ಮಂಗಳೂರು: ಮಳೆಗಾಲ ಸಮೀಪಿಸಿದೆ- ಅಪಾಯಗಳು ಬಾಯ್ದೆರೆದಿವೆ.....!
ಮಂಗಳೂರು, ಮೇ 28: ಮಳೆಗಾಲ ಸಮೀಪಿಸುತ್ತಿದ್ದು, ನಗರದ ಕೆಲವೆಡೆ ಪ್ರಮುಖ ಭಾಗಗಳಲ್ಲಿ ರಸ್ತೆ, ಹೆದ್ದಾರಿ ಕಾಮಗಾರಿಗಳು ಅರ್ಧಕ್ಕೆ ನಿಂತಿದ್ದು, ಕೆಲವು ಅತ್ಯಂತ ನಿಧಾನಗತಿಯಲ್ಲಿ ನಡೆಯುತ್ತಿರುವುದರಿಂದ ಭಾರೀ ಅಪಾಯದ ಸೂಚನೆಯನ್ನೂ ನೀಡುತ್ತಿವೆ.
ಎಕ್ಕೂರಿನಿಂದ ಪಂಪ್‌ವೆಲ್‌ಗೆ ಸಾಗುವ ದಾರಿಯಲ್ಲಿ (ಗೋರಿಗುಡ್ಡ ತಿರುವು- ಹಿಲ್ ಸ್ಟ್ರೀಕ್ ಫ್ಲಾಟ್‌ನ ಎದುರು) ಉದ್ದಕ್ಕೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಅಲ್ಲಿ ಬೃಹತ್ ಹೊಂಡಗಳನ್ನು ತೆಗೆಯಲಾಗಿದೆ. ಒಂದೆಡೆ ಗುಂಡಿ ಮತ್ತೊಂದು ಕಡೆ ಹೈವೇ ಪಕ್ಕದಲ್ಲೇ ಗುಂಡಿಯಿಂದ ತೆಗೆದ ಮಣ್ಣನ್ನು ಪೇರಿಸಲಾಗಿದೆ. ಧಾರಾಕಾರ ಮಳೆ ಸುರಿದಲ್ಲಿ ಮಣ್ಣು ಹೈವೇ ರಸ್ತೆಗೆ ಸೇರಿ ರಸ್ತೆ ಕೆಸರು ಮಯವಾಗುವ ಭೀತಿಯ ಜತೆಗೆ ಗುಂಡಿಗೆ ವಾಹನಗಳು ಅಥವಾ ಅಲ್ಲಿ ನಡೆದಾಡುವ, ಫ್ಲಾಟ್‌ಗಳಿಗೆ ಸಾಗುವ ಮಕ್ಕಳು ಅಥವಾ ನಾಗರಿಕರು ಬೀಳುವ ಸಾಧ್ಯತೆ ಇದೆ ಎನ್ನುವುದು ಸ್ಥಳೀಯರ ಆತಂಕ.
ಇದೇ ವೇಳೆ ನಗರದ ಪಂಪ್‌ವೆಲ್‌ನಿಂದ ಕಂಕನಾಡಿ ಸಾಗುವ ಬಳಿ ರಾಜಕಾಲುವೆಯನ್ನು ಸಂಪರ್ಕಿಸುವ ಮಳೆ ನೀರು ಹರಿದು ಹೋಗುವ ಪೈಪ್ ಒಡೆದಿದ್ದು, ಅದನ್ನು ದುರಸ್ತಿ ಮಾಡುವ ಕಾರ್ಯ ನಡೆಯುತ್ತಿದೆ. ಸದ್ಯ ಇಲ್ಲಿ ಕಾಮಗಾರಿ ನಡೆಯುತ್ತಿರುವ ಭಾಗದ ರಸ್ತೆ ಮುಚ್ಚಲಾಗಿದೆ. ಹಾಗಿದ್ದರೂ ಭಾರೀ ಮಳೆ ಸುರಿದ್ದಲ್ಲಿ ಸಮಸ್ಯೆ ಎದುರಾಗುವ ಭೀತಿ ಇದೆ.
ಇದೇ ವೇಳೆ ನಗರದ ಹಲವು ಕಡೆಗಳಲ್ಲಿ ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಸುಮಾರು ಎರಡು ತಿಂಗಳ ಲಾಕ್‌ಡೌನ್‌ನಿಂದಾಗಿ ಅರ್ಧಕ್ಕೆ ಸ್ಥಗಿತ ಗೊಂಡಿದ್ದ ರಸ್ತೆ , ನಿರ್ಮಾಣ ಕಾಮಗಾರಿಗಳು ಕೆಲವೆಡೆ ನಡೆಯುತ್ತಿದೆ. ಮಳೆಗಾಲದ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದು ಅತ್ಯಗತ್ಯ. ಮಳೆಗಾಲದ ಸಂದರ್ಭ ನಗರದ ಪಂಪ್‌ವೆಲ್, ಜ್ಯೋತಿ, ಕೊಟ್ಟಾರ, ಕೊಡಿಯಾಲ್‌ಬೈಲ್ ಸೇರಿದಂತೆ ಹಲವಾರು ಕಡೆ ಕೃತಕ ನೆರೆ ಸಂಭವಿಸಿ ಸಮಸ್ಯೆಗಳಾಗುವುದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ.
ಪರಿಶೀಲಿಸಿ ಕ್ರಮ: ಹೈವೇ ಅಧಿಕಾರಿ
ಗೋರಿಗುಡ್ಡ ಬಳಿ ರಾ.ಹೆದ್ದಾರಿ ಪ್ರಾಧಿಕಾರದಿಂದ ಒಳಚರಂಡಿ ಕಾಮಗಾರಿ ನಡೆಯುತ್ತಿದೆ. ಲಾಕ್‌ಡೌನ್‌ನಿಂದಾಗಿ ಕಾಮಗಾರಿ ಸ್ಥಗಿತಗೊಂಡಿದೆ. ಅಲ್ಲಿ ಯಾವುದೇ ರೀತಿಯ ಅಪಾಯ ಸಂಭವಿಸದು. ಹಾಗಿದ್ದರೂ ತಕ್ಷಣ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಮೇಶ್ ಬಾಬು ಭರವಸೆ ನೀಡಿದ್ದಾರೆ.