ಯಾರಿಗೂ ಕಾಡದಿರಲಿ ಸೀರಿಯಲ್ ಫೋಬಿಯಾ...!
ಒಂದು ಅಣು ಪರಮಾಣುವಿನಿಂದ ಸೃಷ್ಟಿಯೂ ಆಗುತ್ತದೆ, ಅಷ್ಟೇ ದೊಡ್ಡ ವಿನಾಶವೂ ಕೂಡ ಆಗುತ್ತದೆ. ಅಂತಹದರಲ್ಲಿ ಮನರಂಜನೆಯ ಹೆಸರಿನಲ್ಲಿ ಬರುತ್ತಿರುವ ಸೀರಿಯಲ್‌ಗಳು, ರಿಯಾಲಿಟಿ ಶೋಗಳು ಮನೆಮನಗಳನ್ನು ಒಡೆಯುತ್ತಿವೆ. ಸಂಬಂಧಗಳಿಗೆ ಅರ್ಥವಿಲ್ಲದಂತೆ ಮಾಡುತ್ತಿವೆ. ನಮ್ಮ ಮೇಲೆ ಸಾಂಸ್ಕೃತಿಕ ದಾಳಿ ಆಗುತ್ತಿದೆ.
'ಫಕೀರ' ಎಂಬ ಅಂಕಿತದಲ್ಲಿ ಬರೆಯುವ ಶ್ರೀಧರ ಬನವಾಸಿ ಅವರು ಕತೆ-ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶ್ರೀಧರ್ ತಮ್ಮ ಸಾಹಿತ್ಯ ಸಾಧನೆಗಳಿಗಾಗಿ ಅರಳು ಸಾಹಿತ್ಯ, ವಸುಧೇವ ಭೂಪಾಲಂ ಸೇರಿದಂತೆ ಹಲವು ಸಾಹಿತ್ಯ ಪ್ರಶಸ್ತಿಗಳನ್ನು ತನ್ನದಾಗಿಸಿದ್ದಾರೆ. ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ 2019ನೇ ಸಾಲಿನ ಯುವ ಪರಸ್ಕಾರ ಸಂದಿದೆ.
ಘಟನೆ 1: ಇತ್ತೀಚೆಗೆ ನನ್ನ ಸ್ನೇಹಿತರೊಬ್ಬರು ತಮ್ಮ ಮಗಳ ಒಂದು ಸಮಸ್ಯೆಯನ್ನು ಹೇಳಿಕೊಂಡಿದ್ದರು. ಪ್ರತಿನಿತ್ಯ ಟೀವಿ ವಾಹಿನಿಯಲ್ಲಿ ಬರುತ್ತಿದ್ದ ಒಂದು ಸೀರಿಯಲನ್ನು ತಪ್ಪದೇ ನೋಡುತ್ತಿದ್ದ ಅವರ ಮಗಳ ಬಗ್ಗೆ ಅವರು ಚಿಂತಾಕ್ರಾಂತರಾಗಿದ್ದರು. ಅವರ ವ್ಯಥೆ ಇಷ್ಟೇ. ಸೀರಿಯಲ್‌ನ ಕಥೆಯಲ್ಲಿ ಹಳ್ಳಿಯಲ್ಲಿ ಹುಟ್ಟಿ ಬೆಳೆದಿದ್ದ ಒಬ್ಬ ಮುಗ್ಧ ಹುಡುಗಿಯನ್ನು ಯಜಮಾನ ತನ್ನ ಮನೆಗೆ ಕರೆದುಕೊಂಡು ಬಂದಿರುತ್ತಾನೆ (ಆಕೆಯ ಪೂರ್ವಾಪರವನ್ನು ಸುಳ್ಳು ಹೇಳಿ). ಈ ಹಳ್ಳಿ ಹುಡುಗಿ ಮನೆಗೆಲಸ ಮಾಡಿಕೊಂಡು, ಮನೆಯ ಯಜಮಾನನ ಮಗಳ ಜೊತೆ ತುಂಬಾ ಆಟವಾಡುತ್ತಾ, ಆಕೆಯೊಂದಿಗೆ ಬಿಟ್ಟಿರಲಾರದಷ್ಟು ಅನುಬಂಧದಲ್ಲಿ ಸಿಕ್ಕಿಹಾಕಿಕೊಂಡುಬಿಟ್ಟಿರುತ್ತದೆ. ಮನೆಯ ಕೆಲಸಕ್ಕೆ ಬಂದಿದ್ದ ಹುಡುಗಿಯ ಮೇಲೆ ಯಜಮಾನನಿಗೆ ಇದ್ದ ಪ್ರೀತಿಯನ್ನು ಕಂಡು ಹೆಂಡತಿಗೆ ಅನುಮಾನ ಬರಲಿಕ್ಕೆ ಶುರುವಾಗುತ್ತದೆ. ಕೊನೆಗೆ ಆ ಹುಡುಗಿಯ ಪೂರ್ವಾಪರ ವಿಚಾರಿಸಿದಾಗ, ಗಂಡನ ಇನ್ನೊಂದು ಸಂಬಂಧದಿಂದ ಹುಟ್ಟಿದ ಮಗಳು ಅನ್ನುವುದು ಗೊತ್ತಾಗುತ್ತದೆ. ಆ ಹಳ್ಳಿ ಹುಡುಗಿಯಿಂದ ಗಂಡ ಹೆಂಡತಿಯರ ಸಂಬಂಧ ಹದಗೆಡುತ್ತದೆ. ಹೆಂಡತಿ ಮಗಳೊಂದಿಗೆ ಮನೆ ಬಿಟ್ಟು ಹೋಗುತ್ತಾಳೆ. ಆ ಹಳ್ಳಿ ಹುಡುಗಿಯನ್ನು ವಿಪರೀತಿ ನೆಚ್ಚಿಕೊಂಡಿದ್ದ ಆತನ ಮಗಳು ಕೂಡ ಮಾನಸಿಕವಾಗಿ ಕುಗ್ಗಿ ಹೋಗುತ್ತಾಳೆ. ಆ ಹಳ್ಳಿ ಹುಡುಗಿಯನ್ನು ಹೊರಗೆ ಕಳುಹಿಸಿದರೆ ಮಾತ್ರ ನಿಮ್ಮ ಜೊತೆ ಸಂಸಾರ; ಇಲ್ಲವಾದರೆ ವಿಚ್ಛೇದನ ಅನ್ನುವ ಆತನ ಹೆಂಡತಿಗೆ ಮಗಳ ಮಾನಸಿಕ ಖಾಯಿಲೆ ಅರ್ಥವಾಗುವುದೇ ಇಲ್ಲ.. ಹೀಗೆ ಧಾರಾವಾಹಿಯ ಕಥೆ ಮುಂದುವರಿಯುತ್ತದೆ. ಈ ಕಥೆಯ ಎಪಿಸೋಡ್‌ಗಳನ್ನು ತಪ್ಪದೇ ನೋಡುತ್ತಿದ್ದ ಸ್ನೇಹಿತರ ಮಗಳು, ಹೊಸದಾಗಿ ಮನೆಗೆಲಸಕ್ಕೆ ಬಂದಿದ್ದ ಹಳ್ಳಿ ಹುಡುಗಿಯ ಜೊತೆ ವಿಚಿತ್ರವಾಗಿ ವರ್ತಿಸತೊಡಗುತ್ತಾಳೆ. ಆಕೆಗೆ ಸಿಕ್ಕ ವಸ್ತುವಿನಿಂದ ಹೊಡೆಯುವುದು, ಬಯ್ಯುವುದು ಮಾಡುತ್ತಲೇ ಇರುತ್ತದೆ. ಆ ಹುಡುಗಿ ಬಂದ ಮೇಲೆ ಅಪ್ಪನನ್ನೂ ಕೂಡ ಮಾತನಾಡಿಸುತ್ತಿಲ್ಲ, ತಂದೆಯ ಮೇಲೆ ಸುಖಾಸುಮ್ಮನೆ ವಿಪರೀತ ಸಿಟ್ಟು ಮಾಡಿಕೊಳ್ಳುತ್ತಿರುತ್ತಾಳೆ. ಕೊನೆಗೆ ಮನಶಾಸ್ತ್ರಜ್ಞರಿಂದ ಚಿಕಿತ್ಸೆ ಕೊಡಿಸಿದಾಗ, ತಿಳಿದುಕೊಂಡ ಸತ್ಯ ಅಷ್ಟೇ ಅಪಥ್ಯವಾಗಿತ್ತು. ಸೀರಿಯಲ್‌ನ ಕಥೆಗೂ ತನ್ನ ಮನೆಯ ಕಥೆಗೂ ಆ ಪುಟ್ಟ ಹುಡುಗಿ ಕಲ್ಪನೆ ಮಾಡಿಕೊಂಡು, ಅಪ್ಪ ತನ್ನ ಇನ್ನೊಂದು ಸಂಬಂಧದಿಂದ ಹುಟ್ಟಿದ ಮಗಳನ್ನು ಅಮ್ಮನಿಗೆ ಸುಳ್ಳು ಹೇಳಿ ಮನೆಗೆ ಕರೆದುಕೊಂಡು ಬಂದಿದ್ದಾನೆ, ಅಪ್ಪನ ಪ್ರೀತಿ ಇನ್ನು ಮುಂದೆ ತನಗೆ ಸಿಗಲಾರದು ಅಂತ ಒಳಗೊಳಗೆ ಕೊರಗಲು ಶುರುಮಾಡಿತ್ತು. ಅಪ್ಪನ ಬಗೆಗಿನ ಸಿಟ್ಟು ಇನ್ನೂ ಕಡಿಮೆಯಾಗಿಲ್ಲವಂತೆ. ಸೀರಿಯಲ್ ನೋಡಿ ಹುಚ್ಚು ಭ್ರಮೆಗೆ ಒಳಗಾದ ಅವರ ಮಗಳ ಕಥೆ ಇದು..
ಘಟನೆ 2: ದಿಲ್ಲಿಯ ಒಬ್ಬ ಪ್ರಸಿದ್ಧ ಲಾಯರ್ ಇತ್ತೀಚೆಗೆ ತಾವು ನಡೆಸಿದ ಡಿವೋರ್ಸ್ ಕೇಸಿನ ಬಗ್ಗೆ ಒಂದು ಲೇಖನ ಬರೆದಿದ್ದರು. ಆ ದಂಪತಿಗೆ ಮದುವೆಯಾಗಿ ಎರಡು ವರ್ಷ ವಾಗಿತ್ತಷ್ಟೇ. ಗಂಡಹೆಂಡತಿಯ ಇಬ್ಬರೂ ವಿದ್ಯಾವಂತರೇ. ಮದುವೆಗೂ ಮುನ್ನ ಕೆಲಸ ಮಾಡುತ್ತಿದ್ದ ಆತನ ಹೆಂಡತಿ, ಮದುವೆಯ ನಂತರ ಕೆಲಸ ಬಿಟ್ಟು ಗೃಹಿಣಿಯಾಗಿ ಸಂಸಾರವನ್ನು ನೋಡಿಕೊಂಡು ಹೋಗುತ್ತಿದ್ದಳು. ಇಬ್ಬರ ನಡುವೆ ಒಳ್ಳೆಯ ಬಾಂಧವ್ಯವಿತ್ತು, ಒಬ್ಬರನ್ನೊಬ್ಬರು ಅತಿಯಾಗಿ ಪ್ರೀತಿಸುತ್ತಿದ್ದರು. ಗಂಡ ಕೆಲಸಕ್ಕೆ ಹೋದಮೇಲೆ ಇಡೀ ಮನೆಯಲ್ಲಿ ಒಬ್ಬಳೇ ಇರುತ್ತಿದ್ದ ಆತನ ಹೆಂಡತಿಗೆ ಸೀರಿಯಲ್‌ಗಳ ಕಡೆ ವಿಪರೀತ ಹುಚ್ಚು. ತನ್ನ ಸಂಸಾರದ ಕಥೆಯಂತೆಯೇ ಬರುತ್ತಿದ್ದ ಒಂದು ಸೀರಿಯಲನ್ನು ತಪ್ಪದೇ ನೋಡುತ್ತಿದ್ದ ಆಕೆ, ಸೀರಿಯಲ್‌ನ ಕಥೆಯಲ್ಲಿ ಗಂಡ ಇನ್ನೊಂದು ಸಂಬಂಧದಲ್ಲಿ ಸಿಕ್ಕಿಹಾಕಿಕೊಂಡ ತಿರುವು ಬಂದು ಕಥಾನಾಯಕಿಯ ಸಂಸಾರ ಅಲ್ಲೋಲ ಕಲ್ಲೋಲವಾಗುತ್ತದೆ. ಆಕೆಯ ಇಷ್ಟದ ಧಾರಾವಾಹಿಯ ಈ ಕಂತುಗಳನ್ನು ನೋಡಿದ ಮೇಲೆ ಗಂಡನ ಮೇಲೆ ಅನುಮಾನ ಪಡತೊಡಗುತ್ತಾಳೆ. ಗಂಡ ಆಫೀಸಿನಿಂದ ತಡವಾಗಿ ಬರುವುದಕ್ಕೂ, ರಾತ್ರಿ ಸರಿಯಾಗಿ ಸುಖ ನೀಡದಿರುವುದಕ್ಕೂ, ಆಗಾಗ ಬ್ಯುಸಿನೆಸ್ ಕೆಲಸದ ಮೇಲೆ ಔಟ್‌ಸ್ಟೇಷನ್ ಹೋಗುವುದಕ್ಕೂ ಹುಚ್ಚು ಕಲ್ಪನೆ ಮಾಡಿಕೊಂಡು, ಗಂಡನ ಮೇಲೆ ವಿಪರೀತ ಅನುಮಾನ ಪಡತೊಡಗುತ್ತಾಳೆ. ಗಂಡ ಇನ್ನೊಂದು ಹೆಣ್ಣಿನ ಜೊತೆ ಸಂಬಂಧ ಹೊಂದಿದ್ದಾನೆ ಅಂತ ತಿಳಿದುಕೊಂಡು ಪ್ರತಿದಿನ ಗಂಡನ ಜೊತೆ ಜಗಳವಾಡತೊಡಗಿದಳು. ತನ್ನ ಜೀವನವೂ, ತನ್ನ ಇಷ್ಟದ ಸೀರಿಯಲ್‌ನ ಕಥೆಯಂತೆಯೇ ಆಯಿತಲ್ಲ ಅಂತ ವ್ಯಥೆಪಡತೊಡಗಿದಳು. ಕೊನೆಗೊಂದು ದಿನ ಮನೆ ಬಿಟ್ಟು ತವರು ಮನೆಗೆ ಹೋಗಿಬಿಡುತ್ತಾಳೆ. ಪೊಲೀಸ್ ಅಧಿಕಾರಿಯಾಗಿದ್ದ ಆಕೆಯ ತಂದೆ, ಮಗಳ ಪರವಾಗಿಯೇ ನಿಂತು ಅಳಿಯನ ಮೇಲೆ ಕೇಸ್ ಹಾಕುತ್ತಾರೆ. ಸಂಬಂಧ ವಿಚ್ಛೇದನದವರೆಗೆ ಬಂದು ನಿಂತು ಬಿಡುತ್ತದೆ. ಅಳಿಯ ನಿಮ್ಮ ಮಗಳ ಹೊರತಾಗಿ ತನಗೆ ಬೇರೆ ಸಂಬಂಧವಿಲ್ಲ ಅಂತ ಗೋಗರೆದರೂ ಮಾವ ಒಪ್ಪುವುದಿಲ್ಲ. ಈ ಕೇಸನ್ನು ಒಪ್ಪಿಕೊಂಡಿದ್ದ ಲಾಯರ್, ಡಿವೋರ್ಸ್ ಕೊಡಿಸುವ ಮುನ್ನ, ಮಗಳ ಮಾನಸಿಕ ಸಮಸ್ಯೆಯನ್ನು ಅರ್ಥ ಮಾಡಿಕೊಂಡಿದ್ದರು. ಆಕೆಯನ್ನು ಒಬ್ಬ ಮನಶಾಸ್ತ್ರಜ್ಞರ ಜೊತೆ ಮಾತನಾಡಿಸಿದಾಗ, ಸೀರಿಯಲ್ ನೋಡುತ್ತಾ ಅಲ್ಲಿನ ಕಥೆಯಂತೆಯೇ ತನ್ನ ಜೀವನವನ್ನೂ ಭ್ರಮಿಸಿಕೊಂಡು, ಹುಚ್ಚು ಕಲ್ಪನೆಯ ಸತ್ಯ ಹೊರಬಿದ್ದಿತ್ತು. ಏನೂ ತಪ್ಪು ಮಾಡದ ಆಕೆಯ ಗಂಡ, ಮಾವ ಹಾಕಿದ್ದ ವರದಕ್ಷಿಣೆ ಕೇಸ್ ಎದುರಿಸಲಾಗದೇ ವಿಪರೀತ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ. ಆಕೆ ನೋಡುತ್ತಿದ್ದ ಒಂದು ಸೀರಿಯಲ್ ಅವಳ ಜೀವನವನ್ನೇ ಬಲಿತೆಗೆದುಕೊಂಡಿತ್ತು.
ಘಟನೆ 3: ಕೆಲವು ವರ್ಷಗಳ ಹಿಂದೆ ಬೆಂಗಳೂರಿನ ಒಂದು ಪ್ರತಿಷ್ಠಿತ ಕುಟುಂಬದ ಹಿರಿಯ ದಂಪತಿ ಭೀಕರವಾಗಿ ಕೊಲೆಯಾಗಿದ್ದರು. ಕಗ್ಗಂಟಿನಂತೆ ತೋರುತ್ತಿದ್ದ ಆ ಕೊಲೆಯ ರಹಸ್ಯವನ್ನು ಭೇದಿಸಿದಾಗ ಆ ಶ್ರೀಮಂತ ದಂಪತಿಯನ್ನು ಕೊಂದವರು ಇನ್ನೂ ಮೀಸೆ ಚಿಗುರದ 17ರ ಹುಡುಗನಾಗಿದ್ದ. ಸರಿಯಾಗಿ ಓದದೇ ಶಿಕ್ಷಣವನ್ನು ಹಾಳುಮಾಡಿಕೊಂಡು, ಆತ ದಾರಿತಪ್ಪಿದ್ದ ಅಂತ ವಿವರಿಸುವ ಅಗತ್ಯವಿರಲಿಲ್ಲ. ಪ್ರತಿನಿತ್ಯ ಟೀವಿಯಲ್ಲಿ ಬರುತ್ತಿದ್ದ ಕ್ರೈಂ ಪ್ರೋಗ್ರಾಂಗಳನ್ನು ತಪ್ಪದೇ ನೋಡುತ್ತಿದ್ದ ಆತನಿಗೆ, ಕ್ರೈಂ ಸ್ಟೋರಿಗಳ ಬಗ್ಗೆ ವಿಪರೀತ ಕುತೂಹಲ. ಹಣಕ್ಕಾಗಿ ಕಳ್ಳತನ ಶುರುಮಾಡಿಕೊಂಡಿದ್ದ. ಯಾರಿಗೂ ಒಂದು ಎಳೆಯ ಸುಳಿವು ಕೂಡ ತಿಳಿಯದಂತೆ ಕಳ್ಳತನ ಮಾಡುತ್ತಿದ್ದ. ಹೀಗೆ ತನಗೆ ಪರಿಚಯವಿದ್ದ ಈ ಶ್ರೀಮಂತ ದಂಪತಿಯ ಮನೆಗೆ ಆಗಾಗ ಬರುತ್ತಿದ್ದ ಆತ, ಒಮ್ಮೆ ಅವರ ಮನೆಯಲ್ಲಿ ಕಳ್ಳತನ ಮಾಡಿ ಸಿಕ್ಕಿಬೀಳುತ್ತಾನೆ. ತನ್ನನ್ನು ಪೊಲೀಸರಿಗೆ ಹಿಡಿದುಕೊಡುತ್ತಾರೆ ಅಂತ ಅರಿತ ಆತ ಇಬ್ಬರನ್ನೂ ತುಂಬಾ ಉಪಾಯದಿಂದ ಅಡುಗೆ ಸಿಲೆಂಡರ್ ಸ್ಫೋಟಿಸಿ ಕೊಲೆ ಮಾಡುತ್ತಾನೆ. ಮೇಲ್ನೋಟಕ್ಕೆ ಬೆಂಕಿ ಅನಾಹುತದಿಂದ ಸತ್ತುಹೋಗಿದ್ದಾರೆ ಅಂತ ಅಂದುಕೊಂಡರೂ, ಕೊನೆಗೆ ಅದು ಈ ಹುಡುಗನಿಂದ ಕೊಲೆಯಾದ ಸತ್ಯ ಸುದ್ದಿಯಾಗುವ ಹೊತ್ತಿಗೆ ಹುಡುಗನ ಅಪ್ಪ ಅಮ್ಮ ಚಿಂತೆಯಿಂದ ಹಾಸಿಗೆ ಹಿಡಿದಿದ್ದರು. ಗಂಡ ಹೆಂಡತಿ ಇಬ್ಬರೂ ಒಬ್ಬನೇ ಮಗನಿಗೋಸ್ಕರ ದುಡಿಯು ತ್ತಿದ್ದರು. ಮಗ ಯಾವ ಟೀವಿ ಕಾರ್ಯಕ್ರಮ ಹೆಚ್ಚಾಗಿ ನೋಡುತ್ತಾನೆ ಅನ್ನುವ ಸಣ್ಣ ವಿಷಯದ ಬಗ್ಗೆಯೂ ಅವರು ತಲೆಕಡೆಸಿಕೊಂಡಿರಲಿಲ್ಲ, ಇವರ ಬೇಜವಾಬ್ದಾರಿಯೇ ಅವರ ನೋವಿಗೆ ಕಾರಣವಾಗಿತ್ತು. ಪ್ರತಿದಿನ ಟೀವಿಯಲ್ಲಿ ಕ್ರೈಂ ಪ್ರೋಗ್ರಾಂಗಳನ್ನು ನೋಡುತ್ತಿದ್ದುದೇ ತಾನು ಈ ಕೃತ್ಯ ಎಸಗಲು ಕಾರಣವೆಂದು ಆತ ಹೇಳಿಕೆ ನೀಡಿದ್ದ. ಒಂದು ಕ್ರೈಂ ಪ್ರೋಗ್ರಾಂ ಒಬ್ಬ ಹುಡುಗನ ಜೀವನವನ್ನೇ ಹಾಳುಮಾಡಿಬಿಟ್ಟಿತ್ತು.
ಈ ಮೇಲಿನ ಮೂರು ಘಟನೆಗಳ ಹೊರತಾಗಿ ಚರ್ಚೆಗೆ ಬರದ ಅನೇಕ ಘಟನೆಗಳನ್ನು ನಾವು ನೋಡಿ ದಾಗ, ನಾವು ಇಲ್ಲಿ ಯಾರನ್ನೂ ದೂರುವುದು? ಮನರಂಜನೆಗೆ ಅಂತಲೇ ಟೀವಿ ನೋಡುವ ಪ್ರೇಕ್ಷಕ ರನ್ನೋ, ಋಣಾತ್ಮಕ ಅಂಶಗಳನ್ನೇ ವೈಭವೀಕರಿಸುವ ಟೀವಿ ವಾಹಿನಿಗಳನ್ನೋ? ಇಂದು ಟೀವಿ ಒಂದು ನಮ್ಮ ಮನೆಯ ನಿರ್ಜೀವ ವಸ್ತುವಾಗಿರದೆ, ಕುಟುಂಬದ ಸ್ನೇಹಿತನಾಗಿದ್ದಾನೆ, ನೆಂಟನಾಗಿದ್ದಾನೆ. ಬೆಳಗ್ಗೆಯಿಂದ ಸಾಯಂಕಾಲದವರೆಗೂ ಮೈಮುರಿದು ದುಡಿಯುವವರಿಗೆ, ಮುಂಜಾನೆ ಏಳು ಗಂಟೆಗೆ ಮನೆಬಿಟ್ಟ ಯಜಮಾನ ಮತ್ತು ಮಕ್ಕಳನ್ನು ಸಾಯಂಕಾಲದವರೆಗೆ ಮತ್ತೆ ಕಾಣುವವರೆಗೂ ನಾಲ್ಕು ಗೋಡೆಗಳ ಮಧ್ಯೆ ದಿನಗಳನ್ನು ಕಳೆಯುವ ಅಸಂಖ್ಯ ಮನಸ್ಸುಗಳಿಗೆ ಟೀವಿ ಅಕ್ಷರಶಃ ಸಂಗಾತಿಯಾಗಿಬಿಟ್ಟಿದೆ. ಹೊರಗಡೆ ಸುತ್ತಾಡಲು ಖರ್ಚಿನ ಭಯ, ಬಾಗಿಲು ತೆರೆದರೆ ಅಪರಿಚಿತರ ಭಯ. ಒಟ್ಟಾರೆಯಾಗಿ ನಗರಪ್ರದೇಶದಲ್ಲಿ ಬದುಕುತ್ತಿರುವ ಮಹಿಳೆಯರಿಗೆ, ವಯಸ್ಸಾದವರಿಗೆ ಟೀವಿ ತನ್ನ ಅನಿವಾರ್ಯತೆಯನ್ನು ತೆರೆದುಕೊಂಡಿದೆ. ಇದು ನಗರ ಪ್ರದೇಶವಲ್ಲ ಮಾತ್ರವಲ್ಲದೇ ಹಳ್ಳಿಗಳಲ್ಲೂ ಕೂಡ ಇದೇ ರೀತಿಯ ವಾತಾವರಣ ಸೃಷ್ಟಿಯಾಗುತ್ತಿದೆ. ಇದು ಒಂದು ರೀತಿಯಲ್ಲಿ ಒಳ್ಳೆಯದಕ್ಕಿಂತ ಅಪಾಯವನ್ನೇ ಹೆಚ್ಚು ತಂದೊಡ್ಡುತ್ತಿದೆ.
ಒಂದು ಅಣು ಪರಮಾಣುವಿನಿಂದ ಸೃಷ್ಟಿಯೂ ಆಗುತ್ತದೆ, ಅಷ್ಟೇ ದೊಡ್ಡ ವಿನಾಶವೂ ಕೂಡ ಆಗುತ್ತದೆ. ಅಂತಹದರಲ್ಲಿ ಮನರಂಜನೆಯ ಹೆಸರಿನಲ್ಲಿ ಬರುತ್ತಿರುವ ಸೀರಿಯಲ್‌ಗಳು, ರಿಯಾಲಿಟಿ ಶೋಗಳು ಮನೆಮನ ಗಳನ್ನು ಒಡೆಯುತ್ತಿವೆ. ಸಂಬಂಧಗಳಿಗೆ ಅರ್ಥವಿಲ್ಲದಂತೆ ಮಾಡುತ್ತಿವೆ. ನಮ್ಮ ಮೇಲೆ ಸಾಂಸ್ಕೃತಿಕ ದಾಳಿ ಆಗುತ್ತಿದೆ. ಟೀವಿಯಿಂದ ನಮ್ಮದಲ್ಲದ ಸಂಸ್ಕೃತಿಗಳನ್ನು ನಾವು ನೋಡಿ ಖುಷಿಯಿಂದ ಆಸ್ವಾದಿಸುತ್ತಿದ್ದೇವೆ, ಆಸ್ವಾದಿಸಿ ದರೆ ತೊಂದರೆಯಿಲ್ಲ, ಅದನ್ನೇ ತಮ್ಮ ಜೀವನದಲ್ಲೂ ಅಳವಡಿಸಿಕೊಂಡು ಹೋಗಲು ಪ್ರಯತ್ನಿಸುವರೇ ಹೆಚ್ಚು. ಅದರಲ್ಲೂ ಬೆಳಗ್ಗೆಯಿಂದ ಸಾಯಂಕಾಲದವರೆಗೂ ದುಡಿದು ಬಂದ ಮೇಲೆ ಮಕ್ಕಳ ಕಿರಿಕಿರಿ ತಪ್ಪಿಸಿಕೊಳ್ಳಲು ಟೀವಿ ಚಾನೆಲ್‌ಗಳ ಹುಚ್ಚು ಹಚ್ಚಿಸುವ ಮಕ್ಕಳಿಗೆ ಛೋಟಾ ಭೀಮ್, ಸಿಂಡ್ರೆಲ್ಲಾ, ಟಾಮ್ ಆ್ಯಂಡ್ ಜೆರ್ರಿ, ಬಾಬಿಡಾಲ್, ಮಿಸ್ಟರ್ ಭೀಮ್ ನಂತರ ಪಾತ್ರಗಳೇ ಹೆಚ್ಚು ಆಪ್ತವಾಗುತ್ತಿವೆ. ಮಕ್ಕಳ ಮನಸ್ಸಿನೊಂದಿಗೆ ನಾವು ಹೆಚ್ಚು ಒಡನಾಟ ಮಾಡಲಾಗುತ್ತಿಲ್ಲ. ಅವರೊಂದಿಗೆ ಸಮಯವನ್ನು ಕಳೆಯಲು, ಮಾತನಾಡಲು ಉದ್ಯೋಗಸ್ಥ ದಂಪತಿಗಳಿಗೆ ಆಗುತ್ತಿಲ್ಲ. ಗಂಡ ಹೆಂಡತಿ ಇಬ್ಬರೂ ದುಡಿಯಬೇಕು, ಸಂಸಾರವನ್ನು ನಡೆಸಬೇಕು, ಸಾಲದ ಇಎಮ್‌ಐ ಕಟ್ಟಬೇಕು. ಮಕ್ಕಳ ಭವಿಷ್ಯಕ್ಕೆ ಹಣ ಕೂಡಿಡಬೇಕು. ಇಂತಹ ನೂರೆಂಟು ಬದ್ಧತೆಗಳಿಗೆ ಬದ್ಧರಾಗಿ ದುಡಿಯುತ್ತಿರುವ ಸಂಖ್ಯೆಯೇ ಹೆಚ್ಚಾಗಿದೆ. ಇಂತಹವರ ಮನೆಯಲ್ಲಿಯ ಮಕ್ಕಳೇ ಹೆಚ್ಚಾಗಿ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವ ಅನುಪಾತ ಹೆಚ್ಚಾಗಿ ಸಿಗುತ್ತದೆ. ಟೀವಿ ಮಕ್ಕಳ ಮನಸ್ಸನ್ನು ಎಷ್ಟು ಗಟ್ಟಿ ಮಾಡುತ್ತದೆಯೋ, ಅಷ್ಟೇ ಹುಚ್ಚು ಭ್ರಮೆಗಳನ್ನು ಸೃಷ್ಟಿಸಿ ಗೊಂದಲದಲ್ಲಿ ಬಳಲುವಂತೆ ಮಾಡಿಬಿಡುತ್ತದೆ. ಶಕ್ತಿಮಾನ್, ಸ್ಪೈಡರ್‌ಮಾನ್ ರೀತಿಯ ಕಾರ್ಯಕ್ರಮಗಳನ್ನು ನೋಡಿ, ತಾವು ಅವರಂತೆ ಮಾಯಾಮ್ಯಾಜಿಕ್‌ಗಳನ್ನು ಮಾಡಲು ಹೋಗಿ ಜೀವವನ್ನು ಕಳೆದುಕೊಂಡ ಅನೇಕ ಘಟನೆಗಳು ನಮ್ಮ ನಡುವೆ ವರದಿಯಾಗಿವೆ. ಸೀರಿಯಲ್‌ಗಳ ವಿಪರೀತ ವೈಭವೀಕರಣ, ಅನ್ಯಸಂಬಂಧ, ಒಲ್ಲದ ಪ್ರೀತಿ, ವಿರಸ ಹೊಟ್ಟೆಕಿಚ್ಚು ಇಂತಹ ಋಣಾತ್ಮಕ ಅಂಶಗಳನ್ನೇ ಹೆಚ್ಚಾಗಿ ತುರುಕಿ ಜನರ ಮನಸ್ಸನ್ನು ಇನ್ನಷ್ಟು ರಾಡಿ ಎಬ್ಬಿಸಿ, ಮನೆಯಲ್ಲಿಯೂ ತಾವು ಅದರಂತಯೇ ಬದುಕುತ್ತಿರುವೆವೋ ಅನ್ನುವ ರೀತಿ ಹುಚ್ಚು ಭ್ರಮೆ ಅಂಟಿಸಿಕೊಂಡವರೇ ಹೆಚ್ಚು. ಅಡುಗೆಮನೆಯಲ್ಲಿ ಇದ್ದಾಗಲೂ, ರೇಷ್ಮೆ ಸೀರೆ ಉಟ್ಟು, ಮುಖಕ್ಕೆ ಎರಡು ಇಂಚು ಮೇಕಪ್ ಸವರಿಕೊಂಡು ಬರುವ ಸ್ತ್ರೀ ಪಾತ್ರಗಳು, ನೋಡುವ ಸ್ತ್ರೀಯರ ಮೇಲೆ ಪರಿಣಾಮ ಬೀರದೇ ಇರದೇ? ಅವಳು ಉಟ್ಟುಕೊಂಡ ಸೂರತ್ ಬನಾರಸ್ ಸೀರೆ, ಇಟ್ಟುಕೊಂಡ ಬಿಂದಿ ಸ್ಟಿಕ್ಕರ್, ಅರ್ಧ ಬೆನ್ನು ತೋರುವ ಅವಳ ಬ್ಲೌಸನ್ನು ಯಾವ ಟೇಲರ್ ಹೊಲಿದಿರಬಹುದು, ತಾನು ಅವರಂತೆಯೇ ಅಂತಹ ಸೀರೆ, ಬ್ಲೌಸನ್ನು ಹೊಲಿಸಿಕೊಂಡರೆ ಎಷ್ಟು ಚೆನ್ನಾಗಿರುತ್ತದೆ ಅಲ್ಲವಾ? ಅಯ್ಯೋ ನನ್ನ ಗಂಡನಿಗೆ ವಿಪರೀತ ಹೊಟ್ಟೆ ಬಂದುಬಿಟ್ಟಿದೆ, ಅಂಕಲ್‌ತರಹ ಕಾಣ್ತಾ ಇದಾರೆ, ಅವರ ಹೊಟ್ಟೆ ಕರಗಿಸಿ, ತನ್ನ ಇಷ್ಟದ ಸೀರಿಯಲ್‌ನ ಕಥಾನಾಯಕನ ರೀತಿ ಕಾಣುವಂತೆ ಮಾಡುತ್ತೀನಿ ಅಂತ ಕಿಟಿಪಾರ್ಟಿಗಳಲ್ಲಿ ವಾರಗೆಯ ಸ್ನೇಹಿತೆಯರ ಜೊತೆ ಹೇಳಿಕೊಳ್ಳುವುದರಲ್ಲೇ ಏನೋ ಖುಷಿ..! ತಮ್ಮ ಮಕ್ಕಳ ಶಿಕ್ಷಣ, ಬೇರೆ ರೀತಿಯ ಚಟುವಟಿಕೆಗಳ ಬಗ್ಗೆ ಚರ್ಚೆ ಮಾಡುವುದಕ್ಕಿಂತ ಹೆಚ್ಚಾಗಿ, ಮಕ್ಕಳ ಟೀವಿ ಕಾರ್ಯಕ್ರಮಗಳ ಬಗ್ಗೆ ಹೆಚ್ಚಾಗಿ ತಲೆಕಡೆಸಿಕೊಳ್ಳುತ್ತಿದ್ದಾರೆ. ನಮ್ಮ ದಕ್ಷಿಣ ಭಾರತದ ಕಿರುತೆರೆ ಉದ್ಯಮದಲ್ಲಿ ಕನ್ನಡದ ಸೀರಿಯಲ್‌ಗಳಲ್ಲಿ ಇಲ್ಲಿಯ ದೇಸಿ ಸೊಗಡು ಮಾಯವಾಗಿಬಿಟ್ಟಿದೆ. ಇದಕ್ಕೆ ಕಾರಣವಿಷ್ಟೇ. ಕನ್ನಡ ಮಾರುಕಟ್ಟೆಗೆ ಖಾಸಗಿ ವಾಹಿನಿಗಳು ಪ್ರವೇಶಿಸಿ 20 ವರ್ಷಗಳೇ ಮೇಲಾದವು. ಈ 20 ವರ್ಷಗಳಲ್ಲಿ ನಮ್ಮವರು ವಾಹಿನಿಗಳನ್ನು ಪ್ರಾರಂಭಿಸಿದ್ದಕ್ಕಿಂತ ಹೊರಗಿನವರೇ ಹೆಚ್ಚಾಗಿ ವಾಹಿನಿಗಳ ಒಡೆತನವನ್ನು ಹೊಂದಿರುವುದು ನಮ್ಮ ಸೊಗಡನ್ನು ಸೀರಿಯಲ್‌ಗಳಲ್ಲಿ ಕಳೆದುಕೊಳ್ಳಲು ಮೊದಲ ಕಾರಣ. ಸನ್‌ನೆಟ್‌ವರ್ಕ್ ತಮಿಳಿನ ಅನೇಕ ಜನಪ್ರಿಯ ಸೀರಿಯಲ್‌ಗಳು, ಕನ್ನಡಕ್ಕೆ ಭಟ್ಟಿ ಇಳಿದವು. ತಮಿಳುನಾಡಿನ ಅರಿಶಿಣ ಬಣ್ಣ ಇಲ್ಲಿಯ ಸೀರಿಯಲ್‌ಗಳಲ್ಲಿ ಎದ್ದು ಕಾಣುತ್ತಿತ್ತು. ಈಟೀವಿಯ ಮೂಲಕ ಮರಾಠಿ, ಬೆಂಗಾಳಿಯ ಕೆಲವು ಸೀರಿಯಲ್‌ಗಳು ಇಲ್ಲಿ ಪುನರ್‌ನಿರ್ಮಾಣವಾದವು, ಡಬ್ಬಿಂಗ್ ಇನ್ನೂ ಗೊಂದಲದಲ್ಲಿದೆ. ಇಂದು ಕನ್ನಡದ ಬಹುತೇಕ ಮನರಂಜನವಾಹಿನಿಗಳು ಮುಂಬೈ ಮತ್ತು ಚೆನ್ನೈ ಕಂಪೆನಿಗಳ ಹಿಡಿತದಲ್ಲಿವೆ. ಈ ಕಂಪೆನಿಗಳು ಬೇರೆ ಬೇರೆ ಭಾಷೆಗಳಲ್ಲಿ ಹತ್ತಾರು ವಾಹಿನಿಗಳನ್ನು ನಡೆಸುತ್ತಿವೆ. ಕಾರ್ಪೊರೇಟ್ ಸಂಸ್ಕೃತಿಯಲ್ಲಿರುವ ಈ ಕಂಪೆನಿಗಳಿಗೆ ತಮ್ಮ ಕಂಪೆನಿಯ ಮಾನದಂಡಗಳೇ ಮುಖ್ಯವಾಗಿವೆ. ಹಾಗಾಗಿ ಬೇರೆ ಬೇರೆ ಸಂಸ್ಕೃತಿಯ ಕತೆಗಳು ಕನ್ನಡದ ಪ್ರವೇಶಿಸುತ್ತಿವೆ. ಸ್ವಂತ ಕತೆ ಮಾಡುವ, ನಿರ್ದೇಶನ ಮಾಡುವ, ಸೀರಿಯಲ್ ನಿರ್ಮಿಸುವ ಅವಕಾಶ ಇಲ್ಲಿಯವರಿಗೆ ಸಿಕ್ಕಿದ್ದು ಮಾತ್ರ ತುಂಬಾ ಕಡಿಮೆ ಅಂತ ಹೇಳಬಹುದು. ನಮ್ಮ ನೆಚ್ಚಿನ ಟೀವಿಯ ಮೂಲಕ ಬರೀ ಬಾಂಬೆಯಿಂದ, ಚೆನ್ನೈನಿಂದ ಬರೀ ಕತೆಗಳು ಬಂದಿದ್ದರೆ ಹೆಚ್ಚಿನ ಪರಿಣಾಮ ಇರುತ್ತಿರಲಿಲ್ಲ. ಕತೆಗಳ ಜೊತೆಗೆ ಉತ್ತರ ಭಾರತದ ಸೀರೆಗಳು, ಮೇಕಪ್, ಅಲ್ಲಿಯ ಹಬ್ಬ ಹರಿದಿನಗಳು ಕತೆಯ ಜೊತೆಗೆ ಬರುತ್ತಿರುವುದು ಮಾತ್ರ ಒಂದು ರೀತಿಯಲ್ಲಿ ಅಪಾಯ ಅಂತ ಹೇಳಬಹುದು. ಕನ್ನಡದ ಹೆಣ್ಣುಮಕ್ಕಳು ಇಲ್ಲಿಯ ಮೈಸೂರು, ಮೊಳಕಾಲ್ಮೂರು, ಇಳಕಲ್ ಸೀರೆಗಳ ಬದಲಾಗಿ ಬನಾರಸ್, ಸೂರತ್, ಬಾಂಬೆ ಉಡುಪುಗಳ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ನಮ್ಮ ಕನ್ನಡದ ಬಟ್ಟೆ ಸಂಸ್ಕೃತಿಯ ಮೇಲೆ ಸೀರಿಯಲ್‌ಗಳ ಪ್ರಭಾವ ಪರೋಕ್ಷವಾಗಿ ಆಗುತ್ತಿದೆ. ಈ ರೀತಿಯ ಬೆಳವಣಿಗೆಯನ್ನು ಕರ್ನಾಟಕದ ಅನೇಕ ಮದುವೆ ಸಮಾರಂಭಗಳಲ್ಲಿ ಪ್ರಮುಖವಾಗಿ ಕಾಣಬಹುದು. ವಧುವರರು ಧರಿಸುವ ಗಾಗ್ರಾ, ಇಂಡೋ ವೆಸ್ಟರ್ನ್ ಮದುವೆ ಉಡುಪುಗಳನ್ನು ನೋಡಿದಾಗ, ನಮ್ಮ ಮೇಲೆ ಹೊರಗಿನ ಸಂಸ್ಕೃತಿಯ ಪ್ರಖರತೆಯನ್ನು ಕಾಣಬಹುದು. ಮದುವೆ ಮನೆಗಳಲ್ಲಿ ಹೆಣ್ಣುಮಕ್ಕಳು ಕೋಲಾಟ ಆಡುವುದು, ಪಾಸ್ಟ್ ಬಿಟ್‌ನ ಹಾಡುಗಳಿಗೆ ವಧುವರರು ಕುಣಿಯುವುದು, ಕೆಲವೊಮ್ಮೆ ಇವು ನಮ್ಮದೇನಾ ಅಂತ ಒಂದು ಕ್ಷಣ ಪ್ರಶ್ನಿಸಿಕೊಳ್ಳಬೇಕಾಗಿದೆ. ಅಕಸ್ಮಾತ್ ಇದು ಸರೀನಾ ಅಂತ ಯಾರಾದರೂ ಕೇಳಿದರೆ, ಇದು ಈಗಿನ ಟ್ರೆಂಡು ಅಂತ ಹೆತ್ತವರೇ ಕೇಳಿದವರ ಬಾಯಿ ಮುಚ್ಚಿಸುತ್ತಾರೆ. ಇಂದು ಜನರ ಮನಸ್ಸನ್ನು ಹೆಚ್ಚು ಕಾಡುವುದು, ಸೀರಿಯಲ್‌ನ ಕಥೆ. ಸೀರಿಯಲ್‌ನಲ್ಲಿ ಪಾತ್ರಗಳನ್ನು, ಸನ್ನಿವೇಶಗಳನ್ನು ಹೆಚ್ಚು ವೈಭವೀಕರಣ ಮಾಡುವುದು, ಮನೆಯ ಹೆಂಗಸರು ಮತ್ತು ಮಕ್ಕಳ ಮೇಲೆ ಎಷ್ಟು ಪರಿಣಾಮ ಬೀರಲಿದೆ ಅನ್ನುವುದು ಅವರಿಗೆ ಅಗತ್ಯವಿಲ್ಲ. ಬಾಲಿಕಾ ವಧು ರಾಜಸ್ಥಾನದಲ್ಲಿ ಇಂದಿಗೂ ಚಾಲ್ತಿಯಲ್ಲಿರುವ ಬಾಲ್ಯವಿವಾಹವನ್ನು ಇಟ್ಟಕೊಂಡ ಕಥೆಯಾಗಿತ್ತು. ಬಾಲ್ಯವಿವಾಹ ನಮ್ಮಲ್ಲಿ ಸಂಪೂರ್ಣವಾಗಿ ಇಲ್ಲವೆಂದು ಹೇಳಲಿಕ್ಕೆ ಸಾಧ್ಯವಿಲ್ಲದಿದ್ದರೂ, ಆ ಕಥೆಯನ್ನು 'ಪುಟ್ಟಗೌರಿ' ಮದುವೆ ಕನ್ನಡದ ಸೊಗಡಿಗೆ ಹೇರುವಂತೆ ಮಾಡಿ ಅಳವಡಿಸಿಕೊಳ್ಳುವುದು ಅನಗತ್ಯವೆಂದು ವಾದಿಸಬಹುದು. ಮಕ್ಕಳ ಶೋಷಣೆಯನ್ನಿಟ್ಟುಕೊಂಡು ಮಾಡುವ ಸೀರಿಯಲ್‌ಗಳು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರದೇ ಇರಲಾರವೇ?
ಮನರಂಜನೆಯ ನೆಪದಲ್ಲಿ ಧಾರಾವಾಹಿಗಳ ಕಂಟೆಂಟ್‌ನಿಂದ ಆಗುತ್ತಿರುವ ಸಂಬಂಧಗಳ ಒಡಕು, ಮಾನಸಿಕ ಸಮಸ್ಯೆಗಳು ಮುಂದೊಂದು ದಿನ ದೊಡ್ಡ ಅಪಾಯವನ್ನು ತಂದೊಡ್ಡುವುದಂತೂ ಸತ್ಯ. ನಮ್ಮ ಮನಸ್ಸುಗಳನ್ನು ನಾವು ಗಟ್ಟಿ ಮಾಡಿಕೊಂಡು ಬದುಕದಿದ್ದರೆ, ಕೊನೆಗೆ ನಮ್ಮನ್ನು ನಾವೇ ಕಳೆದುಕೊಳ್ಳಬೇಕಾದೀತು...!
ಇಂದು ರಿಮೇಕ್ ಸಿನೆಮಾಗಳು, ಪರಭಾಷಾ ಧಾರಾವಾಹಿಗಳ ಬಗ್ಗೆ ಬಹಳಷ್ಟು ವಾದ ವಿವಾದಗಳಿದ್ದರೂ ಯಾವುದೇ ಒಂದು ವಾಹಿನಿ ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾದರೆ, ಜನಮೆಚ್ಚುಗೆಯ ಕಂಟೆಂಟನ್ನು ನೀಡಲೇಬೇಕಾಗುತ್ತದೆ. ಈ ಕಂಟೆಂಟ್ ಚೆನ್ನೈನಿಂದ ಬಂದರೇನು, ಬಾಂಬೆಯಿಂದ ಬಂದರೇನು, ಮುಖ್ಯವಾಗಿ ಜನರಿಗೆ ಬೇಕಾಗಿರುವುದು ಟೈಂಪಾಸ್‌ಗೆ ಮನರಂಜನೆ, ಚಾನೆಲ್‌ಗಳಿಗೆ ಬೇಕಾಗಿರುವುದು ಒಳ್ಳೆಯ ಟಿಆರ್‌ಪಿ ಅಂಕಗಳು ಅಷ್ಟೇ. ವಾಹಿನಿಗಳ ಪರ ಹೇಳುವ ಈ ಮಾತನ್ನು ಒಪ್ಪಿಕೊಳ್ಳುವ ಪರಿಸ್ಥಿತಿ ಇದ್ದರೂ, ಹೊರಗಡೆಯಿಂದ ಆಗುತ್ತಿರುವ ಸಾಂಸ್ಕೃತಿಕ ದಾಳಿ ಮುಂದೊಂದು ದಿನಗಳಲ್ಲಿ ಅಪಾಯವನ್ನು ತಂದೊಡ್ಡುವುದು ಮಾತ್ರ ಕಟುಸತ್ಯ. ದಕ್ಷಿಣದವರ ಮೇಲೆ ಉತ್ತರ ಭಾರತದವರ ಸಾಂಸ್ಕೃತಿಕ ದಾಳಿ, ಅದೇ ರೀತಿ ಉತ್ತರದವರ ಮೇಲೆ ಪಾಶ್ಚಿಮಾತ್ಯರ ಸಾಂಸ್ಕೃತಿಕ ದಾಳಿ. ಇದು ನಿರಂತರವಾಗಿ ಆಗುತ್ತಿದೆ. ಇಂದು ಹಿಂದಿ ಧಾರಾವಾಹಿಗಳನ್ನು ಜಗತ್ತಿನಾದ್ಯಂತ ನೋಡುವ ಕೋಟ್ಯಂತರ ವೀಕ್ಷಕರಿದ್ದಾರೆ. ಹಾಗಾಗಿ ಅವರ ಹೆಚ್ಚಿನ ಹಿಂದಿ ಧಾರಾವಾಹಿಗಳ ಕಥೆಗಳಲ್ಲಿ ಅನಿವಾಸಿ ಭಾರತೀಯರ ಸಣ್ಣ ಕಥೆಗಳು ಸೇರಿಕೊಂಡಿರುತ್ತವೆ. ಒಟ್ಟಾರೆ ಟೀವಿ ಮಾರುಕಟ್ಟೆಯನ್ನು ಅರ್ಥಮಾಡಿಕೊಂಡು ಧಾರಾವಾಹಿಗಳನ್ನು ನಿರ್ಮಾಣ ಮಾಡುವ ಪರಿಸ್ಥಿತಿ ನಮ್ಮ ದೇಶದಲ್ಲಿ ನಿರ್ಮಾಣವಾಗಿದೆ. ಮನರಂಜನೆಯ ನೆಪದಲ್ಲ