ಕೊರೋನ : ಗಲ್ಫ್ ಕನ್ನಡಿಗರ ಗೋಳು ಕೇಳುವವರಾರು ?

Update: 2020-04-20 17:35 GMT
ಫೈಲ್ ಫೋಟೊ

ಮಂಗಳೂರು, ಎ.20: ಕೊರೋನ ವೈರಸ್ ತಡೆಗಟ್ಟುವ ಸಲುವಾಗಿ ಕೇಂದ್ರ ಮತ್ತು ಆಯಾ ರಾಜ್ಯ ಸರಕಾರಗಳು ಹಾಗೂ ಜಿಲ್ಲಾಡಳಿತವು ಕಟ್ಟುನಿಟ್ಟಾಗಿ ಅಂತರ್ ಜಿಲ್ಲೆ, ಅಂತರ್ ರಾಜ್ಯ ಮತ್ತು ಅಂತರ್ ದೇಶಗಳ ಗಡಿ ಬಂದ್ ಮಾಡಿರುವುದು ಕಳೆದೊಂದು ತಿಂಗಳಿನಿಂದ ಭಾರೀ ಸಮಸ್ಯೆಗೆ ಸಿಲುಕಿರುವ ಅನಿವಾಸಿ ಕನ್ನಡಿಗರಿಗೆ ಅದರಲ್ಲೂ ಕರಾವಳಿಯ ಕನ್ನಡಿಗರಿಗೆ ತೊಡಕಾಗಿ ಪರಿಣಮಿಸಿದೆ.

ಒಂದೆಡೆ ಉದ್ಯೋಗವಿಲ್ಲ, ಇನ್ನೊಂದೆಡೆ ವೇತನ ಆಗಿಲ್ಲ, ಮತ್ತೊಂದೆಡೆ ಊಟ-ವಸತಿಯ ವ್ಯವಸ್ಥೆ ಇಲ್ಲ, ರೂಂ ಬಾಡಿಗೆಯೂ ಪಾವತಿಸಿಲ್ಲ... ಹೀಗೆ ನೂರಾರು ಸಮಸ್ಯೆಗಳ ಮಧ್ಯೆ ಲಕ್ಷಾಂತರ ಗಲ್ಫ್ ಕನ್ನಡಿಗರು ಅತ್ತ ಅಲ್ಲಿರಲೂ ಆಗದೆ, ಇತ್ತ ತವರೂರಿಗೂ ಬರಲಾಗದೆ ಅತಂತ್ರ ಸ್ಥಿತಿಯಲ್ಲಿದ್ದಾರೆ. ‘ತಕ್ಷಣ ನಿಮ್ಮವರನ್ನು ಕರೆಸಿಕೊಳ್ಳಿ’ ಎಂದು ಗಲ್ಫ್ ರಾಷ್ಟ್ರಗಳು ಹೇಳಿಕೊಂಡರೂ ಕೂಡ ಕೇಂದ್ರ ಸರಕಾರವು ಈ ಬಗ್ಗೆ ಇನ್ನೂ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ. ಹಾಗಾಗಿ ಗಲ್ಫ್ ಕನ್ನಡಿಗರ ಬವಣೆ ಸದ್ಯಕ್ಕೆ ಮುಗಿಯುವ ಯಾವ ಲಕ್ಷಣಗಳು ಕಾಣಿಸುತ್ತಿಲ್ಲ.

ವಿಸಿಟಿಂಗ್ ವೀಸಾದಲ್ಲಿ ಹೋದ ಸಾವಿರಾರು ಮಂದಿ ಕೆಲಸ ಸಿಗದೆ ಹತಾಶೆಯಲ್ಲಿರುವ ಕಥೆಗಳು ಒಂದೆಡೆಯಾದರೆ, ಕೆಲವು ತಿಂಗಳ ಹಿಂದೆಯೇ ಉಮ್ರಾ ಯಾತ್ರೆಗೆ ತೆರಳಿ ಮರಳಿ ಬರಲಾಗದವರ ವ್ಯಥೆಗಳು ಇನ್ನೊಂದೆಡೆ. ಆ ಪೈಕಿ ಅನೇಕ ಮಂದಿ ರೋಗಪೀಡಿತರಿದ್ದಾರೆ, ಗರ್ಭಿಣಿಯರಿದ್ದಾರೆ, ಎಳೆಯ ಮಕ್ಕಳಿದ್ದಾರೆ. ವಯಸ್ಕರಿಗಂತೂ ಅಲ್ಲಿನ ವಾತಾವರಣ ಒಗ್ಗುತ್ತಿಲ್ಲ. ಇವೆಲ್ಲದರ ಮಧ್ಯೆ ಲಾಕ್‌ಡೌನ್‌ನಿಂದಾಗಿ ವಿಮಾನ ಹಾರಾಟ ಸ್ಥಗಿತಗೊಂಡ ಕಾರಣ ಸಣ್ಣಪುಟ್ಟ ಅಂಗಡಿಗಳಲ್ಲಿ ಕೆಲಸ ಮಾಡುವವರು, ವಾಹನ ಚಾಲಕರು ಮರಳಿ ಬರಲಾಗದೆ ಆತಂಕದ ಕ್ಷಣಗಳನ್ನು ಎದುರಿಸುತ್ತಿದ್ದಾರೆ.

ಹೆಚ್ಚಿನವರಿಗೆ ಸಮಯಕ್ಕೆ ಸರಿಯಾಗಿ ಸಂಬಳವಾಗುತ್ತಿಲ್ಲ, ಕೆಲವರಿಗೆ ಸಂಬಳವಾದರೂ ಕೂಡ ಅದರಲ್ಲೂ ಕಡಿತ ಮಾಡಲಾಗಿದೆ. ಭಾಗಶಃ ವ್ಯಾಪಾರ ವಹಿವಾಟು, ಬ್ಯಾಂಕಿಂಗ್ ಕ್ಷೇತ್ರಗಳು ಸ್ತಬ್ಧಗೊಂಡ ಕಾರಣ ಸಿಕ್ಕಿದ ಸಂಬಳವನ್ನು ಮನೆಗೆ ಕಳುಹಿಸಿಕೊಡಲಾಗದ ಸ್ಥಿತಿಯೂ ಎದುರಾಗಿದೆ. ಹಾಗಾಗಿ ಗಲ್ಫ್ ಕನ್ನಡಿಗರ ಕುಟುಂಬಸ್ಥರು ಊರಲ್ಲಿ ಇತರರಲ್ಲಿ ಸಾಲ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಮಧ್ಯೆ ಲಾಕ್‌ಡೌನ್‌ನಿಂದ ಉಂಟಾಗುವ ನಷ್ಟವನ್ನು ಕಡಿಮೆಗೊಳಿಸುವುದಕ್ಕಾಗಿ ಕಂಪೆನಿಗಳು ಸಿಬ್ಬಂದಿಯನ್ನು ವೇತನ ರಹಿತ ರಜೆಯಲ್ಲಿ ಕಳುಹಿಸುತ್ತಿವೆ. ಗಂಟೆಯ ಆಧಾರದಲ್ಲಿ ವೇತನ ಪಡೆಯುವವರ ಕೆಲಸದ ಅವಧಿಯನ್ನು ಕೂಡ ಕಡಿತಗೊಳಿಸುತ್ತಿವೆ. ವಿಸಿಟಿಂಗ್ ವೀಸಾದಲ್ಲಿ ಕುಟುಂಬವನ್ನು ಕರೆ ತಂದು ಇದೀಗ ಉದ್ಯೋಗವನ್ನೂ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ ನೂರಾರು ಮಂದಿ ಸಮಸ್ಯೆಯನ್ನು ನಿಭಾಯಿಸಲಾಗದೆ ಕಣ್ಣೀರಿಳಿಸುತ್ತಿದ್ದಾರೆ.

ಗಲ್ಫ್ ರಾಷ್ಟ್ರಗಳಾದ ಯುಎಇ, ಸೌದಿ ಅರೇಬಿಯಾ, ಕುವೈತ್, ಒಮಾನ್, ಬಹರೈನ್ ಮತು ಕತರ್‌ನಲ್ಲಿ ಲಕ್ಷಾಂತರ ಅನಿವಾಸಿ ಕನ್ನಡಿಗರು ವಿವಿಧ ಕಡೆ ಕೆಲಸ ಮಾಡುತ್ತಿದ್ದರು. ಆ ಪೈಕಿ ಹೆಚ್ಚಿನವರು ಉದ್ಯೋಗ ಕಳೆದುಕೊಂಡು ದೈನಂದಿನ ಖರ್ಚು ನಿಭಾಯಿಸಲಾಗದೆ ಪರಿತಪಿಸುತ್ತಿದ್ದಾರೆ.

ಲಾಕ್‌ಡೌನ್‌ನಿಂದಾಗಿ ಗಲ್ಫ್ ರಾಷ್ಟ್ರಗಳಲ್ಲಿ ಉದ್ಯಮವೂ ನೆಲಕ್ಕಚ್ಚಿವೆ. ಇದರಿಂದ ಸಾವಿರಾರು ಮಂದಿ ಕೆಲಸ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಸದ್ಯ ಕೆಲಸ ಕಳಕೊಂಡರೂ ಸರಿ, ಹೇಗಾದರು ಮಾಡಿ ಊರಿಗೆ ಮರಳಬೇಕು ಎಂದು ತವಕಿಸುವವರೇ ಅಧಿಕ. ಸಂಕಷ್ಟದಲ್ಲಿರುವ ಅನಿವಾಸಿ ಕನ್ನಡಿಗರನ್ನು ಊರಿಗೆ ಕಳುಹಿಸಿಕೊಡುವ ನಿಟ್ಟಿನಲ್ಲಿ ಗಲ್ಫ್ ರಾಷ್ಟ್ರಗಳು ಮಾತ್ರವಲ್ಲ ಕರಾವಳಿಯ ಜಿಲ್ಲೆಗಳಲ್ಲೂ ವಿವಿಧ ಸಂಘಟನೆಗಳು ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರಿಗೆ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುತ್ತಲೇ ಇವೆ. ಆದರೆ, ಗಲ್ಫ್ ರಾಷ್ಟ್ರಗಳ ಅನಿವಾಸಿ ಕನ್ನಡಿಗರ ಗೋಳು ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ.

ಕೆಲವು ಕಡೆ ಒಂದೇ ಕೋಣೆಯನ್ನು ಏಳೆಂಟು ಅನಿವಾಸಿ ಕನ್ನಡಿಗ ಕಾರ್ಮಿಕರು ಹಂಚಿಕೊಂಡು ವಾಸಿಸುತ್ತಿರುವುದು ಸಾಮಾನ್ಯವಾಗಿದೆ. ಈ ಸಂದರ್ಭ ‘ಸುರಕ್ಷಿತ ಅಂತರ’ವು ಸವಾಲಾಗಿ ಪರಿಣಮಿಸಿದೆ. ಈ ಮಧ್ಯೆ ವೈರಸ್ ಪೀಡಿತ ಮತ್ತು ಶಂಕಿತ ಭಾರತೀಯ ಅನಿವಾಸಿಗಳ ಕ್ವಾರಂಟೈನ್ ಸೌಲಭ್ಯ ಮತ್ತು ಚಿಕಿತ್ಸೆಯ ಕುರಿತು ಖಾತರಿಪಡಿಸುವಂತೆ ಭಾರತ ಸರಕಾರವು ರಾಯಭಾರಿ ಕಚೇರಿಗೆ ಸೂಚಿಸಬೇಕು ಎಂದು ವಿವಿಧ ಅನಿವಾಸಿ ಭಾರತೀಯ ಸಂಘಟನೆಗಳು ಆಗ್ರಹ ವ್ಯಕ್ತಪಡಿಸಿವೆ. ಆದರೆ, ಈ ಬೇಡಿಕೆಗೆ ಇನ್ನೂ ಸರಿಯಾದ ಸ್ಪಂದನೆ ಸಿಕ್ಕಿಲ್ಲ.

ಕ್ವಾರಂಟೈನ್‌ಗೆ ಕಟ್ಟಡ ಬಿಟ್ಟುಕೊಡಲು ಮುಂದೆ ಬಂದ ಸಂಸ್ಥೆಗಳು

ಸ್ವದೇಶಕ್ಕೆ ಮರಳಿದವರಿಗೆ ಕ್ವಾರಂಟೈನ್ ಅವಧಿ ಮುಗಿಯುವ ತನಕ ವಿವಿಧ ಮುಸ್ಲಿಂ ಶಿಕ್ಷಣ ಸಂಸ್ಥೆಗಳು ತಮ್ಮ ಅಧೀನದ ಕಟ್ಟಡಗಳು, ಧಾರ್ಮಿಕ ಕೇಂದ್ರಗಳು ಮತ್ತು ಶಾಲಾ-ಕಾಲೇಜು ಕಟ್ಟಡಗಳನ್ನು ಬಿಟ್ಟುಕೊಡಲು ಮುಂದೆ ಬಂದಿವೆ. ಅದನ್ನು ಸದುಪಯೋಗಪಡಿಸಿಕೊಳ್ಳುವ ಹೊಣೆಯು ಸರಕಾರದ್ದಾಗಿವೆ ಎಂಬ ಮಾತು ಸ್ಥಳೀಯವಾಗಿ ವ್ಯಕ್ತವಾಗುತ್ತಿದೆ.

ಆಸಕ್ತಿ ತೋರದ ಕೇಂದ್ರ-ರಾಜ್ಯ ಸರಕಾರಗಳು: ಆರೋಪ

ಅನಿವಾಸಿ ಗಲ್ಫ್ ಭಾರತೀಯರನ್ನು ವಾಪಸ್ ಕರೆತರಲು ಕೇಂದ್ರ ಸರಕಾರಗಳು ಆಸಕ್ತಿ ತೋರಿದಂತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ಈ ಮಧ್ಯೆ ಅನಿವಾಸಿ ಕನ್ನಡಿಗರು ಕೂಡ ಇದೇ ಆರೋಪವನ್ನು ವ್ಯಕ್ತಪಡಿಸುತ್ತಿದ್ದಾರೆ. ಕರ್ನಾಟಕ ಸರಕಾರವು ಕೇಂದ್ರದ ಮೇಲೆ ಒತ್ತಡ ಹೇರಬೇಕು. ಕನ್ನಡಿಗರ ಪೈಕಿ ಕರಾವಳಿ ಕನ್ನಡಿಗರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಹಾಗಾಗಿ ಈ ಭಾಗದ ಸಂಸದರು, ಸಚಿವರು ಮುಖ್ಯಮಂತ್ರಿಯ ಮೇಲೆ ಒತ್ತಡ ಹಾಕಬೇಕು ಮತ್ತು ಮುಖ್ಯಮಂತ್ರಿಯು ಕೇಂದ್ರದ ಮೇಲೆ ಒತ್ತಡ ಹಾಕಲು ಸ್ಥಳೀಯ ಜನಪ್ರತಿನಿಧಿಗಳು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಯತ್ನ ಸಾಗಿದೆ: ನಳಿನ್ ಕುಮಾರ್ ಕಟೀಲು

ಅನಿವಾಸಿ ಕನ್ನಡಿಗರ ಅದರಲ್ಲೂ ಅನಿವಾಸಿ ಕರಾವಳಿ ಕನ್ನಡಿಗರು ಎದುರಿಸುವ ಸಮಸ್ಯೆಯ ಬಗ್ಗೆ ತಿಳಿದುಕೊಂಡಿದ್ದೇನೆ. ಈ ಬಗ್ಗೆ ಮುಖ್ಯಮಂತ್ರಿಯ ಜೊತೆಯೂ ಚರ್ಚೆ ನಡೆಸಿದ್ದೇನೆ. ಕೇಂದ್ರ ಸರಕಾರದ ಗಮನವನ್ನೂ ಸೆಳೆದಿದ್ದೇನೆ. ಸದ್ಯ ಅವರಿಗೆ ಊಟ, ವಸತಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು. ಅವರನ್ನು ತವರೂರಿಗೆ ಕರೆತರುವ ಪ್ರಯತ್ನ ನಡೆಸಲಾಗುತ್ತಿದೆ.
- ನಳಿನ್ ಕುಮಾರ್ ಕಟೀಲು,
ಸಂಸದ ದ.ಕ.ಜಿಲ್ಲೆ

ಅಂತರ್ ಗಡಿ ಬಂದ್‌ನದ್ದೇ ಸಮಸ್ಯೆ : ಕೋಟ ಶ್ರೀನಿವಾಸ ಪೂಜಾರಿ

ಕರಾವಳಿ ಕನ್ನಡಿಗರನ್ನು ತವರೂರಿಗೆ ಕರೆತರಬೇಕು ಎಂಬ ಉದ್ದೇಶ ಸರಕಾರಕ್ಕಿದೆ. ಆದರೆ, ಈಗ ಅಂತರ್ ಗಡಿ ಬಂದ್‌ನದ್ದೇ ಸಮಸ್ಯೆ ಯಾಗಿದೆ. ಲಾಕ್‌ಡೌನ್‌ನಿಂದಾಗಿ ಅಂತರ್ ಜಿಲ್ಲೆ, ಅಂತರ್ ರಾಜ್ಯ, ಅಂತರ್ ದೇಶದ ಗಡಿ ಮುಚ್ಚಲಾಗಿದೆ. ಎಲ್ಲಿಯವರೆಗೆ ಅಂದರೆ, ಅಕ್ಕಪಕ್ಕದ ಜಿಲ್ಲೆಯ ಜನರನ್ನು ಅತ್ತಿತ್ತ ಕರೆಸಿಕೊಳ್ಳಲು ಮಾತ್ರವಲ್ಲ, ಬೇರೆ ಬೇರೆ ಕಾರಣಕ್ಕಾಗಿ ಈ ಹಿಂದೆ ಇತರ ಜಿಲ್ಲೆಗೆ ಹೋದವರನ್ನು ಕೂಡ ವಾಪಸ್ ತವರು ಜಿಲ್ಲೆಗೆ ಕರೆತರದಂತೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ. ಹಾಗಾಗಿ ಗಲ್ಫ್ ರಾಷ್ಟ್ರಗಳಲ್ಲಿರುವ ಅನಿವಾಸಿ ಕನ್ನಡಿಗರನ್ನು ಸದ್ಯಕ್ಕೆ ವಾಪಸ್ ಕರೆತರುವುದು ಸಮಂಜಸವಲ್ಲ. ಇದು ಗಲ್ಫ್ ಕನ್ನಡಿಗರ ವಿಷಯದಲ್ಲಿ ಮಾತ್ರವಲ್ಲ, ಸಾಕಷ್ಟು ಸಂಖ್ಯೆಯ ಮುಂಬೈ ಕನ್ನಡಿಗರು ಕೂಡ ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಜಿಲ್ಲೆಯ ಅದೆಷ್ಟೋ ಸಂಸ್ಥೆಗಳು, ಹೊಟೇಲ್‌ಗಳು, ಧಾರ್ಮಿಕ ಕೇಂದ್ರಗಳು ಸ್ವ ಆಸಕ್ತಿಯಿಂದ ಕ್ವಾರಂಟೈನ್‌ಗೆ ವ್ಯವಸ್ಥೆ ಕಲ್ಪಿಸಿಕೊಡುವ ಬಗ್ಗೆ ಆಸಕ್ತಿ ವಹಿಸಿದರೂ ಕೂಡ ಹೊರ ಜಿಲ್ಲೆ, ರಾಜ್ಯ, ವಿದೇಶದಲ್ಲಿರುವವರನ್ನು ಕರೆತರಲು ಕೆಲವು ತಾಂತ್ರಿಕ ಸಮಸ್ಯೆ ಗಳು ಕೂಡ ಅಡ್ಡಿಯಾಗುತ್ತಿವೆ. ಆದಾಗ್ಯೂ ಪ್ರಯತ್ನ ಮುಂದುವರಿಯಲಿದೆ. ಸದ್ಯ ಗಲ್ಫ್ ರಾಷ್ಟ್ರಗಳಲ್ಲಿರುವ ಅನಿವಾಸಿ ಕನ್ನಡಿಗರಿಗೆ ಊಟ, ವಸತಿಯ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು.
- ಕೋಟ ಶ್ರೀನಿವಾಸ ಪೂಜಾರಿ
ದ.ಕ.ಜಿಲ್ಲಾ ಉಸ್ತುವಾರಿ ಸಚಿವರು

ರಾಜ್ಯ ಸರಕಾರ ಇಚ್ಛಾಶಕ್ತಿ ಪ್ರದರ್ಶಿಸಬೇಕು: ಡಾ. ಆರತಿ ಕೃಷ್ಣ

ಸಂಕಷ್ಟದಲ್ಲಿರುವ ಅನಿವಾಸಿ ಕನ್ನಡಿಗರನ್ನು ವಾಪಸ್ ಕರೆತರಲು ರಾಜ್ಯ ಸರಕಾರ ಇಚ್ಛಾಶಕ್ತಿ ಪ್ರದರ್ಶಿಸಬೇಕು. ಆದರೆ, ಸರಕಾರ ಈ ಬಗ್ಗೆ ಇನ್ನೂ ಸೂಕ್ತ ನಿರ್ಧಾರ ತೆಗೆದುಕೊಂಡಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಅನಿವಾಸಿ ಕನ್ನಡಿಗರಿಗೆ ಸಂಕಷ್ಟದ ಈ ಸಮಯದಲ್ಲಿ ರಾಜ್ಯ ಸರಕಾರದ ಮೇಲೆ ಒತ್ತಡ ಹೇರಲು ಯಾರ ಜೊತೆ ಸಂವಹನ ಸಾಧಿಸಬೇಕು ಎಂದು ಕೂಡ ತಿಳಿದಿಲ್ಲ. ಯಾಕೆಂದರೆ ಇದರ ಬಗ್ಗೆ ನಿರ್ದಿಷ್ಟ ವ್ಯಕ್ತಿಗೆ ಜವಾಬ್ದಾರಿಯನ್ನೂ ನೀಡಿಲ್ಲ. ಬೇರೆ ಬೇರೆ ಟಾಸ್ಕ್‌ಫೋರ್ಸ್ ಸಮಿತಿಗಳನ್ನು ರಚಿಸಿದರೂ ಕೂಡ ಅನಿವಾಸಿ ಕನ್ನಡಿಗರ ಸಮಸ್ಯೆಗೆ ಸ್ಪಂದಿಸುವ ಸಲುವಾಗಿ ಪ್ರತ್ಯೇಕ ಸಮಿತಿಯನ್ನು ರಚಿಸದಿರುವುದು ವಿಷಾದನೀಯ.
- ಡಾ. ಆರತಿ ಕೃಷ್ಣ, ಮಾಜಿ ಉಪಾಧ್ಯಕ್ಷೆ
ಅನಿವಾಸಿ ಭಾರತೀಯ ಸಮಿತಿ

ತಾಯ್ನಡಿಗೆ ಮರಳಲು ಇಚ್ಛಿಸುವ ಅನಿವಾಸಿ ಕನ್ನಡಿಗರನ್ನು ತವರಿಗೆ ಕರೆತರಲು ಸರಕಾರ ವ್ಯವಸ್ಥೆ ಕಲ್ಪಿಸಬೇಕು. ಅದಕ್ಕಾಗಿ ವಿಶೇಷ ವಿಮಾನದ ವ್ಯವಸ್ಥೆಯನ್ನು ಮಾಡಬೇಕು. ಯಾವ ಕಾರಣಕ್ಕೂ ವಿಮಾನ ಯಾನದ ದರವು ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಇಲ್ಲಿನ ಬಹುತೇಕ ಜನರು ಮಾನಸಿಕ ಖಿನ್ನತೆಗೊಳಗಾಗಿದ್ದಾರೆ. ಹಾಗಾಗಿ ಸರಕಾರ ಆದಷ್ಟು ಬೇಗ ಅನಿವಾಸಿ ಕನ್ನಡಿಗರನ್ನು ಕರೆತರಲು ವ್ಯವಸ್ಥೆ ಕಲ್ಪಿಸದಿದ್ದರೆ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು.

- ಇಬ್ರಾಹೀಂ ಕನ್ನಂಗಾರ್, ಸಂಯೋಜಕರು,
ಎನ್‌ಆರ್‌ಐ ಕಾಂಗ್ರೆಸ್ ಸೆಲ್ 

Writer - ಹಂಝ ಮಲಾರ್

contributor

Editor - ಹಂಝ ಮಲಾರ್

contributor

Similar News