನ್ನಲೆಯಲ್ಲಿ ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕಿದೆ. ಗೋಲಿಬಾರ್‌ಗೆ ಯಾರು ಆದೇಶಿಸಿದರು? ಗೋಲಿಬಾರ್ ಮಾಡಿದವರು ಯಾರು ಎಂಬುದು ತನಿಖೆಯಿಂದ ತಿಳಿಯಬೇಕಿದೆ ಎಂದು ದೂರು ಸಿದ್ಧಪಡಿಸಿಕೊಂಡ ಈಶ್ವರರಾಜ್, ವಕೀಲರಾದ ದಿಲ್‌ರಾಜ್ ರೋಹಿತ್ ಸಿಕ್ವೇರಾ, ಸಾಮಾಜಿಕ ಕಾರ್ಯಕರ್ತರಾದ ಹನೀಫ್ ಸಾಹೇಬ್ ಪಾಜೆಪಳ್ಳ, ಅಜಯ್ ಡಿಸಿಲ್ವ ಅವರ ಜೊತೆಗೂಡಿ ಬಂದರ್ ಠಾಣೆಗೆ ತೆರಳಿ ದೂರು ಸ್ವೀಕರಿಸಬೇಕು ಮತ್ತು ಎಫ್‌ಐಆರ್ ದಾಖಲಿಸಬೇಕು ಎಂದು ಆಗ್ರಹಿಸಿದ್ದರು.

ಆದರೆ ಈಶ್ವರ್‌ರಾಜ್ ನೇತೃತ್ವದ ತಂಡ ನೀಡಿದ ದೂರನ್ನು ಪ್ರತ್ಯೇಕವಾಗಿ ಸ್ವೀಕರಿಸಲು ನಿರಾಕರಿಸಿದ ಪೊಲೀಸರು ಈಗಾಗಲೆ ಗುಂಡೇಟಿಗೆ ಬಲಿಯಾದ ಜಲೀಲ್ ಮತ್ತು ನೌಶಿನ್ ವಿರುದ್ಧ ಮೊಕದ್ದಮೆ ಸಂಖ್ಯೆ 133/2019ರಂತೆ ನಾವು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದೇವೆ. ಹಾಗಾಗಿ ತಮ್ಮ ದೂರನ್ನು ಪ್ರತ್ಯೇಕವಾಗಿ ಸ್ವೀಕರಿಸಲು ಸಾಧ್ಯವಿಲ್ಲ. ಅದೇ ಕಡತಕ್ಕೆ ತಮ್ಮ ದೂರನ್ನು ಸೇರಿಸಿಕೊಳ್ಳಲಾಗುವುದೆಂದು ಟಿಪ್ಪಣಿ ಬರೆದುಕೊಟ್ಟಿದ್ದಾರೆ.

ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಈಶ್ವರರಾಜ್ ‘ಪೊಲೀಸರ ಈ ವಾದದಲ್ಲಿ ಹುರುಳಿಲ್ಲ. ಯಾರು ಎಷ್ಟೇ ದೂರು ನೀಡಿದರೂ ಸ್ವೀಕರಿಸಬೇಕು. ಮಂಗಳೂರು ಪೊಲೀಸರು ನಾವು ನೀಡಿದ ದೂರನ್ನು ಸ್ವೀಕರಿಸಿಲ್ಲ. ಈ ಬಗ್ಗೆ ಪೊಲೀಸ್ ಆಯುಕ್ತರ ಜೊತೆ ಸಮಾಲೋಚನೆ ಮಾಡುವೆವು. ಅಲ್ಲೂ ಸೂಕ್ತ ನ್ಯಾಯ ಸಿಗದಿದ್ದರೆ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಲಾಗುವುದು’ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News