ಉಡುಪಿ ಜಿಲ್ಲಾಡಳಿತದಿಂದ ಪ್ರಾಣಿ-ಪಕ್ಷಿಗಳಿಗೆ ಆಹಾರ, ನೀರು
ಉಡುಪಿ, ಎ.6: ಲಾಕ್‌ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ಹಸಿವಿನಿಂದ ಪರಿತಪಿಸುತ್ತಿರುವ ಬೀಡಾಡಿ ದನಗಳು, ಬೀದಿ ನಾಯಿಗಳು ಸೇರಿದಂತೆ ಇತರ ಪ್ರಾಣಿಪಕ್ಷಿಗಳಿಗೆ ಉಡುಪಿ ಜಿಲ್ಲಾಡಳಿತದ ನಿರ್ದೇಶನದಲ್ಲಿ ಸ್ಥಳೀಯಾಡಳಿತ ಹಾಗೂ ಗ್ರಾಪಂಗಳು ಕನಿಷ್ಠ ಆಹಾರ ಮತ್ತು ನೀರು ಸಹಿತ ಆರೋಗ್ಯ ರಕ್ಷಣೆಯನ್ನು ಒದಗಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿವೆ.
ಕಳೆದ ವರ್ಷ ನಡೆದ 19ನೇ ಜಾನುವಾರು ಗಣತಿ ಪ್ರಕಾರ ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ 19,000 ಸೇರಿದಂತೆ ಜಿಲ್ಲೆಯಾದ್ಯಂತ ಒಟ್ಟು 50-60ಸಾವಿರ ಬೀದಿನಾಯಿಗಳಿವೆ. ಇದರೊಂದಿಗೆ ದನಗಳು, ಬೆಕ್ಕುಗಳು, ಕಾಗೆ ಸಹಿತ ಪಕ್ಷಿಗಳಿಗೆ ಪ್ರತಿದಿನ ಆಹಾರ ಒದಗಿಸಲು ಜಿಲ್ಲಾಡಳಿತ ಆಯಾ ಸ್ಥಳೀಯಾಡಳಿತ ಸಂಸ್ಥೆಗಳು ಹಾಗೂ ಗ್ರಾಪಂಗಳಿಗೆ ದೈನಂದಿನ ಸರಾಸರಿ ವೆಚ್ಚವನ್ನು ನಿಗದಿಪಡಿಸಿದೆ. ಈ ವೆಚ್ಚವನ್ನು ಆಯಾ ಸ್ಥಳೀಯಾಡಳಿತ ಹಾಗೂ ಗ್ರಾಪಂಗಳೇ ಭರಿಸಲಿದೆ.
ತಾತ್ಕಾಲಿಕ ಕ್ರಿಯಾಯೋಜನೆ:
ಈ ಕುರಿತು ಜಿಲ್ಲಾಧಿಕಾರಿ ಜಿ.ಜಗದೀಶ್‌ರ ಸೂಚನೆಯಂತೆ ಉಡುಪಿ ಪಶುಪಾಲನಾ ಇಲಾಖೆ ಉಪನಿರ್ದೇಶಕರು ಎ.3ರಂದು ತಾತ್ಕಾಲಿಕ ಕ್ರಿಯಾ ಯೋಜನೆಗೆ ತಯಾರಿಸಿದ್ದು, ಇದಕ್ಕೆ ಜಿಲ್ಲಾಧಿಕಾರಿ ಅನುಮೋದನೆ ನೀಡಿದ್ದಾರೆ. ಉಡುಪಿ ನಗರಸಭೆ ವ್ಯಾಪ್ತಿಯ ಪರ್ಕಳ ವಾರ್ಡ್ ಒಂದನ್ನು ಹೊರತುಪಡಿಸಿ, ಉಳಿದ 34 ವಾರ್ಡ್‌ಗಳಲ್ಲಿ ಮಲ್ಪೆ ಮಧ್ವರಾಜ್ ಅನಿಮಲ್ ಕೇರ್ ಟ್ರಸ್ಟ್‌ನ ಬಬಿತಾ ಮಧ್ವರಾಜ್ ನೇತೃತ್ವದಲ್ಲಿ ಸುಮಾರು 202 ಮಂದಿ ಸ್ವಯಂ ಸೇವಕರು ಬೀದಿ ನಾಯಿಗಳಿಗೆ ಪ್ರತಿದಿನ ಸುಮಾರು 10ಸಾವಿರ ರೂ. ವೆಚ್ಚದ ಆಹಾರ ಮತ್ತು ನೀರು ಒದಗಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಪರ್ಕಳ ವಾರ್ಡ್‌ನಲ್ಲಿ ಸ್ಥಳೀಯ ನಗರಸಭಾ ಸದಸ್ಯರೇ ಜವಾಬ್ದಾರಿ ವಹಿಸಿಕೊಂಡು ಈ ಕಾರ್ಯ ಮಾಡುತ್ತಿದ್ದಾರೆ. ಕುಂದಾಪುರ, ಕಾರ್ಕಳ, ಕಾಪು ಪುರಸಭೆಗಳಿಗೆ 600ರೂ.(ಪ್ರತಿದಿನ 7ಕೆಜಿ ಅಕ್ಕಿ ಮತ್ತು ಇತರ ವೆಚ್ಚ), ಸಾಲಿಗ್ರಾಮ ಪಟ್ಟಣ ಪಂಚಾಯತ್‌ಗೆ 400ರೂ. (ಪ್ರತಿದಿನ 4.5. ಕೆಜಿ ಅಕ್ಕಿ ಮತ್ತು ಇತರ ವೆಚ್ಚ), ಎಲ್ಲ ಗ್ರಾಪಂಗಳಿಗೆ 300ರೂ. (4.5 ಕೆ.ಜಿ ಅಕ್ಕಿ ಮತ್ತು ಇತರ ವೆಚ್ಚ)ವನ್ನು ಕ್ರಿಯಾ ಯೋಜನೆಯಲ್ಲಿ ನಿಗದಿಪಡಿಸಲಾಗಿದೆ.
ಇವುಗಳ ಜವಾಬ್ದಾರಿಯನ್ನು ಆಯಾ ವ್ಯಾಪ್ತಿಯ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕರು ಮತ್ತು ಪಶು ವೈದ್ಯಾಧಿಕಾರಿಗಳಿಗೆ ವಹಿಸಿ ಕೊಡಲಾಗಿದೆ. ಸ್ಥಳ, ಸಮಯ ನಿಗದಿ: ಎ.14ರವರೆಗೆ ಸ್ಥಳೀಯಾಡಳಿತ ಹಾಗೂ ಗ್ರಾಪಂಗಳ ವ್ಯಾಪ್ತಿಯಲ್ಲಿ ಹೆಚ್ಚು ಬೀದಿನಾಯಿಗಳು, ಜಾನುವಾರು ಗಳಿರುವ ಬಸ್ ನಿಲ್ದಾಣ, ಕಾಲನಿ ಸಹಿತ ನಿಗದಿಪಡಿಸಿದ ಸ್ಥಳಗಳಲ್ಲಿ ನಿರ್ದಿಷ್ಟ ಸಮಯದಲ್ಲಿ ಆಹಾರವನ್ನು ದೊಡ್ಡ ಹಾಳೆಯ ತಟ್ಟೆಯಲ್ಲಿ ಮತ್ತು ನೀರನ್ನು ಬಕೆಟ್‌ಗಳಲ್ಲಿ ಇರಿಸಲಾಗುವುದು. ಇದರ ವಿತರಣೆಯನ್ನು ಸ್ಥಳೀಯಾಡಳಿತ ಸಂಸ್ಥೆ ಹಾಗೂ ಗ್ರಾಪಂಗಳ ಸ್ವಚ್ಛತಾ ಸಿಬ್ಬಂದಿ ಮಾಡಲಿದ್ದಾರೆ. ಇವರೊಂದಿಗೆ ಅನೇಕ ಸ್ವಯಂ ಸೇವಕರು ಕೂಡ ಕೈಜೋಡಿಸಿ ಪ್ರಾಣಿಗಳಿಗೆ ಆಹಾರ ನೀಡುವ ಕೆಲಸ ಮಾಡುತ್ತಿದ್ದಾರೆ.
ಈಗಾಗಲೇ ದಿನವೊಂದಕ್ಕೆ ನಿಗದಿಪಡಿಸಿರುವ ಹಣದಲ್ಲಿ ಪಡಿತರ ಅಂಗಡಿ ಅಥವಾ ಇತರ ಮೂಲಗಳಿಂದ ಅಕ್ಕಿಯನ್ನು ಖರೀದಿಸಿ, ಅದನ್ನು ಬೇಯಿಸಲು ಆಯಾ ವ್ಯಾಪ್ತಿಯ ಅಕ್ಷರ ದಾಸೋಹ ಅಡುಗೆಯವರನ್ನು ನೇಮಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಅದೇ ರೀತಿ ಜಾನುವಾರುಗಳಿಗೆ ಸಮಾತೋಲನ ಪಶು ಆಹಾರವನ್ನು ನೀಡುವ ವ್ಯವಸ್ಥೆಯನ್ನು ಹಲವು ಕಡೆಗಳಲ್ಲಿ ಮಾಡಲಾಗಿದೆ.
‘ಈಗಾಗಲೇ ಉಡುಪಿ ನಗರಸಭೆ, ಕಾರ್ಕಳ, ಕುಂದಾಪುರ, ಕಾರ್ಕಳ ಪುರ ಸಭೆ ವ್ಯಾಪ್ತಿಯಲ್ಲಿ ಬೀದಿನಾಯಿಗಳು ಸೇರಿದಂತೆ ಪ್ರಾಣಿ ಹಾಗೂ ಪಕ್ಷಿಗಳಿಗೆ ಆಹಾರ ಮತ್ತು ನೀರು ನೀಡುವ ಕೆಲಸವನ್ನು ಆರಂಭಿಸಲಾಗಿದ್ದು, ಸಾಲಿಗ್ರಾಮ ಪಟ್ಟಣ ಪಂಚಾಯತ್ ಹಾಗೂ ಗ್ರಾಪಂಗಳು ಎ.6 ಅಥವಾ 7ರಿಂದ ಈ ಕೆಲಸವನ್ನು ಆರಂಭಿಸಲಿವೆ’ ಎಂದು ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಹರೀಶ್ ತಮನ್‌ಕರ್ ತಿಳಿಸಿದ್ದಾರೆ.
ಪ್ರಾಣಿಗಳಿಗೆ ಆಹಾರ ಒದಗಿಸುವ ಕೆಲಸ ಎ.14ರವರೆಗೆ ಲಾಕ್‌ಡೌನ್ ಮುಗಿಯುವವರೆಗೆ ನಡೆಸಲಾಗುವುದು. ಅದರ ವೆಚ್ಚವನ್ನು ಸ್ಥಳೀಯಾಡಳಿತ ಸಂಸ್ಥೆ ಹಾಗೂ ಗ್ರಾಪಂಗಳು ಭರಿಸಲಿದೆ. ಈ ಅವಧಿಯಲ್ಲಿ ಇವರಿಗೆ ಸುಮಾರು 6000ರೂ.ವರೆಗೆ ಖರ್ಚು ಬರಬಹುದೆಂದು ಅಂದಾಜಿಸಲಾಗಿದೆ. ಕೆಲವು ಕಡೆಗಳಲ್ಲಿ ಜಿಲ್ಲಾಡಳಿತ ಮಾತ್ರವಲ್ಲದೆ ಇತರ ಸ್ವಯಂ ಸೇವಕರು ಕೂಡ ಕೆಲಸ ಮಾಡುತ್ತಿದ್ದಾರೆ. ಬೆಕ್ಕುಗಳಿಗೆ ಅನ್ನ, ಬಿಸ್ಕಿಟ್ ನೀಡುತ್ತಿದ್ದಾರೆ.
ಡಾ.ಹರೀಶ್ ತಮನ್‌ಕರ್, ಉಪ ನಿರ್ದೇಶಕರು, ಪಶುಪಾಲನಾ ಇಲಾಖೆ, ಉಡುಪಿ