ಸುಬ್ರಾಯ ಭಟ್ಟರ ಪಿಪಿಟಿ ಮತ್ತು ಹಳ್ಳಿಯ ನೀರು ಮಜ್ಜಿಗೆ!
ಹೊರಗಡೆ ಇದ್ದವರಿಗೆ ಭೂಮಿ ಆಳದ ನಿಗೂಢ ಕಥನಗಳು ಸುಲಭದಲ್ಲಿ ಅರ್ಥವಾಗುವುದಿಲ್ಲ. ಹಾಗೆ ನೋಡಿದರೆ ಹೊಸ ನವತರುಣ ಹಸಿರು ಮುಖಗಳೇ ವಾಸಿ. ತೋಟ ಖರೀದಿಸುವ ಮುನ್ನ, ತಮ್ಮದೇ ಭೂಮಿಗೆ ಕಾಲಿಡುವ ಮುನ್ನವೇ ಲ್ಯಾಪ್‌ಟಾಪ್ ತುಂಬಾ ಭವಿಷ್ಯದ ಹಸಿರು ನಕಾಶೆಯನ್ನು ಬಿಡಿಸಿಕೊಂಡು ಬರುತ್ತಾರೆ. ಅವರು ಬದುಕಲಿರುವ ತೋಟದ ಒಳಗಡೆ ಬರಡು ಬೋಳಿದ್ದರೂ ಎತ್ತಿಕೊಂಡು ಬರುವ ಲ್ಯಾಪ್‌ಟಾಪ್‌ನಲ್ಲಿ ಸಮೃದ್ಧ ಹಸಿರು ತುಂಬಿಕೊಂಡಿರುತ್ತದೆ! ಕನಸು ಯಾವಾಗಲೂ ಹಾಗೆಯೇ ಗೊಬ್ಬರ ನೀರು ಕೊಡುವ ಮುಂಚೆ ಬೆಳೆದಿರುತ್ತದೆ. ನನಸು ಮಾತ್ರ ಅಷ್ಟು ಬಲವಾಗಿ ಬೇರೂರುವುದಿಲ್ಲ.;

ಸಂಜೆ ಹೊತ್ತು ನಿಮ್ಮ ಕೃಷಿ ಮನೆಯ ಜಗಲಿಯಲ್ಲಿ ಆರಾಮವಾಗಿ ಕೂತು ಒಂದು ರಸಪ್ರಶ್ನೆ ಏರ್ಪಡಿಸಿ. ಅಗತ್ಯವಾಗಿ ಅಲ್ಲಿ ನಿಮ್ಮ ಶ್ರೀಮತಿ, ಮಕ್ಕಳು, ಅಕ್ಕ ಅಣ್ಣನ ಕೂಡುಮನೆಯ ಮಕ್ಕಳು, ಮೊಮ್ಮಕ್ಕಳು, ಅನುಕೂಲವಾದರೆ ನಿಮ್ಮ ಕೃಷಿ ಮನೆಯಲ್ಲೇ ಉಳಿಯುವ ಕೂಲಿಕಾರರು ಸೇರಿಕೊಂಡಿರಲಿ.
ನೀವು ಕೇಳುವ ಮೊದಲನೆಯ ಪ್ರಶ್ನೆ. ನಮ್ಮ ತೋಟದ ಮಣ್ಣಿನೊಳಗಡೆ ಅಡ್ಡಾದಿಡ್ಡಿ ಹುದುಗಿರುವ ನೀರು ಹಾಯಿಸುವ ಪೈಪುಗಳಿಗೆ ಎಲ್ಲೆಲ್ಲಿ ಎಷ್ಟುಗೇಟ್ ವಾಲುಗಳಿವೆ?, ಯಾವ ಮೋಟರನ್ನು ಆನ್ ಮಾಡಿದ್ರೆ ಯಾವ ತೋಟಕ್ಕೆ ನೀರು ಹಾಯುತ್ತದೆ? ಗುಡ್ಡದ ಏರಿಯ ಮೇಲಿರುವ ಟ್ಯಾಂಕಿಯ ನೀರನ್ನು ಬಿಡುವಾಗ ಯಾವ ತಡೆಗೇಟುಗಳನ್ನು ಬಂದ್ ಮಾಡಬೇಕು? ಯಾವುದನ್ನು ಯಾವ ಕಡೆಗೆ ತಿರುಗಿಸಬೇಕು? ಮಳೆಗಾಲದಲ್ಲಿ ಮಹಾಳಿಗೆ ಔಷಧಿ ಮಾಡುವಾಗ ಒಂದು ಬ್ಯಾರಲಿಗೆ ಸುಣ್ಣ ಮತ್ತು ಮೈಲು ತುತ್ತಿನ ಪ್ರಮಾಣವೆಷ್ಟು? ಇಂಥ ಒಂದಷ್ಟು ಪ್ರಶ್ನೆಗಳನ್ನು ಸಮ್ಮುಖದಲ್ಲಿ ಕೂತ ನಿಮ್ಮ ಮನೆಮಕ್ಕಳಿಗೆ ಕೇಳಿನೋಡಿ. ಭಾಗಶಃ ಅವರೆಲ್ಲ ಟೆಟ್ಟೆಟೆಟ್ಟೆ ಆಗಿಯೇ ಆಗುತ್ತಾರೆ.
ಗರಿಷ್ಠ ಉತ್ತರ ಕೊಟ್ಟು ಪ್ರಥಮ ಬಹುಮಾನ ಪಡೆಯುವವರು ನಿಮ್ಮ ಶ್ರೀಮತಿಯೇ ಇರಬಹುದು. ಎಲ್ಲದಕ್ಕೂ ಉತ್ತರ ಕೊಟ್ಟ- ಕೊಡುವ ಗಂಡು ಮಕ್ಕಳು ನಿಮ್ಮ ಜೊತೆಗಿದ್ದರೆ ನೀವು ಅದೃಷ್ಟವಂತರೇ ಸರಿ. ವಯಸ್ಸು ಏರುತ್ತಾ ಬಂದಿದ್ದರೆ ಕೃಷಿಯ ಜವಾಬ್ದಾರಿಯನ್ನು ನೇರವಾಗಿ ಅವರ ಕೈಗೆ ಒಪ್ಪಿಸಿ ನಿಶ್ಚಿಂತೆಯಿಂದ ಇರಬಹುದು. ಅಂಥ ಅನುಭವಿ ಭೂಮಿಪಾಲಕ ಉತ್ತರಾಧಿಕಾರಿಗಳು ಸಿಗುವುದು ಈಗ ನೂರಕ್ಕೆ ಒಂದು ಮನೆಯಲ್ಲಿ ಮಾತ್ರ! ಉಳಿದ ಹಾಗೆ ಶೂನ್ಯ ಉತ್ತರಗಳೇ ಜಾಸ್ತಿ.
ಪ್ರತಿಯೊಬ್ಬರ ತೋಟ ಕೃಷಿ ಆವಾರದಲ್ಲೂ ಈಗ ಮರೆತು ಹೋಗುವಷ್ಟು ಭೂಗತ ತಾಂತ್ರಿಕ ವ್ಯವಸ್ಥೆಗಳಿವೆ. ಕಣ್ಣಿಗೆ ಕಾಣಿಸದ ಈ ಪೈಪ್ ಜಾಲ ಅಪ್ಪಿ ತಪ್ಪಿ ಸಿಡಿದು ಹೋದಾಗ ಪಡುವ ಪೇಚಾಟ, ಮತ್ತೆ ಅದನ್ನು ಅಗೆದು ಬಗೆದು ಜೋಡಿಸುವಾಗಲೆಲ್ಲ ಕೃಷಿ ಯಾವ ಕರ್ಮಕ್ಕೆ ಅನಿಸುವುದಿದೆ. ಇನ್ನೊಂದು ಕಷ್ಟ ಹೇಗೂ ಗಂಡ ಇದ್ದಾರಲ್ಲ, ಅಪ್ಪ ಇದ್ದಾರಲ್ಲ ಎಂದು ಎಲ್ಲಾ ಜವಾಬ್ದಾರಿಯನ್ನು ಅವರ ತಲೆಗೆ, ಕೆಲಸದವರ ತಲೆಗೆ ಹಚ್ಚಿ ಕೃಷಿ ಬದುಕಿನ ಎಲ್ಲಾ ಸೂಕ್ಷ್ಮತೆಯನ್ನು ಮರೆತು ಜಾಣ ನಡೆ ತೋರಿಸುವ ಮನೆ ಮಂದಿ. ಅಪ್ಪ ಇರುವುದೇ ಇವೆಲ್ಲವನ್ನೂ ನೋಡಿಕೊಳ್ಳುವುದಕ್ಕೆ, ಅದು ಅವರ ಜವಾಬ್ದಾರಿ ಎಂದು ಭಾವಿಸುವ ಮನೆ ಮಕ್ಕಳು ಒಂದು ದಿವಸ ಇದ್ದಕ್ಕಿದ್ದಾಗೆ ಯಜಮಾನ ಮರೆಯಾದರೆ ತೋಟ, ಮನೆ, ಬದುಕು... ಎಲ್ಲದರಲ್ಲೂ ಕಕ್ಕಾಬಿಕ್ಕಿ ಆಗುವ ಪರಿಸ್ಥಿತಿ ಹೆಚ್ಚಿನ ಕೃಷಿಕ ಮನೆಯವರದ್ದು.
ಇದಕ್ಕಾಗಿಯೇ ಇರಬೇಕು. ಪಾಪ, ಮೊನ್ನೆ ಮೊನ್ನೆ ತೋಟ ಮಾರಿದ ಸುಬ್ರಾಯ ಭಟ್ರು ಖರೀದಿಸಿದ ಹೊಸ ಮಾಲಕರನ್ನು ಅವರ ಮನೆ ಮಕ್ಕಳನ್ನು ಅಂಗಳದಲ್ಲಿ ಕೂರಿಸಿಕೊಂಡು ಒಂದು ಗಂಟೆ ಪಾಠ ಮಾಡಿದರು. ಅವರದು ಒಂದು ರೀತಿ ಪವರ್ ಪಾಯಿಂಟ್ ಪ್ರಸೆಂಟೇಶನ್ ಇದ್ದ ಹಾಗೆ. ದೊಡ್ಡ ಕಾಗದದ ಮೇಲೆ ಇಡೀ ತೋಟದ ನಕ್ಷೆ ಬರೆದು ಎಲ್ಲೆಲ್ಲಿ ಅಜ್ಞಾತ ಪೈಪುಗಳು ಹಾದು ಹೋಗುತ್ತವೆ, ಅವುಗಳಿಗೆ ಇರುವ ತಡೆಗಳು, ಪಂಪುಗಳಿರುವ ಗೂಡುಗಳು, ಅವೆಲ್ಲದರ ಚಿತ್ರ ಬರೆದು ಹೊಸ ಮಾಲಕರ ಕೈಗೆ ತೋಟವನ್ನು ಪರಭಾರೆಗೊಳಿಸಿ ಮಹಾನಗರದ ಮಗನ ಮನೆಗೆ ಮುಖ ಮಾಡಿದರು.
ನಳಿಗೆ ನಕಾಶೆಯೇನೋ ಹೊಸ ಮಾಲಕರ ಕೈಗೆ ಬಂತು. ಆದರೆ ಥಿಯರಿ ಪ್ರಾಕ್ಟಿಕಲ್ ಆಗುವಾಗ ಆಗುವ ಸಮಸ್ಯೆ ಅದು ಬೇರೆಯೇ. ಮುಚ್ಚಿದ ಕವರಲ್ಲಿರುವ ಮಾಹಿತಿಯಂತೆ. ಹೊರಗಡೆ ಇದ್ದವರಿಗೆ ಭೂಮಿ ಆಳದ ನಿಗೂಢ ಕಥನಗಳು ಸುಲಭದಲ್ಲಿ ಅರ್ಥವಾಗುವುದಿಲ್ಲ. ಹಾಗೆ ನೋಡಿದರೆ ಹೊಸ ನವತರುಣ ಹಸಿರು ಮುಖಗಳೇ ವಾಸಿ. ತೋಟ ಖರೀದಿಸುವ ಮುನ್ನ, ತಮ್ಮದೇ ಭೂಮಿಗೆ ಕಾಲಿಡುವ ಮುನ್ನವೇ ಲ್ಯಾಪ್‌ಟಾಪ್ ತುಂಬಾ ಭವಿಷ್ಯದ ಹಸಿರು ನಕಾಶೆಯನ್ನು ಬಿಡಿಸಿಕೊಂಡು ಬರುತ್ತಾರೆ. ಅವರು ಬದುಕಲಿರುವ ತೋಟದ ಒಳಗಡೆ ಬರಡು ಬೋಳಿದ್ದರೂ ಎತ್ತಿಕೊಂಡು ಬರುವ ಲ್ಯಾಪ್‌ಟಾಪ್‌ನಲ್ಲಿ ಸಮೃದ್ಧ ಹಸಿರು ತುಂಬಿಕೊಂಡಿರುತ್ತದೆ! ಕನಸು ಯಾವಾಗಲೂ ಹಾಗೆಯೇ ಗೊಬ್ಬರ ನೀರು ಕೊಡುವ ಮುಂಚೆ ಬೆಳೆದಿರುತ್ತದೆ. ನನಸು ಮಾತ್ರ ಅಷ್ಟು ಬಲವಾಗಿ ಬೇರೂರುವುದಿಲ್ಲ.
ಯಾವುದೋ ಹಳ್ಳಿಯನ್ನು ಸೀಳಿ ಹೋಗುವ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಇತ್ತೀಚೆಗೊಂದು ಬೋರ್ಡು ನೋಡಿದೆ ಈ ಗ್ರಾಮಕ್ಕೆ ಜೀವವಿಮೆ ಮಾಡಿಸಲಾಗಿದೆ ಎಂದಿತ್ತು! ಗ್ರಾಮದ ಬಾಗಿಲಲ್ಲಿ ಜೋಡಿಸಲಾದ ಆ ಫಲಕ ಇಡೀ ಆ ಊರಿನ ಭವಿಷ್ಯ ನಿರ್ಧರಿಸುವ ರೂಪಕವಾಗಿ ದೂರದಿಂದಲೇ ಅಣಕಿಸುತ್ತಿತ್ತು.ಮನುಷ್ಯನಿಗೆ ಜೀವವಿಮೆ ಇದೆ, ಆತ ಓಡಾಡುವ ವಾಹನಗಳಿಗೆ, ವಾಸಿಸುವ ಮನೆಗಳಿಗೆ, ಬಳಸುವ ಅಮೂಲ್ಯ ವಸ್ತುಗಳಿಗೆ, ಸಾಕುವ ಜೀವಿಗಳಿಗೆ ಜೀವವಿಮೆ ಇದೆ. ಆದರೆ ಇಡೀ ಊರಿಗೆ ಜೀವವಿಮೆಯನ್ನು ಜೋಡಿಸಿ ಬರೆದ ಆ ಫಲಕ, ಆ ಊರು, ಅಲ್ಲಿ ಬದುಕುವ ಮನುಷ್ಯ, ಪ್ರಾಣಿಗಳು... ಒಟ್ಟು ಜೀವ ಸಂಕುಲದ ಭವಿಷ್ಯವನ್ನೇ ಯಾವುದೋ ಒಂದುಸಂಸ್ಥೆ ವಹಿಸಿ ಕೊಂಡಂತಿದೆ. ಇಲ್ಲಿ ಸಾಮೂಹಿಕ ಜೀವ ನಾಶದ ಪರಿಕಲ್ಪನೆಯಾದರೂ ಎಲ್ಲಿಂದ ಬಂತೋ ?
ಇದೇ ಊರಿನೊಳಗಡೆ ಗ್ರಾಮದ ಅಸ್ತಿತ್ವವನ್ನು ನಿರ್ಧರಿಸುವ ಅದ್ಯಾವ್ದೋ ಒಂದು ಮನೆಯ ಮುಂದೆ ಇನ್ನೊಂದು ಫಲಕವೂ ಇತ್ತು. ಅದು ಇನ್ನೂ ಕುತೂಹಲಕಾರಿ. ಆ ಬೋರ್ಡ್ ಮೇಲೆ ‘‘ಈ ಮನೆಯಲ್ಲಿ ಶುದ್ಧ ಹಳ್ಳಿತುಪ್ಪ ಸಿಗುತ್ತದೆ’’ ಎಂದಿತ್ತು. ಊರಿನ ಬಾಗಿಲಲ್ಲಿ ಇರುವ ಜೀವವಿಮೆಯ ಫಲಕಕ್ಕೂ ಈ ಹಳ್ಳಿ ತುಪ್ಪಕ್ಕೂ ಏನಾದರೂ ಸಂಬಂಧ ಇದೆಯೇ ಎಂಬ ಹುಡುಕಾಟ ನನ್ನದು.
ಇವೆರಡೂ ಬೋರ್ಡುಗಳು ನಮ್ಮ ದೇಶದ ಗ್ರಾಮಗಳು ಮಾರುಕಟ್ಟೆಗಳೊಂದಿಗೆ ಬೆಸೆದ ಮನಸ್ಥಿತಿಯನ್ನು ಪ್ರಕಟಿಸುತ್ತವೆ. ನಿರ್ವಂಶ ಅಥವಾ ಜೀವ ಅಸ್ತಿತ್ವದ ಸ್ಥಿತಿ ನಮ್ಮ ಗ್ರಾಮಗಳಿಗೆ ಬಂದದ್ದು ಮತ್ತು ಅದನ್ನು ಜೀವ ವಿಮಾ ಸಂಸ್ಥೆ ನಿರ್ಧರಿಸುವುದು ಎಂಥಾ ಸ್ಥಿತಿ ನೋಡಿ? ಹಳ್ಳಿಯಲ್ಲಿ ಸಿಗುವ ತುಪ್ಪವನ್ನು ಹಳ್ಳಿಯಲ್ಲೇ ಮಾರುವಾಗ ಅದು ಹಳ್ಳಿಯ ತುಪ್ಪವೇ. ಪೇಟೆಯ ತುಪ್ಪವನ್ನು ಹಳ್ಳಿಮನೆಗೆ ತಂದು ಮಾರಾಟ ಮಾಡುವ ಕ್ರಮ ಇಲ್ಲ. ಹೀಗಿರುವಾಗ ಇಂತಹ ಪ್ರಮಾಣ ಬದ್ಧತೆಯ ಅಗತ್ಯ ಹಂಗು ಯಾಕೆ? ಈ ತುಪ್ಪ ಮಾಡುವವರು ಪ್ರತಿದಿನ ಪೇಟೆಗೆ ಹೋಗಿ ಬರುವವರಾ? ಅಥವಾ ಹಾಲು ಕೊಡುವ ಹಸು ಪೇಟೆಯದ್ದಾ? ತುಪ್ಪ ಮಾಡುವ ಪ್ರಕ್ರಿಯೆ ಪೇಟೆಯಲ್ಲಿ ನಡೆಯುತ್ತದಾ? ಅಥವಾ ಹಸು ತಿನ್ನುವ ಒಳಸುರಿಗಳು ಹಿಂಡಿ ಔಷಧಿ ಇತ್ಯಾದಿಗಳೆಲ್ಲ ನಗರ ಕೇಂದ್ರೀತವಾ? ಹೀಗೆ ತುಪ್ಪದ ಸಾಚಾತನದ ಮೇಲೆ ಅನೇಕ ಪ್ರಶ್ನೆಗಳು ಮೂಡುತ್ತವೆ.
ಇತ್ತೀಚೆಗೆ ನಗರದ ಆಯಕಟ್ಟಿನಲ್ಲಿ ಕಾಡುಬಳ್ಳಿಯ ಬುಟ್ಟಿಯಲ್ಲಿ ಮೀನು ಮಾರುವ ಹೆಂಗಸರು ‘‘ಬನ್ನಿ ಬನ್ನಿ.. ಇದು ಕೆರೆಯ ಮೀನು’’ ಎನ್ನುತ್ತಿದ್ದರು. ಅಲ್ಲಿ ಕಾಡುಬೂರಿನ ಬುಟ್ಟಿ ಅವರಿಗೆ ಹಳ್ಳಿ ಕೆರೆಯ ರೂಪಕ. ನಾನು ಅವರಿಗೆ ಒಂದು ಪ್ರಶ್ನೆ ಕೇಳಿದ್ದೆ, ‘‘ಅಲ್ಲ, ಕಡಲಿನ ಮೀನುಗಳನ್ನೇ ನೀವು ಇದೇ ಬುಟ್ಟಿಯಲ್ಲಿ ಹಾಕಿ ಮಾರಾಟ ಮಾಡಿದ್ರು ನನ್ನ ನಾಲಗೆ ಉಪ್ಪು ಸಿಹಿಯ ರುಚಿಯನ್ನು ಕಂಡುಹಿಡಿಯುವಷ್ಟು ಸೂಕ್ಷ್ಮವಾಗಿಲ್ಲ. ಕೆಲವು ಮೀನುಗಳು ಎರಡು ಕಡೆಯೂ ಬದುಕುತ್ತವೆ, ಪ್ರತ್ಯೇಕಿಸದಷ್ಟು ಹೋಲುತ್ತವೆ ಇದು ಊರಕೆರೆಯ ಮೀನು ಎಂದು ನನಗೆ ಹೇಗೆ ಗೊತ್ತಾಗಲಿ?’’ ನಾನು ಈ ಕುಚೇಷ್ಟೆಯ ಪ್ರಶ್ನೆ ಕೇಳಲು ಒಂದು ಬಲವಾದ ಕಾರಣ ಇತ್ತು. ಅವರು ನಾಡ ಮೀನು ಎಂದು ಹೇಳುತ್ತಿದ್ದ ಬುಟ್ಟಿಯ ರಾಶಿಯಲ್ಲಿ ಚಿಕ್ಕ ಬೂತಾಯಿ ಮೀನೊಂದು ಕಾಣಿಸುತ್ತಿತ್ತು! ಆ ಅಮ್ಮನಿಗೆ ಕಸಿವಿಸಿ ಆಯಿತು. ಅದನ್ನು ಅಡಿಗೆ ತಳ್ಳಿ, ನಿಮಗೆ ಬೇಡವಾದರೆ ಇನ್ನೊಬ್ಬರು ಖರೀದಿಸುತ್ತಾರೆ ಎಂದು ಹೇಳಿ, ಈ ಖರೀದಿದಾರನ ಮೇಲೆ ಹೆಚ್ಚು ಆಸಕ್ತಿ ತೋರಿಸಲಿಲ್ಲ.
ಊರತುಪ್ಪವಾಗಲಿ, ಊರಕೆರೆಯ ಮೀನಾಗಲಿ ಈಗಹಳ್ಳಿ- ನಗರದ ಪ್ರತೀಕವಾಗಿ ಉಳಿದಿಲ್ಲ. ಮನುಷ್ಯ ಹಸ್ತಕ್ಷೇಪಗಳೇ ಅವುಗಳ ಮೂಲ ಮತ್ತು ತಾಜಾತನವನ್ನು ನಿರ್ಧರಿಸುವಾಗ ಅವು ಪ್ರತ್ಯೇಕವಾಗಿ ಉಳಿಯುವುದಾದರೂ ಹೇಗೆ? ಊರ ಕೆರೆಯಲ್ಲಿ ಸಾಕುವ ಮೀನುಗಳಿಗೂ ನಗರದಲ್ಲೇ ಸೃಷ್ಟಿಯಾಗುವ ಆಹಾರವನ್ನು ಎಸೆಯುವ ಕ್ರಮ ಇದೆ. ಹಸುವಿನ ಹಟ್ಟಿ, ಮೀನಿನ ಕೆರೆ ಊರಲ್ಲಿರಬಹುದು, ನೀರು ಊರ ಹೊಳೆ ಕೆರೆಯದ್ದೇ ಇರಬಹುದು. ಆದರೆ ಹಸು ತಿನ್ನುವ ಮೇವು, ಹಿಂಡಿ, ಮೀನು ತಿನ್ನುವ ಆಹಾರ ಎಲ್ಲವೂ ನಗರದ ಯಂತ್ರದ ಬಾಯಲ್ಲಿ ಸೃಷ್ಟಿಯಾಗಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಹೆಸರು ಮೊಹರು ಧರಿಸಿಕೊಂಡು ಹಳ್ಳಿಯಲ್ಲಿ ರಾಶಿ ಬೀಳುವ ಸ್ಥಿತಿಯಲ್ಲಿ ಇವುಗಳನ್ನು ಹಳ್ಳಿ-ಪೇಟೆ ಎಂದು ವಿಭಜಿಸುವುದಾದರೂ ಹೇಗೆ?
ನೀವಿಂದು ಹಳ್ಳಿಯ ಯಾವುದಾದರೂ ಹಾಲಿನ ಡೈರಿಯ ಎದುರು ಮುಂಜಾನೆ ಹೋಗಿ ಸುಮ್ಮಗೆ ನಿಂತಿರಿ. ಒಂದಷ್ಟು ರೈತರು ಸ್ಕೂಟರ್ ಬೈಕುಗಳ ಎಡಬಲಗಳಲ್ಲಿ ಕ್ಯಾನ್ ಇಟ್ಟು ಹಾಲು ತಂದು ಡೈರಿಗೆ ಸುರಿಯುತ್ತಾರೆ. ಅದೇ ಹೊತ್ತಿಗೆ ಖಾಲಿ ಕ್ಯಾನ್ ತರುವ ಒಂದಷ್ಟು ರೈತರನ್ನು ಅದೇ ಡೈರಿ ಮುಂದೆ ನೀವು ನೋಡಬಹುದು. ಅವರೆಲ್ಲ ಅದೇ ಡೈರಿಯಿಂದ ಹಾಲು ಖರೀದಿಸಲು ಬರುವವರು! ಅದೇ ಸಾಲಲ್ಲಿ ಕೆಲವೊಮ್ಮೆ ನಾನೂ ಇರುತ್ತೇನೆ!
ಬಹಳಷ್ಟು ಡೈರಿಗಳಲ್ಲಿ ಬೆಳಗ್ಗೆ, ಸಂಜೆ ರೈತರಿಂದ ಒಟ್ಟಾಗುವ ಹಾಲಿಗಿಂತ ಅಲ್ಲಿಂದ ಬಿಕರಿಯಾಗುವ ಹಾಲಿನ ಪ್ರಮಾಣವೇ ಹೆಚ್ಚಿರುತ್ತದೆ. ಯಾವ ಗ್ರಾಮಗಳ ರೈತರ ಹಟ್ಟಿಗಳಲ್ಲಿ ಹಾಲು ಉತ್ಪಾದನೆ ಆಗುತ್ತದೆ ಎಂದು ನೀವು ನಂಬಿರುತ್ತಿರೋ ಅದೇ ಗ್ರಾಮಗಳಿಂದು ಭಾಗಶಃ ಹಾಲು ಖರೀದಿಸಲು ಮುಗಿ ಬೀಳುತ್ತಿವೆ. ಹಳ್ಳಿಯ ಮಗುವೂ ಹಾಲು ಎಲ್ಲಿಂದ ಬರುತ್ತದೆ, ಹೇಗೆ ಉತ್ಪಾದನೆಯಾಗುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಲಾಗದಷ್ಟು ದಡ್ಡತನವನ್ನು ಬೆಳೆಸಿಕೊಂಡಿದೆ.
ಒಂದು ಕಾಲದಲ್ಲಿ ಗ್ರಾಮದ ಬದುಕಲ್ಲಿ ತಾನೊಬ್ಬ ಕೃಷಿಕ ಎನ್ನುವ ಅಸ್ಮಿತೆಯೊಂದಿಗೆ ಹೈನುಗಾರಿಕೆ ಅನಿವಾರ್ಯವಾಗಿ ಅಂಟಿಕೊಂಡಿತ್ತು. ಕೃಷಿಕ ಎಂದ ತಕ್ಷಣ ಬರುತ್ತಿದ್ದ ಎರಡನೆಯ ಪ್ರಶ್ನೆ ಹಟ್ಟಿಯಲ್ಲಿರುವ ಹಸುಗಳ ಸಂಖ್ಯೆ ಎಷ್ಟು ಎಂದು. ಒಂದು ವೇಳೆ ಹಸುವಿಲ್ಲ, ಹಟ್ಟಿಯಿಲ್ಲ ಎಂದಾದರೆ ಅವನನ್ನು ಕೃಷಿಕ ಎಂದು ಒಪ್ಪಿಕೊಳ್ಳಲು ಆ ಕಾಲ, ಸಂದರ್ಭ ಸಿದ್ಧವಿರಲಿಲ್ಲ. ಅದು ನಷ್ಟವೋ ಲಾಭವೋ ರೈತಾಪಿಗಳು ಹಟ್ಟಿಯಲ್ಲಿ ಒಂದಷ್ಟು ರಾಸು ಹಸುಗಳನ್ನು ಕಟ್ಟಲೇಬೇಕಿತ್ತು. ಅಂಗಳದಲ್ಲಿ ಒಂದಷ್ಟು ಕೋಳಿಗಳು, ಲೆಕ್ಕಕ್ಕಿಂತ ಹೆಚ್ಚು ನಾಯಿಗಳು, ಬೆಕ್ಕುಗಳು... ಹೀಗೆ ರೈತನ ಕುಟುಂಬವೆಂದರೆ ಬರೀ ಅವನ ಹೆಂಡತಿ ಮಕ್ಕಳಾಗಿರಲಿಲ್ಲ. ಅಕ್ಕ ಪಕ್ಕದ ಯಾವುದೇ ವ್ಯಕ್ತಿ ಎಷ್ಟೇ ಹೊತ್ತಿಗೆ ಬರಲಿ ಆ ಮನೆಯಲ್ಲಿ ತಿಂದುಂಡು ಹೋಗುವುದಕ್ಕೆ ಯಾವ ಅಭ್ಯಂತರವೂ ಇರಲಿಲ್ಲ. ತನ್ನನ್ನು ಆ ಮನೆಯವರು ಎಲ್ಲಿ ಕೂರಿಸಿದ್ದಾರೆ, ಯಾವುದರಲ್ಲಿ ಬಡಿಸುತ್ತಾರೆ ಎನ್ನುವುದಕ್ಕಿಂತ ಹೇಗೆ ನಡೆಸಿಕೊಳ್ಳುತ್ತಾರೆ, ಪ್ರೀತಿಸುತ್ತಾರೆ, ಆ ಸಂಬಂಧ ಸಹವಾಸದಲ್ಲಿರುವ ಅಕ್ಕರೆ ಪ್ರೀತಿ ಇತ್ಯಾದಿಗಳಿಗೆ ಬಹಳ ಬೆಲೆ ಇತ್ತು.
ಸಾಕುವ ಹಸುವಿನಿಂದ ಬರುವ ಉತ್ಪನ್ನಗಳನ್ನು ಹಣಕ್ಕೆ ಪರಿವರ್ತಿಸುವ, ಲಾಭದ ಬಗ್ಗೆ ಚಿಂತಿಸುವ ಯಾವ ರೈತರೂ ಆಗ ಗ್ರಾಮಗಳಲ್ಲಿ ಇರಲಿಲ್ಲ. ಬದಲಾಗಿ ಅವೆಲ್ಲವೂ ರೈತನ ಗುರುತುಗಳಾಗಿದ್ದವು. ರೈತ ಮನೆಯಲ್ಲೋ, ಪೇಟೆಯಲ್ಲೋ ಊರ ನಡುವಿನ ಶಾಲೆ, ದೇವಸ್ಥಾನ, ಮಂದಿರ, ಮಸೀದಿ ಎಲ್ಲೇ ಯಾವುದೇ ಕಾರ್ಯ ಕಲಾಪಗಳಿರಲಿ, ಯಕ್ಷಗಾನ, ನಾಟಕ ಅಂಕ ಕೂಟಗಳಿರಲಿ ಅಲ್ಲಿಗೆ ಹೊರಡುವ ಮುನ್ನ ತಾನು ಸಾಕುವ ಮನೆಯ ಈ ಸಹಸದಸ್ಯರಿಗೆ ಹುಲ್ಲು ಮೇವು ಹಿಂಡಿಗಳನ್ನಿತ್ತು ಆತ ಹೊರಡುತ್ತಿದ್ದ. ಯಾವಾಗ ಅವನಲ್ಲಿ ಮಾರುಕಟ್ಟೆಯ ಮನಸ್ಸು ಬಲವಾಗುತ್ತಾ ಬಂತೋ ಸಹಜವಾಗಿಯೇ ಸಾಕುಪ್ರಾಣಿಗಳ ಸಹವಾಸ ದುಬಾರಿಯಾಗುತ್ತಾ ಬಂತು. ಗ್ರಾಮಗಳಲ್ಲಿ ಉಚಿತವಾಗಿ ಹಂಚುತ್ತಿದ್ದ ನೀರುಮಜ್ಜಿಗೆಯೂ ನಿಂತುಹೋಯಿತು!