‘ಉಡುಪಿ ಜಿಲ್ಲೆಯ ಅಂತರ್ಜಲ ಸಂಪನ್ಮೂಲ, ಸವಾಲು, ಪರಿಹಾರ’ ಕುರಿತು ಮಾಹಿತಿ ಕಾರ್ಯಾಗಾರ

Update: 2019-12-30 14:50 GMT

ಉಡುಪಿ, ಡಿ. 30: ದೇಶವನ್ನು ಕಾಡುತ್ತಿರುವ ಅಂತರ್ಜಲದ ಸಮಸ್ಯೆ ಹಾಗೂ ಅದರ ನಿರ್ವಹಣೆಗೆ ಬಾಹ್ಯಾಕಾಶ ತಂತ್ರಜ್ಞಾನ ವನ್ನು ಪರಿಣಾಮಕಾರಿ ಯಾಗಿ ಬಳಸಲು ಸಾಧ್ಯವಿದೆ ಎಂದು ಬೆಂಗಳೂರಿನ ಇಸ್ರೋ ವೈಜ್ಞಾನಿಕ ಕಾರ್ಯದರ್ಶಿ ಡಾ.ದಿವಾಕರ ಪಿ.ಜಿ.ಹೇಳಿದ್ದಾರೆ.

ಉಡುಪಿ ವಾಟರ್ ಫೌಂಡೇಷನ್, ಮಣಿಪಾಲ ಎಂಐಟಿಯ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಹಯೋಗದೊಂದಿಗೆ ಸೋಮ ವಾರ ಎಂಐಟಿ ಸಭಾಂಗಣದಲ್ಲಿ ಆಯೋಜಿಸಿದ್ದ‘ಉಡುಪಿ ಜಿಲ್ಲೆಯ ಅಂತರ್ಜಲ ಸಂಪನ್ಮೂಲ, ಸವಾಲು ಮತ್ತು ಪರಿಹಾರ’ ವಿಷಯದ ಕುರಿತ ಒಂದು ದಿನದ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಜಲಮೂಲಗಳ ಬಳಕೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗಿರುವುದೇ ನೀರಿನ ಬರಕ್ಕೆ ಮುಖ್ಯ ಕಾರಣ ಎಂದು ಅಭಿಪ್ರಾಯಪಟ್ಟ ಡಾ.ದಿವಾಕರ್, ರಾಜ್ಯದಲ್ಲಿ ಅತ್ಯಧಿಕ ಮಳೆ ಬೀಳುವ ಜಿಲ್ಲೆಗಳಲ್ಲಿ ಉಡುಪಿ ಸಹ ಒಂದಾಗಿದೆ. ಆದರೂ ಇಂದು ಜಿಲ್ಲೆ ನೀರಿನ ಸಮಸ್ಯೆ ಎದುರಿಸುತ್ತಿದೆ. ಇದಕ್ಕೆ ಮುಖ್ಯ ಕಾರಣ ಜನಸಂಖ್ಯೆ ಹೆಚ್ಚಳ ಹಾಗೂ ಕಲುಷಿಗೊಳ್ಳುತ್ತಿರುವ ಜಲುೂಲಗಳು ಎಂದವರು ವಿವರಿಸಿದರು.

ಪ್ರಸ್ತುತ ಕಾರ್ಕಳದಲ್ಲಿ ಶೇ.86ರಷ್ಟು ನೀರಿನ ಮೂಲಗಳಿದ್ದು, ಶೇ.24ರಷ್ಟು ಕೊರತೆ ಇದೆ. ಕುಂದಾಪುರದಲ್ಲಿ ಶೇ. 95ರಷ್ಟು ನೀರಿನ ಮೂಲಗಳಿದ್ದು, ಶೇ. 5ರಷ್ಟು ಕೊರತೆ ಹಾಗೂ ಉಡುಪಿಯಲ್ಲಿ ಶೇ. 70ರಷ್ಟು ನೀರಿನ ಮೂಲಗಳಿದ್ದು ಸುಮಾರು ಶೇ.30ರಷ್ಟು ಕೊರತೆ ಇದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ನೀರಿಗಾಗಿ ಪರದಾಡಬೇಕಾಗುತ್ತದೆ ಎಂದವರು ಎಚ್ಚರಿಸಿದರು.

ಇಸ್ರೋ ಜಗತ್ತಿನಲ್ಲೇ ಅತ್ಯಂತ ಯಶಸ್ವಿ ರಾಕೆಟ್ ತಂತ್ರಜ್ಞಾನವನ್ನು ಹೊಂದಿದ್ದು, ಭೂಮಿಯಿಂದ 500ರಿಂದ 900 ಕಿ.ಮೀ. ಎತ್ತರದಲ್ಲಿ ಸುತ್ತುತ್ತಿ ರುವ ಉಪಗ್ರಹಗಳಿಂದ ಭೂಮಿಯ ಆಳದ ಹೆಚ್ಚು ಸ್ಫುಟವಾದ ಚಿತ್ರಗಳನ್ನು ತೆಗೆಯಬಹುದಾಗಿದೆ ಎಂದರು.
ಇದರಿಂದಾಗಿ ಭೂಮಿಯ ಆಳದಲ್ಲಿರುವ ನೀರಿನ ಹರಿವನ್ನು ಹಾಗೂ ನೀರಿಲ್ಲದ ಭಾಗಗಳನ್ನು ಪತ್ತೆ ಹಚ್ಚಿ ಅದಕ್ಕನುಗುಣವಾಗಿ ಅಂತರ್ಜಲ ಅಭಿವೃದ್ಧಿ ಯೋಜನೆಗಳನ್ನು ರೂಪಿಸಬಹುದಾಗಿದೆ ಎಂದು ಡಾ.ದಿವಾಕರ್ ಹೇಳಿದರು.

ಈಗಾಗಲೇ ಇಸ್ರೋ ಉಡಾವಣೆ ಮಾಡಿರುವ ಉಪಗ್ರಹಳ ಮೂಲಕ ಇಡೀ ದೇಶದ ಭೂಭಾಗಗಳ ಮ್ಯಾಪಿಂಗ್ ಮಾಡಲಾಗಿದ್ದು, ಇದು ಅಂತರ್ಜಲ ಅಭಿವೃದ್ಧಿ ಯೋಜನೆಗಳಿಗೆ ಸಹಕಾರಿಯಾಗಲಿದೆ ಎಂದು ಹೇಳಿದ ದಿವಾಕರ್, ಉಡುಪಿ ಜಿಲ್ಲೆಯ ಭೂಭಾಗದ ಉಪಗ್ರಹ ಚಿತ್ರದ ಮೂಲಕ ವಿವರಣೆಯನ್ನು ನೀಡಿದರು.

ಆರ್ಟ್ ಆಫ್ ಲಿವಿಂಗ್‌ನ ನದಿ ಹಾಗೂ ಅಂತರ್ಜಲ ಮರುಪೂರಣ ಯೋಜನೆಯ ನಿರ್ದೇಶಕ ಡಾ. ಲಿಂಗರಾಜು ವಿಶೇಷ ಉಪಸನ್ಯಾಸ ನೀಡಿ ಉಡುಪಿ ಜಿಲ್ಲೆಯ ನೀರಿನ ಸಮಸ್ಯೆಗೆ ಕಾರಣ ಹಾಗೂ ಪರಿಹಾರದ ಕುರಿತಂತೆ ಪರಿಣಿತರ ತಂಡ ಅಧ್ಯಯನ ಕೈಗೊಳ್ಳಲಿದೆ ಎಂದರು. ಬೆಂಗಳೂರಿನ ಉದ್ಯಮಿ ಪ್ರತಾಪ್ ಹೆಗ್ಡೆ, ಎಂಐಟಿ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಬಾಲಕೃಷ್ಣ ರಾವ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಉಡುಪಿ ವಾಟರ್ ಫೌಂಡೇಷನ್‌ನ ಡಾ.ಪಿ.ವಿ.ಭಂಡಾರಿ ಸ್ವಾಗತಿಸಿ, ನಾರಾಯಣ್ ಶೆಣೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಿಲ್ಲೆಯ ವಿವಿದೆಡೆ ಗಳಿಂದ ಆಗಮಿಸಿದ ಎನ್‌ಜಿಒಗಳ ಪ್ರತಿನಿಧಿಗಳು, ಪರಿಸರಾಸಕ್ತರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News