‘ವಿಚಾರಿಸಿ ಬಿಡುವೆವು ಎಂದ ಪೊಲೀಸರು ಜೈಲಿಗೆ ತಳ್ಳಿದರು’ - ಕಂಬಿ ಎಣಿಸುತ್ತಿರುವ ಹೂವು-ಮೀನು ವ್ಯಾಪಾರಿಗಳು

Update: 2019-12-29 15:45 GMT
ಫೈಲ್ ಚಿತ್ರ

ಮಂಗಳೂರು : ವಿಚಾರಣೆ ನಡೆಸಿ ಈವತ್ತೇ ಬಿಟ್ಟು ಬಿಡುವೆವು... ಅಂತ ಹೇಳಿ ಪೊಲೀಸರು ‘ಅವರನ್ನು’ ಕರೆದೊಯ್ದರು. ಆದರೆ, ಆ ದಿನ ಬಿಟ್ಟು ಬಿಡದೆ ಪ್ರಕರಣ ದಾಖಲಿಸಿ ನೇರ ಜೈಲಿಗೆ ತಳ್ಳಿಬಿಟ್ಟರು. ಮಾಡದ ತಪ್ಪಿಗಾಗಿ ಇದೀಗ ಅವರು ಜೈಲಿನಲ್ಲಿ ಕಾಲ ಕಳೆಯುವಂತಾಗಿದೆ.

ಡಿ.19ರ ಗುರುವಾರ ನಡೆದ ಗೋಲಿಬಾರ್, ಹಿಂಸಾಚಾರದ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸರಿಂದ ಬಂಧನಕ್ಕೊಳಗಾಗಿ ಜೈಲು ಪಾಲಾದ ಯುವಕರಿಬ್ಬರ ಸಹೋದರರ ಅಳಲು ಇದಾಗಿದೆ.

ಕಾವೂರು ಸಮೀಪದ ಫಯಾಝ್‌ನನ್ನು ಡಿ. 24 ಮತ್ತು ಶಾಂತಿನಗರದ ಕಲಂದರ್ ಭಾಷಾನನ್ನು ಡಿ.25ರಂದು ವಿಚಾರಣೆಯ ನೆಪದಲ್ಲಿ ಕರೆದೊಯ್ದ ಪೊಲೀಸರು ಒಂದಿಡೀ ದಿನ ವಶದಲ್ಲಿಟ್ಟುಕೊಂಡು ಡಿ. 26ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ಬಗ್ಗೆ ಜೈಲಿನಲ್ಲಿರುವ ಫಯಾಝ್ ಮತ್ತು ಕಲಂದರ್ ಭಾಷಾ ಅವರ ಸಹೋದರರಿಬ್ಬರು ‘ವಾರ್ತಾಭಾರತಿ’ಯೊಂದಿಗೆ ಘಟನೆಯ ಬಗ್ಗೆ ವಿವರಿಸಿ, ನೋವು ಹಂಚಿಕೊಂಡಿದ್ದಾರೆ.

ಫಯಾಝ್: ನನ್ನ ಅಣ್ಣ ಹಲವಾರು ವರ್ಷದಿಂದ ಕಾವೂರು ಜಂಕ್ಷನ್‌ನಲ್ಲಿ ಮೀನು ವ್ಯಾಪಾರ ಮಾಡುತ್ತಿದ್ದಾನೆ. ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಆತ ಯಾವ ರಾಜಕೀಯ ಪಕ್ಷ ಅಥವಾ ಸಂಘಟನೆಗಳಲ್ಲಿಲ್ಲ. ತಾನಾಯಿತು, ತನ್ನ ದುಡಿಮೆಯಾಯಿತು ಎಂಬಂತೆ ದಿನದೂಡುತ್ತಿದ್ದ. ಯಾರ ತಂಟೆ ತಕರಾರಿಗೂ ಹೋದವನಲ್ಲ. ಡಿ.19ರಂದು ಮಧ್ಯಾಹ್ನ ಆತ ತನ್ನ ಸ್ನೇಹಿತರ ಜೊತೆಗೂಡಿ ಮಂಗಳೂರಿಗೆ ಹೋಗಿದ್ದ. ಹೊಟೇಲಲ್ಲಿ ಊಟ ಮಾಡಿ ಮರಳಿ ಬರುವಷ್ಟರಲ್ಲಿ ಮಂಗಳೂರಿನಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ಮಧ್ಯೆ ಹಿಂಸಾಚಾರ ಶುರುವಾಗಿತ್ತು. ಫಯಾಝ್ ಅಲ್ಲಿಂದ ತಕ್ಷಣ ಮನೆಗೆ ಹೊರಟು ಬಂದಿದ್ದ. ಡಿ.24ರಂದು ಅಣ್ಣ ವ್ಯಾಪಾರ ಮಾಡುವ ಕಾವೂರು ಜಂಕ್ಷನ್‌ಗೆ ಬಂದ ಪೊಲೀಸರು ಮಂಗಳೂರಿನ ಗಲಭೆಯ ವಿಷಯದಲ್ಲಿ ನಿನ್ನ ಜೊತೆ ಸ್ವಲ್ಪ ಮಾತನಾಡಲಿಕ್ಕಿದೆ, ವಿಚಾರಿಸಿ ಬಿಟ್ಟುಬಿಡುತ್ತೇವೆ ಎನ್ನುತ್ತಾ ಕರೆದೊಯ್ದಿದ್ದರು. ಬಿಟ್ಟು ಬಿಡಬಹುದು ಎಂದಿದ್ದ ಪೊಲೀಸರು ಬಿಡಲೇ ಇಲ್ಲ. ಹಾಗೇ ಹೋದವನ ಬಗ್ಗೆ ಮಾಹಿತಿಯನ್ನೂ ನೀಡಿರಲಿಲ್ಲ. ಡಿ.26ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕವಷ್ಟೇ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ ಎಂದು ಗೊತ್ತಾಯಿತು.

ಅಣ್ಣ ಫಯಾಝ್‌ಗೂ ಮಂಗಳೂರು ಗಲಭೆಗೂ ಸಂಬಂಧವೇ ಇಲ್ಲ. ಕೆಲಸದ ನಿಮಿತ್ತ ಅಲ್ಲಿ ನೂರಾರು ಮಂದಿ ಜಮಾಯಿಸಿದಾಗ ಕುತೂಹಲಕ್ಕಾಗಿ ಅಲ್ಲಿ ನಿಂತು ನೋಡಿರಬಹುದು. ಸಿಸಿ ಕ್ಯಾಮರಾದ ಆಧಾರದಲ್ಲೋ ಏನೋ... ಅವನನ್ನು ವಿನಾಕಾರಣ ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಅವನ ಮೇಲೆ ಈವರೆಗೆ ಒಂದೇ ಒಂದು ಕೇಸು ಇಲ್ಲ. ಅಂತಹವನ ಮೇಲೆ ಹಲವು ಕೇಸು ದಾಖಲಿಸಿ ಜೀವನ ಪೂರ್ತಿ ಹಿಂಸೆ ಅನುಭವಿಸುವಂತೆ ಮಾಡಿದ್ದಾರೆ. ನಾಲ್ಕು ತಿಂಗಳ ಹಿಂದೆ ರಸ್ತೆ ಅಪಘಾತದಲ್ಲಿ ಗಾಯಗೊಂಡು ಶಸ್ತ್ರಚಿಕಿತ್ಸೆ ಗೊಳಗಾಗಿದ್ದಾನೆ. ಸರಿಯಾಗಿ ನಡೆದಾಡಲೂ ಆಗುತ್ತಿಲ್ಲ ಎಂದು ಮುಹಮ್ಮದ್ ಮಾಲಿಕ್ ಹೇಳಿದ್ದಾರೆ.

ಕಲಂದರ್ ಭಾಷಾ: ಕಲಂದರ್ ಭಾಷಾ ಕಳೆದ 20 ವರ್ಷದಿಂದ ಹೂವಿನ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದ. ಯಾವ ಪಕ್ಷ ಅಥವಾ ಸಂಘಟನೆಯಲ್ಲೂ ಇಲ್ಲ. ಬೆಳಗ್ಗೆ 8 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ವ್ಯಾಪಾರ ಮಾಡುತ್ತಾನೆ. ಮಧ್ಯಾಹ್ನ ಊಟಕ್ಕೆ ಮನೆಗೆ ಬಂದು ಮತ್ತೆ ವ್ಯಾಪಾರ ಮಾಡಲು ಹೋಗುತ್ತಿದ್ದ. ಅಂದೂ ಆತ ವ್ಯಾಪಾರದಲ್ಲಿ ನಿರತನಾಗಿದ್ದ. ಸ್ನೇಹಿತನೊಬ್ಬ ಕರೆದ ಮೇರೆಗೆ ಮಂಗಳೂರಿಗೆ ಹೋಗಿದ್ದ. ಮಧ್ಯಾಹ್ನ 3 ಗಂಟೆಗೆ ಮರಳಿ ಮನೆಗೆ ಬಂದಿದ್ದ. ನಂತರ ಎಂದಿನಂತೆ ಹೂವು ವ್ಯಾಪಾರ ಮಾಡುತ್ತಿದ್ದ. ಮೊನ್ನೆ ಅಂದರೆ, ಡಿ.25ರಂದು ಹೂವು ವ್ಯಾಪಾರ ಮಾಡುತ್ತಿದ್ದಾಗಲೇ ಬಂದು ವಿಚಾರಣೆ ನಡೆಸಿ ಬಿಡುತ್ತೇವೆ ಎಂದು ಕರೆದೊಯ್ದಿದ್ದರು. ಸಂಜೆಯ ವೇಳೆಗೆ ನಮಗೆ ಕರೆ ಮಾಡಿ ರಾತ್ರಿ ಬರುತ್ತೇನೆ ಎಂದಿದ್ದ. ರಾತ್ರಿಯಲ್ಲ, ಮರುದಿನ ಬೆಳಗ್ಗೆಯಾದರೂ ಕೂಡ ಬರಲಿಲ್ಲ. ಅವನನ್ನು ಗುರುವಾರ ಕೋರ್ಟ್‌ಗೆ ಹಾಜರುಪಡಿಸಿ ಜೈಲಿಗೆ ಕಳುಹಿಸಿದ ಬಳಿಕವಷ್ಟೇ ನಮಗೆ ವಿಷಯ ಗೊತ್ತಾಯಿತು ಎಂದು ಕಲಂದರ್ ಭಾಷಾನ ಸಹೋದರ ರಿಝ್ವಾನ್ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.

ನನ್ನ ಅಣ್ಣನ ವಿರುದ್ಧ ಈವರೆಗೆ ಯಾವ ಕೇಸೂ ದಾಖಲಾಗಲಿಲ್ಲ. ಯಾವ ಪ್ರಕರಣದಲ್ಲೂ ಆತ ಭಾಗಿಯಾದವನಲ್ಲ. ಹೂವಿನ ವ್ಯಾಪಾರ ಮಾಡಿಯೇ ಹೆಂಡತಿ ಹಾಗೂ ತನ್ನಿಬ್ಬರು ಮಕ್ಕಳನ್ನು ಸಾಕುತ್ತಿದ್ದ. ಎಲ್ಲಕ್ಕಿಂತ ಮುಖ್ಯವಾಗಿ ಎಲ್ಲರ ಜೊತೆ ಅನ್ಯೋನ್ಯವಾಗಿದ್ದ. ಘಟನೆಯ ದಿನ ಸ್ನೇಹಿತರ ಜೊತೆಗೂಡಿ ಮಂಗಳೂರಿಗೆ ಹೋದ ತಪ್ಪಿಗೆ ಅವನೀಗ ಜೈಲು ಸೇರುವಂತಾಯಿತು ಎಂದು ರಿಝ್ವಾನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News