ಹಡಗು ಎಲ್ಲಿಂದಲೇ ಬರಲಿ.... ಹಳೆ ಬಂದರು ದಡ ಸೇರಲು ಪೈಲಟ್ ಹುಸೈನಬ್ಬರ ಗ್ರೀನ್ ಸಿಗ್ನಲ್ ಅಗತ್ಯ !

Update: 2020-05-28 09:15 GMT

ಮಂಗಳೂರು, ಮೇ 28: ಸರಕು ಸಾಮಗ್ರಿ ಸೇರಿದಂತೆ, ಪ್ರಯಾಣಿಕರನ್ನು ಹೊತ್ತು ಹಳೆ ಬಂದರಿಗೆ ಬರುವ ಹಡಗುಗಳು ದಡವನ್ನು ಸೇರಬೇಕಾದರೆ ಮಂಗಳೂರು ಹಳೆ ಬಂದರಿನಲ್ಲಿ ನಿಯೋಜಿಸಲಾಗಿರುವ ಅಧಿಕೃತ ಪೈಲಟ್ ಅವರ ಗ್ರೀನ್ ಸಿಗ್ನಲ್ ಬೇಕೇ ಬೇಕು.

ನಗರದ ಹಳೆ ಬಂದರು ಜೆಟ್ಟಿಗೆ ಬರುವ ಹಡಗುಗಳು ಹಳೆ ಬಂದರಿನಿಂದ ಅಂದಾಜು ಸುಮಾರು ನಾಲ್ಕು ಕಿ.ಮೀ. ದೂರದಲ್ಲಿ ನಿಗದಿತ ಪ್ರದೇಶ (ನಿಶಾನೆ ಇರುವ ಸ್ಥಳ)ಕ್ಕೆ ಬಂದು ನಿಲ್ಲುತ್ತವೆ. ಅಲ್ಲಿಂದ ಹಳೆ ಬಂದರಿನ ದಡಕ್ಕೆ ಆ ಹಡಗು ಸೇರಬೇಕಾದರೆ, ಕರ್ನಾಟಕ ಬಂದರು ಇಲಾಖೆ ಯಿಂದ ನೇಮಕಗೊಂಡಿರುವ ಪೈಲಟ್ ನೇತೃತ್ವದಲ್ಲಿ ಖುದ್ದು ಅವರು ಅಥವಾ ಅವರ ಸಹಾಯಕರು ಸಣ್ಣ ದೋಣಿಯ ಮೂಲಕ ನಿಗದಿತ ಪ್ರದೇಶಕ್ಕೆ ತೆರಳಿ ಆ ಹಡಗನ್ನು ದಡಕ್ಕೆ ಕರೆ ತರಬೇಕು. ಹಳೆ ಬಂದರು ಜೆಟ್ಟಿಯಲ್ಲಿ ಸದ್ಯ ಇಬ್ಬರು ಸರಕಾರದ ಬಂದರು ಇಲಾಖೆಯಿಂದ ನಿಯೋಜಿಸಲ್ಪಟ್ಟ ಪೈಲಟ್‌ಗಳಿದ್ದಾರೆ. ಅವರಲ್ಲಿ ಓರ್ವರು ಯು.ಕೆ. ಹುಸೈನಬ್ಬ.

ಇವರು ಕಳೆದ 28 ವರ್ಷಗಳಿಂದ ಪೈಲಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಂದು ಲಕ್ಷದ್ವೀಪದಿಂದ ಮಂಗಳೂರು ಹಳೆಬಂದರು ಜೆಟ್ಟಿಗೆ ಆಗಮಿಸಿದ ‘ಅಮಿನ್‌ದಿವಿ’ ಹಡಗು ನಿಗದಿತ ಪ್ರದೇಶದಿಂದ ಹಳೆ ಬಂದರು ಜೆಟ್ಟಿ ಸೇರುವ ಸಂದರ್ಭ ಗ್ರೀನ್ ಸಿಗ್ನಲ್ ನೀಡಿದವರು ಇವರು. ಹಡಗು ನಿಗದಿತ ಪ್ರದೇಶಕ್ಕೆ ಆಗಮಿಸುವ ಸೂಚನೆ ದೊರೆತಾಕ್ಷಣ ಹಳೆ ಬಂದರು ಜೆಟ್ಟಿಯಲ್ಲಿದ್ದ ಇತರ ಸಣ್ಣ ದೋಣಿಗಳನ್ನು ಸ್ಥಳದಿಂದ ತೆರವುಗೊಳಿಸಿ ಹಡಗು ತಂಗಲು ಸೂಕ್ತ ಸ್ಥಳಾವಕಾಶವನ್ನು ಹುಸೈನಬ್ಬ ನೇತೃತ್ವದಲ್ಲಿ ಕಲ್ಪಿಸಲಾಯಿತು. ಬಳಿಕ ಸಣ್ಣ ದೋಣಿಯ ಮೂಲಕ ಹುಸೈನಬ್ಬ ಅವರ ಸಹಾಯಕರು ತೆರಳಿ ನಿಗದಿತ ಸ್ಥಳದಿಂದ ‘ಅಮಿನ್‌ದಿವಿ’ ಹಡಗಿಗೆ ದಾರಿ ತೋರಿಸುತ್ತಾ ದಡ ಸೇರಿಸಿದರು.

ವಿಮಾನದ, ಹಡಗಿನ ಪೈಲಟ್‌ಗಳು, ಕೋಸ್ಟ್‌ಗಾರ್ಡ್‌ನ ಹಡಗಿನಲ್ಲಿ ಕರ್ತವ್ಯ ನಿರ್ವಹಿಸುವ ಪೈಲಟ್‌ಗಳು ಶ್ವೇತವರ್ಣ ವಸ್ತ್ರವನ್ನು ಧರಿಸರಿತ್ತಾರೆ. ಹಳೆ ಬಂದರಿನ ಜೆಟ್ಟಿಯ ಈ ಪೈಲಟ್ ಕೂಡಾ ಶ್ವೇತವಸ್ತ್ರಧಾರಿ. ಶುಭ್ರವಾದ ಬಿಳಿ ಪಂಚೆಯೊಂದಿಗೆ ಬಿಳಿ ಶರ್ಟ್ ಧರಿಸುವ ಹುಸೈನಬ್ಬ, ಮೂಲತ: ಉಳ್ಳಾಲದವರು. ಲಕ್ಷದ್ವೀಪ ಸೇರಿದಂತೆ ವಿವಿಧ ಕಡೆಗಳಿಂದ ಹಳೆ ಬಂದರಿನ ಜೆಟ್ಟಿಗೆ ಹಡಗುಗಳು ಆಗಮಿಸುವ ವೇಳೆ, ಇಲ್ಲಿಂದ ಸಣ್ಣ ಹಡಗಿನ ಮೂಲಕ ಪೈಲಟ್ ಮಾರ್ಗದರ್ಶನದಲ್ಲಿ ಸ್ವತಹ ಪೈಲಟ್‌ಗಳೇ ಅಥವಾ ಅವರ ಸಹಾಯಕರು ನಿಗದಿತ ಸ್ಥಳಕ್ಕೆ ತಲುಪುತ್ತಾರೆ. ಅಲ್ಲಿ ಬಂದು ತಂಗಿರುವ ಹಡಗನ್ನೇರುವ ಈ ಪೈಲಟ್ ಹಡಗನ್ನು ಮುನ್ನಡೆಸಿಕೊಂಡು ದಡಕ್ಕೆ ಸುರಕ್ಷಿತವಾಗಿ ಸೇರಿಸುವ ಜವಾಬ್ಧಾರಿಯನ್ನು ಹೊಂದಿರುತ್ತಾರೆ.

‘‘ಪ್ರಸ್ತುತ ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಕಡಲಿನಲ್ಲಿ ಪ್ರಕ್ಷುಬ್ಧ ವಾತಾವರಣವಿರುವ ಕಾರಣ ಮೇ 15ರ ಬಳಿಕ ಬಂದರಿಗೆ ಹಡಗುಗಳ ಪ್ರವೇಶಕ್ಕೆ ನಿಷೇಧವಿದೆ. ಆದರೆ, ಇಂತಹ ತುರ್ತು ಸಂದರ್ಭಗಳಲ್ಲಿ ಸರಕಾರದ ಅನುಮತಿಯೊಂದಿಗೆ ಈ ಪ್ರಕ್ರಿಯ ನಡೆಸಲಾಗುತ್ತದೆ. ಎನ್‌ಎಂಟಿಪಿ ಬಂದರಿನಲ್ಲಿ ಹಡಗುಗಳ ನಿರ್ವಹಣೆ ಸುಲಭ. ಅಲ್ಲಿ ಸಾಕಷ್ಟು ಸೌಲಭ್ಯಗಳಿವೆ. ಹಳೆ ಬಂದರಿನಲ್ಲಿ ಹಡಗುಗಳ ನಿರ್ವಹಣೆ ಸ್ವಲ್ಪ ಕಷ್ಟ. ಸರಕಾರ ಈ ತುರ್ತು ಸಂದರ್ಭದಲ್ಲಿಯೂ ಸಂಕಷ್ಟದಲ್ಲಿರುವವರನ್ನು ಕರೆತರುವ ಕಾರ್ಯ ಮಾಡುತ್ತಿದೆ. ಅದಕ್ಕೆ ನಾವು ಸಹಕಾರ ನೀಡುತ್ತಿದ್ದೇವೆ’’ ಎನ್ನುತ್ತಾರೆ ಹುಸೈನಬ್ಬ.

Writer - ಸತ್ಯಾ ಕೆ.

contributor

Editor - ಸತ್ಯಾ ಕೆ.

contributor

Similar News