ಪೇಜಾವರ ಶ್ರೀ ನಮ್ಮ ನಡುವೆ ಇನ್ನಷ್ಟು ವರ್ಷ ಇರಬೇಕಿತ್ತು: ಕಾರು ಚಾಲಕ ಎಂ. ಆರಿಫ್

Update: 2019-12-29 16:22 GMT

ಉಡುಪಿ, ಡಿ.29: "ಪೇಜಾವರ ಶ್ರೀಗಳು ನಮ್ಮ ನಡುವೆ ಇನ್ನಷ್ಟು ವರ್ಷ ಇರಬೇಕಿತ್ತು'' ಎಂದು ಇಂದು ಬೆಳಗ್ಗೆ ನಿಧನರಾದ ಪೇಜಾವರಶ್ರೀಗಳಿಗೆ ಅಂತಿಮ ನಮನ ಸಲ್ಲಿಸಲು ಅಜ್ಜರಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣಕ್ಕೆ ಆಗಮಿಸಿದದ ಪೇಜಾವರ ಶ್ರೀಯವರ ಕಾರು ಚಾಲಕ ಉಡುಪಿಯ ಮುಹಮ್ಮದ್ ಆರಿಫ್ ಹೇಳಿದರು.

ಸುಮಾರು ನಾಲ್ಕು ವರ್ಷಗಳ ಕಾಲ ಸ್ವಾಮೀಜಿಗಳ ಕಾರು ಚಾಲಕನಾಗಿ ದೇಶಾದ್ಯಂತ ಅವರನ್ನು ಸುರಕ್ಷಿತವಾಗಿ ಕರೆದೊಯ್ದಿದ್ದ ಆರಿಫ್, ಉಡುಪಿಯಲ್ಲಿ ಈಗ ಪೇಜಾವರಶ್ರೀ ಅಭಿಮಾನಿ ಬಳಗ ‘ಮುಸ್ಲಿಂ ಸೌಹಾರ್ದ ಸಮಿತಿ’, ಪೇಜಾವರ ಸ್ವಾಮೀಜಿ ಅಭಿಮಾನಿಗಳ ಬ್ಲಡ್ ಟೀಮ್‌ನ್ನು ಸ್ಥಾಪಿಸಿ ಅದರ ಮೂಲಕ ಪೇಜಾವರಶ್ರೀಗಳ ಹೆಸರಿನಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರಗಳನ್ನು ಆಗಾಗ ನಡೆಸುತ್ತಿರುವುದಾಗಿ ತಿಳಿಸಿದರು.

"ಪೇಜಾವರ ಶ್ರೀಗಳ 90ನೇ ವರ್ಷದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸುವ ಯೋಜನೆಯನ್ನು ನಾವು ಹಾಕಿಕೊಂಡಿದ್ದೆವು. ಅವರ ಹುಟ್ಟು ಹಬ್ಬವನ್ನೂ ಅದ್ದೂರಿಯಾಗಿ ಆಚರಿಸುವ ಯೋಜನೆ ನಮ್ಮದಾಗಿತ್ತು. ಆದರೆ ಅವರು ಇಷ್ಟು ಬೇಗ ನಮ್ಮಿಂದ ದೂರವಾಗುತ್ತಾರೆ ಎಂದು ನಾವು ತಿಳಿದುಕೊಂಡಿರಲಿಲ್ಲ. ನಮ್ಮ ಆಸೆ ಇನ್ನೆಂದೂ ಈಡೇರುವುದಿಲ್ಲ" ಎಂದು ಗದ್ಗದಿತ ಧ್ವನಿಯಲ್ಲಿ ತಿಳಿಸಿದರು.

ಆರಿಫ್ ನಾಲ್ಕು ವರ್ಷಗಳ ಹಿಂದೆ ಶ್ರೀಗಳ ಹೆಸರಿನಲ್ಲಿ ರಕ್ತದಾನಿ ತಂಡವನ್ನು ಕಟ್ಟಿಕೊಂಡಿದ್ದಾರೆ. ಇದರಲ್ಲಿ ನೂರಾರು ಮಂದಿ ಮುಸ್ಲಿಮರು ಶ್ರೀಗಳ ಜನ್ಮ ನಕ್ಷತ್ರದಂದು ರಕ್ತದಾನ ಮಾಡುತಿದ್ದರು. ಅಲ್ಲದೇ ಶ್ರೀಕೃಷ್ಣ ಮಠದ ಸ್ವಚ್ಛತಾ ಕಾರ್ಯದಲ್ಲೂ ಇವರು ಪಾಲ್ಗೊಳ್ಳುತಿದ್ದರು.

ತಾನು ನಾಲ್ಕು ವರ್ಷ ಅವರ ಕಾರು ಚಾಲಕನಾಗಿದ್ದೆ. ಕಳೆದ 9-10 ವರ್ಷಗಳಿಂದ ಅವರ ನಿಕಟ ಸಂಪರ್ಕವನ್ನು ಹೊಂದಿದ್ದೇನೆ. ಇತ್ತೀಚೆಗೆ ಬೆಂಗಳೂರಿನ ವಿದ್ಯಾಪೀಠದಲ್ಲಿ ಅವರನ್ನು ಭೇಟಿಯಾಗಿದ್ದೆ. ಎಂದಿನಂತೆ ನಗುಮೊಗದಿಂದಲೇ ಮಾತನಾಡಿಸಿ, ಆತ್ಮೀಯವಾಗಿ ನಮಗೆ ಬುದ್ಧಿಮಾತು ಹೇಳಿದ್ದರು ಎಂದು ಆರಿಫ್ ನೆನಪಿಸಿಕೊಂಡರು. ತನ್ನಿಬ್ಬರು ಅಣ್ಣಂದಿರು ಸೇರಿದಂತೆ ನಮ್ಮ ಕುಟುಂಬ 20 ವರ್ಷಗಳಿಂದ ಅವರ ಕಾರು ಚಾಲಕರಾಗಿದ್ದೆವು ಎಂದರು.

ಕೃಷ್ಣ ಮಠದ ಸ್ವಾಮೀಜಿಗೆ ಮುಸ್ಲಿಂ ಚಾಲಕರ ನೇಮಕದ ಬಗ್ಗೆ ಕೆಲವರು ಅಪಸ್ವರ ತೆಗೆದಾಗಲೂ ಸ್ವಾಮೀಜಿ ಅದಕ್ಕೆ ಕಿವಿಗೊಟ್ಟಿರಲಿಲ್ಲ. ಕೆಲವರು ಆರೋಪಿಸುವಂತೆ ಅವರು ಖಂಡಿತ ಕೋಮುವಾದಿಯಲ್ಲ. ಅಂಥ ಭಾವನೆ ನನಗೆಂದೂ ಬಂದೇ ಇಲ್ಲ. ಅವರ ಮಠದೊಳಗೆ ನಾನು ಸರಾಗವಾಗಿ ಹೋಗಿ ಬರುತಿದ್ದೆ. ಮಠದಲ್ಲಿ ನನಗೆ ಮುಕ್ತ ಅವಕಾಶವಿತ್ತು. ಯಾವತ್ತೂ ಅಲ್ಲಿ ನನಗೆ ಧರ್ಮ ಅಡ್ಡಿಯಾಗಲಿಲ್ಲ. ನಾನು ವೇಗವಾಗಿ ಕಾರು ಬಿಟ್ಟಾಗಲೂ ಅವರು ಗದರುತ್ತಿರಲಿಲ್ಲ. ಒಮ್ಮೊಮ್ಮೆ ಆರಿಫ್ ನಿಧಾನವಾಗಿ ಓಡಿಸು ಎನ್ನುತಿದ್ದರು ಎಂದು ನುಡಿದರು.

ಒಮ್ಮೆ ಮೈಸೂರಿನಲ್ಲಿ ಚಾರ್ತುಮಾಸ್ಯಕ್ಕೆ ಕುಳಿತ ಸಂದರ್ಭದಲ್ಲಿ ನಾನು ಅವರನ್ನು ಭೇಟಿಯಾಗಿದ್ದೆ. ಅವರು ಪಕ್ಕದಲ್ಲಿ ಕುಳ್ಳಿರಿಸಿಕೊಂಡು ಆತ್ಮೀಯವಾಗಿ ಮಾತನಾಡಿದ್ದರು. ಊಟ ಮಾಡಿದೆಯಾ ಎಂದು ವಿಚಾರಿಸಿದ್ದರು. ಅವರು ಎಷ್ಟೇ ಹೊತ್ತಿಗೆ ಕರೆದರೂ ನಾನು ಹೋಗಲು ರೆಡಿಯಾಗಿರುತ್ತಿದ್ದೆ. ಅವರು ಅವರಿಗಿಂತ ಹೆಚ್ಚು ನಮ್ಮ ಯೋಗಕ್ಷೇಮ ವಿಚಾರಿಸುತಿದ್ದರು. ನಮ್ಮ ಧರ್ಮವನ್ನು ಪ್ರೀತಿಸಿ ಅನ್ಯಧರ್ಮವನ್ನು ಗೌರವಿಸುವುದನ್ನು ನಾನು ಅವರಿಂದ ಕಲಿತೆ ಎಂದು ಆರಿಫ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News