ಪೇಜಾವರ ಶ್ರೀಗಳ ಆರೋಗ್ಯ ಕ್ಷಣಕ್ಷಣಕ್ಕೆ ಕ್ಷೀಣ: ಯಡಿಯೂರಪ್ಪ

Update: 2019-12-28 17:11 GMT

ಉಡುಪಿ, ಡಿ.28: ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಅವರ ಆರೋಗ್ಯ ಸ್ಥಿತಿ ತೀರಾ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶನಿವಾರ ಸಂಜೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದರು.

ಇಂದು ಬೆಳಗ್ಗೆ ಕೋಟ, ಕೋಟೇಶ್ವರ ಹಾಗೂ ಉತ್ತರ ಕನ್ನಡ ಜಿಲ್ಲೆ ಹಾಗೂ ಸಂಜೆ ಬೈಂದೂರಿನಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಮುಖ್ಯ ಮಂತ್ರಿ ಯಡಿಯೂರಪ್ಪ, ಬೈಂದೂರಿನಿಂದ ನೇರ ಪೇಜಾವರ ಸ್ವಾಮೀಜಿಗಳ ಆರೋಗ್ಯ ವಿಚಾರಿಸಲು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಆಮಿಸಿದರು.

ಅಲ್ಲಿ ಮುಖ್ಯಮಂತ್ರಿಗಳು ಪೇಜಾವರ ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರೊಂದಿಗೆ ಸ್ವಾಮೀಜಿಯ ಆರೋಗ್ಯದ ಕುರಿತು ಮಾಹಿತಿ ಪಡೆದು ಕೊಂಡರು. ಈ ಹಿನ್ನೆಲೆಯಲ್ಲಿ ಸಂಜೆಯ ಬಳಿಕ ತೀರ್ಥಹಳ್ಳಿಯಲ್ಲಿ ನಿಗದಿ ಪಡಿಸ ಲಾಗಿದ್ದ ಮುಖ್ಯಮಂತ್ರಿ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ಪೇಜಾವರ ಶ್ರೀಗಳ ಆರೋಗ್ಯ ಕ್ಷಣಕ್ಷಣಕ್ಕೆ ಕ್ಷೀಣಿಸುತ್ತಿದೆ. ವೈದ್ಯರು ಎಲ್ಲ ರೀತಿಯ ಪ್ರಯತ್ನ ಗಳನ್ನು ಮಾಡುತ್ತಿದ್ದಾರೆ. ಇನ್ನೂ ಪ್ರಯತ್ನ ಮುಂದುವರೆಸಿದ್ದಾರೆ. ಎಲ್ಲವನ್ನು ಶ್ರೀಕೃಷ್ಣನ ಮೇಲೆ ಬಿಟ್ಟಿದ್ದೇವೆ. ಸುಧಾರಣೆ ಕಾಣುತ್ತಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಇಂದು ರಾತ್ರಿ ಮತ್ತು ನಾಳೆ ಉಡುಪಿಯಲ್ಲಿ ಇರುತ್ತೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಕೆ.ರಘುಪತಿ ಭಟ್, ಜಿಪಂ ಅಧ್ಯಕ್ಷ ದಿನಕರ ಬಾಬು ಹಾಗೂ ಬಿಜೆಪಿ ಮುಖಂಡರು ಹಾಜರಿದ್ದರು. ಇದು ಆಸ್ಪತ್ರೆಗೆ ಮುಖ್ಯಮಂತ್ರಿಗಳ ಎರಡನೆ ಬಾರಿಯ ಭೇಟಿ ಯಾಗಿದ್ದು, ಡಿ.21ರಂದು ಮೊದಲ ಬಾರಿಗೆ ಆಗಮಿಸಿದ್ದರು.

ಸಿಎಂ ಉಡುಪಿಯಲ್ಲೇ ವಾಸ್ತವ್ಯ

ಪೇಜಾವರ ಸ್ವಾಮೀಜಿಯ ಆರೋಗ್ಯ ಸ್ಥಿತಿ ತೀರಾ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ, ಸಂಜೆ ಆಸ್ಪತ್ರೆಯ ಭೇಟಿ ನಂತರ ಉಡುಪಿ ಯಲ್ಲೇ ವಾಸ್ತವ್ಯ ಹೂಡಿದ್ದಾರೆ.

ರಾತ್ರಿ ಮಣಿಪಾಲದ ಕಂಟ್ರಿ ಇನ್ ಹೊಟೇಲ್‌ನಲ್ಲಿ ಉಳಿದುಕೊಳ್ಳಲಿರುವ ಮುಖ್ಯಮಂತ್ರಿ, ಡಿ.29ರಂದು ಮಧ್ಯಾಹ್ನ 12:30ಕ್ಕೆ ಆದಿಉಡುಪಿ ಹೆಲಿಪ್ಯಾಡ್ ನಿಂದ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ತೆರಳಲಿರುವರು ಎಂದು ಅವರ ಪ್ರವಾ ಕಾರ್ಯಕ್ರಮದ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News