ಪೇಜಾವರ ಮಠದಲ್ಲೇ ನಿಧನರಾದ ವಿಶ್ವೇಶತೀರ್ಥ ಸ್ವಾಮೀಜಿ

Update: 2019-12-29 14:58 GMT

ಉಡುಪಿ, ಡಿ.29: ಕಳೆದ ಹತ್ತು ದಿನಗಳಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಯ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತಿದ್ದ ಪೇಜಾವರ ಮಠದ ಹಿರಿಯ ಯತಿಗಳಾದ ಶ್ರೀವಿಶ್ವೇಶತೀರ್ಥರು ಇಂದು ಬೆಳಗ್ಗೆ 9:20ಕ್ಕೆ ರಥಬೀದಿಯಲ್ಲಿರುವ ಪೇಜಾವರ ಮಠದಲ್ಲಿ ನಿಧನರಾದರು.

ನ್ಯುಮೋನಿಯಾ ಹಾಗೂ ಉಸಿರಾಟದ ತೊಂದರೆಯಿಂದ ಡಿ.20ರಂದು ಕೆಎಂಸಿ ಆಸ್ಪತ್ರೆಯ ಐಸಿಯುನಲ್ಲಿ ಕೃತಕ ಉಸಿರಾಟ ವ್ಯವಸ್ಥೆಯೊಂದಿಗೆ ಚಿಕಿತ್ಸೆ ಪಡೆಯುತಿದ್ದ ಪೇಜಾವರಶ್ರೀಗಳ ಆರೋಗ್ಯ ಶುಕ್ರವಾರದ ಬಳಿಕ ಹದಗೆಡುತ್ತಾ ಬಂದಿದ್ದು, ನಿನ್ನೆ ಅವರ ಮೆದುಳು ನಿಷ್ಕ್ರೀಯಗೊಂಡಿರುವುದಾಗಿ ಅವರಿಗೆ ಚಿಕಿತ್ಸೆ ನೀಡುತಿದ್ದ ವೈದ್ಯರು ಪ್ರಕಟಿಸಿದ್ದರು.

ಪೇಜಾವರಶ್ರೀಗಳು ಚೇತರಿಸಿಕೊಳ್ಳುವ ಯಾವುದೇ ಲಕ್ಷಣ ತೋರದಿರು ವುದರಿಂದ ಅವರ ಕೊನೆಯಾಸೆಯಂತೆ ರವಿವಾರ ಮುಂಜಾನೆ ಶ್ರೀಗಳನ್ನು ಪೇಜಾವರ ಮಠಕ್ಕೆ ಸ್ಥಳಾಂತರಿಸಲಾಗುವುದು ಎಂದು ಪೇಜಾವರ ಮಠದ ಕಿರಿಯ ಯತಿಗಳಾದ ಶ್ರೀವಿಶ್ವಪ್ರಸನ್ನ ತೀರ್ಥರು ಪ್ರಕಟಿಸಿದ್ದರು.

ಅದರಂತೆ ಇಂದು ಬೆಳಗ್ಗೆ 6:55ಕ್ಕೆ ಅವರನ್ನು ವೆಂಟಿಲೇಟರ್ ವ್ಯವಸ್ಥೆ ಸಹಿತ ವೈದ್ಯರು ಹಾಗೂ ನರ್ಸ್‌ಗಳ ಸಹಿತ ವಿಶೇಷ ಅಂಬುಲೆನ್ಸ್‌ನಲ್ಲಿ ಕೆಎಂಸಿ ಆಸ್ಪತ್ರೆಯಿಂದ ಬಿಗುಭದ್ರತೆಯಲ್ಲಿ 7:15ಕ್ಕೆ ಪೇಜಾವರ ಮಠಕ್ಕೆ ಕರೆತರಲಾಗಿತ್ತು. 9:15ರ ಸುಮಾರಿಗೆ ಅವರಿಗಿದ್ದ ಕೃತಕ ಉಸಿರಾಟದ ವ್ಯವಸ್ಥೆಯನ್ನು ತೆಗೆಯಲಾಗಿತ್ತು. 9:20ಕ್ಕೆ ಮಠದ ಇಬ್ಬರು ಶಿಷ್ಯರು ಹೊರಬಂದು ಗೋವಿಂದ ಘೋಷಣೆಯೊಂದಿಗೆ 89 ವರ್ಷ ಪ್ರಾಯದ ಶ್ರೀವಿಶ್ವೇಶತೀರ್ಥರ ನಿಧನದ ವಾರ್ತೆಯನ್ನು ಹೊರಜಗತ್ತಿಗೆ ಸಾರಿದರು.

ಇದಾದ ಐದು ನಿಮಿಷಗಳ ಬಳಿಕ ಉಡುಪಿ ಶಾಸಕ ಕೆ.ರಘುಪತಿ ಭಟ್ ಮಠದೊಳಗಿನಿಂದ ಹೊರಬಂದು ಅಧಿಕೃತವಾಗಿ ಶ್ರೀಗಳ ನಿಧನದ ಸುದ್ದಿಯನ್ನು ಸಾರಿದರು. ಈಗ ತಾನೇ ವೈದ್ಯರು ಪೇಜಾವರಶ್ರೀಗಳ ನಿಧನವನ್ನು ಖಚಿತ ಪಡಿಸಿದ್ದಾರೆ. ಇನ್ನು ಮುಂದೆ ಅಷ್ಟಮಠಗಳ ಸ್ವಾಮೀಜಿಗಳಿಗೆ ಸಂಪ್ರದಾಯದಂತೆ ನಡೆಯಬೇಕಾದ ವಿಧಿ-ವಿಧಾನಗಳನ್ನು ಪೂರೈಸಿದ ಬಳಿಕ ಸಾರ್ವಜನಿಕ ಅಂತಿಮ ದರ್ಶನಕ್ಕಾಗಿ ಅಜ್ಜರಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣಕ್ಕೆ ಕೊಂಡೊಯ್ದು ಅಲ್ಲಿ ಮೂರು ಗಂಟೆ ಇರಿಸಿದ ಬಳಿಕ ವಿಶೇಷ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ತೆಗೆದುಕೊಂಡು ಹೋಗಿ ಅವರ ಆಶೆಯಂತೆ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಅವರ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ತಿಳಿಸಿದ್ದರು.

ಮೂರು ದಿನಗಳ ಶೋಕಾಚರಣೆ: ಪೇಜಾವರಶ್ರೀಗಳ ಅಂತಿಮ ದರ್ಶನ ಮಾಡಿ ಹೊರ ಬಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸುದ್ದಿಗಾರರೊಂದಿಗೆ ಮಾತನಾಡಿ ವೈದ್ಯರ ಸರ್ವ ಪ್ರಯತ್ನದ ಹೊರತಾಗಿಯೂ ಅವರನ್ನು ಬದುಕಿಸಿ ಕೊಳ್ಳಲು ಆಗಲಿಲ್ಲ ಎಂದರಲ್ಲದೇ, ರಾಜ್ಯದಲ್ಲಿ ಮೂರು ದಿನಗಳ ಶೋಕಾಚರಣೆಯನ್ನು ಘೋಷಿಸಿದರು. ಸಕಲ ಸರಕಾರಿ ಗೌರವ ಗಳೊಂದಿಗೆ ಅವರ ಅಂತ್ಯಸಂಸ್ಕಾರವನ್ನು ಶ್ರೀಗಳ ಅಪೇಕ್ಷೆ ಯಂತೆ ಬೆಂಗಳೂರಿನ ಅವರ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಸಂಜೆ ನಡೆಸಲಾಗುವುದು ಎಂದು ಘೋಷಿಸಿದರು.

ಬಿದಿರಿನ ಬುಟ್ಟಿಯಲ್ಲಿ ಪೇಜಾವರಶ್ರೀಗಳು:  ಪೇಜಾವರ ಮಠದೊಳಗೆ ಅಷ್ಟ ಮಠದ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ ವಿಧಿಗಳನ್ನು ನಡೆಸಿದ ಬಳಿಕ 10:20ಕ್ಕೆ ಬಿದಿನ ಬುಟ್ಟಿಯಲ್ಲಿ ಶ್ರೀಗಳನ್ನು ಪದ್ಮಾಸನದಲ್ಲಿ ಕುಳ್ಳಿರಿಸಿ ಕುತ್ತಿಗೆಗೆ ತುಳಸಿ ಮಾಲೆಯನ್ನು ಹಾಕಲಾಗಿತ್ತು. ಉದ್ದನೆಯ ಬಿದಿನ ಬೊಂಬಿಗೆ ಬುಟ್ಟಿಯನ್ನು ಕಟ್ಟಿ ಅದನ್ನು 7-8 ಮಂದಿ ಹೊತ್ತುಕೊಂಡು ಹೊರಗೆ ಬರಲಾಯಿತು. ಅಲ್ಲಿಂದ ಮೆರವಣಿಗೆಯಲ್ಲಿ ಕನಕನ ಕಿಂಡಿ ಎದುರು ಬಂದು ಕೃಷ್ಣನ ದರ್ಶನ ಮಾಡಿಸಲಾಯಿತು.

ಬಳಿಕ ಶ್ರೀಗಳ ಪಾರ್ಥಿವ ಶರೀರವನ್ನು ಮಧ್ವ ಸರೋವರಕ್ಕೆ ಕೊಂಡೊಯ್ದು ಅಲ್ಲಿ ಬುಟ್ಟಿಯನ್ನು ಮೂರು ಬಾರಿ ನೀರಿನಲ್ಲಿ ಮುಳುಗಿಸಿ ಪಾರ್ಥಿಕ ಶರೀರಕ್ಕೆ ಅಭಿಷೇಕ ಮಾಡಿಸಲಾಯಿತು. ಅಲ್ಲಿ ಪಾರಾಯಣವೂ ನಡೆಯಿತು.

ಬಳಿಕ ಶ್ರೀಕೃಷ್ಣ ಮಠದೊಳಗೆ ಕರೆತಂದು ತೀರ್ಥ ಮಂಟಪದಲ್ಲಿ ಪಾರ್ಥಿವ ಶರೀರವನ್ನು ಇರಿಸಿದ ಬಳಿಕ ಪರ್ಯಾಯ ಪಲಿಮಾರು ಶ್ರೀಗಳು ಕೃಷ್ಣನಿಗೆ ಆರತಿ ಬೆಳಗಿದರು. ಅದೇ ಆರತಿಯನ್ನು ಪೇಜಾವರರ ಕೈಯಲ್ಲಿರಿಸಿ ಕೃಷ್ಣನಿಗೆ ಅಲ್ಲಿಂದಲೇ ಆರತಿ ಬೆಳಗಿಸಲಾ ಯಿತು. 15 ನಿಮಿಷಗಳ ಕಾಲ ವಿವಿಧ ಪಾರಾಯಣಗಳು ನಡೆದವು. ಈ ವೇಳೆ ಅದಮಾರುಶ್ರೀಗಳನ್ನು ಹೊರತು ಪಡಿಸಿ ಉಳಿದೆಲ್ಲಾ ಅಷ್ಟಮಠಗಳ ಶ್ರೀಗಳು ಉಪಸ್ಥಿತರಿದ್ದರು.

ಅನಂತರ ಬುಟ್ಟಿಯನ್ನು ರಥಬೀದಿಗೆ ಒಂದು ಸುತ್ತು ತರಲಾಯಿತು. ಆಮೇಲೆ ಬುಟ್ಟಿಯನ್ನು ಸೋದೆ ಮಠದ ಎದುರು ಇರಿಸಿ ಅಲಂಕೃತ ತೆರೆದ ಜೀಪಿನಲ್ಲಿರಿಸಿ ಮೆರವಣಿಗೆಯಲ್ಲಿ ವಿದ್ಯೋದಯ ಶಾಲೆ, ವಾಹನ ಪಾರ್ಕಿಂಗ್ ಪ್ರದೇಶ, ಕಲ್ಸಂಕ, ಬನ್ನಂಜೆ, ಬ್ರಹ್ಮಗಿರಿ ಮಾರ್ಗವಾಗಿ ಅಜ್ಜರಕಾಡಿನ ಜಿಲ್ಲಾ ಕ್ರೀಡಾಂಗಣಕ್ಕೆ ತರಲಾಯಿತು.

ಜಿಲ್ಲಾ ಕ್ರೀಡಾಂಗಣದಲ್ಲಿ ಪೇಜಾವರ ಶ್ರೀಗಳಿಗೆ ಸಕಲ ಸರಕಾರಿ ಗೌರವಗಳೊಂದಿಗೆ ಮರಣೋತ್ತರ ಗೌರವ ವಂದನೆ ಹಾಗೂ ಮೂರು ಸುತ್ತು ಕುಶಲ ತೋಪನ್ನು ಹಾರಿಸುವ ಮೂಲಕ ಗೌರವ ಸಲ್ಲಿಸಲಾಯಿತು. ಬಳಿಕ ಮುಖ್ಯಮಂತ್ರಿ ಆದಿಯಾಗಿ ಸಚಿವರು, ವಿವಿಧ ಸ್ತರಗಳ ಜನಪ್ರತಿನಿಧಿಗಳು, ಸಮಾಜದ ಗಣ್ಯರು ಸೇರಿದಂತೆ ಸಾವಿರಾರು ಮಂದಿ ಸರತಿ ಸಾಲಿನಲ್ಲಿ ನಿಂತು ಶ್ರೀಗಳ ಅಂತಿಮ ದರ್ಶನ ಪಡೆದರು.

ಅಪರಾಹ್ನ 1:30ಕ್ಕೆ ಅಂಬುಲೆನ್ಸ್‌ನಲ್ಲಿ ಪೇಜಾವರಶ್ರೀಗಳ ಮೃತದೇಹವನ್ನು ಆದಿಉಡುಪಿಯ ಹೆಲಿಪ್ಯಾಡ್‌ಗೆ ಒಯ್ದು ಅಲ್ಲಿಂದ ಅಂತಿಮ ಸಂಸ್ಕಾರಕ್ಕಾಗಿ ವಿಶೇಷ ಹೆಲಿಕಾಪ್ಟರ್‌ನಲ್ಲಿ ಬೆಂಗಳೂರಿಗೆ ಕರೆದೊಯ್ಯಲಾಯಿತು.

ಪೇಜಾವರ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಗಳ ಅಂತಿಮ ದರ್ಶನ ಪಡೆದವರಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಪರ್ಯಾಯ ಪಲಿಮಾರು, ಪುತ್ತಿಗೆ, ಕಾಣಿಯೂರು, ಕೃಷ್ಣಾಪುರ, ಸೋದೆ ಮಠಾಧೀಶರು, ಶ್ರೀರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತಿ, ಭೀಮನಕಟ್ಟೆ ಮಠದ ಶ್ರೀರಘುವರೇಂದ್ರ ತೀರ್ಥರು, ವಿವಿಧ ವಿಎಚ್‌ಪಿ ಮುಖಂಡರು, ಕೋಟ ಶ್ರೀನಿವಾಸ ಪೂಜಾರಿ, ಬಸವರಾಜ ಬೊಮ್ಮಾಯಿ, ಶೋಭಾ ಕರಂದ್ಲಾಜೆ, ಉಮಾಭಾರತಿ, ವಿನಯಕುಮಾರ್ ಸೊರಕೆ, ಪ್ರಮೋದ್ ಮದ್ವರಾಜ್, ಯು.ಆರ್.ಸಭಾಪತಿ, ಜಿಲ್ಲಾಧಿಕಾರಿ ಜಿ.ಜಗದೀಶ್, ಸಿಇಓ ಪ್ರೀತಿ ಗೆಹ್ಲೋಟ್, ಎಸ್ಪಿ ನಿಶಾ ಜೇಮ್ಸ್ ಮುಂತಾದವರು ಸೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News