ತೆಂಗಿನ ತೋಟದ ಮಧ್ಯೆ ಅಂತರ್ ಬೆಳೆಯಾಗಿ ಪೈನಾಪಲ್

Update: 2020-02-09 05:14 GMT

ಕಾರ್ಕಳ ರಾಮ ಸಮುದ್ರ ತೋಟಗಾರಿಕೆ ಕ್ಷೇತ್ರದಲ್ಲಿ 5 ಎಕರೆ ತೆಂಗಿನ ತೋಟದ ಮಧ್ಯೆ 45 ಸಾವಿರ ಪೈನಾಪಲ್ ನಾಟಿ ಮಾಡಲಾಗಿದ್ದು, ಮುಂದಿನ 11 ತಿಂಗಳಲ್ಲಿ 50ಕ್ಕೂ ಅಧಿಕ ಟನ್ ಬೆಳೆಯೊಂದಿಗೆ 10 ಲಕ್ಷ ರೂ. ಆದಾಯ ಗಳಿಸುವ ನಿರೀಕ್ಷೆ ಹೊಂದಲಾಗಿದೆ. ಅದಕ್ಕೆ ಬೇಕಾದಂತೆ ಎಲ್ಲ ರೀತಿಯಲ್ಲಿ ನಿರ್ವಹಣೆ ಕಾರ್ಯ ಮಾಡಲಾಗುತ್ತಿದೆ. ಆಸಕ್ತರು ಇಲ್ಲಿಗೆ ಆಗಮಿಸಿ ಈ ಬೆಳೆಯ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.

 -ವರುಣ್ ಕೆ.ಜೆ, ಸಹಾಯಕ ತೋಟಗಾರಿಕೆ ನಿರ್ದೇಶಕ, ತೋಟಗಾರಿಕೆ ಇಲಾಖೆ.

ಉಡುಪಿ, ಫೆ.8: ಉಡುಪಿ ಜಿಲ್ಲಾ ತೋಟಗಾರಿಕೆ ಇಲಾಖೆಯು ತೋಟ ಗಾರಿಕೆಯಲ್ಲಿ ಹೆಚ್ಚಿನ ಆದಾಯ ಗಳಿಸುವ ನಿಟ್ಟಿನಲ್ಲಿ ವಿಶೇಷ ಯೋಜನೆಯನ್ನು ಹಮ್ಮಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಕಾರ್ಕಳ ತಾಲೂಕಿನ ರಾಮಸಮುದ್ರ ಮಾದರಿ ತೋಟಗಾರಿಕೆ ಕ್ಷೇತ್ರದಲ್ಲಿರುವ ಐದು ಎಕರೆ ತೆಂಗಿನ ತೋಟದ ಮಧ್ಯೆ ಅಂತರ್ ಬೆಳೆಯಾಗಿ 45 ಸಾವಿರ ಪೈನಾಪಲ್ ಗಿಡಗಳನ್ನು ನೆಟ್ಟು ಉತ್ತಮ ಇಳುವರಿ ಮೂಲಕ ಲಕ್ಷಾಂತರ ರೂ. ಆದಾಯ ಗಳಿಸುವ ನಿರೀಕ್ಷೆಯಲ್ಲಿದೆ.

ಒಂದು ತಿಂಗಳ ಹಿಂದೆ ಈ ಐದು ಎಕರೆ ತೆಂಗಿನ ತೋಟದ ಮಧ್ಯೆ ಇರುವ ಖಾಲಿ ಜಾಗದಲ್ಲಿ ಪೈನಾಪಲ್ ಗಿಡಗಳನ್ನು ನೆಡಲಾಗಿದ್ದು, ಉತ್ತಮ ಇಳುವರಿ ಪಡೆಯುವ ನಿಟ್ಟಿನಲ್ಲಿ ಇಲಾಖಾಧಿಕಾರಿಗಳು ಇದರ ನಿರ್ವಹಣೆಯಲ್ಲಿ ತೊಡಗಿದ್ದಾರೆ. ಕೇವಲ ನರ್ಸರಿ, ಫಸಲು ಹರಾಜು, ಕಸಿ ಸಸಿಗಳ ಉತ್ಪಾದನೆಗೆ ಮಾತ್ರ ಸೀಮಿತವಾಗದ ತೋಟಗಾರಿಕೆ ಇಲಾಖೆಯು ಬೆಳೆ ಪ್ರದೇಶ ವಿಸ್ತರಣೆಗಾಗಿ ಈ ವಿನೂತನ ಕ್ರಮಕ್ಕೆ ಮುಂದಾಗಿದೆ.

  10 ಲಕ್ಷ ರೂ. ಆದಾಯದ ನಿರೀಕ್ಷೆ: ತೋಟಗಾರಿಕೆ ಇಲಾಖೆಯು, ಜೆಸಿಬಿ ಯಂತ್ರ ಮತ್ತು 6 ಮಂದಿ ಕಾರ್ಮಿಕರನ್ನು ಬಳಸಿಕೊಂಡು ಒಂದೇ ವಾರದಲ್ಲಿ 45 ಸಾವಿರ ಪೈನಾಪಲ್ ಗಿಡಗಳ ನಾಟಿ ಕಾರ್ಯ ಮುಗಿಸಿತ್ತು. ಇದೀಗ ಪೈನಾಪಲ್ ಕೃಷಿಯನ್ನು ಉತ್ತಮವಾಗಿ ನಿರ್ವಹಿಸಿದ ಇಲಾಖಾಧಿಕಾರಿಗಳು ಇಬ್ಬರು ದಿನಗೂಲಿ ನೌಕರರನ್ನು ಬಳಸಿಕೊಂಡು ಗೊಬ್ಬರ ಪೂರೈಕೆ, ನೀರಿನ ವ್ಯವಸ್ಥೆ, ಕಳೆಗಿಡಗಳ ತೆರವು ಕಾರ್ಯವನ್ನು ವ್ಯವಸ್ಥಿತವಾಗಿ ನಡೆಸುತ್ತಿದ್ದಾರೆ.

ನಾಟಿಯ ಬಳಿಕ ಸುಮಾರು ಒಂದು ತಿಂಗಳವರೆಗೆ ಪೈನಾಪಲ್ ಗಿಡಕ್ಕೆ ನೀರಿನ ಅವಶ್ಯಕತೆ ಇರುವುದಿಲ್ಲ. ಬಳಿಕ ಮಣ್ಣು ಏರಿಸಿ, ಗೊಬ್ಬರ ಹಾಕಿ ನೀರಿನ ವ್ಯವಸ್ಥೆ ಮಾಡಬೇಕಾಗುತ್ತದೆ. ಅದೇ ರೀತಿ ಕಳೆ ನಿರ್ವಹಣೆ ಕೂಡ ಅಗತ್ಯವಾಗಿ ಮಾಡಬೇಕು. ಇಲ್ಲದಿದ್ದಲ್ಲಿ ಇಳುವರಿ ಕುಂಠಿತವಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ‘ಈ ಗಿಡಗಳು ಎಂಟು ತಿಂಗಳಲ್ಲಿ ಹೂ ಬಿಡಲಿದ್ದು, ಈ ಸಮಯದಲ್ಲಿ ಸಮ ಪ್ರಮಾಣದಲ್ಲಿ 50 ಎಂಎಲ್ ಹಾರ್ಮೊನ್ಸ್ ದ್ರಾವಣವನ್ನು ಸಿಂಪಡಿಸಬೇಕು. ಸುಮಾರು 11 ತಿಂಗಳಲ್ಲಿ ಪೈನಾಪಲ್ ಕಟಾವಿಗೆ ಬರುತ್ತದೆ. ಹೀಗೆ 45 ಸಾವಿರ ಗಿಡಗಳಲ್ಲಿ 50ಕ್ಕೂ ಅಧಿಕ ಟನ್ ಪೈನಾಪಲ್ ಬೆಳೆ ನಿರೀಕ್ಷೆ ಮಾಡಲಾಗಿದೆ. ಒಂದು ಕೆ.ಜಿ.ಗೆ 20 ರೂ.ನಂತೆ ಒಟ್ಟು 10 ಲಕ್ಷ ರೂ., ಆದಾಯ ಪಡೆಯುವ ನಿರೀಕ್ಷೆ ಹೊಂದಿದ್ದೇವೆ ಎಂದು ಸಹಾಯಕ ತೋಟಗಾರಿಕಾ ನಿರ್ದೇಶಕ ವರುಣ್ ಕೆ.ಜೆ. ತಿಳಿಸಿದ್ದಾರೆ. ಕಾರ್ಕಳದ ರಾಮಸಮುದ್ರ ತೋಟಗಾರಿಕೆ ಕ್ಷೇತ್ರವು 188.96 ಎಕರೆ ಜಾಗವನ್ನು ಹೊಂದಿದ್ದು, ಇಲ್ಲಿ ಸಮುದಾಯ ಕೆರೆಯನ್ನು ನಿರ್ಮಿಸಲಾಗಿದೆ. ತೆಂಗು, ಗೇರು, ಮಾವು, ಚಿಕ್ಕು ತೋಟ ಮತ್ತು ಪೈನಾಪಲ್‌ನ್ನು ಇಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಅಲ್ಲದೆ ತೆಂಗು, ಗೇರು, ಕಾಳು ಮೆಣಸು, ಅಡಿಕೆ, ಬೇಡಿಕೆ ಆಧಾರದಲ್ಲಿ ತರಕಾರಿ ಸಸಿಗಳನ್ನು ಕಸಿ ಮಾಡಿ ಮಾರಾಟ ಮಾಡಲಾಗುತ್ತಿದೆ.

ಈ ಕ್ಷೇತ್ರದಿಂದ ಇಲಾಖೆಗೆ ವಾರ್ಷಿಕ 10 ಲಕ್ಷ ರೂ.ವರೆಗೆ ಆದಾಯ ಬರುತ್ತದೆ. ಇಲಾಖೆಯು ‘ವಿಷನ್ 2020-25’ ಯೋಜನೆ ರೂಪಿಸಿದ್ದು, ಈ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ತಳಿಗಳಾದ ಸೀಬೆ, ಸಿದ್ದು ಹಲಸು, ಸುವರ್ಣಗೆಡ್ಡೆ, ಹಾಲು ಬೆಂಡೆಯನ್ನು ಬೆಳೆಸುವ ಉದ್ದೇಶ ಹೊಂದಲಾಗಿದೆ ಎಂದು ವರುಣ್ ಕೆ.ಜೆ. ತಿಳಿಸಿದರು.

ರಾಮಸಮುದ್ರ ಕ್ಷೇತ್ರದ ವ್ಯವಸ್ಥಿತ ತೋಟಗಾರಿಕೆ ಪದ್ದತಿಯ ಬಗ್ಗೆ ಮಾಹಿತಿ ಪಡೆಯಲು ಆಸಕ್ತ ರೈತರು, ಶಾಲಾ, ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಈ ಬಗ್ಗೆ ಆಸಕ್ತರು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವರುಣ್ (ಮೊ.ಸಂ.: 7892326323) ಅವರನ್ನು ಸಂಪರ್ಕಿಸಬಹುದಾಗಿದೆ.

ಪೈನಾಪಲ್ ಕೃಷಿಗೆ ಸಹಾಯಧನ

ಉಡುಪಿ ಜಿಲ್ಲೆಯ ಹಲವು ಕಡೆಗಳಲ್ಲಿ ಕೃಷಿಕರು ಪೈನಾಪಲ್ ಕೃಷಿಯ ಬಗ್ಗೆ ಒಲವು ವ್ಯಕ್ತಪಡಿಸುತ್ತಿದ್ದು, ಈಗಾಗಲೇ ಮುದ್ರಾಡಿ, ಸಾಣೂರು, ನಿಟ್ಟೆ, ಜಡ್ಕಲ್, ಮುದ್ದೂರು, ಬ್ರಹ್ಮಾವರ ಭಾಗದಲ್ಲಿ ಪೈನಾಪಲ್ ಬೆಳೆಯಲಾಗುತ್ತಿದೆ.

ಪೈನಾಪಲ್ ಬೆಳೆಯುವ ಕೃಷಿಕರಿಗೆ ಇಲಾಖೆಯಿಂದ ಸಹಾಯಧನ ಮತ್ತು ಮಾರ್ಗದರ್ಶನ ನೀಡಲಾಗುತ್ತಿದೆ. ಪೈನಾಪಲ್ ಕೃಷಿ ಮಾಡುವವರಿಗೆ ಮೊದಲ ವರ್ಷ ಹೆಕ್ಟೆರ್‌ಗೆ 25 ಸಾವಿರ ರೂ., ಮುಂದಿನ ವರ್ಷ 8 ಸಾವಿರ ರೂ. ಸಹಾಯ ಧನ ದೊರೆಯಲಿದೆ. 2019-20ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 14 ಮಂದಿ ರೈತರು 25 ಹೆಕ್ಟೆರ್‌ಗೆ 6.30 ಲಕ್ಷ ರೂ.ವನ್ನು ಸಹಾಯಧನ ರೂಪದಲ್ಲಿ ಪಡೆದಿದ್ದಾರೆ.

Writer - ನಝೀರ್ ಪೊಲ್ಯ

contributor

Editor - ನಝೀರ್ ಪೊಲ್ಯ

contributor

Similar News