ಫೆ.14-16: ಅಡ್ಯಾರಿನಲ್ಲಿ ‘ಜಿಪಿಎಲ್ 2020 ಉತ್ಸವ’

Update: 2020-02-10 15:55 GMT

ಮಂಗಳೂರು, ಫೆ.10: ಕೊಡಿಯಾಲ್ ಸ್ಪೋರ್ಟ್ಸ್ ಅಸೋಸಿಯೇಶನ್ ಆಯೋಜಿತ ಶಾಸಕ ವೇದವ್ಯಾಸ ಕಾಮತ್ ಮುಂದಾಳತ್ವದಲ್ಲಿ ‘ಫುಜ್ಲಾನಾ ಜಿಪಿಎಲ್ ಉತ್ಸವ’ವು ಫೆ.14,15,16ರಂದು ನಗರದ ಅಡ್ಯಾರಿನಲ್ಲಿರುವ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ನಡೆಯಲಿದೆ ಎಂದು ಉದ್ಯಮಿ ಹಾಗೂ ಕೋಡಿಯಾಲ್ ಸ್ಫೋಟ್ಸ್ ಅಸೋಸಿಯೇಶನ್‌ನ ಮಾರ್ಗದರ್ಶಕ ಮಂಡಳಿಯ ಸಂಚಾಲಕ ಪ್ರದೀಪ್ ಪೈ ತಿಳಿಸಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಬಾರಿ ಕ್ರಿಕೆಟ್ ಪಂದ್ಯದೊಂದಿಗೆ ವೈವಿಧ್ಯಮಯ ವಿಶೇಷತೆಗಳ ಸಹಿತ ಹಲವು ವಿಭಿನ್ನ ಕಾರ್ಯಾಗಾರಗಳು, ಸ್ಪರ್ಧೆಗಳು ನಡೆಯಲಿದೆ. ‘ಜಿಪಿಎಲ್ ಕ್ರಿಕೆಟ್ 2020’ಯಲ್ಲಿ 16 ತಂಡಗಳ 32 ಪಂದ್ಯಗಳು ಅರ್ಹನಿಶಿಯಾಗಿ ನಡೆಯಲಿವೆ. ಮೊದಲ ಪಂದ್ಯ ಫೆ.14ರಂದು ಮಧ್ಯಾಹ್ನ 12 ಗಂಟೆಗೆ ಮತ್ತು ಫೈನಲ್ ಪಂದ್ಯ ಫೆ.16ರ ರಾತ್ರಿ 9 ಗಂಟೆಗೆ ನಡೆಯಲಿದೆ. ಫೆ.14ರ ರಾತ್ರಿ 7 ಗಂಟೆಗೆ ಜಿಪಿಎಲ್ ಉತ್ಸವದ ಅಧಿಕೃತ ಉದ್ಘಾಟನಾ ಕಾರ್ಯಕ್ರಮ ಜರುಗಲಿದ್ದು ರಾಜ್ಯ, ರಾಷ್ಟ್ರ, ಅಂತರ್‌ ರಾಷ್ಟ್ರೀಯ ಮಟ್ಟದ ಗಣ್ಯರು ಭಾಗವಹಿಸುವರು. ಉದ್ಘಾಟನಾ ಕಾರ್ಯಕ್ರಮದ ಬಳಿಕ ಫ್ಯೂಶನ್ ಮ್ಯೂಸಿಕಲ್ ಬ್ಯಾಂಡ್ ವತಿಯಿಂದ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯಲಿದೆ. ಫೆ.15ರ ರಾತ್ರಿ 7ಕ್ಕೆ ಮಲ್ಲಕಂಬ ಪ್ರದರ್ಶನ ನಡೆಯಲಿದೆ. ರಾತ್ರಿ 8:30ಕ್ಕೆ ನೇತ್ರಾವತಿ ನದಿಯಲ್ಲಿ ಚಲಿಸುವ ವಿಹಾರ ನೌಕೆಯಲ್ಲಿ ನಡೆಯುವ ಸಂವಾದ ಕೂಟದಲ್ಲಿ ಪದ್ಮಶೀ ಪುರಸ್ಕೃತ ಟಿವಿ ಮೋಹನದಾಸ್ ಪೈ ಪಾಲ್ಗೊಳ್ಳಲಿದ್ದಾರೆ.

ಈ ಬಾರಿಯ ಹೆಚ್ಚುವರಿ ವಿಶೇಷಗಳಾಗಿ ಬೋಟಿಂಗ್, ಕುದುರೆ ಸವಾರಿ, ಸಾಹಸ ಕ್ರೀಡೆಗಳು, ಜಲಕ್ರೀಡೆಗಳು, ಝುಂಬಾ ಡ್ಯಾನ್ಸ್, ವಿಹಾರನೌಕೆಯಲ್ಲಿ ಸವಾರಿ ಸಹಿತ ವಿವಿಧ ಸ್ಪರ್ಧೆಗಳಾದ ಝುಂಬಾ ಸ್ಪರ್ಧೆ, ಗೂಡುದೀಪ ಸ್ಪರ್ಧೆ, ಬೆಂಕಿ ಬಳಸದೆ ಆಹಾರ ತಯಾರಿಕೆ, ಮೆಹಂದಿ ಸ್ಪರ್ಧೆ, ಡಾಯಿಂಗ್ ಮತ್ತು ಕಲರಿಂಗ್, ಟ್ರೇಶರ್ ಹಂಟ್, ಛದ್ಮವೇಶ ಸ್ಪರ್ಧೆ, ಹೂಪೋಣಿಸುವ ಸ್ಪರ್ಧೆ, ಪೋಸ್ಟರ್ ಮೇಕಿಂಗ್, ಟ್ಯಾಲೆಂಟ್ ಶೋ, ಭರತನಾಟ್ಯ ಸ್ಪರ್ಧೆಗಳು ನಡೆಯಲಿವೆ.

ವಿವಿಧ ಕ್ಷೇತ್ರಗಳ ಪರಿಣಿತ ಖ್ಯಾತ ಸಾಧಕರಿಂದ ಕಾವಿಕಲೆ, ಸಿವಿಲ್ ಪರೀಕ್ಷೆಗಳಿಗೆ ತಯಾರಿ, ಫೋಟೋಗ್ರಫಿ, ಕ್ಯಾಂಡಲ್ ಮೇಕಿಂಗ್, ಮಹಿಳೆಯರಿಗೆ ಸ್ವರಕ್ಷಣೆ, ಬದುಕುವ ಶೈಲಿ-ಆಹಾರ ವಿಧಾನ, ಸಂದರ್ಶನ ಎದುರಿಸುವ ಕಲೆ, ಉದ್ಯೋಗ ತರಬೇತಿ, ಬ್ಯಾಂಕಿಂಗ್ ಪರೀಕ್ಷೆ ತಯಾರಿ, ಸಣ್ಣ-ಮಧ್ಯಮ ಕೈಗಾರಿಕೆಗಳ ಸ್ಥಾಪನೆಯ ಬಗ್ಗೆ ಮಾಹಿತಿ, ಸಾಮಾಜಿಕ ಜಾಲತಾಣಗಳ ನಿರ್ವಹಣೆ ತಯಾರಿ, ಗುಡಿಕೈಗಾರಿಕೆ ಮತ್ತು ಕರಕುಶಲ ಉತ್ಪನ್ನಗಳ ನಿರ್ಮಾಣದ ಬಗ್ಗೆ ಕಾರ್ಯಾಗಾರ ನಡೆಯಲಿದೆ. ಮೂರು ದಿನವೂ ನಗರದ ರಥಬೀದಿಯ ವೆಂಕಟರಮಣ ದೇವಸ್ಥಾನ ದಿಂದ ಸಹ್ಯಾದ್ರಿ ಕಾಲೇಜಿನ ತನಕ ಪ್ರತೀ ಗಂಟೆಗೊಮ್ಮೆ ಬಸ್ಸಿನ ವ್ಯವಸ್ಥೆ ಮಾಡಲಾಗಿದೆ.

ಸುದ್ದಿಗೋಷ್ಟಿಯಲ್ಲಿ ಯೂತ್ ಆಫ್ ಜಿಎಸ್‌ಬಿ ಪ್ರಮುಖರಾದ ಮಂಗಲ್ಪಾಡಿ ನರೇಶ್ ಶೆಣೈ, ಚೇತನ್ ಕಾಮತ್, ನರೇಶ್ ಪ್ರಭು, ಕಿರಣ್ ಶೆಣೈ, ಅಂಜನಾ ಕಾಮತ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News