ಪ್ರಾಣಿ ಪ್ರಿಯರಿಂದ ಬೀದಿನಾಯಿಗಳಿಗೆ ಬಾಡೂಟ: ಪ್ರಾಣಿ ಸಂರಕ್ಷಕನಿಂದ ಆಹಾರ ಪೂರೈಕೆ
ಮಂಗಳೂರು, ಎ.20: ಲಾಕ್‌ಡೌನ್‌ನಿಂದಾಗಿ ಜನಸಾಮಾನ್ಯರು ಮಾತ್ರವಲ್ಲದೆ ಪ್ರಾಣಿ ಪಕ್ಷಿಗಳೂ ಆಹಾರಕ್ಕಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ. ಇಂತಹ ಪರಿಸ್ಥಿತಿಯ ನಡುವೆಯೂ ಮಂಗಳೂರು ನಗರ ಹಾಗೂ ಸುತ್ತಮುತ್ತಲಿನ ಬೀದಿನಾಯಿಗಳ ಬಗ್ಗೆ ಯುವಕರ ತಂಡ ಕಾಳಜಿ ವಹಿಸಿ ಬಾಡೂಟವನ್ನೇ ನೀಡುತ್ತಿರುವ ಮೂಲಕ ಗಮನ ಸೆಳೆಯುತ್ತಿದೆ.
ಇದೇ ವೇಳೆ ನಗರ ಹಾಗೂ ಸುತ್ತಮುತ್ತಲಿನ ಪ್ರಾಣಿಪ್ರಿಯರು ತಮ್ಮ ಸುತ್ತಮುತ್ತಲಿನ ನಿರಾಶ್ರಿತ ಪ್ರಾಣಿಗಳಿಗೆ ಸಿದ್ಧ ಆಹಾರ ಒದಗಿಸಲು ಸಾಧ್ಯವಾಗುವಂತೆ ಆಹಾರ ಸಾಮಗ್ರಿಗಳನ್ನು ಪೂರೈಕೆ ಮಾಡುವ ವ್ಯಕ್ತಿಯೂ ನಮ್ಮ ನಗರದಲ್ಲಿದ್ದಾರೆ.
ವಿನ್ಯಾಸ್ ಶೆಟ್ಟಿ, ಕಿರಣ್ ರಾಜ್, ನಿಶಾಲ್ ಪೂಜಾರಿ, ಪವನ್, ಮೋಹನ್ ದಾಸ್ ಎಂಬ ಐವರು ಯುವಕರು ಕೆಲವು ದಿನಗಳಿಂದ ದಿನವೊಂದಕ್ಕೆ ಸುಮಾರು 15 ಕೆಜಿಯಷ್ಟು ಬಾಸ್ಮತಿ ಅಕ್ಕಿಯ ಅನ್ನ ಹಾಗೂ 10 ಕೆಜಿಯಷ್ಟು ಕೋಳಿ ಸಾರು ಮಾಡಿ ಸುಮಾರು 350ರಿಂದ 400ರಷ್ಟು ಬೀದಿ ನಾಯಿಗಳಿಗೆ ಬಾಡೂಟವನ್ನು ನೀಡುತ್ತಿದ್ದಾರೆ. ಇದರ ಜತೆಯಲ್ಲೇ ದಾರಿಯಲ್ಲಿ ಸಿಗುವ ದನ-ಕರುಗಳಿಗೂ ಇವರು ಗಂಜಿ ನೀರು ನೀಡಿ ಆರೈಕೆ ಮಾಡುತ್ತಿದ್ದಾರೆ.
ನಗರದ ತೊಕ್ಕೊಟ್ಟು, ಒಳಪೇಟೆ, ಪಿಲಾರ್, ಕೊಲ್ಯ, ಕೋಟೆಕಾರು, ಮಾಡೂರು, ಕೆ.ಸಿ.ರೋಡ್, ತಲಪಾಡಿ, ಉಚ್ಚಿಲ, ಸೋಮೇಶ್ವರ, ಉಳ್ಳಾಲ ಮೊದಲಾದ ಕಡೆ ಕಾರ್‌ನಲ್ಲಿ ಈ ತಂಡ ಆಹಾರವನ್ನು ಕೊಂಡೊಯ್ದು ಬೀದಿ ನಾಯಿಗಳಿಗೆ ನೀಡುತ್ತಿದೆ. ಇವರ ಕಾರು ಬಂತೆಂದರೆ ಸಾಕು ನಾಯಿಗಳು ಕೂಡಾ ಬಾಲ ಬೀಸುತ್ತಾ ಹಾಜರಾಗಿಬಿಡುತ್ತವೆ.
ಈ ಯುವಕರ ತಂಡದಲ್ಲಿ ಓರ್ವ ಫಿಟ್ನೆಸ್ ಟ್ರೈನರ್ ಆಗಿದ್ದರೆ, ಮತ್ತೋರ್ವ ಎಂಬಿಎ ವಿದ್ಯಾರ್ಥಿ, ಓರ್ವ ಖಾಸಗಿ ಹಣಕಾಸು ಸಂಸ್ಥೆಯ ಉದ್ಯೋಗಿ ಹಾಗೂ ಮತ್ತೋರ್ವ ಸಿವಿಲ್ ಕಾಂಟ್ರಾಕ್ಟರ್. ಪ್ರಾಣಿಗಳ ಮೇಲಿನ ಪ್ರೀತಿಯು ಈ ಯುವಕರಿಗೆ ಲಾಕ್‌ಡೌನ್‌ನ ಹಿನ್ನೆಲೆಯಲ್ಲಿ ಹಸಿದ ಬೀದಿ ಬದಿಯ ಪ್ರಾಣಿಗಳಿಗೆ ಆಹಾರ ನೀಡಲು ಪ್ರೇರಣೆ ನೀಡಿದೆ. ತೊಕ್ಕೊಟ್ಟು ಕಾಪಿಕಾಡ್ ಬಳಿಯ ಕಿರಣ್ ರಾಜ್‌ರವರ ಮನೆಯಲ್ಲಿ ಅವರ ತಾಯಿ ದಮಯಂತಿಯವರ ನೆರವಿನಲ್ಲಿ ಈ ಯುವಕರು ಸೇರಿ ಅನ್ನ, ಸಾರು ತಯಾರಿಸುತ್ತಾರೆ.
ಇದೇ ವೇಳೆ, ಬಿಜೈನ ತೌಸೀಫ್ ಅಹ್ಮದ್ ಎಂಬವರು ಕೆಳವು ದಿನಗಳಿಂದ ನಗರ ಹಾಗೂ ನಗರದ ಸುತ್ತಮುತ್ತಲಲ್ಲಿ ಪ್ರಾಣಿಗಳಿಗೆ ಸಿದ್ಧ ಆಹಾರ ನೀಡುವವರಿಗೆ ಅಕ್ಕಿ, ಹಿಂಡಿ, ಪೆಡಿಗ್ರೀಯಂತಹ ಆಹಾರ ವಸ್ತುಗಳನ್ನು ಅವರು ಪೂರೈಕೆ ಮಾಡುತ್ತಿದ್ದಾರೆ. ಕಳೆದ 10 ದಿನಗಳಲ್ಲಿ 680 ಕೆಜಿಯಷ್ಟು ಆಹಾರ ವಸ್ತುಗಳನ್ನು ಪೂರೈಕೆ ಮಾಡಿರುವ ತೌಸೀಫ್, ದಿನವೊಂದಕ್ಕೆ ಸರಾಸರಿ 30ರಿಂದ 40 ಕೆಜಿಯಷ್ಟು ಆಹಾರವನ್ನು ಬೇಡಿಕೆ ಸಲ್ಲಿಸಿದವರಿಗೆ ಉಚಿತವಾಗಿ ಪೂರೈಕೆ ಮಾಡುತ್ತಿದ್ದಾರೆ.
ವೃತ್ತಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ತೌಸೀಫ್ ಕಳೆದ ಹಲವಾರು ವರ್ಷಗಳಿಂದ ಪ್ರಾಣಿ ಸಂರಕ್ಷರಾಗಿಯೂ ಕೆಲಸ ನಿರ್ವಹಿಸುತ್ತಿದ್ದಾರೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ತಮ್ಮ ಪ್ರದೇಶದ ಸುತ್ತಮುತ್ತಲಿನ ನಾಯಿ, ಬೆಕ್ಕು, ದನ ಕರು ಹಾಗೂ ಪಕ್ಷಿಗಳಿಗೆ ಆಹಾರ ನೀಡುವವರಿಗೆ ತಮ್ಮ ವಾಹನದ ಮೂಲಕ ಆಹಾರ ಸಾಮಗ್ರಿಗಳನ್ನು ಪೂರೈಸುತ್ತಾರೆ.
‘‘ಗೋಶಾಲೆಗಳಿಗೂ ಬೇಡಿಕೆ ಬಂದಲ್ಲಿ ಆಹಾರವನ್ನು ಪೂರೈಸುತ್ತಿದ್ದೇನೆ. ಇಂದು ಕೂಡಾ ಸುಮಾರು 70 ಕೆಜಿಯಷ್ಟು ಆಹಾರ ಸಾಮಗ್ರಿ ಪೂರೈಕೆ ಮಾಡಲಾಗುತ್ತಿದೆ. ನಮ್ಮ ಮನೆ ಸಮೀಪದ ಅಂದರೆ, ಬಿಜೈ, ಜೈಲ್ ರೋಡ್, ಕೊಡಿಯಾಲ್‌ಗುತ್ತು ಬಳಿಯಲ್ಲಿರುವ ಸುಮಾರು 30ರಷ್ಟು ಶ್ವಾನಗಳಿಗೆ ನಾನು ದಿನನಿತ್ಯ ಪೆಡಿಗ್ರೀಯಂತಹ ಆಹಾರವನ್ನು ನೀಡುತ್ತಿದ್ದೇನೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಪ್ರಾಣಿ ಪಕ್ಷಿಗಳ ಬಗ್ಗೆಯೂ ನಾವು ಕಾಳಜಿ ವಹಿಸಬೇಕಾಗುತ್ತದೆ’’.
* ತೌಸೀಫ್ ಅಹ್ಮದ್
‘‘ನಾವು ಅಪರಾಹ್ನ 3 ಗಂಟೆಯ ಹೊತ್ತಿಗೆ ಪ್ರಾಣಿಗಳಿಗೆ ಆಹಾರ ಹಾಕಲು ಆರಂಭಿಸುತ್ತೇವೆ. ತೊಕ್ಕೊಟ್ಟಿನಿಂದ ಆರಂಭಿಸಿ ತಲಪಾಡಿವರೆಗೆ, ಅಲ್ಲಿಂದ ಉಚ್ಚಿಲ, ಸೋಮೇಶ್ವರ, ಉಳ್ಳಾಲ, ಪಿಲಾರ್, ಮಾಡೂರು, ದೇರಳಕಟ್ಟೆ ಹೀಗೆ ಬೀದಿ ಬದಿಯಲ್ಲಿ ಸಿಗುವ ನಾಯಿಗಳು, ಬೆಕ್ಕಿಗೆ ಚಿಕನ್ ಕರಿ ಹಾಗೂ ಅನ್ನ ನೀಡಿದರೆ, ದನಕರುಗಳಿಗೆ ಗಂಜಿ ನೀರು ಕೊಡುತ್ತೇವೆ. ಸಂಜೆ 7ರಿಂದ 8ರವರೆಗೆ ನಮ್ಮ ಈ ಕಾರ್ಯ ಸಾಗುತ್ತದೆ. ನಮ್ಮ ಸ್ನೇಹಿತರೆಲ್ಲಾ ಸೇರಿ ಹಣ ಸಂಗ್ರಹಿಸಿ ಈ ಕಾರ್ಯವನ್ನು ಮಾಡುತ್ತಿದ್ದೇವೆ’’.
-ವಿನ್ಯಾಸ್ ಶೆಟ್ಟಿ