ಮಂಗಳೂರು : ಕೈದಿಗಳಿಗೆ ಗಾಂಜಾ ಪೂರೈಕೆ ಯತ್ನ ; ಆರೋಪಿಗೆ ಶಿಕ್ಷೆ
ಮಂಗಳೂರು, ಡಿ.30: ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿಗಳನ್ನು ಭೇಟಿ ಮಾಡುವ ನೆಪದಲ್ಲಿ ಅವರಿಗೆ ಗಾಂಜಾ ಪೂರೈಕೆ ಮಾಡಲು ಯತ್ನಿಸಿದ ಆರೋಪಿ ಕಸ್ಬಾ ಬೆಂಗ್ರೆಯ ಅಶ್ಪಕ್ (24) ಎಂಬಾತನಿಗೆ ಮಂಗಳೂರಿನ ನ್ಯಾಯಾಲಯವು ಆರು ತಿಂಗಳ ಕಠಿಣ ಶಿಕ್ಷೆ ಮತ್ತು 15,000 ರೂ. ದಂಡ ವಿಧಿಸಿದೆ.
2016ರ ಎಪ್ರಿಲ್ 4 ರಂದು ಪೂರ್ವಾಹ್ನ 10 ಗಂಟೆಗೆ ಆರೋಪಿ ಅಶ್ಪಕ್ ನಗರದ ಸಬ್ ಜೈಲಿನಲ್ಲಿ ವಿಚಾರಣಾಧೀನ ಕೈದಿಗಳಾಗಿದ್ದ ನಹೀಂ ಮತ್ತು ಚಪ್ಪೆ ತಣ್ಣಿ ರಹೀಂ ಎಂಬವರನ್ನು ಭೇಟಿಯಾಗಲು ಬಂದಿದ್ದ. ಈ ಸಂದರ್ಭ ಜೈಲಿನ ಹೊರಗೆ ಇದ್ದ ಬರ್ಕೆ ಪೊಲೀಸ್ ಠಾಣೆಯ ಎಎಸ್ಐ ಅಮ್ಮಣ್ಣಿ ಮತ್ತು ಸಿಬ್ಬಂದಿ ತಪಾಸಣೆ ನಡೆಸಿದಾಗ ಅಶ್ಪಕ್ ಬಳಿ 50 ಗ್ರಾಂ ಗಾಂಜಾ ಪ್ಯಾಕೆಟ್ ಪತ್ತೆಯಾಗಿತ್ತು ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಆತನನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾ ಗಿತ್ತು. ಆಗ ಬರ್ಕೆ ಪೊಲೀಸ್ ಠಾಣೆಯ ಇನ್ಪೆಕ್ಟರ್ ಆಗಿದ್ದ ಎ.ಕೆ. ರಾಜೇಶ್ ಅವರು ತನಿಖೆಯನ್ನು ಪೂರ್ಣಗೊಳಿಸಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ 3ನೇ ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶೆ ಅಶ್ವಿನಿ ಕೋರೆ ಅವರು ಅಕ್ರಮವಾಗಿ ಗಾಂಜಾ ಹೊಂದಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ ಶಿಕ್ಷೆ ವಿಧಿಸಿ ಡಿ.26ರಂದು ತೀರ್ಪು ನೀಡಿದರು.
ಈ ಪ್ರಕರಣದಲ್ಲಿ ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಮೋಹನ್ಕುಮಾರ್ ವಾದಿಸಿದ್ದರು. ಒಟ್ಟು 8 ಸಾಕ್ಷಿದಾರರ ಪೈಕಿ 5 ಜನ ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಆರೋಪಿಯು ಎನ್ಡಿಪಿಎಸ್ ಕಾಯ್ದೆಯ ಸೆಕ್ಷನ್ 8 ಸಿ ಅನ್ವಯ 6 ತಿಂಗಳು ಕಠಿಣ ಶಿಕ್ಷೆ ಮತ್ತು 10,000 ರೂ. ದಂಡ ಹಾಗೂ ದಂಡ ತೆರಲು ತಪ್ಪಿದರೆ 1 ತಿಂಗಳ ಸಾದಾ ಶಿಕ್ಷೆ ಮತ್ತು ಐಪಿಸಿ 424 (ನಿಷೇಧಿತ ವಸ್ತು ಸಾಗಾಟ) ಅನ್ವಯ 6 ತಿಂಗಳ ಕಠಿಣ ಶಿಕ್ಷೆ ಮತ್ತು 5000 ರೂ. ದಂಡ ಹಾಗೂ ದಂಡ ತೆರಲು ತಪ್ಪಿದರೆ 1 ತಿಂಗಳ ಸಾದಾ ಸಜೆಯನ್ನು ಅನುಭವಿಸಬೇಕು ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.