ಮಂಗಳೂರಲ್ಲಿ ಜರ್ಮನಿ ದಂಪತಿಯ ವಿಶ್ವ ಪರ್ಯಟನೆಯ ಬೆನ್ಝ್ ಕಾರು !
ನಗುಮೊಗದ ಭಾರತವ ಕಂಡೆವು!
‘ಭಾರತದ ಜನರಂತೂ ನಗುಮೊಗದವರು. ನಾವು ನಕ್ಕಾಗ ನಮಗೆ ಮುಗುಳ್ನಗೆಯೊಂದಿಗೆ ಸ್ವಾಗತಿಸುತ್ತಾರೆ. ನಗುವಿನ ಭಾರತವನ್ನು ನಾವು ಕಂಡಿದ್ದೇವೆ. ಜತೆಗೆ ನೆರವು ನೀಡುವ ಜನರು. ಭಾರತದ ಕೆಲ ಕಡೆ ನಾವು ಈಗಾಗಲೇ ಪ್ರಯಾಣ ಮಾಡಿದ್ದೇವೆ. ಭಾರತವೆಂದರೆ ಸೂರ್ಯೋದಯ ಹಾಗೂ ಸೂರ್ಯಾಸ್ತದ ಅಪೂರ್ವ ನೋಟ, ಇಲ್ಲಿನ ಬೇಸಿಗೆ, ಮಳೆಗಾಲದ ಬಗ್ಗೆ ತೀವ್ರ ಕುತೂಹಲವಿತ್ತು. ಆರಂಭದಲ್ಲಿ ಅಂದರೆ ಕಳೆದ ನವೆಂಬರ್‌ನಲ್ಲಿ ನಾವು ಭಾರತದ ಹೊಸದಿಲ್ಲಿಗೆ ಭೇಟಿ ನೀಡಿದಾಗ ಅಲ್ಲಿ ಕಂಡಿದ್ದು ಮಂಜಿನ ವಾತಾವರಣ. ಆದರೆ ಅಲ್ಲಿಂದ ಬೇರೆಡೆ ಪ್ರಯಾಣ ಬೆಳೆಸಿದಂತೆಯೇ ಸೂರ್ಯೋದಯದ ಭಾರತ ದರ್ಶನವಾಯಿತು’ ಎಂದು ಹೇಳುವ ಪೀಟರ್ ಮತ್ತು ಅಲೋನಾ ಮಂಗಳೂರಿನಲ್ಲಿ ತಮಗೆ ಕಳೆದ ಮೂರು ವಾರಗಳಿಂದ ಸಮಸ್ಯೆಯಾದಾಗ ಅದನ್ನು ಪರಿಹರಿಸಲು ನೆರವು ನೀಡಿದ ತಾವು ಉಳಿದುಕೊಂಡಿರುವ ಸಮಿತ್ ಸೂಟ್ಸ್ ಹೊಟೇಲ್‌ನ ವ್ಯವಸ್ಥಾಪಕ ಹಾಗೂ ಸಿಬ್ಬಂದಿಯ ನೆರವನ್ನು ಸ್ಮರಿಸುತ್ತಾರೆ.
ಮಂಗಳೂರು, ಜ.10: ಮಾನವೀಯತೆಯಿಂದ ಮಾತ್ರವೇ ವಿಶ್ವಶಾಂತಿ ಸಾಧ್ಯ ಎಂಬುದು ಸಾರ್ವಕಾಲಿಕ ಸತ್ಯ. ಈ ಸತ್ಯವನ್ನು ವಿಶ್ವದ ಉದ್ದಗಲಕ್ಕೂ ಪಸರಿಸುತ್ತಾ ಹೊರಟ ಜರ್ಮನ್ ದಂಪತಿ ಸದ್ಯ ಮಂಗಳೂರಿಗೆ ತಲುಪಿದೆ. ವಿಶ್ವದ ವಿವಿಧ ರಾಷ್ಟ್ರಗಳ ಜನಜೀವನ, ವೈವಿಧ್ಯದೊಂದಿಗೆ ಜನರ ಮಾನವೀಯ ಸ್ಪಂದನವನ್ನು ಅರಿಯುತ್ತಾ ಸಾಗುತ್ತಿರುವ ಈ ದಂಪತಿ ಕಳೆದ ಮೂರು ವಾರಗಳಿಂದ ಮಂಗಳೂರಿನಲ್ಲಿ ವಾಸ್ತವ್ಯ ಹೂಡಿದೆ.
ಜರ್ಮನಿಯಲ್ಲಿ ವೃತ್ತಿಯಲ್ಲಿ ಉದ್ಯಮಿಯಾಗಿರುವ ಪೀಟರ್ ಹಾಗೂ ಮೂಳೆ ಶಾಸ್ತ್ರಜ್ಞೆಯಾಗಿರುವ ಅಲೋನಾ ದಂಪತಿ ವಿಶ್ವ ಪರ್ಯಟನೆ ಆರಂಭಿಸಿ ಸದ್ಯ ಮಂಗಳೂರಿನಲ್ಲಿದ್ದಾರೆ. ವಿಶ್ವದ ದೇಶಗಳ ಜನರನ್ನು ಅರ್ಥ ಮಾಡಿಕೊಳ್ಳುವುದು, ಅವರ ಹೃದಯದಲ್ಲಿನ ಮಾನವೀಯತೆಯನ್ನು ಕಂಡುಕೊಳ್ಳುವ ಉದ್ದೇಶದಿಂದ ಈ ದಂಪತಿ 2019ರ ಮೇ 1ರಂದು ವಿಶ್ವ ಯಾತ್ರೆಯನ್ನು ಕೈಗೊಂಡಿದೆ. ವಿಶೇಷವೆಂದರೆ ಈ ದಂಪತಿ ಊರಿಂದ ಊರಿಗೆ, ರಾಜ್ಯದಿಂದ ರಾಜ್ಯ ಹಾಗೂ ದೇಶದಿಂದ ದೇಶಕ್ಕೆ ಪ್ರಯಾಣಿಸುತ್ತಿರುವುದು ಮರ್ಸಿಡಿಸ್ ಬೆನ್ಝ್ ಕಾರಿನಲ್ಲಿ!
ಬೆನ್ಝ್ ಕಾರನ್ನೇ ಸ್ವತಃ ಪೀಟರ್ ಅವರೇ ಒಂದು ಪುಟ್ಟ ಮನೆಯನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ಮನೆಯಲ್ಲಿ ಅಗತ್ಯವಾದ ಸಕಲ ರೀತಿಯ ಸೌಲಭ್ಯಗಳು (ಕೈ ತೊಳೆಯುವ ಸಿಂಕ್, ಕಾರಿನ ಮೇಲ್ಭಾಗವನ್ನು ತೆರೆದು ಇಬ್ಬರು ವಿಶ್ರಾಂತಿ ಪಡೆಯಲು ಸಾಧ್ಯವಾಗುವ ಬೆಡ್‌ರೂಂನಂತಹ ವ್ಯವಸ್ಥೆ ಸೇರಿದಂತೆ) ಈ ಸುಸಜ್ಜಿತ ಕಾರಿನಲ್ಲಿದೆ. ವಿವಿಧ ರಾಷ್ಟ್ರಗಳಿಗೆ ಭೇಟಿ ನೀಡಿದ ಕುರುಹಾಗಿ ಕಾರಿನ ಮುಂಭಾಗದಲ್ಲಿ ಅಲ್ಲಿನ ಕೆಲವು ಪ್ರಮುಖ ವ್ಯಕ್ತಿಗಳ ಸಹಿಯೊಂದಿಗೆ ಶುಭಾಶಯನ್ನೂ ಬರೆಸಿಕೊಳ್ಳಲಾಗಿದೆ.
ಜರ್ಮನಿಯಿಂದ ಪ್ರಯಾಣ ಆರಂಭಿಸಿರುವ ಈ ದಂಪತಿ ಈಗಾಗಲೇ ಪೋಲೆಂಡ್, ಇಟವನ್, ಲೆಟ್ಲಂಟ್, ಐಸ್‌ಲ್ಯಾಂಡ್, ರಷ್ಯಾ, ಮಂಗೋಲಿಯ, ಕಝ್ಕಿಸ್ತಾನ್, ಉಜ್ಬೇಕಿಸ್ತಾನ್, ಕಿರ್ಗಿಸ್ತಾನ್, ತಜಕಿಸ್ತಾನ್, ತುರ್ಕ್‌ಮೆನಿಸ್ತಾನ್, ಇರಾನ್, ಬಲೂಚಿಸ್ತಾನ್, ಪಾಕಿಸ್ತಾನವನ್ನು ದಾಟಿ ಕಳೆದ ನವೆಂಬರ್‌ನಿಂದ ಭಾರತದಲ್ಲಿ ಪ್ರಯಾಣ ಆರಂಭಿಸಿದ್ದಾರೆ. ಭಾರತದಲ್ಲಿ ಹೊಸದಿಲ್ಲಿ, ಆಗ್ರಾ, ತಾಜ್‌ಮಹಲ್, ಎಲ್ಲೋರಾಕ್ಕೆ ಭೇಟಿ ನೀಡಿರುವ ದಂಪತಿ ಮೂರು ವಾರಗಳ ಹಿಂದೆ ಮಂಗಳೂರಿಗೆ ಆಗಮಿಸಿದೆ. ಕಾರಿನಲ್ಲಿ ಸಣ್ಣ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಲ್ಲಿನ ಮರ್ಸಿಡಿಸ್ ಕಾರು ಶೋರೂಂ ಸಂಪರ್ಕಿಸಿ ಬಿಡಿ ಭಾಗವನ್ನು ಖರೀದಿಸಲು ಮುಂದಾಗಿದ್ದು, ಬಿಡಿ ಭಾಗ ಲಭಿಸದ ಕಾರಣ ಜರ್ಮನಿಯಿಂದಲೇ ತರಿಸಿಕೊಳ್ಳುವ ವ್ಯವಸ್ಥೆಯನ್ನು ಮಾಡಲಾಗಿದೆ. ಸದ್ಯ ಬಿಡಿ ಭಾಗ ಬೆಂಗಳೂರಿನ ಕಸ್ಟಮ್ಸ್ ಕಚೇರಿಗೆ ತಲುಪಿದ್ದು, ಅಲ್ಲಿಂದ ಮಂಗಳೂರಿಗೆ ತಂದು ಕಾರಿಗೆ ಅಳವಡಿಸಿ ಪ್ರಯಾಣ ಮುಂದುವರಿಸುವ ಉತ್ಸುಕತೆಯನ್ನು ದಂಪತಿ ‘ವಾರ್ತಾಭಾರತಿ’ ಜತೆ ವ್ಯಕ್ತಪಡಿಸಿದೆ.
‘ಪ್ರಯಾಣದಲ್ಲಿ ನಾವು ಈಗಾಗಲೇ ಹಲವು ರಾಷ್ಟ್ರಗಳಿಗೆ ಭೇಟಿ ನೀಡಿದ್ದೇವೆ. ಸ್ನೇಹಮಯ ವಾತಾವರಣದ ಜತೆಗೆ ಹಿಂಸಾಚಾರ, ಬಡತನ, ಮಕ್ಕಳಲ್ಲಿನ ಅಪೌಷ್ಠಿಕತೆಯನ್ನೂ ನಾವು ಕಂಡಿದ್ದೇವೆ. ಜನರ ಮನಸ್ಸು, ಅವರ ಜೀವನ ಶೈಲಿ, ಸ್ಥಿತಿಗತಿಯನ್ನು ಅರಿತುಕೊಳ್ಳುವುದು ಮತ್ತು ಸುಮಾರು ಒಂದೂವರೆ ವರ್ಷದ ಪ್ರಯಾಣದ ಬಳಿಕ ನಮ್ಮ ಅನುಭವ, ನಾವು ಕಂಡುಕೊಂಡ ವಿಶ್ವದ ರಾಷ್ಟ್ರಗಳ ಮಾನವೀಯ ಮುಖ, ಅಲ್ಲಿನ ಜನರ ಜೀವನದ ಸ್ಥಿತಿಗತಿಗಳನ್ನು ಚಿತ್ರಗಳನ್ನೊಳಗೊಂಡ ಪುಸ್ತಕದಲ್ಲಿ ಬರಹ ರೂಪದಲ್ಲಿ ನೀಡುವುದು ಈ ಪ್ರಯಾಣದ ಉದ್ದೇಶ’ ಎಂದು 59ರ ಹರೆಯದ ಪೀಟರ್ ಹೇಳಿಕೊಂಡಿದ್ದಾರೆ.
‘ಮಂಗಳೂರಿನಿಂದ ಕೇರಳ, ಗೋವಾಕ್ಕೆ ಭೇಟಿ ನೀಡುವ ಆಲೋಚನೆ ಇದೆ. ಬಳಿಕ ಮ್ಯಾನ್‌ಮಾರ್, ಥಾಯ್ಲೆಂಡ್, ಇಂಡೋನೇಶ್ಯಾ, ಆಸ್ಟ್ರೇಲಿಯಾದಿಂದ ಕೊನೆಯ ಪ್ರಯಾಣ ನ್ಯೂಜಿಲೆಂಡ್‌ಗೆ. ಅಲ್ಲಿಂದ ಜರ್ಮನಿಗೆ ಹಿಂತಿರುಗಲಿದ್ದೇವೆ. ಈ ವಿಶ್ವ ಪರ್ಯಟನೆ ನಮಗೆ ವಿವಿಧ ರಾಷ್ಟ್ರಗಳ ಸೌಹಾರ್ದ, ಸ್ನೇಹಮಯ ಜನರನ್ನು ಭೇಟಿಯಾಗುವ ಅವಕಾಶ ಕಲ್ಪಿಸಿದೆ. ನಾವು ಹೋದ ಬಹುತೇಕ ಕಡೆ ಅಲ್ಲಿನ ಸ್ಥಳೀಯ ಸಮಸ್ಯೆಗಳ ಹೊರತಾಗಿಯೂ ಉತ್ತಮ ಜನರನ್ನು ನೋಡಿದ್ದೇವೆ’ ಎನ್ನುತ್ತಾರೆ ಪೀಟರ್.
ಆಂಗ್ಲ ಭಾಷೆಯಲ್ಲಿ ಮಾತನಾಡಬಲ್ಲ ಪೀಟರ್ ಅವರ ಪತ್ನಿ 48ರ ಹರೆಯದ ಅಲೋನಾಗೆ ಆಂಗ್ಲ ಭಾಷೆಯ ಮೇಲೆ ಅಷ್ಟಾಗಿ ಹಿಡಿತವಿಲ್ಲ. ತಮ್ಮ ವಾಹನದಲ್ಲಿನ ಸಣ್ಣ ಸಮಸ್ಯೆಯಿಂದಾಗಿ ಕಳೆದ ಮೂರು ವಾರಗಳಿಂದ ನಗರದ ಹೊಟೇಲ್‌ನಲ್ಲಿ ವಾಸ್ತವ್ಯ ಹೂಡಬೇಕಾಗಿ ಬಂದಿರುವುದರಿಂದ ಈ ದಂಪತಿ ಹಗಲು ಹೊತ್ತಿನಲ್ಲಿ ಮಂಗಳೂರಿನ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಈ ನಡುವೆ ಪೀಟರ್ ಎರಡು ಬಾರಿ ಬೆಂಗಳೂರಿನ ಕಸ್ಟಮ್ಸ್ ಕಚೇರಿಗೆ ಭೇಟಿ ನೀಡಿ ಬಂದಿದ್ದಾರೆ. ಕಸ್ಟಮ್ಸ್ ಅಧಿಕಾರಿಯಿಂದ ತಮ್ಮ ವಾಹನದ ಬಿಡಿ ಭಾಗ ದೊರೆತ ತಕ್ಷಣ ತಮ್ಮ ವಿಶ್ವ ಪರ್ಯಟನೆ ಮುಂದುವರಿಯಲಿದೆ ಎಂದು ಜರ್ಮನಿ ದಂಪತಿ ಹೇಳಿಕೊಂಡಿದ್ದಾರೆ.