ಎನ್ ಪಿಆರ್, ಎನ್ ಆರ್ ಸಿಗೆ ಸಂಬಂಧ ಇಲ್ಲ ಎಂಬ ಸುಳ್ಳುಗಳಿಗೆ ಮರುಳಾಗಬೇಡಿ : ಸಸಿಕಾಂತ್ ಸೆಂಥಿಲ್

Update: 2019-12-27 17:01 GMT

ಬಂಟ್ವಾಳ, ಡಿ. 27: ಎನ್ ಪಿಆರ್ ಗೂ ಎನ್ ಆರ್ ಸಿ ಗೂ ಸಂಬಂಧ ಇಲ್ಲ ಅಂತ ಹೇಳುತ್ತಿದ್ದಾರೆ, ಇದು ಕೋಳಿಗೂ, ಕೋಳಿ ಮೊಟ್ಟೆಗೂ ಸಂಬಂಧ ಇಲ್ಲ ಎನ್ನುವಂತಿದೆ. ಇಂತಹಾ ಸುಳ್ಳುಗಳಿಗೆ ಮರುಳಾಗಬೇಡಿ ಎಂದು ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಕರೆ ನೀಡಿದ್ದಾರೆ.

ಎನ್ ಸಿ ಎಚ್ ಆರ್ ಓ ‌ನ ಬಂಟ್ವಾಳ ತಾಲೂಕು ಘಟಕ ಶುಕ್ರವಾರ ಸಂಜೆ‌ ಬಿ.ಸಿ.ರೋಡಿನಲ್ಲಿ  ಆಯೋಜಿಸಲಾದ ಎನ್ ಆರ್ ಸಿ, ಸಿಎಎ ಹಾಗೂ ಎನ್ ಪಿ ಆರ್ ವಿಷಯದ ಕುರಿತಾದ‌ ವಿಚಾರಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಜಗತ್ತಿನಲ್ಲಿಯೇ ಅತ್ಯುತ್ತಮ ಸಂವಿಧಾನ ನಮ್ಮದು, ಆದರೆ ಇದರ ಆಶಯಕ್ಕೆ ಮುಳುವಾಗುವಂತಹಾ ಯಾವುದೇ ವಿದ್ಯಮಾನ ನಡೆಯಲು ಅವಕಾಶ ನೀಡಬಾರದು, ಅದಕ್ಕೆ ಅವಕಾಶ ಕೊಟ್ಟರೆ ಅದು ನಮ್ಮ ದೇಶಕ್ಕೆ ಮಾಡುವ ದೊಡ್ಡ ಅಪಮಾನ ಎಂದು ಅವರು ಹೇಳಿದರು.

ಫ್ಯಾಸಿಸಂ ಮತ್ತು ಬ್ರಾಹ್ಮಣಿಯಂ ನಲ್ಲಿ ಮುಳುಗಿರುವ ಈಗಿನ ಕೇಂದ್ರದ ಬಿಜೆಪಿ ಸರಕಾರ, ದೇಶ, ದೇಶದ ಅಭಿಮಾನದ ಹೆಸರಿನಲ್ಲಿ ಜನರನ್ನು ಮರುಳು ಮಾಡುತ್ತಿದ್ದಾರೆ.  ಇದೇ ರೀತಿಯ ಪ್ರಯೋಗಗಳು ಭಾರತದಲ್ಲಿ ಮಾತ್ರ ಅಲ್ಲ, ಇದೊಂದು ಜಾಗತಿಕ ಸಮಸ್ಯೆ ಎಂದರು.

ಆಡಳಿತ ವ್ಯವಸ್ಥೆಯ ಮೆಥಡಾಲೊಜಿ ಸರಿ ಇಲ್ಲ. ಆ ಸತ್ಯವನ್ನು ಜನರಿಗೆ ತಿಳಿಸಬೇಕು ಮತ್ತು ಇಂತವರನ್ನು ಎದುರಿಸಬೇಕು ಎನ್ನುವ ಕಾರಣಕ್ಕೆ  ನಾನು ಕೆಲಸ ಬಿಟ್ಟೆ. ದಕ್ಷಿಣ ಕನ್ನಡ ನನ್ನ ಜಿಲ್ಲೆ ಇಲ್ಲಿನ ಜನರೊಂದಿಗೆ ಮಾತನಾಡುವುದೆಂದರೆ ನನಗೆ ಖುಷಿಯ ಸಂಗತಿ ಎಂದರು. ಭಾರತೀಯರಿಗೆ ಸಮಸ್ಯೆ ಇಲ್ಲ, ಮುಸಲ್ಮಾನರಿಗೆ ತೊಂದರೆ‌ ಇಲ್ಲ ಎನ್ನುವವರಿದ್ದಾರೆ, ಆದರೆ ಅದೇನೇ ಇರಲಿ,  ಸಂವಿಧಾನಕ್ಕೆ‌ ವಿರೋಧವಾಗಿರುವುದರಿಂದ ಇದನ್ನು ವಿರೋಧಿಸಲೇಬೇಕು ಎಂದರು.

ಯಾವುದೇ ಕಾರಣಕ್ಕೂ ಎನ್‌ಪಿಆರ್ ಸಮೀಕ್ಷೆಗೆ ಸಹಕಾರ ಕೊಡಬೇಡಿ, ಮಾಹಿತಿ‌ ನೀಡಬೇಡಿ ಎಂದರು. ಜನರನ್ನು ಬುಟ್ಟಿಗೆ ಹಾಕಿಕೊಳ್ಳಲು ಯಾವುದೇ ಹಾಲಿವುಡ್ ಮೂವಿಗೂ ಕಡಿಮೆ‌ ಇಲ್ಲದಂತೆ ಘಟನೆಗಳನ್ನು‌ ಸೃಷ್ಟಿಸುತ್ತಾರೆ. ಆದರೆ, ಅವರ ಆಟಗಳಿಗೆ ನಾವು ದಾಳಗಳಾಗಬಾರದು, ನಾವೆಲ್ಲರೂ ಒಟ್ಟಾಗಿದ್ದರೆ ಅವರಿಂದ ಏನೂ ಸಾಧ್ಯವಿಲ್ಲ. ಅಂಬೇಡ್ಕರ್ ಕೊಟ್ಟ ಸಂವಿಧಾನದ ಆಶಯದ ಉಳಿವಿಗೆ ಗಾಂಧಿ ಮಾರ್ಗದಲ್ಲಿ ಸಾಗುವ, ಹೇಡಿಯಾಗಬೇಡಿ ಆದರೆ ಹೊಡೆದಾಟ ಬೇಡ. ಶಾಂತಿಯಿಂದ ಸೌಹಾರ್ದತೆ ಯಿಂದ ಗುರಿ ತಲುಪಿ, ಭಾರತ ಅಂದರೆ ಏನೆಂದು ತೋರಿಸೋಣ ಎಂದರು.

ಎನ್ ಸಿಎಚ್ ಆರ್ ಓ  ರಾಜ್ಯ ಉಪಾಧ್ಯಕ್ಷ  ಮುಹಮ್ಮದ್ ಕಕ್ಕಿಂಜೆ ಪ್ರಾಸ್ತಾವಿಕವಾಗಿ ಮಾತನಾಡಿದರು.  ಪ್ರಮುಖರಾದ ಅಥಾವುಲ್ಲಾ ಜೋಕಟ್ಟೆ, ಅಶ್ರಫ್ ಹಕ್ಲಾಡಿ, ತೌಫೀದ್ ಕಲ್ಲಡ್ಕ, ಅಬ್ದುಲ್ ಸಲೀಂ, ಮಹಮ್ಮದ್ ಶಫಿ, ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಅಲಿ, ಪಿ‌ಎ.ರಹೀಂ, ನಿಕೇತ್ ರಾಜ್ ಮೌರ್ಯ, ಅಶ್ರಫ್, ಮುಹಮ್ಮದ್ ಕಕ್ಕಿಂಜೆ ವೇದಿಕೆಯಲ್ಲಿದ್ದರು.

ವಕೀಲ ಮಹಮ್ಮದ್ ಕಬೀರ್ ಸ್ವಾಗತಿಸಿದರು. ಅಕ್ಬರ್ ಅಲಿ ಪೊನ್ನೋಡಿ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News