ಆಟೋ, ಟ್ಯಾಕ್ಸಿ ಚಾಲಕರಿಗೆ ಸಹಾಯಧನ: ಅರ್ಜಿ ಸಲ್ಲಿಸಲು ರಾಜ್ಯ ಸರಕಾರ ಸೂಚನೆ

Update: 2020-05-17 17:35 GMT

ಬೆಂಗಳೂರು, ಮೇ 17: ಲಾಕ್‍ಡೌನ್ ಜಾರಿಯಾದ ಬಳಿಕ ಸಂಕಷ್ಟದಲ್ಲಿರುವ ಆಟೋ ಚಾಲಕರು ಮತ್ತು ಟ್ಯಾಕ್ಸಿ ಚಾಲಕರಿಗೆ ಒಂದು ಬಾರಿ 5 ಸಾವಿರ ರೂ. ಪರಿಹಾರ ನೀಡಲು ರಾಜ್ಯ ಸರಕಾರ ಮುಂದಾಗಿದ್ದು, ಕೆಲ ದಾಖಲೆಗಳ ಮೂಲಕ ಅರ್ಜಿ ಸಲ್ಲಿಸಲು ಸೂಚಿಸಿದೆ.

ಎಲ್ಲಾ ಅರ್ಜಿಗಳನ್ನು ಸೇವಾ ಸಿಂಧು ಪೋರ್ಟಲ್ ಮೂಲಕ ಸ್ವೀಕರಿಸಬೇಕು. 2020ರ ಮಾರ್ಚ್ 24 ರ ಒಳಗೆ ಚಾಲನಾ ಪರವಾನಿಗೆ ಪ್ರಮಾಣಪತ್ರ(ಡಿಎಲ್) ಮತ್ತು ಫಿಟ್ನೆಸ್ ಸರ್ಟಿಫಿಕೇಟ್ ಹೊಂದಿದ ವಾಹನಗಳಿಗೆ ಮಾತ್ರ ಹಾಗೂ ಮಾರ್ಚ್ 24ರಂದು ಚಾಲ್ತಿಯಲ್ಲಿದ್ದ ಚಾಲನಾ ಪರವಾನಿಗೆ ಸಂಖ್ಯೆಗಿಂತ ಹೆಚ್ಚು ಫಲಾನುಭವಿಗಳು ಇಲ್ಲದಂತೆ ಖಚಿತಪಡಿಸಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸರಕಾರ ಸೂಚನೆ ನೀಡಿದೆ.

ಆಧಾರ್ ಕಾರ್ಡ್, ಡಿಎಲ್, ವಾಹನ ನೋಂದಣಿ ಸಂಖ್ಯೆ ಅಗತ್ಯವಾಗಿರುವುದು ಎಲ್ಲ ಫಲಾನುಭವಿಗಳಿಗೆ ಕಡ್ಡಾಯವಾಗಿರುತ್ತದೆ. ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಇದು ಅನ್ವಯವಾಗಲಿದ್ದು, ಮ್ಯಾಕ್ಸಿ ಕ್ಯಾಬ್‍ಗಳಿಗೆ ಅನ್ವಯಿಸುವುದಿಲ್ಲ. ಪರಿಹಾರ ಕೇವಲ ಅನುಜ್ಞಾ ಪತ್ರವನ್ನು ಹೊಂದಿರುವ ಮತ್ತು ಅಗತ್ಯವಿರುವ ಚಾಲಕರ ಬ್ಯಾಂಕ್ ಖಾತೆಗೆ ಡಿಬಿಟಿ ಮುಖಾಂತರ ಸಂದಾಯವಾಗಬೇಕು. ಒಂದು ವೇಳೆ ಆಟೋ, ಟ್ಯಾಕ್ಸಿ ಮಾಲಕರಿಗೆ ಸಂದಾಯವಾದಲ್ಲಿ ಕೆಲವೊಂದು ಮಾಲಕರು ಹೆಚ್ಚಿನ ಸಂಖ್ಯೆಯ ಆಟೋ, ಟ್ಯಾಕ್ಸಿಗಳನ್ನು ಹೊಂದಿದ್ದು ಅವರಿಗೆ ಪರಿಹಾರ ಧನ ಸಂದಾಯವಾದಲ್ಲಿ ಜೀವನ ನಿರ್ವಹಣೆ ಎದುರಿಸುತ್ತಿರುವ ಚಾಲಕರಿಗೆ ಸಿಗದಂತಾಗುತ್ತದೆ. ಹಾಗಾಗಿ ಡುಪ್ಲಿಕೇಶನ್ ಅಥವಾ ಡಬಲ್ ಪೇಮೆಂಟ್ ಆಗದಂತೆ ಎಚ್ಚರಿಕೆ ವಹಿಸಬೇಕು.

ಅವರುಗಳ ಆಧಾರ್ ಕಾರ್ಡ್, ಪಾನ್ ಕಾರ್ಡ್ ಬ್ಯಾಂಕ್ ಖಾತೆಗೆ ಅಗತ್ಯವಾಗಿ ಲಿಂಕ್ ಆಗಿರುವ ಬಗ್ಗೆ ಗಮನಹರಿಸಿ ಹಣ ವರ್ಗಾವಣೆ ಮಾಡಬೇಕು. ಯಾವುದೇ ಮಧ್ಯಂತರ ಸಂಪರ್ಕ ಇರಬಾರದು. ಫಲಾನುಭವಿಗಳು ಮತ್ತು ಸರಕಾರದ ನೇರ ಸಂಪರ್ಕ ಇರಬೇಕು. ಕೆಲವು ಫಲಾನುಭವಿಗಳ ಆರ್ಥಿಕ ಸ್ಥಿತಿ ಅವರ ಅಗತ್ಯದ ಬಗ್ಗೆ ಗಮನ ಹರಿಸಬೇಕು. ಅರ್ಹ ಫಲಾನುಭವಿಗಳಿಂದ ಲಾಕ್‍ಡೌನ್ ಅವಧಿಯಲ್ಲಿ ಆರ್ಥಿಕ ಸ್ಥಿತಿ ಸದೃಢವಾಗಿ ಇಲ್ಲದಿರುವ ಬಗ್ಗೆ ಸ್ವಯಂ ದೃಢೀಕರಣ ಪಡೆದು ಪರಿಹಾರ ನೀಡಲು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News