ಫೆ.16ರಿಂದ ಏಕನಾಥೇಶ್ವರ ದೇವಸ್ಥಾನದ ದ್ವಿತೀಯ ವಾರ್ಷಿಕ ವರ್ಧಂತಿ

Update: 2020-02-08 16:20 GMT

ಉಡುಪಿ, ಫೆ.8: ಬಾರಕೂರು ಶ್ರೀಏಕನಾಥೇಶ್ವರಿ ದೇವಸ್ಥಾನದ ದ್ವಿತೀಯ ವರ್ಧಂತ್ಯುತ್ಸವ ಫೆ.16ರಿಂದ 19ರವರೆಗೆ ಶ್ರೀಕ್ಷೇತ್ರದಲ್ಲಿ ನಡೆಯಲಿದೆ ಎಂದು ಬಾರಕೂರು ಶ್ರೀಏಕನಾಥೇಶ್ವರಿ ಟ್ರಸ್ಟ್‌ನ ಅಧ್ಯಕ್ಷ ಅಣ್ಣಯ್ಯ ಶೇರಿಗಾರ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 16ರಂದು ಭಕ್ತಾಭಿಮಾನಿಗಳು ಹಾಗೂ ವಿವಿಧ ಸಂಘಸಂಸ್ಥೆಗಳಿಂದ ಹಸಿರು ಹೊರೆಕಾಣಿಕೆ ಸಮರ್ಪಣೆ ಶೋಭಾಯಾತ್ರೆ ಅಪರಾಹ್ನ 3:30ಕ್ಕೆ ಕಚ್ಚೂರು ಸೇತುವೆ ಬಳಿಯಿಂದ ಹೊರಡಲಿದೆ ಎಂದರು.

ಫೆ.17ರ ಸೋಮವಾರ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಸಮಾಜದ ಪ್ರತಿಭಾನ್ವಿತ ಕಲಾವಿದರಿಂದ ಸ್ಯಾಕ್ಸೋಫೋನ್ ವಾದನ ಸೇವೆ ನಡೆಯಲಿದೆ. 18ರಂದು ವಿವಿಧ ಭಜನಾ ತಂಡಗಳಿಂದ ದಿನವಿಡೀ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಭಜನಾ ಕಾರ್ಯಕ್ರಮ ನಡೆಯಲಿದೆ. 19ರಂದು ದೇವಿ ಸನ್ನಿಧಿಯಲ್ಲಿ ಸಾಮೂಹಿಕ ಚಂಡಿಕಾಯಾಗ ಬೆಳಗ್ಗೆ 9ರಿಂದ ನಡೆಯಲಿದೆ ಎಂದರು.

ಅಲ್ಲದೇ ಫೆ.19ರಂದು ಬೆಲಗ್ಗೆ 10ರಿಂದ ಅಪರಾಹ್ನ 2ರವರೆಗೆ ದೇವಸ್ಥಾನದ ವಠಾರದಲ್ಲಿ ವಧು-ವರರ ನೋಂದಣಿ ಹಾಗೂ ಅನ್ವೇಷಣಾ ಕಾರ್ಯಕ್ರಮ ನಡೆಯಲಿದೆ. ಆಸಕ್ತರು ಸೂಕ್ತ ದಾಖಲೆಗಳೊಂದಿಗೆ ಇದರಲ್ಲಿ ಭಾಗವಹಿಸಬಹುದು ಎಂದರು.

ಅಂದು ಬೆಳಗ್ಗೆ 10ಗಂಟೆಯಿಂದ ಬಾರಕೂರು ಅಜ್ಜಿಮನೆ ಬುಡ್ಡುರಾಮ ಸೇರಿಗಾರ್ ಸಭಾಭವನದಲ್ಲಿ ದೇವಾಡಿಗ ಸಮಾಜೋತ್ಸವ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ವಿವಿಧ ಪ್ರಸಸ್ತಿ ಪುರಸ್ಕೃತರು, ಸಾಮಾಜಿಕ, ಶೈಕ್ಷಣಿಕ, ಕ್ರೀಡೆ, ಕಲೆ, ಧಾರ್ಮಿಕ ಹಾಗೂ ರಾಜಕೀಯ ಕ್ಷೇತ್ರದ ಪ್ರತಿಭಾನ್ವಿತರಿಗೆ, ಸಾಧಕ ರಿಗೆ ಸನ್ಮಾನ ನಡೆಯಲಿದೆ. ಅಲ್ಲದೇ ಸಾಂಸ್ಕೃತಿಕ ಹಾಗೂ ಯಕ್ಷಗಾನ ಕಾರ್ಯಕ್ರಮಗಳೂ ನಡೆಯಲಿವೆ ಎಂದು ಅಣ್ಣಯ್ಯ ಸೇರಿಗಾರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್‌ನ ಉಪಾಧ್ಯಕ್ಷ ಜನಾರ್ದನ ಬಿ.ದೇವಾಡಿಗ, ಪ್ರಧಾನ ಕಾರ್ಯದರ್ಶಿ ನರಸಿಂಹ ಬಿ.ದೇವಾಡಿಗ, ಗೌರವ ಕಾರ್ಯದರ್ಶಿ ಗಣೇಶ ದೇವಾಡಿಗ ಹಾಗೂ ಜನಾರ್ದನ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News