ಪಿಪಿಇ ಕಿಟ್ ಧರಿಸಿ ಆರೈಕೆ ಮಾಡುವುದು ವಿಚಿತ್ರ ಅನುಭವ : ಕೋವಿಡ್ ಆಸ್ಪತ್ರೆ ವೆನ್ಲಾಕ್‌ನ ದಾದಿ ಶಶಿಕಲಾ
ಮಂಗಳೂರು : ‘‘ಕೋವಿಡ್-19 ಸೋಂಕು ರೋಗಿಗಳ ಚಿಕಿತ್ಸೆ, ಆರೈಕೆಯ ಪರಿಭಾಷೆಯನ್ನೇ ಬದಲಾಯಿಸಿಬಿಟ್ಟಿದೆ. ರೋಗಿಗಳ ಜೊತೆ ದಾದಿಯರು ಹೊಂದಿರುತ್ತಿದ್ದ ಸಾಮಿಪ್ಯ ಇಂದು ದೂರವಾಗಿಸಿದೆ. ಪಿಪಿಇ ಕಿಟ್ ಧರಿಸಿಕೊಂಡು ಕೋವಿಡ್ ಸೋಂಕಿತರನ್ನು ಆರೈಕೆ ಮಾಡುವುದು ಒಂದು ವಿಚಿತ್ರ ಅನುಭವ’’.
ಇದು ದ.ಕ. ಜಿಲ್ಲೆಯ ಕೋವಿಡ್ ಆಸ್ಪತ್ರೆಯಾಗಿ ಮಾರ್ಪಟ್ಟಿರುವ ವೆನ್ಲಾಕ್ ಆಸ್ಪತ್ರೆಯ ನರ್ಸ್ ಶಶಿಕಲಾ ಅವರ ಮಾತು.
22 ವರ್ಷಗಳಿಂದ ನರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಉಳ್ಳಾಲ ನಿವಾಸಿಯಾದ ಶಶಿಕಲಾ, 1998ರಲ್ಲಿ ವೆನ್ಲಾಕ್ ಆಸ್ಪತ್ರೆಯಲ್ಲಿ ಸೇವೆ ಆರಂಭಿಸಿದವರು. ನರ್ಸಿಂಗ್ ಪದವೀಧರೆಯಾಗಿರುವ ಶಶಿಕಲಾ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ವಿವಿಧ ಕಡೆಗಳಲ್ಲಿ ಕರ್ತವ್ಯ ನಿರ್ವಹಿಸಿ 2013ರಿಂದ ಪ್ರಸ್ತುತ ವೆನ್ಲಾಕ್‌ನಲ್ಲಿಯೇ ಸೇವೆ ಸಲ್ಲಿಸುತ್ತಿದ್ದಾರೆ.
ವೆನ್ಲಾಕ್ ಪ್ರಸ್ತುತ ಸಂಪೂರ್ಣ ಕೋವಿಡ್ ಆಸ್ಪತ್ರೆಯಾಗಿರುವುದರಿಂದ ಇಲ್ಲಿ ಕೊರೋನ ಸೋಂಕಿತರು, ರೋಗ ಲಕ್ಷಣ ಹೊಂದಿದ ಶಂಕಿತರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಮೇ 12ರಂದು ವಿಶ್ವ ದಾದಿಯರ ದಿನಾಚರಣೆಯ ಹಿನ್ನೆಲೆಯಲ್ಲಿ ‘ವಾರ್ತಾಭಾರತಿ’ ಅವರನ್ನು ಮಾತನಾಡಿಸಿದಾಗ, ಕೋವಿಡ್ ಸೋಂಕಿತರು ಹಾಗೂ ಅವರ ಆರೈಕೆ ಕುರಿತಾದ ತಮ್ಮ ಅನುಭವಗಳನ್ನು ಶಶಿಕಲಾ ಹಂಚಿಕೊಂಡರು.
ಇದೊಂದು ಹೊಸ ರೀತಿಯ ಅನುಭವ. ವೆನ್ಲಾಕ್ ಆಸ್ಪತ್ರೆಯಲ್ಲಿ ಹೊರ ರಾಜ್ಯ, ಜಿಲ್ಲೆಗಳು ಸೇರಿದಂತೆ ಸಾವಿರಾರು ರೋಗಿಗಳು ನಾನಾ ರೀತಿಯ ಚಿಕಿತ್ಸೆಗಾಗಿ ಆಗಮಿಸುತ್ತಿದ್ದರು. ಇಲ್ಲಿ ನಾನಾ ರೀತಿಯ ರೋಗಿಗಳ ಆರೈಕೆಯ ಅವಕಾಶವನ್ನು ನಾನು ಪಡೆದುಕೊಂಡಿದ್ದೇನೆ. ಆದರೆ ಈ ಕೋವಿಡ್ ಚಿಕಿತ್ಸೆ, ಆರೈಕೆ ತುಂಬಾನೆ ವಿಭಿನ್ನ. ಇದು ಒಂದಷ್ಟು ಒತ್ತಡದ ಜತೆಗೆ ಜವಾಬ್ದಾರಿಯನ್ನೂ ಹೆಚ್ಚಿಸಿದೆ. ಹಿಂದೆಲ್ಲಾ ಕೆಲವೊಂದು ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ರೋಗಿಗಳ ಜತೆ ಸಾಕಷ್ಟು ಸಾಮಿಪ್ಯದಲ್ಲಿ ಬೆರೆತು ಆರೈಕೆ ಮಾಡಲು ಸಾಧ್ಯವಾಗುತ್ತಿತ್ತು. ಆದರೆ ಪ್ರಸ್ತುತ ಕೊರೋನ ಸೋಂಕಿತರ ಆರೈಕೆ ಅಥವಾ ಚಿಕಿತ್ಸೆ ಸಂದರ್ಭದಲ್ಲಿ ಪಿಪಿಇ ಕಿಟ್ ಧರಿಸುವುದು ಅನಿವಾರ್ಯ. ಅದರಲ್ಲೂ ಕೇವಲ ಕೊರೋನ ಸೋಂಕಿತರಾಗಿದ್ದಲ್ಲಿ ನಿಗದಿತ ಸಮಯಕ್ಕೆ ಅವರನ್ನು ಭೇಟಿ ಮಾಡಿ ಅವರ ಅಗತ್ಯಗಳನ್ನು ಪೂರೈಸುವ ಜವಾಬ್ದಾರಿಯನ್ನು ನಿರ್ವಹಿಸಿದರೆ ಸಾಕು. ಆದರೆ ಐಸಿಯು ಅಥವಾ ವೆಂಟಿಲೇಟರ್‌ಗಳಲ್ಲಿ ಇರುವ ಕೊರೋನ ಸೋಂಕಿತರನ್ನು ಅತ್ಯಂತ ಹತ್ತಿರದಿಂದ ಅವರಿಗೆ ಚಿಕಿತ್ಸೆಯನ್ನು ಒದಗಿಸಬೇಕಾಗಿರುವುದರಿಂದ ಪಿಪಿಇ ಕಿಟ್ ಧರಿಸಬೇಕಾಗುತ್ತದೆ. ಹಿಂದೆಯೂ ರೋಗಿಗಳ ಸೇವೆ ನಮ್ಮ ಕರ್ತವ್ಯವಾಗಿತ್ತು. ಈಗಲೂ ಅದನ್ನೇ ನಾವು ಮಾಡಬೇಕಿದೆ ಎನ್ನುತ್ತಾರೆ ಶಶಿಕಲಾ.
‘‘ಕೊರೋನ ಸೋಂಕಿತರಿಗೆ ಅಥವಾ ಕೊರೋನ ರೋಗಿಗಳ ಆರೈಕೆ ದಾದಿಯರಾಗಿ ನಮ್ಮ ಕರ್ತವ್ಯವೇ ಹೊರತು ರಿಸ್ಕ್ ಎಂದು ಯಾವತ್ತೂ ಅನ್ನಿಸಿಲ್ಲ. ಆದರೆ ಕೋವಿಡ್‌ಗೆ ಸಂಬಂಧಿಸಿ ನಾವು ನಮ್ಮ ಆರೋಗ್ಯದ ಜತೆಗೆ ಇತರರ ಬಗ್ಗೆಯೂ ಕಾಳಜಿ ವಹಿಸಬೇಕಾಗಿರುವುದರಿಂದ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಲೇಬೇಕು. ಅದನ್ನು ನಾವು ಮಾಡುತ್ತೇವೆ. ಅದರಲ್ಲೂ ಕೊರೋನ ಸೋಂಕಿತರ ಜತೆಗೆ ವ್ಯವಹರಿಸುವ, ಆರೈಕೆ ಮಾಡುವ ದಾದಿಯರು ಸೇರಿದಂತೆ ಎಲ್ಲರೂ ಪಿಪಿಇ ಕಿಟ್ ಸೇರಿದಂತೆ ಎಲ್ಲಾ ರೀತಿಯ ಶಿಸ್ತನ್ನೂ ಪಾಲಿಸುವುದರಿಂದ ರಿಸ್ಕ್‌ನ ಆತಂಕ ಕಡಿಮೆ. ಆದರೆ ಪಿಪಿಇ ಕಿಟ್ ಧರಿಸಿ ಸೋಂಕಿತರ ಆರೈಕೆ ಮಾತ್ರ ನಿಜಕ್ಕೂ ಒಂದು ರೀತಿಯ ಅಸಾಯಕ ಸ್ಥಿತಿ’’ ಎನ್ನುತ್ತಾರೆ ಶಶಿಕಲಾ.
‘‘ಐಸಿಯು ಅಥವಾ ವೆಂಟಿಲೇಟರ್‌ಗಳಲ್ಲಿರುವ ಸೋಂಕಿತರಿಗೆ ಆರೈಕೆ ಮಾಡುವವರು ಅವರ ಬಳಿಯಲ್ಲೇ ಇರಬೇಕಾಗುತ್ತದೆ. ಹಾಗಾಗಿ ಪಿಪಿಇ ಕಿಟ್ ಧರಿಸಬೇಕು. ಕನಿಷ್ಠ ಆರು ಗಂಟೆಗಳ ಕಾಲ ಪಿಪಿಇ ಕಿಟ್ ಧರಿಸಿದರೆ ಬಾಯಾರಿದರೂ ನೀರು ಕುಡಿಯುವಂತಿಲ್ಲ. ವಾಶ್ ರೂಂಗೆ ಹೋಗುವಂತಿಲ್ಲ’’ ಎಂದು ವಿವರಿಸುತ್ತಾರೆ ಶಶಿಕಲಾ.
ಹಿಂದಿನಂತೆ ರೋಗಿಗಳ ಜತೆ ವ್ಯವಹರಿಸುವ ಸ್ವಾತಂತ್ರವಿಲ್ಲ!
‘‘ದಾದಿಯರಾಗಿ ನಾವು ರೋಗಿಗಳನ್ನು ಅತಿ ಹತ್ತಿರದಿಂದ ನೋಡುವವರು. ಅವರ ಜತೆ ವ್ಯವಹರಿಸುವವರು. ರೋಗಿಗಳು ಮತ್ತು ದಾದಿಯರ ನಡುವಿನ ಆತ್ಮೀಯತೆಯೇ ವಿಭಿನ್ನ. ಆದರೆ ಕೊರೋನ ಸೋಂಕಿತರು ಅಥವಾ ಶಂಕಿತರ ಜತೆ ಹಿಂದಿನಂತೆ ವ್ಯವಹರಿಸುವ ಸ್ವಾತಂತ್ರವಿಲ್ಲ. ಪಿಪಿಇ ಕಿಟ್ ಧರಿಸಿದರೆ ಒಂದು ರೀತಿಯ ಅನುಭವವಾದರೆ, ಇತರ ಸಂದರ್ಭದಲ್ಲಿ ನಿಗದಿತ ಅಂತರವನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಪಿಪಿಇ ಕಿಟ್ ಧರಿಸಿ ಸೋಂಕಿತರ ಜತೆ ವ್ಯವಹಾರ ಸ್ವಲ್ಪ ಕಷ್ಟ. ಮಾಸ್ಕ್ ಹಾಕಿಕೊಳ್ಳಿ, ಅಂತರ ಕಾಪಾಡಿ ಎಂದು ಪದೇ ಪದೇ ಹೇಳುತ್ತಿರಬೇಕಾಗುತ್ತದೆ. ಅದರಿಂದ ಅವರಿಗೆ ಎಲ್ಲಿ ಬೇಸರವಾಗುತ್ತದೋ ಎಂಬ ಅಂಜಿಕೆಯೂ ಕೆಲವೊಮ್ಮೆ ಕಾಡುತ್ತದೆ’’ .
ನನ್ನ ಕುಟುಂಬ, ನೆರೆಮನೆಯವರಿಂದಲೂ ಕಾಳಜಿ
‘‘ಕೊರೋನ ಸೋಂಕಿತರಿಗೆ ಚಿಕಿತ್ಸೆ ಅಥವಾ ಆರೈಕೆ ನೀಡುವವರ ಬಗ್ಗೆ ಜನಸಾಮಾನ್ಯರಲ್ಲಿ ಒಂದು ರೀತಿಯ ಆತಂಕ, ಭಯ ಸಹಜ. ಅವರಿಂದಾಗಿ ಸೋಂಕು ನಮಗೆಲ್ಲಿ ಹರಡಬಹುದೋ ಎಂಬ ಭೀತಿ ಸಾಮಾನ್ಯ. ಆದರೆ ನಮಗೆ ಈ ಬಗ್ಗೆ ಸಾಕಷ್ಟು ತರಬೇತಿ ನೀಡಲಾಗಿದೆ. ಹಾಗಿದ್ದರೂ ನಾನು ಮನೆಗೆ ಹೋಗುವ ಸಂದರ್ಭ ಮಕ್ಕಳು ಮನೆಯವರೊಂದಿಗೆ ವ್ಯವಹರಿಸುವ ಸಂದರ್ಭದಲ್ಲೂ ಸಾಕಷ್ಟು ಜಾಗರೂಕತೆ ವಹಿಸುತ್ತೇನೆ. ಆದರೆ ನನ್ನಿಬ್ಬರು ಮಕ್ಕಳು ಹಾಗೂ ಪತಿ ಸಾಕಷ್ಟು ಪ್ರೋತ್ಸಾಹ ನೀಡುತ್ತಾರೆ. ಯಾವತ್ತೂ ಅವರು ನನ್ನ ಬಗ್ಗೆ ಆತಂಕ ಪಟ್ಟಿಲ್ಲ. ಬದಲಾಗಿ ಹಿಂದಿಗಿಂತಲೂ ಹೆಚ್ಚಿನ ಪ್ರೀತಿ, ಕಾಳಜಿ ತೋರಿಸುತ್ತಿದ್ದಾರೆ. ನೆರೆ ಮನೆಯವರು ಕೂಡಾ ಕಾಳಜಿಯಿಂದಲೇ ನಾನು ಹೆಚ್ಚು ಜಾಗರೂಕಳಾಗಿರುವಂತೆ ಸಲಹೆ ನೀಡುತ್ತಾರೆ. ಇನ್ನು ವೆನ್ಲಾಕ್‌ನಲ್ಲಿ ಕೊರೋನ ಸೋಂಕಿತರಾಗಲಿ, ಶಂಕಿತರಾಗಲಿ ಒರಟಾಗಿ ವರ್ತಿಸಿದ್ದನ್ನು ನಾನು ಕಂಡಿಲ್ಲ. ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು ಸೇರಿದಂತೆ ನಾವು ಹೇಳಿದ್ದನ್ನು ಕೇಳುತ್ತಾರೆ’’ ಎನ್ನುತ್ತಾರೆ ಶಶಿಕಲಾ