ಕೊರೋನ ಲಾಕ್‍ಡೌನ್ ನಿಂದ ದುಬೈಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಟ್ಕಳಿಗರಿಗೆ ಶುಭ ಸುದ್ದಿ

Update: 2020-05-31 05:46 GMT

ಭಟ್ಕಳ : ಕೊರೋನ ಲಾಕ್ ಡೌನ್ ನಿಂದ ದುಬೈ ಮತ್ತು ಯುಎಇ ಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಟ್ಕಳ ಮತ್ತು ಆಸುಪಾಸಿನ ನಿವಾಸಿಗಳಿಗೆ ಶುಭ ಸುದ್ದಿಯೊಂದು ಬಂದಿದ್ದು ಭಟ್ಕಳದ ಖ್ಯಾತ ಉದ್ಯಮಿ ನೂಹಾ ಜನರಲ್ ಟ್ರೇಡಿಂಗ್ ಕಂಪನಿಯ ಮಾಲಕ ಅತಿಕುರ್ರಹ್ಮಾನ್ ಮುನೀರಿ ಜನರ ಸಂಕಷ್ಟಕ್ಕೆ ಸ್ಪಂದಿಸಿ ದುಬೈಯಲ್ಲಿ ಸಿಲುಕಿಕೊಂಡಿರುವ ಭಟ್ಕಳಿಗರಿಗೆ ಅವರ ತಾಯ್ನಾಡಿಗೆ ಕಳುಹಿಸುವ ವ್ಯವಸ್ಥೆನ್ನು ಮಾಡಿದ್ದಾಗಿ ತಿಳಿದುಬಂದಿದೆ.

ಭಟ್ಕಳ ಮತ್ತು ಭಟ್ಕಳದ ನೆರೆಹೊರೆಯ ನಿವಾಸಿಗಳನ್ನು ಹೊತ್ತು  ಯುಎಇ ಯ ರಾಸಲ್ ಖೈಮಾದಿಂದ ವಿಮಾನವೊಂದು ಜೂನ್ 11 ರಂದು ದುಬೈ ಮೂಲಕ ಮಂಗಳೂರಿಗೆ ಪ್ರಯಾಣ ಬೆಳೆಸಲಿದೆ ಎಂಬ ಅಧಿಕೃತ ಮಾಹಿತಿ ದೊರಕಿದೆ. ಈ ಕುರಿತಂತೆ ಭಾರತೀಯ ರಾಯಭಾರಿ ಕಚೇರಿ, ವಿಮಾನಯಾನದ ಅಧಿಕಾರಿಗಳು, ಉತ್ತರ ಕನ್ನಡ ಜಿಲ್ಲಾಧಿಕಾರಿ ಮತ್ತು ಸಂಬಂಧಿತ ಎಲ್ಲ ಅಧಿಕಾರಿಗಳೊಂದಿಗೆ ಮಾತುಕತೆ ಅಂತಿಮಗೊಂಡಿದೆ ಎನ್ನಲಾಗಿದೆ.

ದುಬೈಯಿಂದ ಭಟ್ಕಳಕ್ಕೆ ಬರುವವರನ್ನು ಮೊದಲ 7 ದಿನಗಳ ಕಾಲ ಹೊಟೇಲ್ ಅಥಮಾ ಅಂಜುಮನ್ ಕ್ವಾರೆಂಟೈನ್ ಕೇಂದ್ರದಲ್ಲಿ ಇರಬೇಕಾಗುತ್ತದೆ ನಂತರದ ಏಳು ದಿನಗಳವರೆಗೆ ಹೋಂ ಕ್ವಾರೆಂಟೈನ್‍ನಲ್ಲಿ ಇಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ತಿಳಿಸಿದ್ದಾರೆ. ಒಂದು ವೇಳೆ ನಿಯಮಗಳಲ್ಲಿ ಏನಾದರೂ ಬದಲಾವಣೆಯುಂಟಾದರೆ ನಿಯಮಗಳಂತೆ ಮಾರ್ಪಾಡು ಮಾಡಲಾಗುತ್ತದೆ ಎಂದು ಅವರು ತೀಳಿಸಿದ್ದಾರೆ.

ಈ ಕುರಿತಂತೆ ಅತಿಕುರ್ರಹ್ಮಾನ್ ಮುನೀರಿ ಸಾಹಿಲ್  ಮಾತನಾಡಿ, ದುಬೈ ಮತ್ತು ಯುಎಇ ಯ ವಿವಿಧ ನಗರಗಳಲ್ಲಿ ಭಟ್ಕಳದ ನೂರಾರು ಮಂದಿಗೆ ಬಹಳ ತೊಂದರೆಯಲ್ಲಿದ್ದು ತಮ್ಮ ತಾಯ್ನಾಡಿಗೆ ಮರಳಲು ಬಯಸುತ್ತಿದ್ದಾರೆ. ಆದರೆ ಸರ್ಕಾರದ ವತಿಯಿಂದ ವಿಮಾನಯಾನ ಸೇವೆಯ ಯಾವುದೇ ವ್ಯವಸ್ಥೆ ಇರುವುದಿಲ್ಲ. ರಾಯಭಾರ ಕಚೇರಿಯನ್ನು ಸಂಪರ್ಕಿಸಿದರೆ ಯಾರಾದರೂ ತಮ್ಮದೇ ಆದ ಚಾರ್ಟರ್ಡ್ ವಿಮಾನ ವ್ಯವಸ್ಥೆಯನ್ನು ಮಾಡಿಕೊಂಡರೆ ಮತ್ತು ಜನರನ್ನು ಸ್ವಂತ ಖರ್ಚಿನಲ್ಲಿ ಕಳುಹಿಸಲು ಬಯಸಿದರೆ, ರಾಯಭಾರ ಕಚೇರಿಯು ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಬಹುದು ಎಂದು ರಾಯಭಾರಿ ಕಚೇರಿ ತಿಳಿಸಿದ್ದು ಅದರಂತೆ ನಾವು ಖಾಸಗಿ ವಿಮಾನಯಾನ ಸಂಸ್ಥೆಯನ್ನು ಸಂಪರ್ಕಿಸಿ ಜೂನ್ 11 ಕ್ಕೆ ವಿಮಾನವು ಮಂಗಳೂರಿಗೆ ಪ್ರಯಾಣ ಬೆಳೆಸುವ ವ್ಯವಸ್ಥೆಯನ್ನು ಮಾಡಿರುವುದಾಗಿ ಮುನಿರಿ ತಿಳಿಸಿದ್ದಾರೆ.  ವಿಮಾನವು 175 ಆಸನಗಳನ್ನು ಹೊಂದಿರುತ್ತದೆ.

ದುಬೈಯಲ್ಲಿ ವಾಸಿಸುತ್ತಿರುವ ಭಟ್ಕಳ ಮತ್ತು ಸುತ್ತಮುತ್ತಲ ಪ್ರದೇಶದ ನಾಗರೀಕರು ಈ ವಿಮಾನದ ಮೂಲಕ ತಮ್ಮ ತಾಯ್ನಾಡಿಗೆ ಹೋಗಲು ಬಯಸಿದ್ದರೆ ಅಂತಹವರೂ ಕೂಡಲೆ ತಮ್ಮನ್ನು ಸಂಪರ್ಕಿಸುವಂತೆ ಕೋರಿಕೊಂಡಿದ್ದಾರೆ. ವಿಮಾನಯಾನ ಮತ್ತು ಭಟ್ಕಳದಲ್ಲಿ ಕ್ವಾರೈಂಟೈನ್ ಖರ್ಚು ಸೂಕ್ತ ಮತ್ತು ಸಮಂಜಸವಾಗಿರುತ್ತದೆ. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಜಿಲಾನಿ ಮೊಹ್ತೆಶಮ್ 0505584203, ರಹಮತುಲ್ಲಾ ರಾಹಿ 0505643432, ಶೆಹರ್ಯಾರ್ ಖತೀಬ್ 0505560640, ಯಾಸಿರ್ ಖಾಸಿಂಜಿ 0506251833, ಆಫಾಖ್ ನಾಯ್ತೆ 0505845537 ರನ್ನು ಸಂಪರ್ಕಿಸಬೇಕೆಂದು ಮತ್ತು ಪಾಸ್ಪೋರ್ಟ್ ಪ್ರತಿ ಇತ್ಯಾದಿಗಳನ್ನು ಈ ಇಮೇಲ್ ngtairline@hotmail.com ವಿಳಾಸಕ್ಕೆ ಕಳುಹಿಸಬಹುದು ಅವರು ಕೋರಿದ್ದಾರೆ.

ದುಬೈನಿಂದ ರಾಸ್ ಅಲ್ ಖೈಮಾ ವಿಮಾನ ನಿಲ್ದಾಣಕ್ಕೆ ಮತ್ತು ಮಂಗಳೂರಿನಿಂದ ಭಟ್ಕಳಕ್ಕೆ ಬಸ್ ಸೇವೆ: ದುಬೈಯಿಂದ ರಾಸ್ ಅಲ್ ಖೈಮಾ ವಿಮಾನ ನಿಲ್ದಾಣಕ್ಕೆ ಬಸ್ ಸೇವೆ ಮಾಡಲಾಗಿದ್ದು ಅದರಂತೆ ಮಂಗಳೂರು ವಿಮಾನ ನಿಲ್ದಾಣದಿಂದ ಭಟ್ಕಳಕ್ಕೆ ವಿಶೇಷ ಬಸ್ ಇರಲಿದೆ. ಭಟ್ಕಳದಲ್ಲಿ ಮಜ್ಲಿಸೆ ಇಸ್ಲಾಹ್-ವ-ತಂಝಿಮ್ ಸಂಸ್ಥೆಯ ಮುಖಂಡರೊಂದಿಗೆ ಸಂಪರ್ಕಿಸಿ ಭಟ್ಕಳದಲ್ಲಿ ಕ್ವಾರೈಂಟೇನ್ ವ್ಯವಸ್ಥೆ ಮಾಡುವ ಕುರಿತಂತೆ ಮಾತುಕತೆಯು ನಡೆದಿದ್ದು ಅರ್ಷದ್ ಮೊಹತೆಶಮ್ ರು ಉತ್ತರಕನ್ನಡ ಜಿಲ್ಲಾಧಿಕಾರಿಗಳೊಂದಿಗೆ ನಿರಂತ ಸಂಪರ್ಕದಲ್ಲಿದ್ದಾರೆ. ಅಲ್ಲಿಯೂ ಕೂಡ ಅಧಿಕಾರಿಗಳ ಮಟ್ಟದಲ್ಲಿ ಯಾವುದೇ ತೊಂದರೆ ಮತ್ತು ಅಡೆತಡೆಗಳು ಸಂಭವಿಸಲಾರವು ಎಂದ ಅತಿಕುರ್ರಹ್ಮಾನ್ ಮುನೀರಿ, ವಿಮಾನಯಾದ ಟಿಕೆಟ್ ಬುಕ್ಕಿಂಗ್ ಗಾಗಿ ಯಾರು ಮೊದಲು ಬುಕ್ ಮಾಡುತ್ತಾರೋ ಅವರಿಗೆ ಆಧ್ಯತೆ ನೀಡಲಾಗುವುದು ಮತ್ತು ಕೂಡಲೇ ಪ್ರಯಾಣಿಕರ ಯಾದಿಯನ್ನು ಭಾರತೀಯ ರಾಯಭಾರ ಕಚೇರಿಗೆ ತಲುಪಿಸಲಾಗುವುದು ಮತ್ತು ಎಲ್ಲ ರೀತಿಯ ದಾಖಲೆಗಳನ್ನು ಸಲ್ಲಿಸುವ ಕಾರ್ಯವನ್ನು ಪೂರ್ಣಗೊಳಿಸಲಾಗುವುದು ಎಂದರು.

Writer - ಎಂ.ಆರ್.ಮಾನ್ವಿ

contributor

Editor - ಎಂ.ಆರ್.ಮಾನ್ವಿ

contributor

Similar News