ಭಟ್ಕಳಕ್ಕೆ ಸಧ್ಯಕ್ಕಿಲ್ಲ ಲಾಕ್‍ಡೌನ್ ಸಡಿಲಿಕೆಯ ಭಾಗ್ಯ: ಅಗತ್ಯ ಸೇವೆ ಹೊರತು ಪಡಿಸಿ ಯಥಾಸ್ಥಿತಿ ಮುಂದುವರಿಕೆ
ಭಟ್ಕಳ: ದೇಶಾದ್ಯಂತ ರೆಡ್ ಝೋನ್ ಹೊರತು ಪಡಿಸಿ ಸೋಮವಾರದಿಂದ ಲಾಕ್‍ಡೌನ್ ನಲ್ಲಿ ಸಡಿಲಿಕೆಯುಂಟಾಗಿದ್ದು ಹಲವಾರು ಚಟುವಟಿಕೆಗಳು ಆರಂಭಗೊಂಡಿವೆ. ಜನರು ಅಗತ್ಯಾನುಸಾರ ರಸ್ತೆಗಳಲ್ಲಿ ತಿರುಗಾಡುತ್ತಿದ್ದು ಸಂಜೆ 7 ರಿಂದ ಬೆಳಗ್ಗೆ 7ಗಂಟೆಯ ವರೆಗೆ ಅನಗತ್ಯ ತಿರುಟುಗಾಟಕ್ಕೆ ಕಡಿವಾಣ ಹಾಕಲಾಗಿದೆ.
ಕರಾವಳಿ ಜಿಲ್ಲೆಗಳಲ್ಲಿ ಮೊದಲ ಕೊರೋನ ಪ್ರಕರಣ ದಾಖಲಾದ ಉತ್ತರಕನ್ನಡ ಜಿಲ್ಲೆಯ ಭಟ್ಕಳ ಮಾತ್ರ ಇನ್ನೂ ಲಾಕ್‍ಡೌನ್ ಸಡಿಲಿಕೆಯ ಸೌಭಾಗ್ಯದಿಂದ ವಂಚಿತಗೊಂಡಿದೆ. ಸಧ್ಯಕ್ಕೆ ಇದರಿಂದ ಹೊರಬರುವ ಯಾವ ಲಕ್ಷಣಗಳು ಕಾಣಿಸುತ್ತಿಲ್ಲ.
ಜಿಲ್ಲೆಯಲ್ಲಿ ಭಟ್ಕಳ ಪಟ್ಟಣದಲ್ಲಿ ಮಾತ್ರ 11 ಕೊರೋನ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು ಈಗ ಆ ಎಲ್ಲರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಕೊನೆಯ ಪಾಸಿಟಿವ್ ಪ್ರಕರಣ ಎ.14ರಂದು ಕಾಣಿಸಿಕೊಂಡಿದ್ದು ಈ ವ್ಯಕ್ತಿಯೂ ಕೂಡ ಸಂಪೂರ್ಣ ಗುಣಮುಖ ಹೊಂದಿ ಸಧ್ಯ ಹೋಂ ಕ್ವಾರೆಂಟೈನ್ ನಲ್ಲಿದ್ದಾರೆ.
ಭಟ್ಕಳದ ಜನಸಂಖ್ಯೆ ಹಾಗೂ ಇಲ್ಲಿನ ಕೊರೋನ ಸೋಂಕಿತರ ಪ್ರಕರಣವನ್ನು ಲೆಕ್ಕ ಹಾಕಲಾಗಿ ಈ ಪ್ರದೇಶವು ಹಸಿರು, ಕಿತ್ತಳೆ ಹಾಗೂ ಕೆಂಪು ವಲಯಕ್ಕೆ ಸೇರದೆ ಇದು ಕಂಟನ್ಮೇಂಟ್ ವಲಯಕ್ಕೆ ಸೇರುತ್ತಿದ್ದು ಆ ಕಾರಣಕ್ಕಾಗಿ ಇಲ್ಲಿ ಲಾಕ್‍ಡೌನ್ ಸಡಿಲಿಕೆಯ ನಿಯಮ ಅನ್ವಯಿಸದೆ ಲಾಕ್‍ಡೌನ್ 2.0 ನಲ್ಲಿದ್ದಂತೆ ಯಥಾ ಸ್ಥಿತಿ ಮುಂದುವರೆಯಲಿದ್ದು ಅಗತ್ಯ ಹಾಗೂ ವೈದ್ಯಕೀಯ ಸೇವೆ ಎಂದಿನಂತೆ ನಾಗರೀಕರ ಮನೆ ಬಾಗಿಲಿಗೆ ತಲುಪಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಲಾಕ್‍ಡೌನ್ ಸಡಿಲಿಕೆಯ ಭ್ರಮೆಯಲ್ಲಿ ಮನೆಯಿಂದ ಹೊರಬಂದವರಿಗೆ ಬಿತ್ತು ಪೊಲೀಸರ ಲಾಠಿಪೆಟ್ಟು: ನಿನ್ನೆಯೆ ರಾಜ್ಯದ ಎಲ್ಲ ಟಿವಿ ಮಾಧ್ಯಮಗಳು ಹಾಗೂ ಮುದ್ರಣ ಮಾಧ್ಯಮಗಳಲ್ಲಿ ಲಾಕ್‍ಡೌನ್ ಸಡಿಲಿಕೆಯ ಬಗ್ಗೆ ಕೇಳಿ, ಓದಿ, ನೋಡಿ ಅರ್ಧ ಸತ್ಯವನ್ನು ತಿಳಿದುಕೊಂಡಿಂದ ಭಟ್ಕಳದ ಜನತೆ ಸೋಮವಾರ ಬೆಳಗ್ಗೆ ಅತ್ಯಂತ ಖುಷಿಯಿಂದಲೇ ರಸ್ತೆಗಿಳಿದರೆ ಪೊಲೀಸರು ಮಾತ್ರ ನಗರದ ಹೃದಯಭಾಗವಾಗಿರು ಶಮ್ಸುದ್ದೀನ್ ವೃತ್ತದಲ್ಲಿ ಎಂದಿನಂತೆ ಲಾಠಿಯನ್ನು ಹಿಡಿದು ರಸ್ತೆಗಿಳಿದವರ ಮಂಗಳಾರತಿ ಮಾಡಲು ನಿಂತುಕೊಂಡಿದ್ದರು. ಕೆಲವು ತಮ್ಮ ಬೈಕ್, ಕಾರುಗಳನ್ನು ಅರ್ಧ ರಸ್ತೆಯಿಂದಲೆ ಹಿಂತಿರುಗಿಸಿಕೊಂಡು ಹೋದರೆ ಮತ್ತೆ ಕೆಲವರು ಸಹಾಸ ಮಾಡಿ ಮುಂದೆ ಹೋಗಿ ಪೊಲೀಸರಿಂದ ಬೈಯ್ಗುಳ ಜತೆಗೆ ಬೆತ್ತದ ರುಚಿಯನ್ನು ಸವಿದರು.
ಹೊರ ಜಿಲ್ಲೆಗೆ ಹೋಗಲು ಪಾಸ್ ಗಾಗಿ ಪರದಾಡುತ್ತಿರುವ ಜನರು: ಲಾಕ್‍ಡೌನ್ ಗೂ ಮುಂಚೆ ಯಾವುದ್ಯಾವುದೋ ಕಾರಣಗಳಿಂದಾಗಿ ಭಟ್ಕಳಕ್ಕೆ ಬಂದಿದ್ದ ಹೊರಜಿಲ್ಲೆಗಳ ಜನರು ಈಗ ತಮ್ಮ ಸ್ವಂತ ಜಿಲ್ಲೆಗೆ ಮರಳಲು ಹರಸಹಾಸ ಪಡುತ್ತಿದ್ದು ಭಟ್ಕಳವು ಕಂಟೆನ್ಮೆಂಟ್ ಝೋನ್ (ಧಾರಕ ವಲಯ) ದಲ್ಲಿ ಬರುವ ಕಾರಣ ನೀಡಿ ತಾಲೂಕಾಡಳಿತ ಪಾಸ್ ನೀಡಲು ನಿರಾಕರಿಸುತ್ತಿದೆ.
ಭಟ್ಕಳ ಮೂಲದ ಅಬ್ದುಲ್ ಅಝೀಝ್ ಎಂಬುವವರ ಕುಟುಂಬವು ಮಂಗಳೂರಿನಲ್ಲಿ ವಾಸಿಸುತ್ತಿದ್ದು ಲಾಕ್‍ಡೌನ್ ಗೆ ಒಂದು ದಿನ ಮುಂಚೆ ತನ್ನ ಎರಡು ವರ್ಷದ ಮಗುವನ್ನು ಕರೆದುಕೊಂಡು ಭಟ್ಕಳಕ್ಕೆ ಬಂದಿದ್ದು ಈಗ ಕಳೆದ 50 ದಿನಗಳಿಂದ ಮಗು ತನ್ನ ತಾಯಿಯನ್ನು ಬಿಟ್ಟು ತಂದೆಯನ್ನೇ ಆಸರೆಯನ್ನಾಗಿ ಮಾಡಿಕೊಂಡಿದೆ. ಇಂದು ಲಾಕ್ ಸಡಿಲಿಕೆಯಾಗಿದ್ದು ತನ್ನ ಮಗುವನ್ನು ತಾಯಿ ಬಳಿ ಕರೆದುಕೊಂಡು ಹೋಗಬೇಕು ಎನ್ನುವ ಉದ್ದೇಶದಿಂದ ತಹಶೀಲ್ದಾರ್ ಕಚೇರಿಗೆ ಬಂದರೆ ಇಲ್ಲಿ ನನಗೆ ಪಾಸ್ ನೀಡಲು ನಿರಾಕರಿಸಲಾಗುತ್ತಿದೆ. ಮಗು ಇಡೀ ರಾತ್ರಿ ತಾಯಿಯನ್ನು ನೆನೆದು ಅಳುತ್ತಿರುತ್ತದೆ. ಲಾಕ್‍ಡೌನ್ ನಲ್ಲಿ ಹೇಗಾದರೂ ಮಾಡಿ ಮಗುವನ್ನು ಸಮಾಧಾನಿಸುತ್ತಿದ್ದೇವು. ಆದರೆ ಈಗಲಾದರೂ ಮಗುವಿಗೆ ತಾಯಿಯ ಆಸರೆ ದಯಪಾಲಿಸಿ ಎಂದು ಅಬ್ದುಲ್ ಅಝೀಝ್ ಮಾಧ್ಯಮಗಳ ಮುಂದೆ ಗೋಗರೆದಿದ್ದು ಮಗುವನ್ನು ಮಗುವಿನ ಸಂಕಟವನ್ನು ಕಂಡು ಅವರು ಕಣ್ಣೀರಿಟ್ಟರು.
ಶಿವಮೊಗ್ಗೆ, ಭದ್ರವತಿ, ಹೀಗೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಹೋಗವವರು ಪಾಸ್‍ಗಾಗಿ ತಹಶೀಲ್ದಾರ್ ಕಚೇರಿ ಮುಂದೆ ಜಮಾಯಿಸಿದ್ದರು. ಈ ಕುರಿತು ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತರಾಗಿವ ಭರತ್ ಎಸ್. ವಾರ್ತಾಭಾರತಿಯೊಂದಿಗೆ ಮಾತನಾಡಿ ಸ್ಪಷ್ಟನೆ ನೀಡಿದ್ದು, ಭಟ್ಕಳ ಕಂಟೇನ್ಮೆಂಟ್ ವಲಯದಲ್ಲಿದೆ ಆದ್ದರಿಂದ ನಿಯಮವಳಿಗಳ ಪ್ರಕಾರ ಇಲ್ಲಿಂದ ಹೊರ ಜಿಲ್ಲೆಗೆ ಹೋಗಲು ಯಾರಿಗೂ ಅನುಮತಿ ನೀಡಲಾಗುವು ದಿಲ್ಲ. ಒಂದು ವೇಳೆ ಅವರು ಹೋಗುವುದಾದರೂ ಎಲ್ಲಿ ಹೋಗುತ್ತಾರೋ ಆಯ ಜಿಲ್ಲೆಯ ಜಿಲ್ಲಾಡಳಿತದ ಒಪ್ಪಿಗೆ ಪತ್ರ ನೀಡಿದ್ದಲ್ಲಿ ನಾನು ಹೋಗಲು ಅನುಮತಿ ನೀಡುತ್ತೇನೆ. ನಾವು ಯಾರಿಗೂ ಕಷ್ಟವನ್ನು ಕೊಡಲು ಬಯಸುವುದಿಲ್ಲ ಎಂದು ಹೇಳಿದರು.
ಈ ಮಧ್ಯೆ ಸೋಮವಾರ ಶಿರಸಿಯಲ್ಲಿ ಅಧಿಕಾರಗಳ ಸಭೆ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವಾ ಶಿವಾರಾಂ ಹೆಬ್ಬಾರ್ ‘ಜಿಲ್ಲೆಯನ್ನು ಆರೇಂಜ್ ಝೋನ್ ನಲ್ಲಿ ಗುರುತಿಸಿದ ಹಿನ್ನೆಲೆಯಲ್ಲಿ ಭಟ್ಕಳವನ್ನು ಹೊರತುಪಡಿಸಿ ಉಳಿದೆಲ್ಲಾ ತಾಲೂಕುಗಳಲ್ಲಿ ಬೆಳಗ್ಗೆ 7ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಎಲ್ಲಾ ಅಂಗಡಿಗಳು ತೆರೆಯಬಹುದು, ‘ಹಳ್ಳಿ ಪ್ರದೇಶಗಳಲ್ಲಿ ಬೆಳಿಗ್ಗೆ 7ರಿಂದ ರಾತ್ರಿ 7 ರವರೆಗೆ ಅಂಗಡಿ ತೆರೆಯಲು ಅವಕಾಶ ನೀಡಲಾಗಿದೆ. ಹೇರ್ ಕಟಿಂಗ್ ಸಲೂನ್, ಬ್ಯೂಟಿ ಪಾರ್ಲರ್ ಹಾಗೂ ಐಸ್ಕ್ರೀಂ ಪಾರ್ಲರ್ ಗಳು 7 ರಿಂದ ಮಧ್ಯಾಹ್ನ 1 ರ ವರೆಗೆ ತೆರೆಯಬಹುದು’ ಎಂದು ತಿಳಿಸಿದ್ದಾರೆ.
‘ಆಟೋಗಳಲ್ಲಿ ಒಬ್ಬರನ್ನು ಕೂರಿಸಿಕೊಂಡು ಹೋಗಲು ಮಾತ್ರ ಅವಕಾಶ ನೀಡಲಾಗುತ್ತಿದೆ. ಸಾಮಾಜಿಕ ಅಂತರ ಕಾದುಕೊಳ್ಳುವುದು ಅನಿವಾರ್ಯವಾಗಿದ್ದು, ಹೋಟೆಲ್ ಗಳಲ್ಲಿ ಪಾರ್ಸಲ್ ಗಳಿಗೆ ಮಾತ್ರ ಅವಕಾಶ ನೀಡುತ್ತಿದ್ದೇವೆ. ಬಾರ್ ಗಳು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ತೆರೆಯಲು ಅವಕಾಶವಿದೆ’ ಎಂದು ಹೇಳಿದರು. ‘ಬಸ್ ಗಳು ಸಂಚರಿಸುವುದಿಲ್ಲ. ಗೋವಾದಿಂದ ರಾಜ್ಯಕ್ಕೆ ಬರುವ ಪ್ರಯಾಣಿ ಕರಿಗೆ ನಾಳೆ ಅವಕಾಶ ನೀಡಲಾಗುತ್ತದೆ. ಗೋವಾ ಗಡಿಯವರೆಗೆ ಗೋವಾದ ಬಸ್, ಅಲ್ಲಿಂದ ಜಿಲ್ಲೆಯ ಬಸ್ ಅವರನ್ನು ಕರೆತಂದು, ಇಲ್ಲಿ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ನಂತರ ರಾಜ್ಯದ ಉಳಿದ ಭಾಗಗಳಿಗೆ ಅವರನ್ನು ಕಳಿಸಲಾಗುತ್ತದೆ’ ಎಂದರು.