ಒಲಿದ ಸ್ವರಗಳು
ಮುಹಮ್ಮದ್ ನಿಝಾಮ್ ಬಂಟ್ವಾಳ ತಾಲೂಕಿನ ಗೋಳಿಪಡ್ಪು ನಿವಾಸಿ. ಫೇಸ್‌ಬುಕ್ ಕವನಗಳ ಮೂಲಕ ಹಲವರ ಗಮನಸೆಳೆದ ಇವರು ಹಲವಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಸದ್ಯ ತನ್ನ ಊರಿನಲ್ಲೇ ಕೂಲಿ ಕೆಲಸ ಮಾಡಿಕೊಂಡಿದ್ದಾರೆ.
ಅಹವಾಲು
ನಿನ್ನ ಪ್ರಾರ್ಥನೆ
ನೀ ಬದಲಾಗುವುದರ ಬಗೆಗಿರಲಿ
ಈ ಮುಳ್ಳಿನ ತುದಿಯಲ್ಲಿರುವ
ಜಗತ್ತು ಬದಲಾಗುವುದನ್ನು
ಕಾಣುತ್ತೀಯ ತಾನಾಗಿ
ಬೊಗಸೆ ಹಿಡಿದೋ
ಬೆರಳ ಬಂಧಿಸಿಯೋ
ಎದೆಗಾತು ಕೊಂಡ
ಕೈಗಳ ಮುಖೇನವೋ
ಪರಮದಯಾಮಯನಿಗೆ
ನಿನ್ನ ಭಂಗಿಯ ಬಗೆಗೆ
ತಕರಾರಿಲ್ಲ
ಪ್ರಾರ್ಥಿಸು
ನೀ ಬದಲಾಗುವ ಸಲುವಾಗಿ
ಮಿನಾರದ ಸುಶ್ರಾವ್ಯತೆಯ
ಕರೆಗೋ
ಗಂಟೆಗಳ ನಿನಾದಕ್ಕೋ
ಗಡಿಯಾರದ ಮುಳ್ಳಿನ
ಮುತ್ತುವಿಕೆಗೋ
ನಿನ್ನ ನಾದನಲ್ಲಿ
ಪ್ರಾರ್ಥಿಸು ತನ್ಮಯತೆಯಿಂದ
ನೀ ಬದಲಾಗುವುದರ
ಕಾರಣಕ್ಕಾಗಿ
ಇರುವೆಯ ಶ್ರಮದಂತಿರಲಿ
ಪ್ರಾರ್ಥನೆ
ಒಡನಾಡಿಗಳ ಕರೆಯುವ
ಉಮೇದುವಾರಿಕೆ
ಕೂಳಿಗಿರುವ ಶಿಸ್ತು
ಅಷ್ಟು ಮಾತ್ರವಾದರೂ
ಪಾಲಿಸು
ಕಡಲೆದುರಿನ ದಡದಂತಾಗು
ಪ್ರಾರ್ಥನೆಯಲ್ಲಿ
ಉಬ್ಬುವ ಕಣ್ಣೀರಿಗೆ
ಅಲೆಗಳಪ್ಪಲಿ ಎದೆಕಲ್ಮಶ
ತೊಳೆಯುವ ಧಾವಂತಕ್ಕೆ
ಪರಮ ಪವಿತ್ರವೆಂಬ
ಪ್ರಾರ್ಥನೆಯಿಲ್ಲ
ನೀ ಬದಲಾಗಲಿರುವ
ಪ್ರಾರ್ಥನೆಗಿಂತ ಮಿಗಿಲಾಗಿ
ಆದ್ದರಿಂದ
ಪ್ರಾರ್ಥಿಸು ನೀ
ಬದಲಾಗುವ ಸಲುವಾಗಿ..!
*****************************
ಬಿಸಿಲ ನೆತ್ತಿಯ ದೊರಗು
ಮಳೆಬೆನ್ನಿನ ಚಾಪೆಯಲ್ಲಿ
ನಿದ್ದೆ ಹೊತ್ತ ಕತೆಗಳು
ಇಲ್ಲಿ ಕೇಳಿಸಬೇಡಿ
ಬಿಸಿಲ ನೆತ್ತಿಯ
ದೊರಗಿನಲ್ಲಿ ಪಾದ
ತಿವಿದವ ನಾನು
ಗೊರಕೆಯ ತುದಿಯ
ಕನಸ ರೆಕ್ಕೆ ಬಿಚ್ಚಿಡಲೂಬೇಡಿರಿ
ಇಲ್ಲಿ
ಹಸಿವು ತಿಂದ ಕನಸುಗಳೆಷ್ಟೋ
ಕೊಂಪೆಯಾಗಿರುವಾಗ
ಮಣಿಮುಡಿದ ನಗುವಿನಂಗಡಿಯ
ಕಿತಾಬು ತೆರೆಯದಿರಿ
ಕಣ್ಣೀರ ಒದ್ದೆಹಾಳೆಗಳೂ
ಬಣಗುತ್ತವೆ ಚಳಿಯಲ್ಲಿ
ಸಡಗರದ ಪೋಷಾಕು
ಧರಿಸಗೊಡದಿರಿ
ದುಮ್ಮಾನದ ಸರಕು
ಒಯ್ಯವ ಬೆತ್ತಲೆಯೆದೆಯ
ಎದುರು
ನೆಮ್ಮದಿಯ ರಂಗು
ಜಿಮುಕಿ ಅಲುಗಾಡದಿರಲಿ
ದುಃಖ ವಹಿವಾಟಿನ
ಸಂತೆಯ ಮುಂದೆ
ಗೆಲುವಿನ ಸುವಾರ್ತೆ
ಡಂಗುರ ಭಾರಿಸದಿರಿ
ಸೂತಕದ ಮನೆಯ
ಛಾವಣಿಯ ಮೇಲೆ
ಯಾಕೆಂದರೆ..
ಬಿಸಿಲ ನೆತ್ತಿಯ
ದೊರಗಿನಲ್ಲಿ ಪಾದ
ತಿವಿದವ ನಾನು..!
***********************************
ಉಮ್ಮ ಮತ್ತು ಬೀಡಿ
ನನ್ನ ಉಮ್ಮ ಬೀಡಿ ಕಟ್ಟುತ್ತಾಳೆ
ಅವಳಿಗದು ಮೈದಳೆದು
ಕಿತ್ತುಕೋ ಅನ್ನುವ
ಹೂ ಕೀಳುವಷ್ಟು
ಸುಲಭ ಅಂತೇನಲ್ಲ
ನಾನು ಹಸಿದಾಗ
ರಪ್ಪ ಹೋಗಿ ಕುಚಲಕ್ಕಿ
ಹಾಗೆಯೇ
ಸುಡಲು ಒಣಮೀನಿಗಾಗಿ
ಅವಳು ಬೀಡಿ ಮಾತ್ರ
ಕಟ್ಟುವಷ್ಟು ಶಕ್ತಳಾಗಿದ್ದಳು
ಮಣ್ಣಿನ ಒಲೆಯಡಿಯಲಿ
ಒದ್ದೆ ಬೀಡಿ ಬಿಸಿಮಾಡಿ
ಧಮ್ಮು ಕಟ್ಟುವಷ್ಟು
ಸೇದಿ ಅದೋ ಇರೋ
ಒಂದೇ ಚಾಪೆಯಲ್ಲಿ
ಮಲಗಿ ಒಂದಿಷ್ಟು ಇಂಗ್ಲಿಷ್ ಖಾಯಿಲೆಯಿದ್ದ
ಬಾಪರ ದಫನ್ ಮಾಡಿದ ಮೇಲೆ
ಉಮ್ಮ ಬೀಡಿ ಕಟ್ಟಿ
ನನ್ನ ಹಸಿವ ಕೊಲ್ಲುವಷ್ಟು
ಧೈರ್ಯವಂತೆಯಾಗಿದ್ದಳೆಂದರೆ
ನೀವು ನಂಬಬೇಕು
ಹೊಗೆಸೊಪ್ಪಲಿ ನಿಕೋಟಿನ್
ಅಂತದ್ದೇನೋ ಇದೆ
ಮೊನ್ನೆ ಮನೆಗೆ ಬಂದ
ಮೇಡ್ಭಾಯಿ ಹೇಳಿದ್ರು
ಉಮ್ಮ ಅನ್ನದ ಅಗುಳಿದೆ
ಅಂದರೆ ಅವರಾದರೋ
ನಗದೇ ಇನ್ನೆಂತ ಮಾಡ್ಯಾರು?
ತಲೆ ಆಡಿಸುತ್ತಾ
ಸಪೂರ ನೂಲು ಸುತ್ತುವ
ಉಮ್ಮಳಿಗೆ
ತಲೆ ಆಡಿಸದೇ ಇರೋದಂದರೆ
ಅಪ್ಯಾಯಮಾನ
ದರ್ಜಿ ಆಗದ ಗೋಡೆ
ಸಂಧಿಗೆ ಬೆನ್ನು ಒರಗಿಸದೇ
ಇದ್ದರೆ ತಿಂದದ್ದು
ಜೀರ್ಣವಾಗಲ್ಲ ಅನ್ನುವ
ಸುಳ್ಳು ಪ್ರತಿದಿನ
ನಿಜದಂತೆ ಹೇಳಲು
ಪಳಗಿದ್ದಳು ನಾನೂ ಕೇಳಿಸಿಕೊಳ್ಳಲು
ಅವಳೆಂದಿಗೂ ಶ್ರೀಮಂತಿಕೆ
ಆಶಿಸಿದ್ದಿಲ್ಲ
ನಾವು ಬಡವರೆಂಬೋದು
ನನಗೆ ಮರೆಯಲೆಂದೇ
ಆಚೆ ಮನೆಯವರಿಗೆ
ಚೊಂಬು ಗಂಜಿ ನನ್ನ ಕೈಯಲ್ಲೇ ಕೊಡುತ್ತಾಳೆ
ಸಂತಸವನ್ನು ನಗದಿಗೆ ಕೇಳುವ
ಜಿಲ್ಲೆಯವರ ಎದುರು
ಉಮ್ಮ ಸಂತಸವನ್ನೇ
ನಗದೀಕರಿಸುತ್ತಾಳೆ..!