ಅತಿವೃಷ್ಟಿ ಹಾಗೂ ಬರದಿಂದ ತತ್ತರಿಸಿರುವ ಚಿಕ್ಕಮಗಳೂರು: ಜಿಲ್ಲಾ ಉತ್ಸವಕ್ಕೆ ಹಲವು ಸಂಘಟನೆಗಳ ವಿರೋಧ

Update: 2020-02-04 06:20 GMT

ಚಿಕ್ಕಮಗಳೂರು, ಫೆ.4: ಜಿಲ್ಲೆಯ ಜನರು ಸಮಸ್ಯೆಯ ಸುಳಿಯಲ್ಲಿರುವ ಸಂದರ್ಭದಲ್ಲಿ ಜಿಲ್ಲಾ ಉತ್ಸವದಂತಹ ದುಂದುವೆಚ್ಚದ ಕಾರ್ಯಕ್ರಮ ಆಯೋಜಿಸುವ ಮೂಲಕ ಜಿಲ್ಲಾಡಳಿತ ಹಾಗೂ ಉಸ್ತುವಾರಿ ಸಚಿವರು ಸರಕಾರದ ಅನುದಾನದಲ್ಲಿ ಮಜಾ ಮಾಡಲು ಮುಂದಾಗಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿವೆ.

ಜಿಲ್ಲಾಡಳಿತ ಫೆ.28, 29 ಮತ್ತು ಮಾ.1ರಂದು ಮೂರು ದಿನಗಳ ಕಾಲ ಚಿಕ್ಕಮಗಳೂರು ಜಿಲ್ಲಾ ಉತ್ಸವ ಸಮಾರಂಭವನ್ನು ಆಯೋಜಿಸಿದೆ. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ನೇತೃತ್ವದಲ್ಲಿ ಭರದಿಂದ ಸಿದ್ಧತೆಗಳನ್ನು ಕೈಗೊಳ್ಳಲು ಪೂರ್ವಭಾವಿಗಳನ್ನು ನಡೆಸಲಾಗುತ್ತಿದೆ. ಜಿಲ್ಲಾ ಉತ್ಸವದ ಯಶಸ್ವಿಗಾಗಿ ಈಗಾಗಲೇ ಅನೇಕ ಸಮಿತಿಗಳನ್ನು ರಚಿಸಲಾಗಿದ್ದು, ಉತ್ಸವ ಸಿದ್ಧತೆಗಳಿಗಾಗಿ ಈ ಸಮಿತಿಗಳು ಕಾರ್ಯೋನ್ಮುಖವಾಗಿದೆ. ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಸ್ತುವಾರಿ ಸಚಿವ ಉತ್ಸವ ಲೋಗೋ ಬಿಡುಗಡೆ ಮಾಡಿದ್ದು, ಪ್ರಚಾರ ಹಾಗೂ ಚಿಕ್ಕಮಗಳೂರು ಜಿಲ್ಲಾ ಉತ್ಸವದ ಮಾಹಿತಿಗಾಗಿ ಫೇಸ್‌ಬುಕ್ ಪೇಜ್‌ವೊಂದಕ್ಕೂ ಚಾಲನೆ ನೀಡಿದ್ದಾರೆ.

ಈ ನಡುವೆ ಉಸ್ತುವಾರಿ ಸಚಿವ ಚಿಕ್ಕಮಗಳೂರು ಉತ್ಸವದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಉತ್ಸವಕ್ಕಾಗಿ ಸುಮಾರು 4 ಕೋ. ರೂ. ಅನುದಾನ ನೀಡುವಂತೆ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದಾರೆಂದು ತಿಳಿದು ಬಂದಿದ್ದು, ಚಿಕ್ಕಮಗಳೂರು ಜಿಲ್ಲಾ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ನಡೆಸಲು ಅಗತ್ಯವಿರುವ ಎಲ್ಲ ಏರ್ಪಾಟುಗಳನ್ನು ಮಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಉಸ್ತುವಾರಿ ಸಚಿವ ಸಿ.ಟಿ.ರವಿ ಅತ್ಯಂತ ಹುರುಪಿನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಚಿಕ್ಕಮಗಳೂರು ಜಿಲ್ಲಾ ಉತ್ಸವ ಆಯೋಜಿಸುವ ಮೂಲಕ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂ ಎಂಬ ಗಾದೆ ಮಾತಿನಂತೆ ಜಿಲ್ಲಾಡಳಿತ ಆಡಳಿತ ನಡೆಸಲು ಮುಂದಾಗಿದೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ.

ಜಿಲ್ಲಾ ಉತ್ಸವಕ್ಕೆ ವಿರೋಧ ಏಕೆ?: ಚಿಕ್ಕಮಗಳೂರು ಜಿಲ್ಲಾ ಉತ್ಸವ ಇಡೀ ಜಿಲ್ಲೆಯ ಜನರನ್ನು ಪ್ರತಿನಿಧಿಸುವ ಹಬ್ಬ ಎನ್ನಲಾಗುತ್ತಿದ್ದು, ಜಿಲ್ಲೆಯ ಕಲೆ, ಸಂಸ್ಕೃತಿಯ ಪ್ರತೀಕವಾಗಿರುವ ಇಂತಹ ಹಬ್ಬವನ್ನು ವಿರೋಧಿಸುವುದು ಎಷ್ಟು ಸರಿ ಎಂಬ ಪ್ರಶ್ನೆಗೆ ವಿರೋಧಿಗಳು ತಮ್ಮದೇಯಾದ ಕಾರಣಗಳನ್ನು ಬಿಚ್ಚಿಡುತ್ತಿದ್ದಾರೆ. ಜಿಲ್ಲೆ ಹಲವು ಜ್ವಲಂತ ಸಮಸ್ಯೆಗಳಿಂದ ನಲುಗುತ್ತಿದೆ. ಕಸ್ತೂರಿ ರಂಗನ್ ವರದಿ, ಭೂ ಕಬಳಿಕೆ ನಿಷೇಧ ಕಾಯ್ದೆ, ಒತ್ತುವರಿ ಸಮಸ್ಯೆ, ನಿವೇಶನ, ಡೀಮ್ಡ್ ಅರಣ್ಯ ಸಮಸ್ಯೆಗಳು ದಶಕಗಳಿಂದ ಜಿಲ್ಲೆಯ ಜನರನ್ನು ಆತಂಕದಲ್ಲಿ ದಿನ ಕಳೆಯುವಂತೆ ಮಾಡಿದ್ದರೇ, ಜಿಲ್ಲೆಯ ಮಲೆನಾಡು ಭಾಗದ ತಾಲೂಕುಗಳಲ್ಲಿ ಅತಿವೃಷ್ಟಿಯಿಂದಾಗಿ ರೈತರು, ಕಾರ್ಮಿಕರು, ಬಡವರ್ಗದ ಜನರೂ ಸೇರಿದಂತೆ ಕಾಫಿ ಬೆಳೆಗಾರರು ತೀವ್ರ ಸಮಸ್ಯೆಗಳಲ್ಲಿ ಸಿಲುಕಿದ್ದಾರೆ. 2019ರ ಆಗಸ್ಟ್‌ನಲ್ಲಿ ಸುರಿದ ಮಳೆ ಸುಮಾರು 10ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ. ನದಿ ನೀರಿನಲ್ಲಿ ಕೊಚ್ಚಿ ಹೋದವರು, ಮಣ್ಣಿನಡಿ ಸಿಲುಕಿ ಮೃತಪಟ್ಟವರು ಕುಟುಂಬಗಳಿಗೆ ಇನ್ನೂ ಸೂಕ್ತ ಪರಿಹಾರ ಸಿಗದೇ ಮನೆಗೆ ಆಧಾರವಾಗಿದ್ದವನ್ನು ಕಳೆದುಕೊಂಡು ಮೃತಪಟ್ಟ ಕುಟುಂಬದವರು ಪ್ರತಿದಿನ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ.

ಅತಿವೃಷ್ಟಿಯಿಂದ ನೂರಾರು ಎಕರೆ ಕೃಷಿ ಜಮೀನು ನಾಶವಾಗಿದೆ. ಕಾಫಿ, ಅಡಿಕೆ ಬೆಳೆಗಳು ನಾಶವಾಗಿವೆ. ಕಾರ್ಮಿಕರು, ಬಡವರ್ಗದ ಜನರು ಮನೆ ಕಳೆದುಕೊಂಡು ಪರಿತಪಿಸುತ್ತಿದ್ದಾರೆ. ಇಂತಹ ಕುಟುಂಬ ಗಳಿಗೆ ನಿವೇಶನ ಕಲ್ಪಿಸಲು ಜಿಲ್ಲಾಡಳಿತ ಇನ್ನೂ ಸೂಕ್ತ ಜಮೀನು ಗುರುತಿಸುವ ಕೆಲಸವನ್ನು ಪೂರ್ಣಗೊಳಿಸಿಲ್ಲ, ಬೆಳೆ, ಜಮೀನು ನಾಶಕ್ಕೆ ಸರಕಾರ ಸೂಕ್ತ ಪರಿಹಾರವನ್ನೂ ನೀಡಿಲ್ಲ. ಇದರಿಂದ ಬೇಸತ್ತು ಈಗಾಗಲೇ ಮೂಡಿಗೆರೆ ತಾಲೂಕಿನ ಕಳಸ ಪಟ್ಟಣ ಸಮೀಪದಲ್ಲಿ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅತಿವೃಷ್ಟಿಯಿಂದಾಗಿ ಮಲೆನಾಡಿನಲ್ಲಿ ಸಂತ್ರಸ್ತರು, ರೈತರು, ಕಾಫಿ ಬೆಳೆಗಾರರು ಸಂಕಷ್ಟದಲ್ಲಿದ್ದರೇ ಜಿಲ್ಲೆಯ ಬಯಲು ಸೀಮೆ ತಾಲೂಕುಗಳ ವ್ಯಾಪ್ತಿಯಲ್ಲಿ ತೀವ್ರ ಬರ ಇದ್ದು, ಕುಡಿಯಲು ಹಾಗೂ ಕೃಷಿಗೆ ನೀರಿಲ್ಲದೇ ತೊಂದರೆವುಂಟಾಗಿದೆ. ಇದಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವರು ಸರಕಾರದಿಂದ ಸಾಧ್ಯ ಇರುವಷ್ಟು ನೆರವು ತರಲು ಪ್ರಯತ್ನಿಸುವುದು ಮೊದಲ ಕೆಲಸವಾಗಬೇಕು. ಆದರೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಈ ಸಮಸ್ಯೆಗಳಿಗೆ ಸ್ಪಂದಿಸುವ ಕೆಲವನ್ನು ಕೈಬಿಟ್ಟು, ಅತಿವೃಷ್ಟಿಯಿಂದ ತೊಂದರೆಗೀಡಾದವರ ಕಣ್ಣೀರು ಒರೆಸುವುದನ್ನು ಬಿಟ್ಟು ಸರಕಾರದ ಅನುದಾನದಲ್ಲಿ ಹಬ್ಬ ಮಾಡಲು ಮುಂದಾಗಿ ಜನರ ತೆರಿಗೆ ಹಣವನ್ನು ವ್ಯಯ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸುತ್ತಿದ್ದು, ಜಿಲ್ಲಾ ಉತ್ಸವಕ್ಕೆ ಖರ್ಚು ಮಾಡುವ ಅನುದಾನವನ್ನು ಸಂತ್ರಸ್ತರಿಗೆ ಪರಿಹಾರಧನ ನೀಡಲು ಮುಂದಾಗಲಿ ಎಂದು ಸಲಹೆ ನೀಡುತ್ತಿದ್ದಾರೆ.

ಅತಿವೃಷ್ಟಿ, ಬರದಿಂದ ಜಿಲ್ಲೆಯ ಜನರು ಸಮಸ್ಯೆಗಳ ಸುಳಿಯಲ್ಲಿದ್ದರೂ ಜಿಲ್ಲಾ ಉತ್ಸವವನ್ನು ಅದ್ದೂರಿಯಿಂದ ಮಾಡಲು ಜಿಲ್ಲಾಟಳಿತ ಸಿದ್ಧತೆಗಳನ್ನು ಮಾಡುತ್ತಿದೆ. ಈ ನಡುವೆ ಉತ್ಸವಕ್ಕೆ ರೈತ, ದಲಿತ, ಪ್ರಗತಿಪರ ಸಂಘಟನೆಗಳು ಜಿಲ್ಲಾ ಉತ್ಸವಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆಂದು ತಿಳಿದು ಬಂದಿದೆ. ವಿರೋಧಗಳು ತೀವ್ರವಾದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಈ ವಿರೋಧಗಳನ್ನು ಹೇಗೆ ನಿಭಾಯಿಸುತ್ತಾರೆಂಬುದನ್ನು ಕಾದು ನೋಡಬೇಕಾಗಿದೆ.

ಮೊದಲ ಜಿಲ್ಲಾ ಉತ್ಸವಕ್ಕೂ ವಿರೋಧವಿತ್ತು

ಚಿಕ್ಕಮಗಳೂರು ಉತ್ಸವ ನಗರದಲ್ಲಿ ನಡೆಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಚೈತ್ರೋತ್ಸವ ಹೆಸರಿನಲ್ಲಿ ಎರಡು ದಶಕಗಳ ಹಿಂದೆ ನಗರದಲ್ಲಿ ಇಂತಹ ಉತ್ಸವ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಮೊದಲ ಬಾರಿಗೆ ನಡೆದ ಜಿಲ್ಲಾ ಉತ್ಸವಕ್ಕೆ ಸಂಘಪರಿವಾರ ವಿರೋಧ ವ್ಯಕ್ತಪಡಿಸಿತ್ತಾದರೂ ಚಿಕ್ಕಮಗಳೂರು ಜಿಲ್ಲಾ ಉತ್ಸವವನ್ನು ಜಿಲ್ಲಾಡಳಿತ ಯಶಸ್ವಿಯಾಗಿ ನಡೆಸಿತ್ತು. ಬಳಿಕ ಮತ್ತೆ ಚಿಕ್ಕಮಗಳೂರು ಉತ್ಸವ ನಡೆದಿಲ್ಲ. ಅತಿವೃಷ್ಟಿ, ತೀವ್ರ ಬರದಂತಹ ಕಾರಣಗಳಿಂದಾಗಿ ನಂತರದ ದಿನಗಳಲ್ಲಿ ಚಿಕ್ಕಮಗಳೂರು ಜಿಲ್ಲಾ ಉತ್ಸವ ಹಮ್ಮಿಕೊಳ್ಳಲು ಸಾಧ್ಯವಾಗಿರಲಿಲ್ಲ.

ಜಿಲ್ಲಾ ಉಸ್ತುವಾರಿ ಸಚಿವ ಚಿಕ್ಕಮಗಳೂರು ಉತ್ಸವದ ಹೆಸರಿನಲ್ಲಿ ಅತಿವೃಷ್ಟಿ ಸಂತ್ರಸ್ತರಿಗೆ ಅವಮಾನ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಈ ಬಾರಿ ಅತಿವೃಷ್ಟಿಯಿಂದ ಭಾರೀ ಪ್ರಮಾಣದಲ್ಲಿ ಸಾವು ನೋವು ಸಂಭವಿಸಿದೆ. ಸಂತ್ರಸ್ತರಿಗೆ ಇದುವರೆಗೂ ಸೂಕ್ತ ಪರಿಹಾರ ಕಲ್ಪಿಸಲು ಜಿಲ್ಲಾಡಳಿತ ಹಾಗೂ ಸಚಿವರು ವಿಫಲರಾಗಿದ್ದು, ಸಂತ್ರಸ್ತರು ಇಂದಿಗೂ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಅಲ್ಲದೇ ಬಯಲು ಸೀಮೆ ಭಾಗದಲ್ಲಿ ತೀವ್ರ ಬರದಿಂದಾಗಿ ರೈತರು ನೀರಾವರಿ ಯೋಜನೆಗಳಿಲ್ಲದೇ ಕೃಷಿ ಕಾಯಕವನ್ನೇ ಕೈಬಿಟ್ಟಿದ್ದಾರೆ. ಇಂತಹ ಸಮಸ್ಯೆಗಳಿಗೆ ರಾಜ್ಯ ಸರಕಾರ, ಜಿಲ್ಲಾಡಳಿತ ಅಥವಾ ಜಿಲ್ಲಾ ಉಸ್ತುವಾರಿ ಸಚಿವ ರಾಗಲಿ ಸ್ಪಂದಿಸುವ ಕೆಲಸವನ್ನೂ ಸಮರ್ಪಕವಾಗಿ ಮಾಡಿಲ್ಲ. ಜನರು ಕಣ್ಣೀರಿನಲ್ಲಿ ಕೈತೊಳೆಯುತ್ತಿರುವ ಸಂದರ್ಭಗಳಲ್ಲಿ ಜಿಲ್ಲಾ ಉತ್ಸವದಂತಹ ಅದ್ದೂರಿ ಕಾರ್ಯಕ್ರಮಗಳ ಅಗತ್ಯವಿಲ್ಲ.

ದಂಟರಮಕ್ಕಿ ಶ್ರೀನಿವಾಸ್, ದಸಂಸ ರಾಜ್ಯ ಸಂಚಾಲಕ

Writer - ಕೆ.ಎಲ್.ಶಿವು

contributor

Editor - ಕೆ.ಎಲ್.ಶಿವು

contributor

Similar News