ಪಿಪಿಇ ಹಾಕಿ ನೀರೂ ಕುಡಿಯುವಂತಿಲ್ಲ, ಶೌಚಕ್ಕೂ ಹೋಗುವಂತಿಲ್ಲ
ಮಂಗಳೂರು, ಎ.25: ಕೊರೋನ ಸೋಂಕು ಬಹುತೇಕ ಜಗತ್ತನ್ನೇ ತನ್ನ ಕಪಿಮುಷ್ಠಿಯೊಳಗೆ ಬಂಧಿಸಿ ಜನಜೀವನಕ್ಕೆ ಆತಂಕವನ್ನು ಸೃಷ್ಟಿಸಿರುವ ಜೊತೆಯಲ್ಲೇ, ಸೋಂಕಿತರ ಚಿಕಿತ್ಸೆ, ಆರೈಕೆ ಮಾಡುವವರ ಪಾಡು ಮಾತ್ರ ನಿಜಕ್ಕೂ ಶೋಚನೀಯ. ತಮ್ಮ ಜೀವವನ್ನೇ ಪಣಕ್ಕಿಟ್ಟು ಸೇವೆ ಸಲ್ಲಿಸುವ ಈ ಆರೋಗ್ಯ ಕಾರ್ಯಕರ್ತರು ಸೇವೆಯ ಸಂದರ್ಭ ಧರಿಸುವ ಪಿಪಿಇ ಕಿಟ್ ಅವರ ದೇಹವನ್ನೇ ಹೈರಾಣಾಗಿಸಿ ಬಿಡುತ್ತದೆ.
ಒಂದು ಬಾರಿ ಮಾತ್ರ ಕನಿಷ್ಠ 6 ರಿಂದ 12 ಗಂಟೆಯವರೆಗೆ ವೈದ್ಯರೂ ಸೇರಿದಂತೆ ಕೊರೋನ ಸೋಂಕಿತರ ಸೇವೆಗೈಯುವ ದಾದಿಯರು, ಆಯಾ ಗಳು ಹಾಕಲೇಬೇಕಾದ ಈ ಪಿಪಿಇ ಕಿಟ್ ಹಾಕಿದ ಬಳಿಕ ಅನ್ನ ಆಹಾರ ತೆಗೆದುಕೊಳ್ಳುವುದು ಇರಲಿ, ನೀರು ಕುಡಿಯುವುದಾಗಲಿ, ತನ್ನ ದೇಹದ ನೈಸರ್ಗಿಕ ಕರೆಗಳಿಗೂ ಸ್ಪಂದಿಸುವ ಹಾಗಿಲ್ಲ.
ಕೊರೋನ ಚಿಕಿತ್ಸಾ ವಾರ್ಡ್‌ಗಳಲ್ಲಿ ಕಾರ್ಯ ನಿರ್ವಹಿಸುವವರು ಹಾಗೂ ಆ್ಯಂಬುಲೆನ್ಸ್‌ಗಳಲ್ಲಿ ಸೋಂಕಿತರು ಅಥವಾ ಸೋಂಕಿತ ಮೃತದೇಹಗಳ ವಿಲೇವಾರಿಗೆ ಕೊಂಡೊಯ್ಯುವ ಚಾಲಕರು-ನಿರ್ವಾಹಕರು ಪಿಪಿಇ ಕಿಟ್ ಧರಿಸಬೇಕಾಗುತ್ತದೆ.
ಪರ್ಸನಲ್ ಪ್ರೊಟೆಕ್ಟಿವ್ ಇಕ್ವಿಪ್‌ಮೆಂಟ್(ಪಿಪಿಇ) -ವೈಯಕ್ತಿಕ ರಕ್ಷಣಾ ಸಲಕರಣೆ ಎಂಬ ಈ ಕಿಟ್, ಒಂದು ಬಾರಿ ಬಳಸಿದ ಬಳಿಕ ಇದನ್ನು ವಿಲೇ ವಾರಿ ಮಾಡಬೇಕಾಗುತ್ತದೆ. ಈ ಕಿಟ್ ಬಳಸುವವರು ಕನಿಷ್ಠ 6ರಿಂದ ಗರಿಷ್ಠ 12 ಗಂಟೆಯವರೆಗೆ ಬಳಸುತ್ತಾರೆ. ಬಹುತೇಕವಾಗಿ ಸದ್ಯ ಕನಿಷ್ಠ 6ರಿಂದ 8 ಗಂಟೆಯ ಶಿಫ್ಟ್‌ಗಳಲ್ಲಿ ಆಸ್ಪತ್ರೆಗಳಲ್ಲಿ ಕೊರೋನ ಸೋಂಕಿತರಿಗೆ ಐಸೋಲೇಶನ್ ವ್ಯವಸ್ಥೆಯಡಿ ಚಿಕಿತ್ಸೆ ಒದಗಿಸಲಾಗುತ್ತದೆ. ಆದರೆ ಸೋಂಕಿತರ ಸಂಖ್ಯೆ ಹೆಚ್ಚಾಗಿರುವ ಕೆಲವೊಂದು ಆಸ್ಪತ್ರೆಗಳಲ್ಲಿ ಗರಿಷ್ಠ 12 ಗಂಟೆಯವರೆಗೂ ಪಿಪಿಇ ಕಿಟ್ ಮೈ ಮೇಲೆ ಹೇರಿಕೊಂಡು ಈ ಆರೋಗ್ಯ ಕಾರ್ಯಕರ್ತರು ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಕಾರಣ, ಒಮ್ಮೆ ಕಿಟ್ ಮೈಯಿಂದ ತೆಗೆಯುವುದೆಂದರೆ ಅದನ್ನು ವಿಲೇವಾರಿ ಮಾಡಬೇಕಾಗುತ್ತದೆ. ಮತ್ತೆ ಅದನ್ನು ಉಪಯೋಗಿಸುವಂತಿಲ್ಲ. ಅದನ್ನು ಹಾಕಬೇಕೆಂದರೆ ಕನಿಷ್ಠ 5ರಿಂದ 10 ನಿಮಿಷಗಳು ಬೇಕು. ಝಿಪ್ ಮಾದರಿ ಅಥವಾ ಕಟ್ಟುವ ರೀತಿಯ ವಿವಿಧ ಕಂಪೆನಿಯ ವಿವಿಧ ರೀತಿಯ ಪಿಪಿಇ ಕಿಟ್‌ಗಳು ಸದ್ಯ ಲಭ್ಯವಿದೆ. ಕಾಲಿನ ಗವಚ, ಕೈ ಗವಚ, ಮುಖ ಗವಚ ಹಾಗೂ ಮೈಮೇಲೆ ಹಾಕಲಾಗುವ ಕವಚ ಇವುಗಳೆಲ್ಲವೂ ಮೂರು ಪದರ ಗಳನ್ನು (ಲೇಯರ್) ಹೊಂದಿರುತ್ತದೆ. ಇಷ್ಟೆಲ್ಲಾ ಮೈ ಮೇಲೆ ಹಾಕಿಕೊಂಡು ಕನಿಷ್ಠ ಉಸಿರಾಟಕ್ಕೂ ತೊಂದರೆ ಅನುಭವಿಸಬೇಕಾದ ಪರಿಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸುವ ಈ ಆರೋಗ್ಯ ಸೇವಕರ ಕಾರ್ಯ ಮಾತ್ರ ಯಾವ ಸಾಧನೆಗಿಂತಲೂ ಕಡಿಮೆಯೇನಲ್ಲ.
ಸಾಮಾನ್ಯ ಮನುಷ್ಯ ಮುಖಗವಚವನ್ನು ಕನಿಷ್ಠ 1 ಗಂಟೆ ಹಾಕಿದರೂ ಬೆವರು ಹಾಗೂ ಉಸಿರಾಟದ ತೊಂದರೆಯಿಂದ ಕಷ್ಟಪಡುವ ಪರಿಸ್ಥಿತಿ. ಈ ನಡುವೆ, ಕೊರೋನ ಸೋಂಕಿತರಿಗೆ ಚಿಕಿತ್ಸೆ ನೀಡುವ ಇವರು ಕನಿಷ್ಠ 6 ಗಂಟೆ ಮೂರು ಪದರಗಳ ಈ ಪಿಪಿಇ ಕಿಟ್ ಧರಿಸಿ ಯಾವ ರೀತಿಯ ನರಕಯಾತನೆ ಅನುಭವಿಸುತ್ತಾರೆಂಬುದನ್ನು ಊಹಿಸುವುದೂ ಕಷ್ಟಸಾಧ್ಯ.
ಈ ಕಿಟ್ ಮೈಮೇಲೆ ಹಾಕಿದ ಬಳಿಕ ಮಾನವ ಸಹಜ ಅಗತ್ಯಗಳಾದ ಆಹಾರ, ನೀರು, ಶುದ್ಧ ಗಾಳಿ, ಶೌಚಾಲಯ ಬಳಕೆ ಎಲ್ಲವನ್ನೂ ಮರೆತು ಬಿಡಬೇಕಾಗುತ್ತದೆ. ಅಷ್ಟು ಮಾತ್ರವಲ್ಲ, ಒಂದು ಶಿಫ್ಟ್‌ನ ಅವಧಿಯಲ್ಲಿ ಒಂದು ಪಿಪಿಇ ಕಿಟ್ ಮಾತ್ರ ಬಳಸಬೇಕಾಗಿರುವು ದರಿಂದ ಶೌಚಾಲಯ ಬಳಸುವುದಕ್ಕೆ ಪರ್ಯಾಯವಾಗಿ ಹಿರಿಯರು ಬಳಸುವ ಡೈಪರ್‌ಗಳನ್ನು ಉಪಯೋಗಿಸಬೇಕಾದ ಪ್ರಮೇಯವೂ ಇದೆ.
ಪಿಪಿಇ ಕಿಟ್ ಹೆಲ್ಮೆಟ್ ರೀತಿಯ ಮುಖಗವಚವನ್ನು ಕೂಡಾ ಹೊಂದಿದ್ದು, ವಾರ್ಡ್‌ನೊಳಗೆ ಒಬ್ಬರಿಗೊಬ್ಬರು ಪರಿಚಯವೇ ಸಿಗದ ಪರಿಸ್ಥಿತಿ ಒಂದೆಡೆಯಾದರೆ, ಒಬ್ಬರಿಗೊಬ್ಬರು ಸಂಭಾಷಣೆಗೂ ಸಮಸ್ಯೆಯೇ. ಪಿಪಿಇ ಕಿಟ್‌ನೊಳಗಿಂದ ಮಾತನಾಡುವ ಧ್ವನಿ ಎದುರಿನವರಿಗೆ ಕೇಳಿಸು ವುದು ಕಷ್ಟ. ಒಟ್ಟನಲ್ಲಿ ಇದನ್ನು ಧರಿಸಿ ಕರ್ತವ್ಯ ನಿರ್ವಹಿಸುವ ಕೊರೋನ ವಿರುದ್ಧದ ಹೋರಾಟಗಾರರ ಜೀವನವೇ ಶೋಚನೀಯ
ಆಸ್ಪತ್ರೆಯೊಂದರಲ್ಲಿ ದಾಖಲಾಗಿರುವ ಸೋಂಕಿತರನ್ನು ಅವಲಂಬಿಸಿ ಅದಕ್ಕೆ ಪೂರಕವಾಗಿ ವೈದ್ಯಕೀಯ ಸಿಬ್ಬಂದಿ ಸೇವೆಯನ್ನು ಒದಗಿಸಬೇಕಾ ಗುತ್ತದೆ. ವಾರ್ಡ್‌ಗೆ ಕನಿಷ್ಠ ಇಬ್ಬರು ವೈದ್ಯರು, ಆಯಾಗಳು, ದಾದಿಯರು ಸೇರಿದಂತೆ ಕನಿಷ್ಠ ಒಂದು ಹೊತ್ತಿಗೆ 8ರಿಂದ 10 ವೈದ್ಯಕೀಯ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಾರೆ.
ದ.ಕ. ಜಿಲ್ಲೆಯ ವೆನ್ಲಾಕ್ ಜಿಲ್ಲಾಸ್ಪತ್ರೆ ಸಂಪೂರ್ಣ ಕೋವಿಡ್ ಆಸ್ಪತ್ರೆಯಾಗಿ ಮಾರ್ಪಡಿಸಲಾಗಿದೆ. ಆಸ್ಪತ್ರೆಯ ಸೂಪರ್ ಸ್ಪೆಷಾಲಿಟಿ ಬ್ಲಾಕ್‌ನ 3ನೇ ಮಹಡಿಯ ಕಟ್ಟಡವನ್ನು ಸದ್ಯ ಕೊರೋನ ಸೋಂಕಿತರು, ಶಂಕಿತರು ಹಾಗೂ ಚಿಂತಾಜನಕ ಸ್ಥಿತಿಯಲ್ಲಿರುವವರಿಗೆ ಚಿಕಿತ್ಸೆಗೆ ಬಳಸಲಾ ಗುತ್ತಿದೆ. 3ನೇ ಮಹಡಿ ಸಂಪೂರ್ಣವಾಗಿ ಕೊರೋನ ಶಂಕಿತ ರೋಗಿಗಳಿಗೆ ಬಳಕೆಯಾಗುತ್ತದೆ. ಇಲ್ಲಿ ನಾಲ್ಕು ವಿಭಾಗಗಳಲ್ಲಿ ಒಟ್ಟು 79 ಹಾಸಿಗೆ ಗಳಿವೆ. ಇಲ್ಲಿಯೂ ಪಿಪಿಇ ಕಿಟ್ ಬಳಕೆಯಾಗುತ್ತದೆ. ಕೊರೋನ ಸೋಂಕಿತರಿಗೆ ವೆನ್ಲಾಕ್‌ನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ 2ನೇ ಮಹಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅಲ್ಲಿ ಒಟ್ಟು 99 ಹಾಸಿಗೆಗಳಿವೆ. ಚಿಂತಾಜನಕ ಸ್ಥಿತಿಯಲ್ಲಿರುವ ರೋಗಿಗಳನ್ನು 1ನೇ ಮಹಡಿಗೆ ಸ್ಥಳಾಂತರಿಸಲಾ ಗುತ್ತದೆ. ಅಲ್ಲಿ 49 ಹಾಸಿಗೆಗಳ ವ್ಯವಸ್ಥೆ ಇದೆ. ಕಟ್ಟಡದಲ್ಲಿ ಶಂಕಿತ ರೋಗಿಯ ಗಂಟಲ ದ್ರವ ಸಂಗ್ರಹಕ್ಕೂ ಕೊಠಡಿ ಇದೆ.
ಪ್ರತೀ ಮಹಡಿಯ ಪ್ರತಿ ವಾರ್ಡ್‌ಗಳಿಗೆ ಹೊಂದಿ ಕೊಂಡೇ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರು ಹಾಗೂ ಸಿಬ್ಬಂದಿಗೆ ಡಾನ್ನಿಂಗ್ ಹಾಗೂ ಡಾಪ್ಪಿಂಗ್ ರೂಂ (ರೋಗಿಯ ಬಳಿ ತೆರಳುವಾಗ ಹಾಕಬೇಕಾದ ಉಡುಪುಗಳನ್ನು ಹಾಕಿಕೊಳ್ಳಲು ಹಾಗೂ ತೆಗೆಯಲು ಪ್ರತ್ಯೇಕವಾದ ಕೊಠಡಿ)ಗಳಿವೆ.
ಸದ್ಯ ವೆನ್ಲಾಕ್ ಆಸ್ಪತ್ರೆಯಲ್ಲಿ ಇಂದು ದೃಢಪಟ್ಟ ಕೊರೋನ ಸೋಂಕಿತ ರೋಗಿ ಸೇರಿದಂತೆ ಒಟ್ಟು ನಾಲ್ವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಂತೂ, ನಮ್ಮ ನಡುವಿನ, ನಮಗಾಗಿ ತಮ್ಮ ಪ್ರಾಣವನ್ನೇ ಒತ್ತೆ ಇಟ್ಟು ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಸೇವೆ ಸಲ್ಲಿಸುವ ಈ ವೈದ್ಯರು, ದಾದಿ ಯರು ಸೇರಿದಂತೆ ಕೊರೋನ ವಿರುದ್ಧದ ಹೋರಾಟದಲ್ಲಿ ತೊಡಗಿಕೊಂಡಿರುವ ಸಮರ ವೀರರಿಗೆ ಗೌರವ ನೀಡೋಣ. ಅವರ ಹೋರಾಟಕ್ಕೆ ಬೆಂಬಲ ನೀಡೋಣ.