ಬಸವವಾದ ಮತ್ತು ಮಾರ್ಕ್ಸ್‌ವಾದ

Update: 2020-04-25 17:21 GMT

ಬಸವವಾದದ ಕಾಯಕ, ಪ್ರಸಾದ, ದಾಸೋಹ ಪರಿಕಲ್ಪನೆ ಮಾರ್ಕ್ಸ್ ವಾದದಲ್ಲಿ ಯೋಗ್ಯ ಉತ್ಪಾದನೆ, ಸದ್ಬಳಕೆ ಮತ್ತು ಯೋಗ್ಯ ಸಾಮಾಜಿಕ ವಿತರಣೆಯಾಗಿದೆ. ‘‘ಕಡ ಬಡ್ಡಿಯ ಕೊಡಲಾಗದು’’ ಎಂದು ಬಸವವಾದ ಹೇಳಿದರೆ, ಮಾರ್ಕ್ಸ್‌ವಾದ ಬಡ್ಡಿಯನ್ನು ನಿಷೇಧಿಸಿದೆ. ಬಸವಣ್ಣನವರ ಪರಿಕಲ್ಪನೆಯ ಸಮಾಜ ಶ್ರೀಮಂತರಿಲ್ಲದ ಶ್ರೀಮಂತ ಸಮಾಜ. ಮಾರ್ಕ್ಸ್ ಪರಿಕಲ್ಪನೆಯ ಸಮಾಜ ಕೂಡ ಶ್ರೀಮಂತರಿಲ್ಲದ ಶ್ರೀಮಂತ ಸಮಾಜವೇ ಆಗಿದೆ.



ಯಾವುದೇ ವಾದ ಒಬ್ಬ ವ್ಯಕ್ತಿ ಅಥವಾ ಒಂದು ತಲೆಮಾರಿನಲ್ಲಿ ಸಿದ್ಧವಾಗುವಂಥದ್ದಲ್ಲ. ಇಲ್ಲಿ ‘ವಾದ’ ಎಂದರೆ ಸಕಾರಣಗಳೊಂದಿಗೆ ತರ್ಕಬದ್ಧವಾಗಿ ಪ್ರತಿಪಾದಿಸುವಂತಹ ಸಿದ್ಧಾಂತ. ‘ಇಲ್ಲಿಯವರೆಗಿನ ಸಮಾಜಗಳ ಇತಿಹಾಸ ವರ್ಗ ಹೋರಾಟಗಳ ಇತಿಹಾಸವೇ ಆಗಿದೆ’ ಎಂದು ಕಾರ್ಲ್ ಮಾರ್ಕ್ಸ್ ಹೇಳಿದ್ದಾರೆ. ಈ ವರ್ಗ ಹೋರಾಟದ ಸಿದ್ಧಾಂತ ರೂಪುಗೊಳ್ಳುವ ಪ್ರಕ್ರಿಯೆ ಮೊದಲಿನಿಂದ ಅಂತರ್ ಶಕ್ತಿಯಾಗಿ ಇದ್ದರೂ ವಿವಿಧ ಮಜಲುಗಳಲ್ಲಿ ಅದು ಗೋಚರಿಸಿದೆ. ಭಾರತದಲ್ಲಿ ಮನುವಾದಿ ಶಕ್ತಿಗಳ ವಿರುದ್ಧ ಮೊದಲಿಗೆ ಹೋರಾಡಿದವರು ಲೋಕಾಯತರು. ವೈಚಾರಿಕ ಬೆಳೆಗಾಗಿ ಅವರು ಭೂಮಿಯನ್ನು ಹದಗೊಳಿಸಿದರು. ನಂತರ ಬಂದ ಬುದ್ಧ ವೈಚಾರಿಕತೆಯ ಬೀಜ ಬಿತ್ತಿದರು. ಬಸವಣ್ಣ ಅದನ್ನು ಮರವಾಗಿ ಬೆಳೆಸಿದರು. ಅಂಬೇಡ್ಕರರು ಅದನ್ನು ಸಂವಿಧಾನದ ಮೂಲಕ ಫಲವಾಗಿಸಿದರು. ನಾವು ಫಲಾನುಭವಿಗಳಾದೆವು.

ಭಾರತದ ಹೊರಗಡೆ ಮೊದಲಿಗೆ ಸಾಕ್ರೆಟಿಸ್, ಪ್ಲೇಟೊ, ಅರಿಸ್ಟಾಟಲ್ ಅಂತಹವರು ಬಂದರು. ಜೀಸಸ್ ರೋಮನ್ ಸಾಮ್ರಾಜ್ಯಕ್ಕೆ ಮತ್ತು ಯಹೂದಿಗಳ ಕರ್ಮಠತನಕ್ಕೆ ಸವಾಲಾದರು. ಅದೇ ದಾರಿಯಲ್ಲಿ ಪೈಗಂಬರರು ಮುನ್ನಡೆದರು. ಅರಬ ಬುಡಕಟ್ಟುಗಳ ಮಧ್ಯೆ ಏಕತೆಯನ್ನು ಸಾಧಿಸುವ ಮೂಲಕ ಅವರ ತಲೆತಲಾಂತರದ ಜಗಳ ಮತ್ತು ಯುದ್ಧಗಳನ್ನು ನಿಲ್ಲಿಸಿದರು.

ಈ ಹಿನ್ನೆಲೆಯಲ್ಲಿ ನಾವು ಬಸವವಾದ ಮತ್ತು ಮಾರ್ಕ್ಸ್‌ವಾದವನ್ನು ನೋಡಬೇಕಿದೆ. ಇಡೀ ಮಾನವಕುಲ ‘‘ಇವನಾರವ, ಇವನಾರವ’’ ಮತ್ತು ‘‘ಇವ ನಮ್ಮವ, ಇವ ನಮ್ಮವ’’ ಎನ್ನುವವರ ಮಧ್ಯದ ಸಂಘರ್ಷವಾಗಿದೆ. ಧರ್ಮ ಸಿದ್ಧಾಂತವೇ ಇರಲಿ ಇತರ ಸಿದ್ಧಾಂತಗಳೇ ಇರಲಿ ಅವು ವಿಶಾಲಾರ್ಥದಲ್ಲಿ ಈ ಎರಡು ಗುಂಪಿನಲ್ಲಿ ಒಂದರ ಪರವಾಗಿರುತ್ತವೆ. ಈ ಹಿನ್ನೆಲೆಯಲ್ಲಿ ಬಸವವಾದ ಮತ್ತು ಮಾರ್ಕ್ಸ್‌ವಾದ ‘‘ಇವ ನಮ್ಮವ, ಇವ ನಮ್ಮವ’’ ಎಂಬ ಗುಂಪಿನಲ್ಲಿ ಬರುವಂಥವುಗಳಾಗಿವೆ.

‘‘ಉಳ್ಳವರು ಶಿವಾಲಯವ ಮಾಡಿಹರು, ನಾನೇನು ಮಾಡಲಿ ಬಡವನಯ್ಯ’’ ಎಂದು ಬಸವಣ್ಣನವರು 12ನೆಯ ಶತಮಾನದಲ್ಲೇ ಹೇಳುವ ಮೂಲಕ ಸಮಾಜದೊಳಗಣ ವರ್ಗಗುಣವನ್ನು ಕಂಡು ಹಿಡಿದಿದ್ದಾರೆ! ಕಾರ್ಲ್ ಮಾರ್ಕ್ಸ್ ಅವರು 19ನೇ ಶತಮಾನದಲ್ಲಿ ಈ ಉಳ್ಳವರು ಮತ್ತು ಬಡವರನ್ನು ಹ್ಯಾವ್ಸ್ (ಉಳ್ಳವರು) ಮತ್ತು ಹ್ಯಾವ್ ನಾಟ್ಸ್ (ಬಡವರು) ಎಂದು ಕರೆದರು. ಐರೋಪ್ಯ ದೇಶಗಳಲ್ಲಿ 13ನೇ ಶತಮಾನದಲ್ಲಿ ಬಂಡವಾಳಶಾಹಿಯ ಲಕ್ಷಣಗಳು ಕಾಣತೊಡಗಿದಾಗ ವರ್ಗಪ್ರಜ್ಞೆ ಮೂಡತೊಡಗಿತು. ಈ ಪ್ರಜ್ಞೆ ಹೋರಾಟದ ರೂಪ ತಾಳುವ ಹಾಗೆ ಬೆಳೆಯ ತೊಡಗಿದ್ದು 1760ರಲ್ಲಿ ಪ್ರಾರಂಭವಾದ ಔದ್ಯೋಗಿಕ ಕ್ರಾಂತಿ ಮತ್ತು 1789ರಲ್ಲಿ ಪ್ರಾರಂಭವಾದ ಫ್ರೆಂಚ್ ಕ್ರಾಂತಿಯ ನಂತರ. ಯಂತ್ರಗಳ ಒಡೆಯರು ಬಂಡವಾಳಶಾಹಿ ಎನಿಸಿದರು. ಕಾರ್ಖಾನೆಗಳಲ್ಲಿ ದುಡಿಯುವ ಬಡವರು ಕಾರ್ಮಿಕರು ಎನಿಸಿದರು. ಈ ಎರಡು ಪ್ರಮುಖ ಘಟನೆಗಳು ವರ್ಗ ಲಕ್ಷಣಗಳನ್ನು ಅರಿತುಕೊಳ್ಳಲು ಸಹಾಯ ಮಾಡಿದವು. ಕಾರ್ಲ್ ಮಾರ್ಕ್ಸ್ ಅವರಿಗೆ ನವಸಮಾಜದ ಲಕ್ಷಣಗಳ ಬಗ್ಗೆ ಲಭಿಸಿದಂತಹ ಯಾವ ಘಟನೆಗಳೂ ಕನ್ನಡದ ನೆಲದಲ್ಲಿ ಸಂಭವಿಸಿದ್ದಿಲ್ಲ. ಸಾಂಪ್ರದಾಯಿಕ ಸಮಾಜದಲ್ಲೇ ಬಸವಣ್ಣನವರು ಸಮಾಜವನ್ನು ವರ್ಗ ದೃಷ್ಟಿಕೋನದಿಂದ ನೋಡಿದ್ದು ಅನನ್ಯವಾಗಿದೆ. ಈ ಕಾರಣದಿಂದಲೇ ಅವರ ಚಿಂತನೆಯಲ್ಲಿ ಎಲ್ಲ ಆಧುನಿಕ ವಿಚಾರಧಾರೆಯ ಮೂಲಗಳಿವೆ.

ವಚನ ಸಾಹಿತ್ಯ ಲಿಂಗಾಯತ ಧರ್ಮಕ್ಕೆ ಸಂಬಂಧಿಸಿದುದು. ಆದರೆ ಮಾರ್ಕ್ಸ್‌ವಾದ ಧರ್ಮವಲ್ಲ. ಆದ್ದರಿಂದ ಧರ್ಮದ ಮೂಲಕ ಮಾರ್ಕ್ಸ್‌ವಾದವನ್ನು ಮತ್ತು ಬಸವವಾದವನ್ನು ಹೋಲಿಕೆ ಮಾಡಬಾರದು. ಮಾರ್ಕ್ಸ್‌ವಾದ ನಾಸ್ತಿಕವಾದ. ಆದರೆ ಬಸವವಾದ ದೇವರನ್ನು ನಂಬುವುದು. ಅದ್ದರಿಂದ ದೇವರ ಹಿನ್ನೆಲೆಯಲ್ಲಿ ಮಾರ್ಕ್ಸ್‌ವಾದ ಮತ್ತು ಬಸವವಾದವನ್ನು ಹೋಲಿಕೆ ಮಾಡಬಾರದು. ಬಸವವಾದದ ವೈಶಿಷ್ಟವೆಂದರೆ ಬಸವಣ್ಣನವರ ದೇವರಿಗೆ ಮೂರ್ತಿ ಇಲ್ಲ. ಆದರೆ ಮೂರ್ತಿಗಳು ಮತ್ತು ಸ್ಥಾವರಲಿಂಗಗಳ ಬದಲಿಗೆ ನಿರಾಕಾರ ಇಷ್ಟಲಿಂಗವಿದೆ. ಬಸವಣ್ಣನವರ ದೇವರು ಅಗಮ್ಯ, ಅಗೋಚರ, ಅಪ್ರತಿಮ ಮತ್ತು ಅಪ್ರಮಾಣನಾಗಿದ್ದಾನೆ. ನಮ್ಮ ದೇಹವೇ ಆತನ ದೇಗುಲ! ಆತ ನಮ್ಮಾಳಗೆ ಅಂತಃಸಾಕ್ಷಿಯ ರೂಪದಲ್ಲಿದ್ದಾನೆ. ಇಷ್ಟಲಿಂಗವೆಂಬುದು ಆ ಅರಿವಿನ ಕುರುಹು. ಬಸವ ಧರ್ಮದಲ್ಲಿ ಗುಡಿ ಇಲ್ಲ; ಆದರೆ ಅನುಭವ ಮಂಟಪವಿದೆ. ಮಠ ಇಲ್ಲ; ಆದರೆ ಮಹಾಮನೆಯ ಪರಿಕಲ್ಪನೆ ಇದೆ. ಬಸವವಾದದಲ್ಲಿ ಯಾವುದೇ ಪವಿತ್ರ ಕ್ಷೇತ್ರವಿಲ್ಲ; ಆದರೆ ಭಕ್ತನ ಅಂಗಳವೇ ವಾರಣಾಸಿ. ಕಾಯಕವೇ ಕೈಲಾಸ. ಕಾಯವೂ ಕೈಲಾಸ. ಬಸವವಾದ ಮತ್ತು ಮಾರ್ಕ್ಸ್‌ವಾದ ಸಮಾನತೆಯ ಮೇಲೆ ನಿಂತಿವೆ. ಬಸವಣ್ಣನವರ ಅಂತಃಸಾಕ್ಷಿ ಮತ್ತು ಮಾರ್ಕ್ಸ್‌ನ ಅಂತಃಸಾಕ್ಷಿ ಸಮಾನತೆಯನ್ನೇ ಪ್ರತಿಪಾದಿಸುತ್ತವೆ. ‘‘ಜೀವಜಾಲದಲ್ಲಿದೆ ಚರಾಚರವೆಲ್ಲ’’ ಎಂದು ಬಸವಣ್ಣನವರು ಹೇಳಿದ್ದಾರೆ. ಮಾರ್ಕ್ಸವಾದ ಜೀವಜಾಲ ಸಮತೋಲನವನ್ನು ಪ್ರತಿಪಾದಿಸುತ್ತದೆ. ಈ ಹಿನ್ನೆಲೆಯಿಂದ ನೋಡಿದರೆ ಮಾರ್ಕ್ಸನ ನಾಸ್ತಿಕವಾದ ಬಸವಣ್ಣನವರ ಆಸ್ತಿಕವಾದಕ್ಕೆ ಸಮೀಪದಲ್ಲಿದೆ.

 ಸ್ವರ್ಗ, ನರಕ, ಪುಣ್ಯ, ಪಾಪ, ಮೋಕ್ಷ, ಪುನರ್ಜನ್ಮ ಮತ್ತು ಒಟ್ಟಾರೆ ಕರ್ಮ ಸಿದ್ಧಾಂತವನ್ನು ಬಸವವಾದ ನಂಬುವುದಿಲ್ಲ. ಮಾರ್ಕ್ಸ್‌ವಾದ ಕೂಡ ಇದನ್ನೆಲ್ಲ ನಂಬುವುದಿಲ್ಲ. ಬಸವವಾದದಲ್ಲಿ ವೈದಿಕರ ಸ್ವರ್ಗ ನರಕಗಳಿಗೆ ಸ್ಥಾನವಿಲ್ಲ. ಇಲ್ಲಿ ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ.

‘‘ಪುಣ್ಯಪಾಪವೆಂಬ ಉಭಯ ಕರ್ಮವನಾರು ಬಲ್ಲರಯ್ಯ ಇವನಾರುಂಬರು? ಕಾಯ ತಾನುಂಬಡೆ, ಕಾಯ ತಾ ಮಣ್ಣು, ಜೀವ ತಾನುಂಬಡೆ, ಜೀವ ತಾ ಬಯಲು. ಈ ಉಭಯ ನಿರ್ಣಯವ ಕೂಡಲಸಂಗಮದೇವಾ, ನಿಮ್ಮ ಶರಣ ಬಲ್ಲ.’’ ಎಂದು ಬಸವಣ್ಣನವರು ಹೇಳಿದ್ದಾರೆ. ಕಾಯ ಮಣ್ಣಾಗುವುದರಿಂದ ಮತ್ತು ಜೀವ ಬಯಲಾಗುವುದರಿಂದ ಬಸವವಾದದಲ್ಲಿ ಪುಣ್ಯ ಪಾಪಗಳಿಗೆ ಸ್ಥಾನವಿಲ್ಲ. ಇಲ್ಲಿರುವುದು ಸಕಲಜೀವಾತ್ಮರಿಗೆ ಲೇಸನ್ನೇ ಬಯಸುವುದು ಮಾತ್ರ. ಅಂತೆಯೆ ಬಸವಣ್ಣನವರು ದೇವರು ಧರ್ಮದ ಮೂಲ ಎಂದು ಹೇಳದೆ ದಯವೇ ಧರ್ಮದ ಮೂಲ ಎಂದು ಹೇಳಿದ್ದಾರೆ. ಬಸವಧರ್ಮದಲ್ಲಿ ಸರ್ವರೀತಿಯ ಸಮತಾಭಾವದಿಂದ ಕೂಡಿದ ಜೀವಕಾರುಣ್ಯವೇ ದೇವರು. ‘‘ಲಿಂಗವಿಕಾರಿಗೆ ಅಂಗವಿಕಾರವೆಂಬುದಿಲ್ಲ, ಜಂಗಮವಿಕಾರಿಗೆ ಧನವಿಕಾರವೆಂಬುದಿಲ್ಲ, ಪ್ರಸಾದ ವಿಕಾರಿಗೆ ಮನೋವಿಕಾರವೆಂಬುದಿಲ್ಲ. ಇಂತೀ ತ್ರಿವಿಧ ಗುಣವನರಿದಾತನು ಅಚ್ಚ ಲಿಂಗೈಕ್ಯನು ಕೂಡಲಸಂಗಮದೇವಾ.’’ ಎಂದು ಬಸವಣ್ಣನವರು ಹೇಳುವಲ್ಲಿ ಮೋಕ್ಷ ಮತ್ತು ಪುನರ್ಜನ್ಮವನ್ನು ಅಲ್ಲಗಳೆದಿದ್ದಾರೆ. ಶರಣರು ಜೀವಿತಾವಧಿಯಲ್ಲೇ ಲಿಂಗಾಂಗಸಾಮರಸ್ಯದಿಂದಾಗಿ ಅಚ್ಚ ಲಿಂಗೈಕ್ಯರಾಗಿ ಮೋಕ್ಷವನ್ನು ಹೊಂದಿರುತ್ತಾರೆ. ಮೋಕ್ಷದ ನಂತರ ಪುನರ್ಜನ್ಮವೆಲ್ಲಿ? ‘‘ಶಿವನ ನೆನೆಯಿರೆ, ಶಿವನ ನೆನೆಯಿರೆ, ಈ ಜನ್ಮ ಬಳಿಕಿಲ್ಲ.’’ ಎಂದು ಅಕ್ಕಮಹಾದೇವಿ ಹೇಳಿದ್ದಾಳೆ.

‘‘ಉಪಮಿಸಬಾರದ ಉಪಮಾತೀತರು, ಕಾಲಕರ್ಮ ರಹಿತರು, ಭವವಿರಹಿತರು, ಕೂಡಲಸಂಗಮದೇವಾ ನಿಮ್ಮ ಶರಣರು.’’ ಎಂದು ಬಸವಣ್ಣನವರು ಕರ್ಮಸಿದ್ಧಾಂತವನ್ನು ಅಲ್ಲಗಳೆದಿದ್ದಾರೆ. ಕಾರ್ಲ್ ಮಾರ್ಕ್ಸ್ ಅವರ ಸಿದ್ಧಾಂತದಲ್ಲಿ ಕೂಡ ಕಾಯಕಸಿದ್ಧಾಂತವಿದೆ ಹೊರತಾಗಿ ಅದಕ್ಕೆ ವಿರುದ್ಧವಾದ ಕರ್ಮಸಿದ್ಧಾಂತವಿಲ್ಲ. ಬಸವಣ್ಣನವರು ಅಂತರಂಗ ಶುದ್ಧಿ ಮತ್ತು ಬಹಿರಂಗ ಶುದ್ಧಿ ಕುರಿತು ಹೇಳಿದ್ದಾರೆ. ಇಷ್ಟಲಿಂಗದ ಮೂಲಕ ಅಂತರಂಗ ಶುದ್ಧಿಯನ್ನೂ ಜಂಗಮಲಿಂಗದ ಮೂಲಕ ಬಹಿರಂಗ ಶುದ್ಧಿಯನ್ನೂ ಬಯಸಿದ್ದಾರೆ. ಕಾರ್ಲ್ ಮಾರ್ಕ್ಸ್ ಅವರು ಸ್ವಮಿಮರ್ಶೆ ಮತ್ತು ವಿಮರ್ಶೆ ಕುರಿತು ತಿಳಿಸಿದ್ದಾರೆ. ಅಂತರಂಗದ ಶುದ್ಧಿಗಾಗಿ ಸ್ವವಿಮರ್ಶೆ. ಬಹಿರಂಗದ ಶುದ್ಧಿಗಾಗಿ ವಿಮರ್ಶೆ. ಬಸವಧರ್ಮವು ನಡೆ ನುಡಿ ಸಿದ್ಧಾಂತವಾಗಿದೆ. ಅರಿವನ್ನು ಆಚರಣೆಯಲ್ಲಿ ತರುವುದೇ ಈ ಧರ್ಮದ ಉದ್ದೇಶವಾಗಿದೆ. ಮಾರ್ಕ್ಸ್‌ವಾದ ಕೂಡ ಜ್ಞಾನ ಮತ್ತು ಕ್ರಿಯೆಯ ಕುರಿತು ಹೇಳುತ್ತದೆ.

ಮಿಗುತಾಯ ಮೌಲ್ಯ (ಸರ್‌ಪ್ಲಸ್ ವ್ಯಾಲ್ಯೂ) ಉಳ್ಳವರ ಸೊತ್ತಾಗಬಾರದು ಎಂಬುದನ್ನು ಬಸವವಾದ ಮತ್ತು ಮಾರ್ಕ್ಸ್‌ವಾದ ಪ್ರತಿಪಾದಿಸುತ್ತವೆ. ಈ ಎರಡೂ ವಾದಗಳು ಖಾಸಗಿ ಆಸ್ತಿಯನ್ನು ನಿರಾಕರಿಸುತ್ತವೆ. ಸಾಮಾಜಿಕ ಆಸ್ತಿಯನ್ನು ಪ್ರೋತ್ಸಾಹಿಸುತ್ತವೆ. ‘‘ನಾನು ಆವಾವ ಕರ್ಮಂಗಳ ಮಾಡಿದಡೆಯೂ ಆ ಕರ್ಮಫಲಭೋಗವ ನೀ ಕೊಡುವೆ ಎಂಬುದ ನಾನು ಬಲ್ಲೆನು. ನೀ ಕೊಟ್ಟ ದ್ರವ್ಯವ ನಿಮಗಲ್ಲದೆ ಮತ್ತೊಂದಕ್ಕೆ ಮಾಡೆನು, ನಿಮ್ಮ ಸೊಮ್ಮಿಂಗೆ ಸಲಿಸುವೆನು, ನಿಮ್ಮಾಣೆ ಕೂಡಲಸಂಗಮದೇವಾ’’ ಎಂದು ಬಸವಣ್ಣನವರು ತಿಳಿಸಿದ್ದಾರೆ. ಅವರು ಅನ್ನದೊಳಗಿನ ಒಂದಗಳನ್ನು ಕೂಡ ಇಂದಿಗೆ ನಾಳಿಗೆ ಎನ್ನದೆ ಬದುಕಿ ತೋರಿಸಿದರು. ‘ಶಿವನಸೊಮ್ಮು’ ಎಂಬ ಸಾಮಾಜಿಕ ನಿಧಿ ಸ್ಥಾಪಿಸಿದರು. ಎಲ್ಲ ಶರಣರು ಸಾಮಾಜಿಕ ನಿಧಿಗೆ ತಮ್ಮ ಮಿಗುತಾಯವನ್ನು ಸಲ್ಲಿಸಿದರು. ಶರಣಸಂಕುಲದ ಸದಸ್ಯರಿಗೆ ಇದು ಭವಿಷ್ಯದ ನಿಧಿಯಾಗಿ ಪರಿಣಮಿಸಿತು. ವಿಶ್ವದ ಇತಿಹಾಸದಲ್ಲಿ ಇದು ಮೊದಲ ಸಾಮಾಜಿಕ ನಿಧಿಯಾಗಿದ್ದು, ಸಾಮಾಜಿಕ ಆಸ್ತಿಯ ಮೊದಲ ದಾಖಲೆಯಾಗಿದೆ.

ಕಮ್ಯುನಿಝಂ ಏನು ಎಂಬುದನ್ನು ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ಖಾಸಗಿ ಆಸ್ತಿಯನ್ನು ಸಾಮಾಜಿಕ ಆಸ್ತಿಯಾಗಿ ಪರಿವರ್ತಿಸುವುದು. ಬಸವಣ್ಣನವರು ಶರಣಸಂಕುಲದಲ್ಲಿ ಇದೇ ಪ್ರಯೋಗವನ್ನು ಮಾಡಿದ್ದು.

ಬಸವವಾದದ ಕಾಯಕ, ಪ್ರಸಾದ, ದಾಸೋಹ ಪರಿಕಲ್ಪನೆ ಮಾರ್ಕ್ಸ್ ವಾದದಲ್ಲಿ ಯೋಗ್ಯ ಉತ್ಪಾದನೆ, ಸದ್ಬಳಕೆ ಮತ್ತು ಯೋಗ್ಯ ಸಾಮಾಜಿಕ ವಿತರಣೆಯಾಗಿದೆ. ‘‘ಕಡ ಬಡ್ಡಿಯ ಕೊಡಲಾಗದು’’ ಎಂದು ಬಸವವಾದ ಹೇಳಿದರೆ, ಮಾರ್ಕ್ಸ್‌ವಾದ ಬಡ್ಡಿಯನ್ನು ನಿಷೇಧಿಸಿದೆ. ಬಸವಣ್ಣನವರ ಪರಿಕಲ್ಪನೆಯ ಸಮಾಜ ಶ್ರೀಮಂತರಿಲ್ಲದ ಶ್ರೀಮಂತ ಸಮಾಜ. ಮಾರ್ಕ್ಸ್ ಪರಿಕಲ್ಪನೆಯ ಸಮಾಜ ಕೂಡ ಶ್ರೀಮಂತರಿಲ್ಲದ ಶ್ರೀಮಂತ ಸಮಾಜವೇ ಆಗಿದೆ.

 ಬಸವಣ್ಣನವರ ಚಳವಳಿ ದುಡಿಯುವ ಜನರ ಚಳವಳಿ. ‘‘ಕುಲವನರಸುವರೆ ಶರಣರಲ್ಲಿ ಜಾತಿಸಂಕರವಾದ ಬಳಿಕ’’ ಎಂದು ಬಸವಣ್ಣನವರು ಎಲ್ಲ ಜಾತಿ ಜನಾಂಗಗಳನ್ನು ಜಾತಿಯ ಸಂಕೋಲೆಗಳಿಂದ ಬಿಡಿಸಿ ಒಂದಾಗಿಸಿ ಜಾತ್ಯತೀತ ಶರಣಸಂಕುಲವನ್ನು ಸ್ಥಾಪಿಸಿದರು ಮತ್ತು ಸಮಾನತೆಯ ವಚನ ಚಳವಳಿಯನ್ನು ಆರಂಭಿಸಿದರು. ಕಾರ್ಲ್ ಮಾರ್ಕ್ಸ್ ಕೂಡ 19ನೇ ಶತಮಾನದ ಯುರೋಪ್‌ನಲ್ಲಿ ವರ್ಣಭೇದ ನೀತಿಯನ್ನು ಅಳಿಸಿ, ಕಾಯಕ ಜೀವಿಗಳನ್ನು ಒಂದುಗೂಡಿಸಿ ಶೋಷಣೆಯ ವಿರುದ್ಧ ಚಳವಳಿ ಆರಂಭಿಸಿದರು. ಎಲ್ಲ ಪ್ರಕಾರದ ಕಾಯಕಜೀವಿಗಳನ್ನು ಜಗತ್ತಿನಲ್ಲಿ ಮೊದಲ ಬಾರಿಗೆ ಒಗ್ಗೂಡಿಸಿ ಸಂಘಟಿಸಿದ ಕೀರ್ತಿಗೆ ಬಸವಣ್ಣನವರು ಭಾಜನರಾಗಿದ್ದಾರೆ.

ಬಸವಣ್ಣನವರು ಲಿಂಗಾಯತ ಧರ್ಮಕ್ಕೆ 770 ಶರಣರ ಸಮೂಹ ನಾಯಕತ್ವ ಒದಗಿಸಿದರೆ. ಮಾರ್ಕ್ಸ್ ಸಾಮೂಹಿಕ ನಾಯಕತ್ವದ ಪರಿಕಲ್ಪನೆ ಮೂಡಿಸಿದರು. ಬಸವಣ್ಣನವರು ‘‘ಬಿಜ್ಜಳನ ಭಂಡಾರವೆನಗೇಕಯ್ಯ್’’ ಎಂದರು. ಶರಣಸಂಕುಲ ತನ್ನದೇ ನಿಯಮದ ಮೂಲಕ ಕ್ರಿಯಾಶೀಲವಾಗುವಂತೆ ಮಾಡಿದರು. ಬಸವಣ್ಣ ರಾಜ್ಯಶಕ್ತಿಯನ್ನು ಕಡೆಗಣಿಸುತ್ತಿದ್ದಾರೆ ಎಂದು ಮನುವಾದಿಗಳು ಗುಲ್ಲೆಬ್ಬಿಸುವಷ್ಟು ಶರಣರು ಸ್ವತಂತ್ರಧೀರರಾಗಿದ್ದರು. ಇದನ್ನೇ ಮಾರ್ಕ್ಸ್ ರಾಜ್ಯಶಕ್ತಿಯ ನಿರಾಕರಣೆ ಎಂದು ಕರೆದದ್ದು. ‘‘ವಿಪ್ರರು ಕೀಳು ನೋಡಾ ಜಗವೆಲ್ಲ ಅರಿಯಲು’’ ಎಂದು ಬಸವಣ್ಣನವರು ಹೇಳಿದರೆ, ‘ಯುರೋಪಿನಲ್ಲಿ ಕ್ರೈಸ್ತರು ಸೃಷ್ಟಿಸಿದ ನರಕಕ್ಕಿಂತಲೂ ಅಸಹ್ಯವಾದ ನರಕವನ್ನು ಬ್ರಾಹ್ಮಣರು ಭಾರತದಲ್ಲಿ ಸೃಷ್ಟಿಸಿದ್ದಾರೆ’ ಎಂದು ಮಾರ್ಕ್ಸ್ ಹೇಳಿದ್ದಾರೆ.

ಎರಡೂ ವಾದಗಳಲ್ಲಿ ಕಾಯಕಜೀವಿಗಳಿಗೇ ಮಹತ್ವದ ಸ್ಥಾನವಿದೆ. ಎರಡೂ ವಾದಗಳು ಶೋಷಣೆಯನ್ನು ವಿರೋಧಿಸುತ್ತವೆ. ಬಿಜ್ಜಳನ ರಾಜ್ಯಶಕ್ತಿಯಿಂದ ಕೂಡಿದ್ದ ಆಳುವವರ್ಗ ಶರಣರ ಕಗ್ಗೊಲೆ ಮಾಡಿತು. ಅವರ ಹೋರಾಟವನ್ನು ಹತ್ತಿಕ್ಕಿತು. ವಿವಿಧ ದೇಶಗಳಲ್ಲಿ ಆಳುವ ವರ್ಗಗಳು ಕಮ್ಯುನಿಸ್ಟರನ್ನು ಕೊಲೆ ಮಾಡಿವೆ ಮತ್ತು ಅವರ ಹೋರಾಟವನ್ನು ಹತ್ತಿಕ್ಕಿವೆ. ಬಸವವಾದ ಜಗತ್ತಿನ ದುಡಿಯುವ ಜನರ ಮೊದಲ ಸಿದ್ಧಾಂತವಾಗಿದೆ. ಮಾರ್ಕ್ಸ್ ವಾದ ಕೂಡ ದುಡಿಯುವವರ ಸಿದ್ಧಾಂತವೇ ಆಗಿದೆ.

 ಹನ್ನೆರಡನೇ ಶತಮಾನದಲ್ಲಿನ ಈ ಬಸವವಾದಿ ಸಿದ್ಧಾಂತದ ರೂಪುರೇಷೆಗಳು 19ನೇ ಶತಮಾನದಲ್ಲಿ ಯುರೋಪಿನಲ್ಲಿ ಹುಟ್ಟಿದ ಮಾರ್ಕ್ಸ್‌ವಾದದಲ್ಲಿವೆ. ಬಸವಣ್ಣನವರು ವರ್ಗರಹಿತ ವ್ಯವಸ್ಥೆಯ ಪ್ರಜ್ಞೆಯಿಂದ ಕೂಡಿದ ಜಗತ್ತಿನ ಮೊದಲ ಸಮಾನತಾವಾದಿ. ಮಾರ್ಕ್ಸ್ ಎರಡನೇ ಸಮಾನತಾವಾದಿ. ಬಸವಣ್ಣನವರು ಕಾಯಕಜೀವಿಗಳ ಪರ್ಯಾಯ ಸಮಾಜದ ಮೊದಲ ರೂವಾರಿಗಳಾದರು. ಜಗತ್ತಿಗೆ ಮಾರ್ಗದರ್ಶಿಗಳಾದರು. ಸಮಾನತೆಗಾಗಿ ಕಾಯಕಜೀವಿಗಳನ್ನು ಒಂದುಗೂಡಿಸಲು ಜಗತ್ತಿನಲ್ಲಿ ಮೊದಲ ಬಾರಿಗೆ ಚಳವಳಿ ಪ್ರಾರಂಭಿಸಿದವರು ಬಸವಾದಿ ಶರಣರು. ಅವರ ಚಳವಳಿ ವಚನ ಚಳವಳಿ ಎಂದೇ ಹೆಸರಾಗಿದೆ. ಇದು ಜಗತ್ತಿಗೆ ಬಸವವಾದದ ಬಹುದೊಡ್ಡ ಕಾಣಿಕೆಯಾಗಿದೆ. ಅದಕ್ಕೂ ಮೊದಲು ಯುದ್ಧಗಳ ಮೂಲಕವೇ ಒಂದು ಪ್ರದೇಶದ ಭವಿಷ್ಯವನ್ನು ನಿರ್ಧರಿಸಲಾಗುತ್ತಿತ್ತು. ‘ಕೆಟ್ಟ ರಾಜನಿಗೆ ವಿರುದ್ಧವಾಗಿ ಒಳ್ಳೆಯ ರಾಜ, ಅನ್ಯಾಯದ ಯುದ್ಧಕ್ಕೆ ವಿರುದ್ಧವಾಗಿ ನ್ಯಾಯಬದ್ಧ ಯುದ್ಧ’ ಎಂಬುದು ವಿಶ್ವದ ನಿಯಮವಾಗಿತ್ತು. ಆದರೆ ಯುದ್ಧವಿಲ್ಲದೆ ಕೇವಲ ಚಳವಳಿಯ ಮೂಲಕ ಹೊಸ ಜಗತ್ತಿನ ನಿರ್ಮಾಣ ಮಾಡುವ ಕಲೆಯನ್ನು ಕಲಿಸಿದವರು ಬಸವಣ್ಣನವರು! ಶರಣರು ಉತ್ಪಾದನೆಯ, ಸ್ವಾವಲಂಬನೆಯ, ಆತ್ಮ ಗೌರವದ, ವರ್ಗ, ವರ್ಣ, ಜಾತಿ ಮತ್ತು ಲಿಂಗಭೇದ ವಿರೋಧದ ಚಳವಳಿಯಲ್ಲಿ ತೊಡಗಿದ್ದರು. ರಾಜ್ಯಶಕ್ತಿಯ ಮೇಲೆ ಅವಲಂಬಿತರಾಗದೆ ಪರ್ಯಾಯ ಸಮಾಜವಾದ ಶರಣಸಂಕುಲವನ್ನು ಸ್ಥಾಪಿಸಿದರು. ಇದು ಜಗತ್ತಿನ ಮೊದಲ ಸರ್ವಸಮತ್ವದ ಸಮಾಜವಾಗಿದೆ.

ಮಾರ್ಕ್ಸ್‌ವಾದ 700 ವರ್ಷಗಳ ನಂತರ ಬಂದು ಇಂಥದೇ ದುಡಿಯುವ ಜನರ ಹೋರಾಟ ಆರಂಭಿಸಿತು. ವರ್ಗಹೋರಾಟವು ಯುದ್ಧವಿರೋಧಿಯಾಗಿದೆ. ಹಿಂಸೆಯನ್ನು ತಿರಸ್ಕರಿಸುತ್ತದೆ. ಕಾಯಕಜೀವಿಗಳದ್ದು ಸದಾ ರಕ್ಷಣಾತ್ಮಕ ಹೋರಾಟವಾಗಿರುತ್ತದೆ ಹೊರತಾಗಿ ಆಕ್ರಮಣಕಾರಿ ಯುದ್ಧವಾಗಿರುವುದಿಲ್ಲ. ಶರಣರ ಸಂಕುಲಕ್ಕೂ ಮಾರ್ಕ್ಸ್ ಹೇಳಿದ ಕಮ್ಯೂನ್‌ಗೂ ಒಂದೇ ಅರ್ಥವಿದೆ. ಇವೆರಡು ಪದಗಳ ಆಧಾರ ‘ಸಮತೆ’ ಆಗಿದೆ.

ಜಗತ್ತು ಇಂದು ಹೀನಾಯ ಸ್ಥಿತಿ ತಲುಪಿದೆ. ಬಸವವಾದ ಜಗತ್ತನ್ನು ರಕ್ಷಿಸಿ, ಅದಕ್ಕೆ ಮತ್ತೆ ಹೊಸತನ ತರುವ ಶಕ್ತಿಯನ್ನು ಹೊಂದಿದೆ. ಲಿಂಗಾಯತರು ಬರಿ ಧಾರ್ಮಿಕತೆಯಲ್ಲೇ ಮುಳುಗಬಾರದು. ಬಸವಣ್ಣನವರ ರಾಜನೀತಿ, ಆಡಳಿತ, ಅರ್ಥಶಾಸ್ತ್ರ, ಮನೋವಿಜ್ಞಾನ, ಸಾಮಾಜಿಕ ಮನೋವಿಜ್ಞಾನ, ಮನುವಾದಿ ವ್ಯವಸ್ಥೆಗೆ ಪರ್ಯಾಯವಾಗಿ ಮಾನವತಾವಾದಿ ವ್ಯವಸ್ಥೆಗೆ ಅವರು ಸಿದ್ಧಪಡಿಸಿದ ನೀಲನಕ್ಷೆ, ನವ ಸಮಾಜ ನಿರ್ಮಾಣದಲ್ಲಿ ಕಾಯಕಜೀವಿಗಳ ಒಗ್ಗಟ್ಟಿನ ಶಕ್ತಿಯ ಮೇಲೆ ಅವರಿಗಿದ್ದ ಅಚಲ ನಂಬಿಕೆ, ಬದುಕಿನ ಎಲ್ಲ ಆಯಾಮಗಳಲ್ಲಿ ಸಮಾನತೆಯೊಂದಿಗೆ ಸೃಜನಶೀಲತೆಯನ್ನು ಕಾಣುವ ಅವರ ಹಂಬಲ ಹೊಸ ಜಗತ್ತಿಗೆ ನಾಂದಿ ಹಾಡುವಂತಾಗಲಿ.

Writer - ರಂಜಾನ್ ದರ್ಗಾ

contributor

Editor - ರಂಜಾನ್ ದರ್ಗಾ

contributor

Similar News