ಉಡುಪಿ : ಮಹಿಳಾ-ಮಕ್ಕಳ ಆಸ್ಪತ್ರೆ ನಡೆಸಲು ಅಸಾಧ್ಯ ಎಂದು ಕೈಚೆಲ್ಲಿದ ಬಿಆರ್‌ಲೈಫ್

Update: 2020-05-11 14:40 GMT

ಉಡುಪಿ, ಮೇ 11: ಜಿಲ್ಲೆಯ ಜನರ ತೀವ್ರ ಪ್ರತಿರೋಧದ ಮಧ್ಯೆ ಎರಡು ವರ್ಷಗಳಿಂದ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (ಪಿಪಿಪಿ) ಮಾದರಿಯಲ್ಲಿ ಕಾರ್ಯಾಚರಿಸುತ್ತಿರುವ ಉಡುಪಿಯ ಕರ್ನಾಟಕ ಸರಕಾರ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ನಡೆಸಲು ಅನಿವಾಸಿ ಭಾರತೀಯ ಉದ್ಯಮಿ ಭಾವಗುತ್ತು ರಘುರಾಮ ಶೆಟ್ಟಿ (ಬಿ.ಆರ್. ಶೆಟ್ಟಿ) ಮಾಲಕತ್ವದ ಬಿಆರ್‌ಎಸ್ ಆರೋಗ್ಯ ಮತ್ತು ಸಂಶೋಧನಾ ಸಂಸ್ಥೆ, ತೀವ್ರ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ತನ್ನ ಅಸಮರ್ಥತೆಯನ್ನು ವ್ಯಕ್ತಪಡಿಸಿದ್ದು, ಸರಕಾರಕ್ಕೆ ಬಿಟ್ಟುಕೊಡುವ ಇರಾದೆಯನ್ನು ಪತ್ರ ಮುಖೇನ ತಿಳಿಸಿದೆ ಎಂದು ತಿಳಿದುಬಂದಿದೆ.

ಕೊಲ್ಲಿ ರಾಷ್ಟ್ರಗಳಲ್ಲಿ ಬಹುಕೋಟಿ ಉದ್ಯಮಿಯಾಗಿರುವ ಬಿ.ಆರ್.ಶೆಟ್ಟಿ ಇತ್ತೀಚೆಗೆ ಬಹುದೊಡ್ಡ ಆರ್ಥಿಕ ಘೋಟಾಲದಲ್ಲಿ ಸಿಕ್ಕಿಹಾಕಿಕೊಂಡಿದ್ದು, ಇದು ಭಾರತದಲ್ಲಿ ಅವರು ನಡೆಸುತ್ತಿರುವ ಉದ್ಯಮಗಳೆಲ್ಲದರ ಮೇಲೆ ಪ್ರತಿಕೂಲ ಪರಿಣಾಮ ಬೀರತೊಡಗಿದೆ. ಇಲ್ಲಿನ ಎಲ್ಲಾ ಸಂಸ್ಥೆಗಳು ಆರ್ಥಿಕ ಸಂಕಷ್ಟಗಳಿಗೆ ಸಿಲುಕಿದ್ದು, ಇದರ ಪರಿಣಾಮ ಉಡುಪಿಯಲ್ಲಿ ಸರಕಾರದ ಪರವಾಗಿ ಉಚಿತ ವಾಗಿ ನಡೆಸಲು ಮುಫತ್ತಾಗಿ ಪಡೆದ 4.07 ಎಕರೆ ಜಾಗದಲ್ಲಿ ಸುಮಾರು 150 ಕೋಟಿ ರೂ.ವೆಚ್ಚದಲ್ಲಿ ತಲೆ ಎತ್ತಿದ ಸುಸಜ್ಜಿತ, ಅತ್ಯಾಧುನಿಕ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಮೇಲೆ ನೇರವಾಗಿ ಬಿದ್ದಿದೆ.

ಕೊಲ್ಲಿ ರಾಷ್ಟ್ರಗಳಲ್ಲಾದ ಬೆಳವಣಿಗೆಯ ಹಿನ್ನೆಲೆಯಲ್ಲಿ ಅವರ ಎಲ್ಲಾ ವಿದೇಶಿ ಬ್ಯಾಂಕ್‌ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿರುವುದಾಗಿ ಹೇಳಲಾಗಿದ್ದು, ಇದು ಭಾರತದಲ್ಲಿ ಅವರ ಒಟ್ಟಾರೆ ವ್ಯವಹಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಇದರಿಂದ ಅವರು ಬಿಆರ್ ಲೈಫ್ ಸಂಸ್ಥೆಯ ಮೂಲಕ ಭಾರತದ ಬೆಂಗಳೂರು, ಉಡುಪಿ, ತಿರುವನಂತಪುರಂ ಹಾಗೂ ಭುವನೇಶ್ವರಗಳಲ್ಲಿ ನಡೆಸುತ್ತಿರುವ ಅತ್ಯಾಧುನಿಕ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಆರ್ಥಿಕ ಬಿಕ್ಕಟ್ಟಿನ ಸಂಕಷ್ಟ ಎದುರಿಸುತ್ತಿವೆ ಎಂದು ವರದಿಯಾಗಿದೆ.

ಬೆಂಗಳೂರಿನಲ್ಲಿ ವೈದ್ಯರು ಮನೆಗೆ: ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿರುವ ಎಸ್‌ಎಸ್‌ಎನ್‌ಎಂಸಿ ಸೂಪರ್ ಸ್ಪೆಷ್ಟಾಲಿಟಿ ಆಸ್ಪತ್ರೆಯ 100ಕ್ಕೂ ಅಧಿಕ ನೌಕರರನ್ನು ಕೆಲಸದಿಂದ ತೆಗೆದಿದ್ದಾರೆ ಎಂದು ವರದಿಯಾಗಿದೆ. ಇವರಲ್ಲಿ ಹಿರಿಯ ವೈದ್ಯರು ಸೇರಿದಂತೆ ಖಾಯಂ ಉದ್ಯೋಗಿಗಳೂ ಸೇರಿದ್ದಾರೆ. ಕೋವಿಡ್-19ರ ಕಾರಣ ಸರಕಾರದ ಸೂಚನೆಯ ಹಿನ್ನೆಲೆಯಲ್ಲಿ ಯಾರಿಗೂ ಈ ಬಗ್ಗೆ ಅಧಿಕೃತ ಪತ್ರ ನೀಡದೇ ಕೇವಲ ಬಾಯ್ಮೆತಿನಲ್ಲೇ ತಿಳಿಸಿ ಮನೆಗೆ ಕಳುಹಿಸಲಾಗಿದೆ ಎಂದು ಸಾಕಷ್ಟು ಮಂದಿ ದೂರುತಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಸಂಸ್ಥೆಯಿಂದ ಸರಕಾರಕ್ಕೆ ಪತ್ರ: ಕಳೆದ ಎ.4ರಂದು ಸಂಸ್ಥೆ ರಾಜ್ಯ ಸರಕಾರಕ್ಕೆ ಪತ್ರ ಬರೆದಿದ್ದು, ತಮ್ಮ ಸಂಸ್ಥೆ ಎದುರಿಸುತ್ತಿರುವ ಆರ್ಥಿಕ ತೊಂದರೆಗಳ ಕಾರಣ ವೈದ್ಯರು, ಅಗತ್ಯ ವಸ್ತುಗಳು ಹಾಗೂ ಔಷಧಿಯನ್ನು ಉಚಿತವಾಗಿ ನೀಡಿ ಸಹಕರಿಸಬೇಕೆಂದು ಮನವಿಯ ರೂಪದಲ್ಲಿ ತಿಳಿಸಿತ್ತು ಎಂದು ಆರೋಗ್ಯ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.

ಆಗ ಕೋವಿಡ್ ಸಮಸ್ಯೆಗೆ ಸಿಲುಕಿದ್ದ ಸರಕಾರ ಹಾಗೂ ಆರೋಗ್ಯ ಇಲಾಖೆ ಪತ್ರದ ಕಡೆ ಹೆಚ್ಚಿನ ಗಮನ ನೀಡಿರಲಿಲ್ಲ. ಆದರೆ ಸಂಸ್ಥೆ ಸುಮ್ಮನಿರದೇ ಎ.30ರಂದು ಮತ್ತೊಂದು ನೋಟೀಸು ಕಳುಹಿಸಿ, ಈಗಿನ ಸ್ಥಿತಿಯಲ್ಲಿ ನಮಗೆ ಉಡುಪಿ ಆಸ್ಪತ್ರೆಯನ್ನು ನಡೆಸಲು ಕಷ್ಟವಾಗುತಿದ್ದು, ಅದನ್ನು ಸರಕಾರಕ್ಕೆ ಬಿಟ್ಟು ಕೊಡಲು ಸಿದ್ಧರಿದ್ದೇವೆ ಎಂದು ಅದರಲ್ಲಿ ಸ್ಪಷ್ಟಪಡಿಸಲಾಗಿತ್ತು ಎಂದು ಮೂಲ ತಿಳಿಸಿದೆ. ಈ ಪತ್ರ ಸರಕಾರಕ್ಕೆ ಸ್ಪಲ್ಪ ಬಿಸಿ ಮುಟ್ಟಿಸಿದಂತೆ ಭಾಸವಾಗುತ್ತದೆ.

ಆಸ್ಪತ್ರೆ ನಡೆಸಲು ಜಿಲ್ಲಾಡಳಿತ ಸಿದ್ಧ: ಸಂಸ್ಥೆ ಪತ್ರ ಬರೆದಿರುವ ಬಗ್ಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರನ್ನು ಕೇಳಿದಾಗ, ಈ ಬಗ್ಗೆ ರಾಜ್ಯ ಮುಖ್ಯ ಕಾರ್ಯದರ್ಶಿ ಗಳಿಂದ ತಮಗೆ ಆಸ್ಪತ್ರೆ ನಡೆಯಲು ಬೇಕಾದ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ಬಂದಿದೆ ಎಂದು ಹೇಳಿದರು.

ಆಸ್ಪತ್ರೆಯನ್ನು ನಡೆಸಲು ಬೇಕಾದ ಎಲ್ಲಾ ಕ್ರಮಕೈಗೊಳ್ಳಲು ನಾವು ಸಿದ್ಧರಿದ್ದೇವೆ. ಸದ್ಯ ಕೆಲವು ವೈದ್ಯರ ನೇಮಕಕ್ಕೆ ಬೇಕಾದ ಪ್ರಕ್ರಿಯೆ ನಡೆಯುತ್ತಿದೆ. ಇಡೀ ಆಸ್ಪತ್ರೆಯನ್ನು ನಡೆಸಲು ನಾವು ರೆಡಿ. ಯಾವುದಕ್ಕೂ ಸರಕಾರದಿಂದ ಬರುವ ಸೂಚನೆಯಂತೆ ನಾವು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು.

ಸರಕಾರದ ಸೂಚನೆಯಂತೆ ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ಎಚ್‌ಎಂ) ಅಡಿಯಲ್ಲಿ ತಲಾ ಇಬ್ಬರು ಗೈನಕಾಲಜಿಸ್ಟ್, ಮಕ್ಕಳ ರೋಗ ತಜ್ಞರು ಹಾಗೂ ಅರವಳಿಕೆ ತಜ್ಞರ ನೇಮಕಕ್ಕೆ ಬೇಕಾದ ಪ್ರಕ್ರಿಯೆಗಳನ್ನು ಆರಂಭಿಸಲಾಗಿದೆ. ಸದ್ಯ ಆಸ್ಪತ್ರೆಯಲ್ಲಿ ಈ ಮೂವರ ಕೊರತೆ ಇದೆ ಎಂದು ಹೇಳಲಾಗುತ್ತಿದೆ. ಅದರಲ್ಲೂ ಈಗ ಕೇವಲ ಇಬ್ಬರು ಗೈನಕಾಲಜಿಸ್ಟ್‌ಗಳು ಮಾತ್ರ ಸೇವೆಯಲ್ಲಿದ್ದು ಅವರ ಮೇಲೆ ವಿಪರೀತ ಒತ್ತಡ ಬೀಳುತ್ತಿದೆ ಎಂದು ತಿಳಿದುಬಂದಿದೆ. ಕಳೆದ ತಿಂಗಳು ಈ ಇಬ್ಬರು ವೈದ್ಯರು ಸುಮಾರು 400 ಹೆರಿಗೆಗಳನ್ನು ಮಾಡಿಸಿದ್ದಾರೆಂದೂ ಹೇಳಲಾಗುತ್ತಿದೆ.

ಎರಡು ವರ್ಷಗಳ ಹಿಂದಿನವರೆಗೂ ಉಡುಪಿಯಲ್ಲಿದ್ದ 70 ಹಾಸಿಗೆಗಳ ಹಾಜಿ ಅಬ್ದುಲ್ಲಾ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಉಡುಪಿ ಜಿಲ್ಲೆಯ ಬಡವರ, ಹಿಂದುಳಿದವರ, ಅಲ್ಪಸಂಖ್ಯಾತರ ಹಾಗೂ ಎಲ್ಲಾ ಬಿಪಿಎಲ್ ಜನರ ಆಶಾಕಿರಣವಾಗಿತ್ತು. ಜನರ ಪ್ರತಿರೋಧದ ನಡುವೆ ಸರಕಾರ ಇದನ್ನು ಕೆಡವಿ ಸುಸಜ್ಜಿತ 200 ಆಸ್ಪತ್ರೆಗಳ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿದ ಬಳಿಕ ಇಲ್ಲೀಗ ಜಿಲ್ಲೆ, ಹೊರಜಿಲ್ಲೆಗಳ ಮಾತ್ರವಲ್ಲದೇ, ಎಪಿಎಲ್ ಕಾರ್ಡು ಹೊಂದಿರುವವರೊಂದಿಗೆ ಹೊರರಾಜ್ಯ ಮತ್ತು ಕೆಲವರು ವಿದೇಶಗಳಿಂದಲೂ ಬಂದು ಇಲ್ಲಿ ಸಿಗುವ ಉಚಿತ ಚಿಕಿತ್ಸೆಯ ಲಾಭ ಪಡೆಯುತಿದ್ದಾರೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜ್ಯ ಸರಕಾರದೊಂದಿಗೆ ಮಾಡಿಕೊಂಡ ಒಪ್ಪಂದದಂತೆ ಸರಕಾರ, 30ವರ್ಷಗಳ ಲೀಸ್‌ಗೆ ಉಚಿತವಾಗಿ ನೀಡಿದ 4.07 ಎಕರೆ ಜಾಗದಲ್ಲಿ ನಿರ್ಮಾಣಗೊಂಡ ಈ ಆಸ್ಪತ್ರೆಯನ್ನು ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವ ರಮೇಶ್ ಕುಮಾರ್ 2017ರ ನ.19ಕ್ಕೆ ಉದ್ಘಾಟಿಸಿದ್ದು, 2018ರ ಜ.18ರಿಂದ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿತ್ತು.

ಸುಮಾರು 300 ಮಂದಿ ಸಿಬ್ಬಂದಿಗಳು, 30ರಷ್ಟು ವೈದ್ಯರಿರುವ ಈ ಆಸ್ಪತ್ರೆ ನಡೆಸಲು ಪ್ರತಿ ತಿಂಗಳು ಸುಮಾರು ಮೂರು ಕೋಟಿ ರೂ.ವೆಚ್ಚ ಬರುತ್ತದೆ ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ಈ ಹಿಂದೆ ತಿಳಿಸಿದ್ದರು. ಆದರೆ ಇಷ್ಟೊಂದು ಸಂಪನ್ಮೂಲ ಸದ್ಯ ಸರಕಾರದಲ್ಲಿಲ್ಲ. ಹೀಗಾಗಿ ಸದ್ಯಕ್ಕೆ ಅವರು ಬೇಡಿಕೆ ಇಟ್ಟಂತೆ ತಜ್ಞ ವೈದ್ಯರು, ಉಚಿತ ಔಷಧಿಯನ್ನು ಸರಕಾರ ನೀಡಲು ಆಲೋಚಿಸುತ್ತಿದೆ. ಕೋವಿಡ್ ಸಮಸ್ಯೆ ಬಗೆಹರಿದ ಬಳಿಕ ಈ ಬಗ್ಗೆ ವಿವರವಾಗಿ ಚಿಂತನೆ ನಡೆಸಬಹುದು ಎಂಬುದು ಹೆಸರು ಬಹಿರಂಗ ಪಡಿಸಲು ಇಚ್ಚಿಸದ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರ ಅಭಿಪ್ರಾಯ.

ಸರಕಾರವೇ ನಡೆಸಲಿ: ಈ ಆಸ್ಪತ್ರೆಯನ್ನು ಸರಕಾರ ಮತ್ತೆ ತನ್ನ ಸುಪರ್ದಿಗೆ ತೆಗೆದುಕೊಂಡು ನಡೆಸಬೇಕು ಎಂದು ಆಸ್ಪತ್ರೆಯ ಖಾಸಗೀಕರಣವನ್ನು ಪ್ರಾರಂಭ ದಿಂದಲೂ ವಿರೋಧಿಸಿದ್ದ ಖ್ಯಾತ ಮನೋರೋಗ ತಜ್ಞ ಡಾ.ಪಿ.ವಿ.ಭಂಡಾರಿ ಅಭಿಪ್ರಾಯ ಪಡುತ್ತಾರೆ. ಮೊದಲು ಹವಾನಿಯಂತ್ರಣವನ್ನು ತೆಗೆದು ಮೊದಲಿನಂತೆ ಇಲ್ಲಿ ಸರಳವಾಗಿ ಚಿಕಿತ್ಸೆ ನೀಡಲಿ ಎಂದವರು ಹೇಳುತ್ತಾರೆ.

ಒಟ್ಟಿನಲ್ಲಿ ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ವಿಫಲ ಪ್ರಯೋಗದ ಪಟ್ಟಿಗೆ ಮತ್ತೊಂದು ಪ್ರಯತ್ನ ಸೇಪರ್ಡೆಗೊಳ್ಳುವ ಮೊದಲು ಸರಕಾರ ಹಾಗೂ ಬಿ.ಆರ್.ಲೈಫ್ ಸಂಸ್ಥೆ ಇನ್ನೊಂದು ಪ್ರಯತ್ನ ನಡೆಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

''ಬಿಆರ್‌ಎಸ್ ಸಂಸ್ಥೆ ಪತ್ರದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಆಸ್ಪತ್ರೆ ನಡೆಸಲು ಬೇಕಾದ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿ ಗಳು ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ವೈದ್ಯರ ನೇಮಕದ ಪ್ರಕ್ರಿಯೆ ನಡೆದಿದೆ. ಸಂಸ್ಥೆಗೆ ನಡೆಸಲು ಸಾಧ್ಯವಾಗದಿದ್ದರೆ, ಜಿಲ್ಲಾಡಳಿತ ನಡೆಸಲು ಸಿದ್ಧ. ಈ ಬಗ್ಗೆ ಸರಕಾರ ನೀಡುವ ಸೂಚನೆಯನ್ನು ಪಾಲಿಸಲಾಗುವುದು''.

-ಜಿ.ಜಗದೀಶ್, ಜಿಲ್ಲಾಧಿಕಾರಿ ಉಡುಪಿ.

''ಸಂಸ್ಥೆಗೆ ಆಸ್ಪತ್ರೆ ನಡೆಸಲು ಸಾಧ್ಯವಾಗದಿದ್ದರೆ ಸರಕಾರವೇ ಆಸ್ಪತ್ರೆಯನ್ನು ಸ್ವಾಧೀನಕ್ಕೆ ಪಡೆದು ಹಿಂದಿನಂತೆ ನಡೆಸಲಿ. ಆಗ ಮೊದಲು ಆಸ್ಪತ್ರೆ ಹೆಸರನ್ನು ಹಾಜಿ ಅಬ್ದುಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಎಂದು ಮರುನಾಮಕರಣ ಮಾಡಬೇಕು. ದಾನಿ ಹಾಜಿ ಅಬ್ದುಲ್ಲರ ಕನಸಿನಂತೆ ಯಾವುದೇ ಬೇಧಭಾವ ವಿಲ್ಲದೇ ಇಲ್ಲಿ ಎಲ್ಲರಿಗೂ ಉಚಿತ ಚಿಕಿತ್ಸೆ ದೊರೆಯಬೇಕು ಎಂಬುದು ಟ್ರಸ್ಟ್‌ನ ಆಶಯ''.

-ಇಕ್ಬಾಲ್ ಮನ್ನಾ, ಹಾಜಿ ಅಬ್ದುಲ್ಲಾ ಟ್ರಸ್ಟ್‌ನ ಟ್ರಸ್ಟಿ.

ಕಾರಣಕರ್ತ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಿ: ಡಾ. ಭಂಡಾರಿ
 ರಾಜ್ಯದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮಾದರಿ ಆರೋಗ್ಯ ಕ್ಷೇತ್ರದಲ್ಲಿ ವಿಫಲವಾದ ಇತಿಹಾಸವಿದ್ದರೂ, ಉಡುಪಿಯಲ್ಲಿ ಸುಲಲಿತವಾಗಿ ನಡೆದುಕೊಂಡು ಹೋಗುತಿದ್ದ ಹಾಜಿ ಅಬ್ದುಲ್ಲ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಬಿ.ಆರ್.ಶೆಟ್ಟಿ ನೇತೃತ್ವದ ಬಿಆರ್‌ಎಸ್ ಆರೋಗ್ಯ ಮತ್ತು ಸಂಶೋಧನಾ ಸಂಸ್ಥೆಗೆ 30 ವರ್ಷಗಳ ಲೀಸ್‌ಗೆ ಬಿಟ್ಟುಕೊಟ್ಟು ಇಂದು ಅದು ವಿಫಲ ವೆನಿಸಿಕೊಳ್ಳಲು ಕಾರಣರಾದ ಹಿರಿಯ ಸರಕಾರಿ ಅಧಿಕಾರಿಗಳ ವಿರುದ್ಧ ಸರಕಾರ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಸ್ಪತ್ರೆಯ ಖಾಸಗೀಕರಣ ವಿರೋಧಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಖ್ಯಾತ ಮನೋರೋಗ ತಜ್ಞ ಡಾ. ಪಿ.ವಿ.ಭಂಡಾರಿ ಒತ್ತಾಯಿಸಿದ್ದಾರೆ.

ಆರ್ಥಿಕ ಸಮಸ್ಯೆಯ ಕಾರಣ ಆಸ್ಪತ್ರೆಯನ್ನು ಸರಕಾರಕ್ಕೆ ಬಿಟ್ಟುಕೊಡಲು ಸಿದ್ಧ ಎಂದು ಸಂಸ್ಥೆ ಸರಕಾರಕ್ಕೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ‘ವಾರ್ತಾಭಾರತಿ’ ಯೊಂದಿಗೆ ಮಾತನಾಡಿದ ಡಾ.ಭಂಡಾರಿ, ರಾಜಕಾರಣಿಗಳನ್ನು ಬಿಟ್ಟುಬಿಡಿ ಆದರೆ ಜನರ ಬಗ್ಗೆ ಬದ್ಧತೆ ಇರಬೇಕಿದ್ದ ಅಧಿಕಾರಿಗಳ ಇಂಥ ನಡೆಯ ವಿರುದ್ಧ ಖಂಡಿತ ಕ್ರಮದ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟರು.

ಒಂದು ವೇಳೆ ಸರಕಾರ ಈ ಆಸ್ಪತ್ರೆಯನ್ನು ಹಿಂದಕ್ಕೆ ಪಡೆದರೆ, ಮೊದಲು ಆಸ್ಪತ್ರೆಯ ಹೆಸರನ್ನು ಹಾಜಿ ಅಬ್ದುಲ್ಲ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಎಂದು 80ದಶಕಗಳ ಹಿಂದೆ ಆಸ್ಪತ್ರೆಗಾಗಿ ಜಾಗ ನೀಡಿ, ಕಟ್ಟಡ ನಿರ್ಮಿಸಿಕೊಟ್ಟ ದಾನಿಯ ಹೆಸರಿಡಬೇಕು. ಹಿಂದೆ ಆಸ್ಪತ್ರೆ ಇದ್ದ ಜಾಗದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಆಳವಾದ ಗುಂಡಿ ತೋಡಿರುವ ಜಾಗದಲ್ಲಿ ಮುಂದೇನು ಎಂಬುದು ನಿರ್ಧಾರವಾಗಬೇಕು ಎಂದರು.

ಅಲ್ಲದೇ ಈ ಒಪ್ಪಂದ ಜಾರಿಗೊಳ್ಳುವಲ್ಲಿ ಕೆಲವು ಅಧಿಕಾರಿಗಳು ತೋರಿದ ಆಸಕ್ತಿ ಕುರಿತು ತನಿಖೆ ನಡೆಸಿ ಕ್ರಮಕೈಗೊಳ್ಳಲಿ. ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರವನ್ನು ಖಾಸಗಿಗೆ ನೀಡದಂತೆ ಸರಕಾರ ನಿರ್ಣಯ ಕೈಗೊಳ್ಳಬೇಕು. ಈಗಿನ ಅನಗತ್ಯ ಹವಾನಿಯಂತ್ರಣ ವನ್ನು ತೆಗೆದು, ಹಿಂದಿನಂತೆ ಸರಳ, ಸರಕಾರಿ ವ್ಯವಸ್ಥೆ ಮೂಲಕ ಎಲ್ಲರಿಗೂ ಗುಣಮಟ್ಟದ ಚಿಕಿತ್ಸೆ ನೀಡಬೇಕು ಎಂದು ಅವರು ಸಲಹೆ ನೀಡಿದರು.

Writer - ಬಿ.ಬಿ. ಶೆಟ್ಟಿಗಾರ್

contributor

Editor - ಬಿ.ಬಿ. ಶೆಟ್ಟಿಗಾರ್

contributor

Similar News