ವಿಶಿಷ್ಟ ಉಡುಪಿ ಮಲ್ಲಿಗೆಗಾಗಿ ‘ರೈತ ಉತ್ಪಾದಕರ ಸಂಸ್ಥೆ’ ಸ್ಥಾಪನೆಗೆ ಚಿಂತನೆ
ಉಡುಪಿ, ಮಾ.2: ಉಡುಪಿ ಜಿಲ್ಲೆಯ ಭೌಗೋಳಿಕ ಮಾನ್ಯತೆ ಪಡೆದಿರುವ ಬೆಳೆಗಳಲ್ಲಿ ಒಂದಾಗಿರುವ ಉಡುಪಿ ಮಲ್ಲಿಗೆ ಬೆಳೆಗಾರರನ್ನು ಫಾರ್ಮರ್ ಪ್ರೊಡ್ಯುಸರ್ ಆರ್ಗನೈಝೇಶನ್(ರೈತ ಉತ್ಪಾದಕರ ಸಂಸ್ಥೆ) ಆಗಿ ರೂಪಿಸುವ ನಿಟ್ಟಿನಲ್ಲಿ ಮಲ್ಲಿಗೆ ಬೆಳೆಗಾರರು ಮುಂದಾಗಿದ್ದಾರೆ. ಹಾಗೆಯೇ ನಬಾರ್ಡ್ (ನ್ಯಾಶನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರ್ ಆ್ಯಂಡ್ ರೂರಲ್ ಡೆವಲಪ್‌ಮೆಂಟ್) ಕೂಡ ಈ ಬೆಳೆಗಾರರನ್ನು ರೈತ ಉತ್ಪಾದಕರ ಸಂಸ್ಥೆಯನ್ನಾಗಿ ಪರಿವರ್ತಿಸಲು ಗುರುತಿಸಿದೆ.
ಸುವಾಸನೆ ಹಾಗೂ ಸಣ್ಣ ಗಾತ್ರದಿಂದ ಬೇರೆ ಮಲ್ಲಿಗೆಗಳಿಂತ ವಿಶಿಷ್ಟವಾಗಿರುವ ಉಡುಪಿ ಮಲ್ಲಿಗೆಯನ್ನು ಜಿಲ್ಲೆಯ ಸುಮಾರು 10,000ಕ್ಕೂ ಅಧಿಕ ರೈತರು ಶಂಕರಪುರ, ಶಿರ್ವ-ಮಂಚಕಲ್, ಕಟಪಾಡಿ ಆಸುಪಾಸಿನಲ್ಲಿ ಬೆಳೆಸುತ್ತಿದ್ದಾರೆ. ಗ್ರಾಹಕರ ಹಿತಾಸಕ್ತಿ ಜೊತೆ ಉತ್ಪಾದಕರ ಹಿತಾಸ್ತಕಿ ಕೂಡ ಮುಖ್ಯವಾಗಿರಿಸಿ ಕೊಂಡು ಈ ಸಂಘ ಕಟ್ಟುವ ಯೋಜನೆಯನ್ನು ರೈತರು ಮಾಡುತ್ತಿದ್ದಾರೆ. ಇದರಿಂದ ಮಾರುಕಟ್ಟೆ ದರ ಕೂಡ ಶೇ.50ರಷ್ಟು ಹೆಚ್ಚಾಗಿ ಬೆಳೆಗಾರರಿಗೆ ಲಾಭವಾಗುವ ಸಾಧ್ಯತೆ ಕೂಡ ಇದೆ. ಮಲ್ಲಿಗೆ ಬೆಳೆಗಾರರ ಸಂಘವನ್ನು ಸ್ಥಾಪಿಸಲು ಎರಡು ರೀತಿಯ ಪ್ರಯತ್ನಗಳು ನಡೆಯುತ್ತಿವೆ. ಒಂದು ಉಡುಪಿ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಬಂಟ ಕಲ್ ನೇತೃತ್ವದಲ್ಲಿ ಕೃಷಿ ಬೆಳೆಗಾರರನ್ನು ಸಂಘಟಿಸಿ ಸುಮಾರು ಒಂದು ಸಾವಿರ ಮಂದಿಯನ್ನು ಸದಸ್ಯರನ್ನಾಗಿ ಮಾಡಿ ಕೇಂದ್ರ ಸರಕಾರದ ಯೋಜನೆಯಾದ ರೈತರ ಕಂಪೆನಿಯನ್ನು ಸ್ಥಾಪಿಸುವುದು. ಇದಕ್ಕೆ ಈಗಾಗಲೇ ತೋಟಗಾರಿಕೆ ಇಲಾಖೆಗೆ ಪತ್ರ ಬರೆಯಲಾಗಿದೆ.
ಇನ್ನೊಂದು ಕಡೆ ಮಣಿಪಾಲ ಮಾಹೆ ಅಧೀನದ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್(ಎಂಐಎಂ)ನ ಉಪನ್ಯಾಸಕ ಡಾ.ಹರೀಶ್ ಜಿ. ಜೋಶಿ, ಉಡುಪಿ ಮಲ್ಲಿಗೆಯ ಬಗ್ಗೆ ಅಧ್ಯಯನ ನಡೆಸಿ ನಬಾರ್ಡ್ ಮೂಲಕ ರೈತ ಉತ್ಪಾದಕರ ಸಂಸ್ಥೆಯನ್ನು ಸ್ಥಾಪಿಸಲು ಈಗಾಗಲೇ ಪ್ರಸ್ತಾವ ಕಳುಹಿಸಿದ್ದಾರೆ. ಈ ಬಗ್ಗೆ ಅವರು ಬೆಳೆಗಾರರಿಗೆ ಮನದಟ್ಟು ಮಾಡುವ ಕೆಲಸ ಮಾಡುತ್ತಿದ್ದಾರೆ. ನಬಾರ್ಡ್‌ನಡಿ 3 ಸಂಘಗಳು: ಈಗಾ ಗಲೇ ಉಡುಪಿ ಜಿಲ್ಲೆಯ ಬೆನಗಲ್ ತರಕಾರಿ ಬೆಳೆಗಾರರ ಸಂಘ, ಕುಕ್ಕೆಹಳ್ಳಿ ತರಕಾರಿ ಬೆಳೆಗಾರರ ಸಂಘ ಮತ್ತು ಮಟ್ಟುಗುಳ್ಳ ಬೆಳೆಗಾರರ ಸಂಘಗಳನ್ನು ನಬಾರ್ಡ್ ಮೂಲಕ ಸ್ಥಾಪಿಸ ಲಾಗಿದ್ದು, ಇದರ ಉಸ್ತುವಾರಿಯನ್ನು ಮಾಹೆ ಅಧೀನದ ಎಂಐಎಂ ಸಂಸ್ಥೆ ನೋಡಿಕೊಳ್ಳುತ್ತಿದೆ. ಇದು ಒಟ್ಟು 9ಲಕ್ಷ ರೂ. ವೆಚ್ಚದ ಯೋಜನೆ ಯಾಗಿದ್ದು, ಇದರಲ್ಲಿ ಬೆಳೆಗಾರರಿಗೆ ತರಬೇತಿ, ಬೇರೆ ಫಾರ್ಮ್‌ಗಳಿಗೆ ಭೇಟಿ ಕಾರ್ಯಕ್ರಮ, ಸಂಘದ ನೋಂದಣಿ, ಮಾರ್ಗಸೂಚಿಗಳ ರಚನಾ ಕಾರ್ಯ ನಡೆಸಲಾಗುತ್ತಿದೆ. 2014ರಿಂದ ಈ ಸಂಘಗಳನ್ನು ರಚಿಸಲಾಗಿದ್ದು, ಆರಂಭದಲ್ಲಿ ಮೂರು ವರ್ಷ, ನಂತರ ಮತ್ತೆ ಎರಡು ವರ್ಷಗಳಿಗೆ ವಿಸ್ತರಿಸಲಾಗಿದೆ. ಈ ಸಂಘಗಳ ಒಟ್ಟು ಐದು ವರ್ಷಗಳ ಅವಧಿಯು 2020ರ ಮಾ.31ಕ್ಕೆ ಕೊನೆಗೊಳ್ಳುತ್ತದೆ. ಮುಂದೆ ಇದೇ ಸಂಘಗಳು ಸ್ವತಂತ್ರವಾಗಿ ಮುನ್ನಡೆಯಲಿವೆ. ಸಂಘದಿಂದ ಬೆಳೆಗಾರರಿಗೆ ಉತ್ತಮ ಮಾರುಕಟ್ಟೆ ದರ ದೊರಕುತ್ತದೆ. ಬೆಳೆಗಾರರು ಒಟ್ಟಾಗಿ ಇರುವುದರಿಂದ ಮಧ್ಯವರ್ತಿಗಳ ಪ್ರವೇಶ ಅಸಾಧ್ಯ ವಾಗುತ್ತದೆ. ಬೆಳೆಗಾರರ ಯಾವುದೇ ಸಮಸ್ಯೆಗಳಿದ್ದರೂ ಸಂಘದ ಮೂಲಕವೇ ಪರಿಹಾರ ಕಂಡುಕೊಳ್ಳ ಬಹುದಾಗಿದೆ. ಮುಖ್ಯವಾಗಿ ಬೆಳೆಗಳಿಗೆ ವೈಜ್ಞಾನಿಕವಾಗಿ ದರ ಕೂಡ ನಿಗದಿ ಪಡಿಸಬಹುದಾಗಿದೆ. ಅದೇ ರೀತಿ ಸಂಘದ ಕಚೇರಿ ನಿರ್ವಹಣೆಗೆ ನಬಾರ್ಡ್‌ನಿಂದ ಹಣ ದೊರೆಯುತ್ತದೆ ಮತ್ತು ಇತರ ಖರ್ಚು ವೆಚ್ಚಗಳಿಗೆ ಅನುದಾನ ಒದಗಿಸಲಾಗುತ್ತದೆ ಎನ್ನುತ್ತಾರೆ ಡಾ.ಹರೀಶ್ ಜೋಷಿ.
2014ರಲ್ಲಿ ಮಲ್ಲಿಗೆ ಕೃಷಿಯ ಬಗ್ಗೆ ಡಾ.ಜಿತೇಶ್ ಡೇರಿಲ್ ಎಂಬವರು ‘ಇ ಕಾಮರ್ಸ್ ಮಾಡೆಲ್ ಫಾರ್ ಉಡುಪಿ ಜಾಸ್ಮಿನ್’ ಎಂಬ ವಿಷಯದ ಕುರಿತು ಪಿಎಚ್‌ಡಿ ಸಂಶೋಧನೆಯನ್ನು ಕೈಗೆತ್ತಿಕೊಂಡು ಅಧ್ಯಯನ ನಡೆಸಿದ್ದರು. ಇವರೊಂದಿಗೆ ಮಾರ್ಗದರ್ಶಕರಾಗಿ ಅಧ್ಯಯನ ನಡೆಸುವಾಗ ಮಲ್ಲಿಗೆ ಬೆಳೆಗೆ ಸಂಬಂಧಿಸಿ ಅನೇಕ ಸಮಸ್ಯೆಗಳು ಬೆಳಕಿಗೆ ಬಂದವು ಎಂದು ಅವರು ತಿಳಿಸಿದ್ದಾರೆ.
ಮಲ್ಲಿಗೆ ಬೆಳೆಗಾರರಿಗೆ ಸಂಘ ಅಗತ್ಯವಾಗಿ ಬೇಕು. ಈವರೆಗೆ ಕೇವಲ ಗ್ರಾಹಕರ ಹಿತಾಸಕ್ತಿಯನ್ನು ಮಾತ್ರ ಪರಿಗಣಿಸಲಾಗುತ್ತಿತ್ತು. ಇನ್ನು ಸಂಘ ಮಾಡಿದರೆ ಉತ್ಪಾದಕರ ಹಿತಾಸಕ್ತಿಯನ್ನು ಕೂಡ ಪರಿಗಣಿಸಬಹುದಾಗಿದೆ. ಈ ನಿಟ್ಟಿನಲ್ಲಿ ಬೆಳೆಗಾರರ ಸಭೆ ಕರೆದು ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ಸರಕಾರದ ಮೂಲಕ 1 ಸಾವಿರ ಬೆಳೆಗಾರರನ್ನು ಸದಸ್ಯರನ್ನಾಗಿ ಮಾಡಿ ಸಂಸ್ಥೆ ರಚಿಸುವ ಉದ್ದೇಶ ಹೊಂದಲಾಗಿದೆ.
-ರಾಮಕೃಷ್ಣ ಶರ್ಮ ಬಂಟಕಲ್, ಅಧ್ಯಕ್ಷರು, ಕೃಷಿಕ ಸಂಘ, ಉಡುಪಿ
ಇಡೀ ದೇಶದಲ್ಲಿ ವಿಶ್ವವಿದ್ಯಾನಿಲಯದ ಸಂಸ್ಥೆಗೆ ಈ ರೀತಿಯ ಬೆಳೆಗಾರರ ಸಂಘವನ್ನು ನಬಾರ್ಡ್ ವಹಿಸಿಕೊಟ್ಟಿ ರುವುದು ಇದೇ ಮೊದಲು. ಉಳಿದ ಕಡೆಗಳಲ್ಲಿ ಸಂಘಗಳನ್ನು ಎನ್‌ಜಿಒ ಹಾಗೂ ಇತರ ಸಂಸ್ಥೆಗಳಿಗೆ ವಹಿಸಿಕೊಟ್ಟಿದೆ. ಇದರಿಂದ ವಿದ್ಯಾರ್ಥಿ ಗಳಿಗೆ ಈ ಬೆಳೆಗಳ ಬಗ್ಗೆ ಸಂಶೋಧನೆ ಮಾಡಲು ಅನುಕೂಲವಾಗುತ್ತದೆ. ಆದುದರಿಂದ ಮಲ್ಲಿಗೆ ಬೆಳೆಗಾರರು ಆಸಕ್ತಿ ತೋರಿಸಿ ನಬಾರ್ಡ್ ಮೂಲಕ ಸಂಘ ಸ್ಥಾಪಿಸಿದರೆ ಸಾಕಷ್ಟು ಅನುಕೂಲ ವಾಗಲಿದೆ ಮತ್ತು ಸಂಘ ಬೆಳೆಸಲು ಅನುಭವ ಕೂಡ ದೊರೆಯಲಿದೆ.
-ಡಾ.ಹರೀಶ್ ಜೋಷಿ, ಉಪನ್ಯಾಸಕ, ಎಂಐಎಂ ಮಣಿಪಾಲ.