ಮಹಿಳಾ ಸಬಲೀಕರಣಕ್ಕೆ ಬಜೆಟ್‌ನಲ್ಲಿ ವಿಶೇಷ ಕಾರ್ಯಕ್ರಮ : ಬೈಂದೂರಿನಲ್ಲಿ ಸಿಎಂ ಯಡಿಯೂರಪ್ಪ

Update: 2019-12-28 17:15 GMT

 ಉಡುಪಿ, ಡಿ.28: ರಾಜ್ಯದಲ್ಲಿ ಮಹಿಳಾ ಸಬಲೀಕರಣದ ಉದ್ಧೇಶದಿಂದ ಸ್ತ್ರೀಶಕ್ತಿ ಸಂಘಗಳನ್ನು ಬಲಪಡಿಸಲು ಈ ಬಾರಿಯ ಬಜೆಟ್‌ನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಘೋಷಣೆ ಮಾಡಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ಶನಿವಾರ ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಬಾ ಕ್ಷೇತ್ರದಲ್ಲಿ 387 ಕೋಟಿ ರೂ. ಮೊತ್ತದ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡುತಿದ್ದರು.

ಮೀನುಗಾರರ ಸಾಲ ಮನ್ನಾ ಕುರಿತಂತೆ ಸ್ಪಷ್ಟ ಸರಕಾರಿ ಆದೇಶವಿಲ್ಲದ ಕಾರಣ ಇದುವರೆವಿಗೂ ಈ ಪ್ರಯೋಜನ ಮೀನುಗಾರ ರಿಗೆ ದೊರೆಯದ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ಕೆಲವೇ ದಿನಗಳಲ್ಲಿ ಉಡುಪಿ ಜಿಲ್ಲೆಯ 20,197 ಮೀನುಗಾರರ 55 ಕೋಟಿ ರೂ. ಸಾಲ ಸಂಪೂರ್ಣ ಮನ್ನಾ ಆಗಲಿದೆ. ಈ ಬಗ್ಗೆ ಯಾವುೇ ಗೊಂದಲ ಬೇಡ ಎಂದರು.

ಬೈಂದೂರು ವಿಧಾನಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ದಿ ಪಡಿಸುವ ಉದ್ದೇಶದಿಂದ ನಡೆಯುತ್ತಿರುವ 387 ಕೋಟ ರೂ.ಮೊತ್ತದ ಕಾಮಗಾರಿಗಳನ್ನು ಉತ್ತಮ ಗುಣಮಟ್ಟದಿಂದ ಕೂಡಿರುವಂತೆ ಅನುಷ್ಠಾನ ಗೊಳಿಸಲು ಸೂಚಿಸಿದ ಮುಖ್ಯಮಂತ್ರಿಗಳು, ತಮ್ಮ ಸರಕಾರದ ಅವಧಿಯಲ್ಲಿ ಕಳಪೆ ಕಾಮಗಾರಿಗಳನ್ನು ನಡೆಸಲು ಯಾರಿಗೂ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

ಬೈಂದೂರು ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ ರಾಘವೇಂದ್ರ ಮಾತನಾಡಿ, ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ, ರಸ್ತೆಗಳ ಅಭಿವೃದ್ದಿಗೆ ಕೈಗೊಂಡಿರುವ ಯೋಜನೆಗಳ ಬಗ್ಗೆ ವಿವರಿಸಿದರು. ಕ್ಷೇತ್ರದ ಸರ್ವಾಂಗೀಣ ಅಭಿವೃಧ್ದಿಗೆ ತಾನು ಬದ್ದನಾಗಿದ್ದು, ಕ್ಷೇತ್ರದ ಜನತೆಗೆ ಉಚಿತವಾಗಿ ಆಯುಷ್ಮಾನ್ ಭಾರತ್ ಕಾರ್ಡ್ ಗಳನ್ನು ವಿತರಿಸಲಾಗುತ್ತಿದೆ. ಮೀನುಗಾರಿಕಾ ರಸ್ತೆಗಳ ಅಭಿವೃದ್ದಿ, ಶಾಲೆಗಳ ದುರಸ್ತಿ ಹಾಗೂ ಕೊಠಡಿಗಳ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ ಎಂದರು.

ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾಧಿಕಾರಿ ಜಿ.ಜಗದೀಶ್ ಸ್ವಾಗತಿಸಿದರು. ವಿವಿಧ ಜನಪ್ರತಿನಿಧಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News