ಮದ್ಯವ್ಯಸನಿಗಳ ಮಕ್ಕಳ ಜಾಗೃತಿ ಸಪ್ತಾಹದ ಉದ್ಘಾಟನೆ

Update: 2020-02-09 15:55 GMT

ಉಡುಪಿ, ಫೆ.9: ಮನೆಯು ಮಕ್ಕಳಲ್ಲಿ ಸಕಾರತ್ಮಕ ಭಾವನೆ ಮೂಡಿಸುವ ಕೇಂದ್ರವಾಗಿದೆ. ಆದುದರಿಂದ ಮಗುವಿನ ಭವಿಷ್ಯವನ್ನು ರೂಪಿಸುವ ಹೆತ್ತವರು ಮೊದಲು ತಮ್ಮ ನಡೆಯನ್ನು ಸರಿಪಡಿಸಿಕೊಳ್ಳಬೇಕು. ಮಕ್ಕಳಲ್ಲಿ ಮಾನವೀಯ ವೌಲ್ಯಗಳನ್ನು ತುಂಬಿ ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸಬೇಕು ಎಂದು ಡಾ. ಎ.ವಿ.ಬಾಳಿಗಾ ಸಮೂಹ ಸಂಸ್ಥೆಯ ನಿರ್ದೇಶಕ ಡಾ.ಪಿ.ವಿ.ಭಂಡಾರಿ ಹೇಳಿದ್ದಾರೆ.

ದೊಡ್ಡಣಗುಡ್ಡೆಯ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ-ಕರಾವಳಿ ಭಾರತೀಯ ವೈದ್ಯಕೀಯ ಸಂಘ, ಉಡುಪಿ -ಮಣಿಪಾಲ ರೋಟರಿ ಕ್ಲಬ್‌ಗಳ ಸಹಯೋಗದೊಂದಿಗೆ ರವಿವಾರ ಆಸ್ಪತ್ರೆಯ ಸಭಾಂಗಣದಲ್ಲಿ ಆಯೋಜಿಸ ಲಾದ ಮದ್ಯವ್ಯಸನಿಗಳ ಮಕ್ಕಳ ಜಾಗೃತಿ ಸಪ್ತಾಹದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಮದ್ಯ ವ್ಯಸನದಂತಹ ಸಮಸ್ಯೆಗಳಿಂದ ಆ ಮನೆಯ ಮಹಿಳೆಯರು ಹೆಚ್ಚು ತೊಂದರೆಗೆ ಒಳಾಗುತ್ತಾರೆ. ಯಾವುದೇ ವ್ಯಸನಗಳನ್ನು ಕೇವಲ ಶಿಬಿರಗಳಿಂದ ಮಾತ್ರ ದೂರ ಮಾಡಲು ಸಾಧ್ಯವಿಲ್ಲ. ಮುಖ್ಯವಾಗಿ ವೈಯಕ್ತಿಕ ನಿಲುವು ಅಗತ್ಯ ವಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.

ನಿಟ್ಟೂರು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಮುರಳಿ ಕಡೆಕಾರ್ ಮಾತ ನಾಡಿ, ಹಲವು ಮನೆಗಳಲ್ಲಿ ಬಡತನ, ಬಾಲ್ಯವಿವಾಹ, ಕುಡಿತದಂತಹ ಸಮಸ್ಯೆ ಗಳು ಸಾಕಷ್ಟು ಇವೆ. ಇದನ್ನು ಶಾಲಾ ವಿದ್ಯಾರ್ಥಿಗಳ ಮೂಲಕ ತಿಳಿಯಲು ಸಾಧ್ಯವಾಗುತ್ತದೆ. ಸರಕಾರ ಶೈಕ್ಷಣಿಕ ಪ್ರಗತಿ ಕಾರ್ಯಕ್ರಮದ ಜೊತೆಗೆ ಮಕ್ಕಳು, ಹೆತ್ತವರನ್ನು ಒಟ್ಟುಗೂಡಿಸಿ ವಿವಿಧ ಶಿಬಿರಗಳನ್ನು ಶಾಲೆಗಳಲ್ಲಿ ಏರ್ಪಡಿಸಬೇಕು. ಇದರಿಂದ ಮಕ್ಕಳು, ಹೆತ್ತವರ ನಡುವೆ ಇರುವ ಸಮಸ್ಯೆಗಳನ್ನು ಮನವರಿಕೆ ಮಾಡಿ ಪರಿಹಾರ ಕಾಣಲು ಸಾಧ್ಯವಾಗುತ್ತದೆ ಎಂದರು.

ಸಪ್ತಾಹವನ್ನು ಅಂತಾರಾಷ್ಟ್ರೀಯ ಜಾದೂಗಾರ ಪ್ರೊ.ಶಂಕರ್ ಉದ್ಘಾಟಿಸಿ ದರು. ಐಎಂಎ ಉಡುಪಿ ಕರಾವಳಿ ಅಧ್ಯಕ್ಷ ಡಾ.ಉಮೇಶ್ ಪ್ರಭು, ಉಡುಪಿ- ಮಣಿಪಾಲ ರೋಟರಿ ಕ್ಲಬ್ ಅಧ್ಯಕ್ಷ ರಾಜವರ್ಮ ಅರಿಗ, ನಿವೃತ್ತ ಪೊಲೀಸ್ ಅಧಿಕಾರಿ ಜನಾರ್ದನ್ ಉಪಸ್ಥಿತರಿದ್ದರು. ಆಸ್ಪತ್ರೆಯ ಮನೋವೈದ್ಯ ಡಾ. ವಿರೂಪಾಕ್ಷ ದೇವರಮನೆ ಸ್ವಾಗತಿಸಿದರು. ಆಪ್ತ ಸಮಾಲೋಚಕಿ ಮೋನಿಕಾ ವಂದಿಸಿದರು. ವಂಶಿ ಕಾರ್ಯ್ರಮ ನಿರೂಪಿಸಿದರು.

ಸಪ್ತಾಹದ ಪ್ರಯುಕ್ತ ಪ್ರೊ.ಶಂಕರ್ ಅವರಿಂದ ಜಾಗೃತಿಗಾಗಿ ಜಾದೂ ಮತ್ತು ಸಂಜೆ ವೇಳೆ ಮಲ್ಪೆ ಬೀಚ್‌ನಲ್ಲಿ ಕಲಾವಿದ ಹರೀಶ್ ಸಾಗಾ ಅವರಿಂದ ಮರಳ ಶಿಲ್ಪ ಪ್ರದರ್ಶನ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News