ಮಂಗಳೂರು ಹಿಂಸಾಚಾರ ಪ್ರಕರಣ : 12 ಮಂದಿ ಆರೋಪಿಗಳ ಬಂಧನ
ಮಂಗಳೂರು, ಡಿ.28: ನಗರದಲ್ಲಿ ಡಿ. 19ರಂದು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆ ಸಂದರ್ಭ ಹಿಂಸಾಚಾರ ನಡೆದ ಆರೋಪದಲ್ಲಿ 12 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಂಜನಾಡಿ ನಿವಾಸಿ ಮುಹಮ್ಮದ್ ಅಝರ್ (22), ತೊಕ್ಕೊಟ್ಟು ನಿವಾಸಿ ತಂಝೀಲ್ (20), ಬಿ.ಸಿ.ರೋಡ್ ಕಲ್ಲಮಜಲು ನಿವಾಸಿ ಆರ್ಯನ್ (30), ಬಂಟ್ವಾಳ ಸಮೀಪದ ಮಾರಿಪಳ್ಳ ನಿವಾಸಿ ನಾಝಿಮ್ (24), ಉಡುಪಿ ಶಿರ್ವ ನಿವಾಸಿ ಆಶಿಕ್ (21), ಬಜ್ಪೆ ನಿವಾಸಿ ಅನ್ವರ್ ಹುಸೈನ್ (23), ಅಡ್ಯಾರ್ ಕಣ್ಣೂರು ನಿವಾಸಿ ಮುಹಮ್ಮದ್ ಇಕ್ಬಾಲ್ (27), ಪಂಜಿಮೊಗರು ನಿವಾಸಿ ಅಬ್ದುಲ್ ಹಫೀಝ್ (20), ಕಾವೂರು ನಿವಾಸಿಗಳಾದ ಮುಹಮ್ಮದ್ ಫಯಾಝ್ (27), ಖಲಂದರ್ ಬಾಷಾ (30), ಕುಂಜತ್‌ಬೈಲ್ ದೇವಿನಗರದ ನಾಸಿರುದ್ದೀನ್ (32), ಅಡ್ಯಾರ್ ಕಣ್ಣೂರು ನಿವಾಸಿ ಮುಹಮ್ಮದ್ ಫಾರೂಕ್ (32) ಬಂಧಿತ ಆರೋಪಿಗಳು.
ಗಲಭೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ 24 ಪ್ರಕರಣಗಳನ್ನು ದಾಖಲಿಸಲಾಗಿದೆ. ವೀಡಿಯೊ ತುಣುಕುಗಳು, ಸಿಸಿಟಿವಿ ದೃಶ್ಯಾವಳಿಗಳು ಮತ್ತು ಫೋಟೊಗಳ ಆಧಾರದಲ್ಲಿ ಆರೋಪಿಗಳನ್ನು ಗುರುತಿಸುವ ಕೆಲಸ ನಡೆಯುತ್ತಿದೆ. ಆರಂಭದಲ್ಲಿ ಎಂಟು ಮಂದಿಯನ್ನು ಬಂಧಿಸಲಾಗಿತ್ತು. ಈಗ ನಾಲ್ವರನ್ನು ಬಂಧಿಸಲಾಗಿದೆ. ಈ ಮೂಲಕ ಬಂಧಿತರ ಸಂಖ್ಯೆ 12ಕ್ಕೇರಿದೆ ಎಂದು ಪೊಲೀಸರು ತಿಳಿಸಿದ್ದಾರೆ.