ಕೊರೊನಾ ಸೋಂಕಿನ ಲಕ್ಷಣಗಳಿದ್ದರೆ ವೈದ್ಯರಲ್ಲಿಗೆ ಹೋಗಬೇಡಿ, ಮನೆಯಲ್ಲೇ ಇರಿ: ಡಾ. ಶ್ರೀನಿವಾಸ ಕಕ್ಕಿಲ್ಲಾಯ

Update: 2020-03-21 17:21 GMT
 ಡಾ.ಶ್ರೀನಿವಾಸ ಕಕ್ಕಿಲ್ಲಾಯ

ಕೊರೊನಾವೈರಸ್ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಡಾ.ಶ್ರೀನಿವಾಸ ಕಕ್ಕಿಲ್ಲಾಯ ಅವರು ಕೊರೊನಾವೈರಸ್ ಲಕ್ಷಣಗಳು ಕಂಡುಬಂದರೆ ಅದನ್ನು ಹೇಗೆ ಎದುರಿಸಬೇಕು ಎನ್ನುವ ಕುರಿತು ಫೇಸ್ ಬುಕ್ ನಲ್ಲಿ ವಿವರಿಸಿದ್ದಾರೆ. ಅವರ ಫೇಸ್ ಬುಕ್ ಪೋಸ್ಟ್ ಈ ಕೆಳಗಿದೆ.

ತಲೆಬರಹ ನೋಡಿ ಅಚ್ಚರಿಯಾಯಿತೇ? ಸಹಜವೇ! ಆದರೆ ಇದು ಸತ್ಯ! ಭಾರತದ ಕೇಂದ್ರ ಸರಕಾರದ ಸೂಚನೆಯೂ ಇದುವೇ: ಅನಾರೋಗ್ಯವಿದೆಯೆಂದು ಅನಿಸುವವರು ಮನೆಯಲ್ಲೇ ಇರಬೇಕು. ಕೇರಳ ಸರಕಾರವೂ ಇದೇ ಸೂಚನೆಯನ್ನು ನೀಡಿದೆ. ಅಮೆರಿಕಾದ ಕೆಲವು ರಾಜ್ಯಗಳಲ್ಲಿ, ಇಂಗ್ಲೆಂಡ್ (ಯುಕೆ), ಫ್ರಾನ್ಸ್ ಮತ್ತಿತರ ಯೂರೋಪಿನ ಅನ್ಯ ದೇಶಗಳಲ್ಲೂ ಇದೇ ಸೂಚನೆಯನ್ನು ಎಲ್ಲರಿಗೂ ನೀಡಲಾಗಿದೆ, ವ್ಯಾಪಕವಾಗಿ ಪ್ರಚಾರ ನೀಡಲಾಗಿದೆ.

ನಮ್ಮ ದೇಶದಲ್ಲಿ ಕೊರೊನಾ ಹರಡದಂತೆ ತಡೆಯುವುದಕ್ಕೆ, ಸಾವುಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡುವುದಕ್ಕೆ ಎಲ್ಲರೂ ಪಾಲಿಸಲೇಬೇಕಾದ ಅತಿ ಮುಖ್ಯ ಕ್ರಮವೆಂದರೆ ಕೊರೊನಾ ಸೋಂಕಿನ ಲಕ್ಷಣಗಳು (ಜ್ವರ, ಕೆಮ್ಮು, ಕಫ, ಗಂಟಲು ನೋವು, ತಲೆ-ಮೈಕೈ ನೋವು, ನೆಗಡಿ, ವಾಕರಿಕೆ) ಇದ್ದರೆ ಎಲ್ಲೂ ಹೊರಗೆ ಹೋಗದೇ ಇರುವುದು, ಒಂದು ವಾರ ಮನೆಯೊಳಗೇ ಇರುವುದು.

ಇದನ್ನು ಮರೆತು ಕೊರೊನಾ ಸೋಂಕಿತರು ಹೊರಗೆಲ್ಲಾ ತಿರುಗಾಡಿದರೆ ಕೊರೊನಾ ವಿನಾಶಕಾರಿಯಾಗಲಿದೆ.

ಕೊರೊನಾ ಅತಿ ಭಯಂಕರ ಕಾಯಿಲೆ ಎನ್ನುತ್ತಾರೆ, ಹಾಗಿದ್ದರೆ ಮನೆಯಲ್ಲೇ ಇದ್ದರೆ ಹೇಗೆ?

ಕೊರೊನಾ ಸೋಂಕು ಖಂಡಿತಕ್ಕೂ ಭಯಂಕರವಲ್ಲ್ಲ. ಈಗಾಗಲೇ ಕೊರೊನಾ ವಿಶ್ವದೆಲ್ಲೆಡೆ ಹರಡಿ ಎರಡೂವರೆ ಲಕ್ಷ ಜನರನ್ನು ಬಾಧಿಸಿದೆ; ಅದರಿಂದ ಯಾವ ವಯಸ್ಸಿನಲ್ಲಿ, ಯಾರಿಗೆ, ಏನೇನಾಗುತ್ತದೆ ಎಂಬ ಮಾಹಿತಿಯೆಲ್ಲವೂ ಈಗಾಗಲೇ ಸ್ಪಷ್ಟವಾಗಿ ಲಭ್ಯವಿದೆ. ಶೇ. 70-80ರಷ್ಟು ಕೊರೊನಾ ಸೋಂಕುಗಳು 60 ವರ್ಷಕ್ಕಿಂತ ಕಿರಿಯರಲ್ಲಿ ಉಂಟಾಗುತ್ತವೆ, ಮತ್ತು ಅವರಲ್ಲಿ ಶೇ. 99ರಷ್ಟು ಯಾವುದೇ ಸಮಸ್ಯೆಗಳಾಗದೆ, ಯಾವುದೇ ಪರೀಕ್ಷೆಯ ಅಗತ್ಯವೂ ಇಲ್ಲದೆ, ಯಾವುದೇ ಚಿಕಿತ್ಸೆಯ ಅಗತ್ಯವಿಲ್ಲದೆ ಸಂಪೂರ್ಣವಾಗಿ ವಾರದೊಳಗೆ ಗುಣಮುಖರಾಗುತ್ತಾರೆ. ಆದ್ದರಿಂದ ಇವರು ಯಾರೂ ಕೂಡ ವೈದ್ಯರನ್ನು ಕಾಣುವ ಅಗತ್ಯವೇ ಇಲ್ಲ, ಪರೀಕ್ಷೆ ಮಾಡಿಸಿಕೊಳ್ಳುವ ಅಗತ್ಯವೇ ಇಲ್ಲ, ಯಾವುದೇ ಔಷಧಗಳನ್ನು ತೆಗೆದುಕೊಳ್ಳುವ ಅಗತ್ಯವೇ ಇಲ್ಲ. ಹಾಗೊಂದು ವೇಳೆ ಇವರೆಲ್ಲ ವೈದ್ಯರನ್ನು ಕಾಣಲು ಹೋದರೂ ಕೂಡ ವೈದ್ಯರು ಕೊರೊನಾದ ಪರೀಕ್ಷೆಯನ್ನು ಮಾಡಿಸುವುದೇ ಇಲ್ಲ (ಒಂದೊಂದು ಪರೀಕ್ಷೆಗೆ 5 ಸಾವಿರ ರೂಪಾಯಿ, ಅದರ ವರದಿ ಬರುವ ವೇಳೆಗೆ ಕಾಯಿಲೆ ವಾಸಿಯಾಗಿರುತ್ತದೆ!), ಮಾತ್ರವಲ್ಲ, ಜ್ವರಕ್ಕೆಂದು ಪಾರಸಿಟಮಾಲ್ ಬಿಟ್ಟರೆ ಬೇರೆ ಯಾವುದನ್ನೂ ಕೊಡುವುದೂ ಇಲ್ಲ!

ಆದರೆ ಇವರು ಈ ಅಗತ್ಯವೇ ಇಲ್ಲದ ಪರೀಕ್ಷೆ, ಚಿಕಿತ್ಸೆಗಳನ್ನು ಹುಡುಕಿ ಹೊರಗೆ ತಿರುಗಾಡಿದರೆ ಇವರು ಹೋದಲ್ಲೆಲ್ಲ ತಮ್ಮ ಸೋಂಕನ್ನು ಹರಡಲಿದ್ದಾರೆ, ಸೋಂಕು ತಗಲಿದ ನೂರಾರು ಜನರು ಹೀಗೆ ಹರಡಿದರೆ ಒಂದೇ ಸಲಕ್ಕೆ ಸಾವಿರಾರು ಜನರು ಸೋಂಕಿಗೀಡಾಗಲಿದ್ದಾರೆ. ಇದನ್ನು ತಡೆಯಬೇಕು ಎಂದಾದರೆ ಕೊರೊನಾ ಸೋಂಕಿನ ಲಕ್ಷಣಗಳಿರುವವರು ಮನೆಯಲ್ಲೇ ಇರಬೇಕು, ಹೊರಗೆ ಕಾಲಿಡಲೇ ಬಾರದು. ಅದನ್ನೇ ಕೇಂದ್ರ ಸರಕಾರ, ಕೇರಳ ಸರಕಾರ ಈಗಾಗಲೇ ಹೇಳಿರುವುದು.

ಹಾಗೆ ಮನೆಯಲ್ಲೇ ಉಳಿದವರಿಗೆ ಸಮಸ್ಯೆಗಳಾದರೆ ಏನು ಮಾಡುವುದು?
ಇದುವರೆಗೆ ಎಲ್ಲಾ ದೇಶಗಳಲ್ಲಿ ಕಂಡುಬಂದಿರುವಂತೆ ಕೊರೊನಾ ಸೋಂಕಿನಿಂದ ಸಮಸ್ಯೆಗಳಾಗುವುದು ಒಟ್ಟು ಸೋಂಕಿತರಲ್ಲಿ ಶೇ. 15 ಮಂದಿಗೆ ಮಾತ್ರ, ಮತ್ತು ಅವರಲ್ಲಿ ಹೆಚ್ಚಿನವರು 60ಕ್ಕೆ ಮೀರಿದ ವಯಸ್ಸಿನವರು ಅಥವಾ ಮೊದಲೇ ಸಕ್ಕರೆ ಕಾಯಿಲೆ, ಶ್ವಾಸಕೋಶಗಳ ಕಾಯಿಲೆ, ಹೃದಯ, ಮೂತ್ರಪಿಂಡ, ನರಮಂಡಲಗಳ ಕಾಯಿಲೆಯುಳ್ಳವರು ಆಗಿರುತ್ತಾರೆ.

ಕೊರೊನಾದಿಂದ ಸಮಸ್ಯೆಗಳಾಗುವುದು ಕೂಡ ಹೆಚ್ಚಿನವರಲ್ಲಿ ಸೋಂಕಿನ ಲಕ್ಷಣಗಳು ಆರಂಭಗೊಂಡು 6-7 ದಿನಗಳ ನಂತರವೇ. ಹೀಗೆ ಯಾರಲ್ಲೇ ಆದರೂ ಉಸಿರಾಟಕ್ಕೆ ತೊಂದರೆಯಾಗುವುದು, ಕಫದಲ್ಲಿ ರಕ್ತವಿರುವುದು, ಕೆಮ್ಮು ಉಲ್ಬಣಿಸುವುದು ಕಂಡುಬಂದರೆ ಆ ಕೂಡಲೇ ತಮ್ಮ ವೈದ್ಯರಿಗೆ ಕರೆ ಮಾಡಿ, ವಾಟ್ಸಪ್ ಅಥವಾ ಗೂಗಲ್ ಡುವೊ ಇತ್ಯಾದಿ ವಿಡೀಯೋ ಕರೆಗಳನ್ನೂ ಬಳಸಿ, ವೈದ್ಯರ ಸಲಹೆಯನ್ನು ಪಡೆದು ಅವರು ಸೂಚಿಸುವ ಆಸ್ಪತ್ರೆಗೆ, ಅವರು ಸೂಚಿಸುವ ವಾಹನದಲ್ಲಿ ಹೋಗಬಹುದು. ಆದ್ದರಿಂದ ಕೊರೊನಾ ಲಕ್ಷಣಗಳು ಆರಂಭಗೊಂಡ ಕೂಡಲೇ ಯಾರೊಬ್ಬರೂ ಗಾಬರಿಯಾಗುವ ಅಗತ್ಯವಿಲ್ಲ, ಭಯಪಡಬೇಕಾದ ಅಗತ್ಯವಿಲ್ಲ, ಮನೆಯಲ್ಲೇ ಇದ್ದು ತಮ್ಮ ವೈದ್ಯರ ನಿಗಾವಣೆಯಲ್ಲಿ ಮನೆಯಲ್ಲೇ ಉಳಿಯಬೇಕು.

ಹೀಗೆ ಮನೆಯಲ್ಲಿಯೇ ಉಳಿಯುವುದರಿಂದ ಕೊರೊನಾ ನಿಭಾಯಿಸುವುದಕ್ಕೆ ಹೇಗೆ ಸಹಕಾರಿಯಾಗುತ್ತದೆ?

ಕೊರೊನಾ ಸೋಂಖಿನಲ್ಲಿ ಸಾವನ್ನಪ್ಪುವವರ ಪ್ರಮಾಣವು ಶೇ.1-4ರಷ್ಟಿರುತ್ತದೆ, ಇಟೆಲಿಯಲ್ಲಿ ಮಾತ್ರ ಹೆಚ್ಚಾಗಿದೆ. ಈ ಸೋಂಕಿನ ಗಂಭೀರತೆಯನ್ನು ಮೊದಲೇ ಊಹಿಸಿ, ಅದಕ್ಕೆ ತಕ್ಕಂತೆ ಆಸ್ಪತ್ರೆಗಳನ್ನು ತಯಾರಿಟ್ಟುಕೊಳ್ಳಲು ಇಟೆಲಿಯಲ್ಲಿ ಸಾಧ್ಯವಾಗದೇ ಇದ್ದುದೇ ಇದಕ್ಕೆ ಕಾರಣ.

ನಮ್ಮೂರಿನ ಉದಾಹರಣೆಯನ್ನೇ ಈಗ ನೋಡೋಣ. ಮೊದಲ ದಿನಗಳಲ್ಲಿ ಇಡೀ ದೇಶದಲ್ಲಿ ವಾರಕ್ಕೊಂದು ಕೊರೊನಾ ಪ್ರಕರಣಗಳಿದ್ದರೆ, ಈಗ ದಿನಕ್ಕೆ 50-60 ಕಾಣತೊಡಗಿವೆ, ಮುಂದಿನ ವಾರಗಳಲ್ಲಿ ಸೋಂಕು ಹರಡತೊಡಗಿದರೆ ಪ್ರತಿ ಊರಲ್ಲೂ ಪ್ರತಿ ನಿತ್ಯ ನೂರಾರು ಜನರು ಸೋಂಕಿತರಾಗುವ ಸಾಧ್ಯತೆಗಳಿವೆ. ಒಂದು ಊರಿನಲ್ಲಿ 5 ಲಕ್ಷ ಜನರಿದ್ದಾರೆ ಎಂದು ಊಹಿಸಿಕೊಳ್ಳಿ. ಅವರಲ್ಲಿ ಶೇ. 30ರಷ್ಟು ಜನರಿಗೆ ಒಂದು ತಿಂಗಳಲ್ಲಿ ಸೋಂಕು ತಗಲುತ್ತದೆ ಎಂದಾದರೆ, ಸುಮಾರು ಒಂದೂವರೆ ಲಕ್ಷದಷ್ಟಾಯಿತಲ್ಲ? ಸೋಂಕು ವ್ಯಾಪಕವಾಗತೊಡಗಿದ ಮೊದಲ ವಾರದಲ್ಲಿ 10 ಸಾವಿರ ಜನರಿಗೆ ತಗಲಿದರೆ, ಎರಡನೇ ವಾರದಲ್ಲಿ 20 ಸಾವಿರ, ಮೂರನೇ ವಾರದಲ್ಲಿ 50 ಸಾವಿರ ಹಾಗೂ ನಾಲ್ಕನೇ ವಾರದಲ್ಲಿ 80 ಸಾವಿರ – ಹೀಗೆ ಅದು ಹರಡುತ್ತದೆ. ಇವರಲ್ಲಿ ಶೇ. 20ರಷ್ಟು ಸೋಂಕುಗಳು 60ಕ್ಕೆ ಮೇಲ್ಪಟ್ಟವರಲ್ಲಾದರೆ, ವಾರಕ್ಕೆ ಕ್ರಮವಾಗಿ 2, 4, 10, 15 ಸಾವಿರಕ್ಕೂ ಹೆಚ್ಚು ವಯಸ್ಕರು ಸೋಂಕಿಗೀಡಾಗಿ, ಅವರಲ್ಲಿ ಶೇ.15-20ರಷ್ಟು ಮಂದಿ ಸಮಸ್ಯೆಗೀಡಾದರೆ 300, 600, 1500, 2250 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಬೇಕಾಗುತ್ತದೆ. ಕೊರೊನಾದಿಂದಾಗುತ್ತಿರುವ ಅತಿ ದೊಡ್ಡ ಸಮಸ್ಯೆ ಇದುವೇ: ಒಮ್ಮೆಗೇ ಸಾವಿರಾರು ಜನರಿಗೆ ರೋಗ ಹರಡಿ ಒಮ್ಮೆಗೇ ಸಾವಿರಾರು ಜನರು ಆಸ್ಪತ್ರೆಗೆ ದಾಖಲಾಗಬೇಕಾಗುವುದು, ಅದನ್ನು ಎದುರಿಸಲು ಸಾಕಷ್ಟು ಅನುಕೂಲಗಳನ್ನು ಮಾಡಲು ಸಾಧ್ಯವಾಗದೇ ಹೋಗುವುದು.

ಇಂತಹಾ ಸನ್ನಿವೇಶವನ್ನು ತಡೆಯಬೇಕಾದರೆ ಈ ಮೂರು ಕೆಲಸಗಳನ್ನು ನಾವೆಲ್ಲರೂ ಜೊತೆಗೂಡಿ ಮಾಡಬೇಕಾಗಿದೆ:

ಮೊದಲನೆಯದಾಗಿ, ಸೋಂಕಿನ ಲಕ್ಷಣಗಳಿರುವವರು ಮನೆಯಲ್ಲಿಯೇ ಕುಳಿತು ಅದು ಹೆಚ್ಚು ಹರಡದಂತೆ ಎಚ್ಚರಿಕೆ ವಹಿಸುವುದು
ಎರಡನೆಯದಾಗಿ, ಸಮಸ್ಯೆಗೀಡಾಗಬಲ್ಲ ಹಿರಿಯರನ್ನು ಸೋಂಕಿತರಿಂದ ದೂರವಿರಿಸಿ ರಕ್ಷಿಸುವುದು; ಅಂಥ ಹಿರಿಯರು ತಾವು ಕೂಡ ಹೆಚ್ಚು ಜನರು ಸೇರುವ ಕಡೆಗಳಿಗೆ ಹೋಗದೇ ಇರುವುದು

ಮೂರನೆಯದಾಗಿ, ಸಮಸ್ಯೆಗೀಡಾದವರಿಗೆ ಚಿಕಿತ್ಸೆ ನೀಡಲು ಬೇಕಾದ ಪ್ರತ್ಯೇಕ ಆಸ್ಪತ್ರೆಗಳನ್ನೂ, ಉಪಕರಣಗಳನ್ನೂ, ಸಿಬಂದಿಯನ್ನೂ ಸಿದ್ಧಪಡಿಸುವುದು. ಎಲ್ಲಾ ಸರಕಾರಗಳೂ ಈ ಕಾರ್ಯದಲ್ಲಿ ಶಕ್ತಿ ಮೀರಿ ತೊಡಗಿಕೊಂಡಿದ್ದು, ನಾವೆಲ್ಲರೂ ಅದಕ್ಕೆ ನೆರವು ಹಾಗೂ ಸಹಕಾರವನ್ನು ನೀಡಬೇಕಾಗಿದೆ.

ಕೊರೊನಾ ಒಂದು ವಿಶೇಷ ಸವಾಲು – ಎಲ್ಲರೂ ಒಂದಾಗಿ ವಿಶೇಷ ರೀತಿಯಿಂದಲೇ ಇದನ್ನು ಎದುರಿಸಬೇಕು

ಕೊರೊನಾ ಸೋಂಕನ್ನು ನಿಯಂತ್ರಿಸುವಲ್ಲಿ ಅತ್ಯಂತ ವಿಶೇಷದ ಸಂಗತಿಯೆಂದರೆ ಕೊರೊನಾ ತಗಲಿದರೂ ಯಾವುದೇ ಸಮಸ್ಯೆಗಳಾಗದ ಬಹುತೇಕ ರೋಗಿಗಳು ವೈದ್ಯರನ್ನು ಕಾಣುವುದಕ್ಕೆ ಹೋಗಲೇ ಬಾರದು, ಮನೆಯಿಂದ ಹೊರಗೆ ಹೋಗಲೇ ಬಾರದು! ಸಮಸ್ಯೆಗಳಾಗುವ ಸೂಚನೆಗಳಿದ್ದವರು ವೈದ್ಯರನ್ನು ಸಂಪರ್ಕಿಸಿ ಅವರ ಸೂಚನೆಗಳನ್ನು ಪಾಲಿಸಿದರೆ ಆಯಿತು!

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News