ಮಂಗಳೂರು ಗೋಲಿಬಾರ್ ಪ್ರಕರಣ: ಸಿಐಡಿ ತಂಡದಿಂದ ಸ್ಥಳ ಮಹಜರು

Update: 2019-12-27 15:45 GMT
ಫೈಲ್ ಚಿತ್ರ

ಮಂಗಳೂರು, ಡಿ.27: ನಗರದಲ್ಲಿ ಡಿ.19ರಂದು ನಡೆದ ಗೋಲಿಬಾರ್/ಹಿಂಸಾಚಾರ ಪ್ರಕರಣದ ತನಿಖೆಯನ್ನು ರಾಜ್ಯ ಸರಕಾರ ಸಿಐಡಿ ಮತ್ತು ಮ್ಯಾಜಿಸ್ಟ್ರೇಯಲ್‌ಗೆ ನೀಡಿದ್ದು, ಸಿಐಡಿ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಷಹಾಪುರ್‌ವಾಡ್ ನೇತೃತ್ವದ ತಂಡವು ಶುಕ್ರವಾರ ಸ್ಟೇಟ್‌ಬ್ಯಾಂಕ್, ಬಂದರ್ ಸೇರಿದಂತೆ ನಗರದ ವಿವಿಧೆಡೆ ಸ್ಥಳಗಳ ಮಹಜರು ನಡೆಸಿತು.

ನಿಷೇಧಾಜ್ಞೆ ಹೇರಿಕೆ ಮಾಡಿದ ಮರುದಿನ (ಗುರುವಾರ) ನಗರದ ಜನನಿಬಿಡ ಪ್ರದೇಶ ಸ್ಟೇಟ್‌ಬ್ಯಾಂಕ್‌ನಲ್ಲಿ ಅಸಂಘಟಿತರಿಂದ ಪ್ರತಿಭಟನೆ ನಡೆದಿತ್ತು. ಬಳಿಕ ಲಾಠಿಚಾರ್ಜ್, ಕಲ್ಲು ಎಸೆತ, ಅಶ್ರುವಾಯು ಸಿಡಿತ, ಪುನಃ ಕಲ್ಲು ಎಸೆತ, ಕೊನೆಗೆ ಗೋಲಿಬಾರ್ ನಡೆದು ಇಬ್ಬರು ಮೃತಪಟ್ಟಿದ್ದರು. ಘಟನಾವಳಿಯ ಎಲ್ಲಾ ಸ್ಥಳಗಳನ್ನು ಸಿಐಡಿ ತಂಡವು ಕೂಲಂಕಷವಾಗಿ ಪರಿಶೀಲನೆ ನಡೆಸಿ, ಮಾಹಿತಿ ಕಲೆ ಹಾಕಿತು.

ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಆರೋಪಿಗಳ ಪತ್ತೆಗೆ ಈಗಾಗಲೇ ಎಸಿಪಿ, ಇನ್‌ಸ್ಪೆಕ್ಟರ್‌ಗಳು, ಸಬ್‌ ಇನ್‌ಸ್ಪೆಕ್ಟರ್‌ಗಳ ನೇತೃತ್ವದಲ್ಲಿ ಒಟ್ಟು 10 ತಂಡಗಳನ್ನು ರಚಿಸಿ ಕಾರ್ಯನಿರ್ವಹಿಸುತ್ತಿದೆ. ಸಿಐಡಿ ಅಧಿಕಾರಿಗಳು ಸ್ಥಳ ಮಹಜರು ನಡೆಸಿದ್ದು, ಪೊಲೀಸರು ಆರೋಪಿಗಳ ಪತ್ತೆ ಕಾರ್ಯಾಚರಣೆಯೂ ನಡೆಸುತ್ತಿದ್ದಾರೆ.

‘ಸಿಐಡಿ ತಂಡವು ಸ್ಥಳ ಮಹಜರು, ಘಟನೆಯ ವಿವರ ಸಂಗ್ರಹಿಸುತ್ತಿದೆ. ಪ್ರಕರಣದ ಫೈಲ್‌ಗಳನ್ನು ಸಿಐಡಿ ತಂಡವು ಕೇಳಿದಾಗಲೇ ಪೊಲೀಸರು ನೀಡಲಿದ್ದಾರೆ. ಸಿಐಡಿ ತಂಡವು ಯಾವ ಸಮಯದಲ್ಲಾದರೂ ಪೊಲೀಸರಿಂದ ಕಡತಗಳನ್ನು ಕೇಳಬಹುದು. ಸಿಐಡಿ ತಂಡವು ಇಲ್ಲಿಯವರೆಗೂ ಪೊಲೀಸರನ್ನು ಸಂಪರ್ಕಿಸಿಲ್ಲ. ಕಡತ ಹಸ್ತಾಂತರವಾದ ಬಳಿಕವೇ ಸಿಐಡಿ ತನಿಖೆ ಆರಂಭವಾಗಲಿದೆ’ ಎಂದು ಖಚಿತ ಮೂಲಗಳು ತಿಳಿಸಿವೆ.

ಸಿಐಡಿ ಎಸ್ಪಿ ರಾಹುಲ್ ಕುಮಾರ್ ಷಹಾಪುರ್‌ವಾಡ್ ನೇತೃತ್ವದ ತಂಡದಲ್ಲಿ ಐದು ಮಂದಿ ಸಿಐಡಿ ಅಧಿಕಾರಿಗಳಿದ್ದಾರೆ.
ನಗರದಲ್ಲಿ ನಡೆದ ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದ ಸಮಗ್ರ ತನಿಖೆಗೆ ರಾಜ್ಯ ಸರಕಾರ ಸಿಐಡಿ ಮತ್ತು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ನೇತೃತ್ವದಲ್ಲಿ ಮ್ಯಾಜಿಸ್ಟ್ರೇಟ್‌ಗೆ ವಹಿಸಿತ್ತು. ಮ್ಯಾಜಿಸ್ಟ್ರೇಟ್ ತಂಡ ಡಿ.28ರಿಂದ ತನಿಖೆ ಆರಂಭಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News