ಇಮಾಮ್, ಮುಅದ್ಸಿನ್‌ಗಳಿಗೆ ಗೌರವಧನ: ದ.ಕ. ಜಿಲ್ಲೆಯಲ್ಲಿ ಫಲಾನುಭವಿಗಳಿಗಿಂತ ವಂಚಿತರ ಸಂಖ್ಯೆಯೇ ಹೆಚ್ಚು !
ಮಂಗಳೂರು, ಜೂ. 2: ರಾಜ್ಯದ ವಕ್ಫ್ ಬೋರ್ಡ್‌ನ ಅಧೀನದಲ್ಲಿರುವ ಮಸೀದಿ ಮತ್ತು ಮದ್ರಸಗಳಲ್ಲಿ ಸೇವೆ ಸಲ್ಲಿಸುವ ಇಮಾಮ್/ಮುಅದ್ಸಿನ್‌ರಿಗೆ ಗೌರವ ಧನ ವಿತರಿಸುವ ವಿಶೇಷ ಯೋಜನೆಯಡಿ ಪ್ರಥಮ ಸ್ಥಾನದಲ್ಲಿದ್ದ ದ.ಕ. ಜಿಲ್ಲೆಯು ಇದೀಗ ಮೂರನೇ ಸ್ಥಾನದಲ್ಲಿದೆ. ಅಂದರೆ 2015ರಲ್ಲಿ ದ.ಕ.ಜಿಲ್ಲೆಯ 574 ಇಮಾಮ್ ಮತ್ತು 511 ಮುಅದ್ಸಿನ್‌ರು ಇದರ ಪ್ರಯೋಜನ ಪಡೆಯುತ್ತಿದ್ದರೆ, ಇದೀಗ 399 ಇಮಾಮ್ ಮತ್ತು 365 ಮುಅದ್ಸಿನ್‌ರು ಗೌರವಧನ ಪಡೆಯುತ್ತಿದ್ದಾರೆ.
ಪ್ರಸ್ತುತ ಬೀದರ್ (460 ಇಮಾಮ್ ಮತ್ತು 465 ಮುಅದ್ಸಿನ್) ಪ್ರಥಮ ಸ್ಥಾನದಲ್ಲಿದ್ದರೆ, ಕಲಬುರ್ಗಿ (413 ಮತ್ತು 393) ದ್ವಿತೀಯ ಸ್ಥಾನದಲ್ಲಿದೆ. 2015ರಲ್ಲಿ ಕೊನೆಯ ಸ್ಥಾನದಲ್ಲಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯು (56 ಇಮಾಮ್ ಮತ್ತು 50 ಮುಅದ್ಸಿನ್) ಈಗಲೂ ಕೊನೆಯ (39 ಇಮಾಮ್ ಮತ್ತು 34 ಮುಅದ್ಸಿನ್) ಸ್ಥಾನದಲ್ಲೇ ಇದೆ.
ವರ್ಷದ ಹಿಂದೆ ಅಂದರೆ 2019ರ ಜೂನ್ ವರದಿ ಪ್ರಕಾರ ರಾಜ್ಯದ 7,012 ಇಮಾಮ್ ಮತ್ತು 6,794 ಮುಅದ್ಸಿನ್‌ಗಳ ಸಹಿತ ಒಟ್ಟು 13,806 ಮಂದಿ ಇದರ ಪ್ರಯೋಜನ ಪಡೆದಿದ್ದರೆ ವರ್ಷದ ಬಳಿಕ ಅಂದರೆ 2020ರ ಮೇ ವರದಿ ಪ್ರಕಾರ ರಾಜ್ಯದ 6,258 ಇಮಾಮ್ ಮತ್ತು 6,165 ಸಹಿತ 12,423 ಮಂದಿ ಇದರ ಪ್ರಯೋಜನ ಪಡೆದಿದ್ದರು. ಅಂದರೆ ಫಲಾನುಭವಿಗಳ ಸಂಖ್ಯೆಯಲ್ಲಿ ಭಾರೀ ಇಳಿಮುಖ ಕಂಡು ಬಂದಿದೆ.
ರಾಜ್ಯದಲ್ಲಿ ಮಾತ್ರವಲ್ಲ, ದ.ಕ.ಜಿಲ್ಲೆಯಲ್ಲೂ ಕೂಡ ಫಲಾನುಭವಿಗಳ ಸಂಖ್ಯೆಯಲ್ಲಿ ಇಳಿಮುಖ ಕಂಡು ಬಂದಿದೆ. ಜಿಲ್ಲೆಯಲ್ಲಿ ಸದ್ಯ ಮಸೀದಿ, ಮದ್ರಸ, ದರ್ಗಾ ಎಂದೆಲ್ಲಾ 740 ಸಂಸ್ಥೆಗಳು ವಕ್ಫ್ ಬೋರ್ಡ್‌ನಲ್ಲಿ ನೋಂದಣಿಯಾಗಿದೆ. ಅಂದಹಾಗೆ ಮಸೀದಿ, ಮದ್ರಸ, ದರ್ಗಾ ಇತ್ಯಾದಿ ಯಾಗಿ ಸಾವಿರಕ್ಕೂ ಅಧಿಕ ಧಾರ್ಮಿಕ ಸಂಸ್ಥೆಗಳು ಜಿಲ್ಲೆಯಲ್ಲಿವೆ. ಆದರೆ ಬೇರೆ ಬೇರೆ ಕಾರಣಕ್ಕೆ ಹೆಚ್ಚಿನ ಸಂಸ್ಥೆಗಳು ವಕ್ಫ್ ಬೋರ್ಡ್‌ನಲ್ಲಿ ನೋಂದಣಿಯಾಗಿಲ್ಲ. ನೋಂದಣಿಯಾದ ಸಂಸ್ಥೆಗಳ ಪೈಕಿ ಸೇವೆ ಸಲ್ಲಿಸುವ ಅರ್ಧಕ್ಕರ್ಧ ಸಿಬ್ಬಂದಿಗೆ ಗೌರವಧನವೇ ಇಲ್ಲ. ಅಂದರೆ ಜಿಲ್ಲೆಯಲ್ಲಿ ಫಲಾನುಭವಿಗಳಿಗಿಂತ ಗೌರವಧನ ವಂಚಿತರ ಸಂಖ್ಯೆಯೇ ಹೆಚ್ಚು ಇದೆ.
ಹೀಗೆ ಗೌರವಧನದಿಂದ ವಂಚಿತರಾಗಲು ಮಸೀದಿ, ಮದ್ರಸಗಳ ಆಡಳಿತ ಕಮಿಟಿಗಳ ನಿರ್ಲಕ್ಷ ಮತ್ತು ಮಾಹಿತಿಯ ಕೊರತೆಯೇ ಕಾರಣ ಎಂಬ ಮಾತು ಕೇಳಿ ಬರುತ್ತಿದೆ. ಅಂದರೆ ಪ್ರತಿಯೊಂದು ಮಸೀದಿ/ಮದ್ರಸದ ಅಧ್ಯಕ್ಷರು ಅಥವಾ ಕಾರ್ಯದರ್ಶಿಗಳು ನಿಗದಿತ ನಮೂನೆಯ ಅರ್ಜಿಯೊಂದಿಗೆ ಜಮಾಅತ್ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುವ ಇಮಾಮ್ ಮತ್ತು ಮುಅದ್ಸಿನ್‌ರ ಆಧಾರ್ ಮತ್ತು ಬ್ಯಾಂಕ್ ಖಾತೆಯ ದ್ವಿಪ್ರತಿ ಹಾಗೂ ಅವರು ಅಲ್ಲಿ ಸೇವೆ ಸಲ್ಲಿಸುವ ಬಗ್ಗೆ ದೃಢೀಕರಣ ಪತ್ರ ನೀಡಬೇಕು. ಅದರೊಂದಿಗೆ ಅವರ ಪರಿಷ್ಕೃತ ಬ್ಯಾಂಕ್ ವ್ಯವಹಾರ ಪಟ್ಟಿಯನ್ನೂ ಸಲ್ಲಿಸಬೇಕು.
ಆದರೆ ಬಹುತೇಕ ಇಮಾಮ್/ಮುಅದ್ಸಿನ್‌ರಿಗೆ ಕೆಲಸದ ಭದ್ರತೆ ಇಲ್ಲದಿರುವುದು ಸಮಸ್ಯೆಯಾಗಿ ಪರಿಣಮಿಸಿದೆ. ಅಂದರೆ ಒಂದೋ ಅವರನ್ನು ಆಡಳಿತ ಕಮಿಟಿಯು ಸೇವೆಯಿಂದ ಕೈ ಬಿಡುತ್ತಾರೆ ಅಥವಾ ಸ್ವತಃ ಇಮಾಮ್/ಮುಅದ್ಸಿನ್‌ರೇ ಬೇರೆ ಮಸೀದಿಗಳಲ್ಲಿ ಕೆಲಸಕ್ಕೆ ಸೇರ್ಪಡೆ ಗೊಳ್ಳುತ್ತಾರೆ. ಆ ಸಂದರ್ಭ ಆಯಾ ಜಿಲ್ಲಾ ವಕ್ಫ್ ಅಧಿಕಾರಿಗೆ ಮಾಹಿತಿ ನೀಡುವುದು ಅನಿವಾರ್ಯವಾಗಿದೆ. ಆದರೆ ಹೆಚ್ಚಿನ ಕಡೆ ಮಸೀದಿಯ ಆಡಳಿತ ಕಮಿಟಿಯಾಗಲೀ, ಇಮಾಮ್/ಮುಅದ್ಸಿನ್‌ರಾಗಲೀ ಸಂಬಂಧಪಟ್ಟ ಅಧಿಕಾರಿಗಳಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಈ ಗೌರವ ಧನವು ನೇರ ಇಮಾಮ್/ಮುಅದ್ಸಿನ್‌ರ ಖಾತೆಗೆ ಜಮೆ ಆಗುವುದರಿಂದ ಕೆಲವರು ಎಲ್ಲೂ ಹುದ್ದೆಯಲ್ಲಿಲ್ಲದಿದ್ದರೂ ಕೂಡ ಗೌರವಧನ ಪಡೆಯು ತ್ತಾರೆ. ಇದರಿಂದ ಅರ್ಹ ಫಲಾನುಭವಿಗಳು ಗೌರವಧನದಿಂದ ವಂಚಿತರಾಗುತ್ತಿದ್ದಾರೆ. ಈ ಬಗ್ಗೆ ಮಸೀದಿಯ ಆಡಳಿತ ಕಮಿಟಿ ಅಥವಾ ಇಮಾಮ್/ಮುಅದ್ಸಿನ್‌ಗಳು ತಕ್ಷಣ ಮಾಹಿತಿ ನೀಡುವ ಅಗತ್ಯವಿದೆ.
ಕೆಲವು ಮಸೀದಿಯ ಆಡಳಿತ ಕಮಿಟಿಯು ಇಮಾಮರು/ಮುಅದ್ಸಿನ್‌ರಿಗೆ ಈ ಗೌರವಧನ ಪಡೆಯಲು ದೃಢೀಕರಣ ಪತ್ರ ನೀಡದೆ ಸತಾಯಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ದೃಢೀಕರಣ ಪತ್ರ ನೀಡಿದರೆ ಭವಿಷ್ಯದಲ್ಲಿ ಮಸೀದಿ/ಮದ್ರಸಗಳಿಗೆ ಬೇರೆ ರೀತಿಯ ಸಮಸ್ಯೆಯಾಗಲಿದೆ ಎಂಬ ಕ್ಷುಲಕ್ಕ ಕಾರಣ ನೀಡಿ ಫಲಾನುಭವಿಗಳನ್ನು ಈ ಯೋಜನೆಯಿಂದ ವಿಮುಖರಾಗುವಂತೆ ಮಾಡುತ್ತಿರುವ ಬಗ್ಗೆಯೂ ದೂರುಗಳಿವೆ.
ಅಂದರೆ ವಕ್ಫ್ ನಲ್ಲಿ ನೋಂದಣಿಗೊಂಡ ಮಸೀದಿ/ಮದ್ರಸ ಕಮಿಟಿಗಳು ವಾರ್ಷಿಕ ವರಮಾನದಲ್ಲಿ ಖರ್ಚು ವೆಚ್ಚ ಭರಿಸಿ ಉಳಿದುದರಲ್ಲಿ ಶೇ.7 ದೇಣಿಗೆಯನ್ನು ವಕ್ಫ್ ಮಂಡಳಿಗೆ ನೀಡಬೇಕು ಎಂಬ ನಿಯಮವಿದೆ. ಜಿಲ್ಲೆಯ ಹೆಚ್ಚಿನ ಮಸೀದಿಗಳಲ್ಲಿ ಉಳಿತಾಯವೇ ಇಲ್ಲ. ಒಂದು ವೇಳೆ ಉಳಿತಾಯವಾಗಿಬಿಟ್ಟರೆ ಅಂದರೆ ವಾರ್ಷಿಕ 1 ಲಕ್ಷ ಉಳಿತಾಯವಾದರೆ ಅದರಿಂದ 7 ಸಾವಿರ ರೂ. ವಕ್ಫ್‌ಗೆ ಪಾವತಿಸಬೇಕಾಗುತ್ತದೆ ಎಂದೆಲ್ಲಾ ಲೆಕ್ಕಾಚಾರ ಹಾಕಿ ವಕ್ಫ್‌ಗೆ ನೋಂದಣಿಯಾಗಲು ಹಿಂಜರಿಯುತ್ತಾರೆ. ಇದರಿಂದ ಅಲ್ಲಿ ಸೇವೆ ಸಲ್ಲಿಸುವ ಇಮಾಮ್/ಮುಅದ್ಸಿನ್‌ರು ಗೌರವ ಧನದಿಂದ ವಂಚಿತರಾಗುತ್ತಾರೆ. ಹಾಗಾಗಿಯೇ ದ.ಕ.ಜಿಲ್ಲೆಯಲ್ಲಿ ಫಲಾನುಭವಿಗಳಿಗಿಂತಲೂ ಗೌರವಧನ ವಂಚಿತರ ಸಂಖ್ಯೆಯೇ ಹೆಚ್ಚಾಗಲು ಕಾರಣವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
*ರಾಜ್ಯದ ವಕ್ಫ್ ಬೋರ್ಡ್‌ನಲ್ಲಿ ನೋಂದಣಿಗೊಂಡ ಮಸೀದಿಗಳಲ್ಲಿ ಸೇವೆ ಸಲ್ಲಿಸುವ ಇಮಾಮ್ ಮತ್ತು ಮುಅದ್ಸಿನ್‌ರಿಗೆ ಪ್ರತೀ ತಿಂಗಳಿಗೊಮ್ಮೆ ಗೌರವಧನ ನೀಡುವ ಈ ಯೋಜನೆಗೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಚಾಲನೆ ನೀಡಲಾಗಿತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅನುಷ್ಠಾನಗೊಂಡಿತ್ತು. ಅಂದರೆ ಇಮಾಮರಿಗೆ 4 ಸಾವಿರ ರೂ. ಮತ್ತು ಮುಅದ್ಸಿನ್‌ರಿಗೆ 3 ಸಾವಿರ ರೂ. ನೀಡಲಾಗುತ್ತದೆ.
*ಪ್ರತೀ ತಿಂಗಳ 20ರೊಳಗೆ ಆಯಾ ಮಸೀದಿಯಲ್ಲಿ ಅರ್ಜಿ ಸಲ್ಲಿಸಿದ ಇಮಾಮ್ ಮತ್ತು ಮಅದ್ಸಿನ್‌ರು ಸೇವೆ ಸಲ್ಲಿಸುತ್ತಿದ್ದಾರೆಯೇ ಎಂಬುದರ ಬಗ್ಗೆ ಮಾಹಿತಿ ಪಡೆದುಕೊಳ್ಳುವ ಜವಾಬ್ದಾರಿ ವಕ್ಫ್ ಅಧಿಕಾರಿಗಳದ್ದಾಗಿದೆ. ಅದಕ್ಕಾಗಿ ಇಮಾಮ್/ಮುಅದ್ಸಿನ್ ಅಲ್ಲದೆ ಆಡಳಿತ ಮಂಡಳಿಯೊಂದಿಗೂ ಅಧಿಕಾರಿಗಳು ಸಮಾಲೋಚಿಸಬಹುದಾಗಿದೆ. ರಾಜ್ಯದ ವಿವಿಧ ಕಡೆ ಸೇವೆಯಲ್ಲಿಲ್ಲದ ಇಮಾಮ್/ಮುಅದ್ಸಿನ್‌ರ ಬದಲು ಆಡಳಿತ ಕಮಿಟಿಗಳ ಪದಾಧಿಕಾರಿಗಳ ಹೆಸರಿಗೆ ಗೌರವಧನ ಜಮೆಯಾದ ಬಗ್ಗೆ ಮಾಹಿತಿ ಇದೆ. ಇದರಲ್ಲಿ ಕೆಲವು ಅಧಿಕಾರಿಗಳು ಕೂಡ ಶಾಮೀಲಾದ ಬಗ್ಗೆ ಆರೋಪವಿದೆ. ಅವುಗಳನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿದ ಉದಾಹರಣೆಯೂ ಇದೆ.
*ಪ್ರತಿಯೊಂದು ಮಸೀದಿಗೆ ಹೊಂದಿಕೊಂಡಂತೆ ಮದ್ರಸವೂ ಇರುತ್ತದೆ. ಮಸೀದಿಯ ಇಮಾಮರು/ಮುಅದ್ಸಿನ್‌ರ ಮಸೀದಿಯೊಂದಿಗೆ ಮದ್ರಸದಲ್ಲೂ ಮಕ್ಕಳಿಗೆ ಶಿಕ್ಷಣ ನೀಡುತ್ತಾರೆ. ಇದರೊಂದಿಗೆ ಮದ್ರಸದಲ್ಲಿ ಸದರ್ ಮುಅಲ್ಲಿಂ (ಮುಖ್ಯಶಿಕ್ಷಕ) ಮತ್ತು ಮುಅಲ್ಲಿಂ (ಶಿಕ್ಷಕರೂ) ಕೂಡ ಸೇವೆ ಸಲ್ಲಿಸುತ್ತಾರೆ. ಮದ್ರಸ ಮಕ್ಕಳ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಿಸಲು, ಮಕ್ಕಳ ಶಿಕ್ಷಣ ವೃದ್ಧಿಯಲ್ಲಿ ಮುಅಲ್ಲಿಮರ ಪಾತ್ರವೂ ಇದೆ. ಪ್ರತಿಯೊಂದು ಮದ್ರಸದಲ್ಲಿ ಕನಿಷ್ಠ 3ರಿಂದ 4 ಮಂದಿ (ಕೆಲವು ಕಡೆ ಅದಕ್ಕಿಂತಲೂ ಹೆಚ್ಚು) ಮುಅಲ್ಲಿಮರು ಕೆಲಸ ಮಾಡುತ್ತಿದ್ದಾರೆ. ಇಮಾಮರು-ಮುಅದ್ಸಿನರಿಗೆ ಗೌರವಧನ ನೀಡುವುದರೊಂದಿಗೆ ಮುಅಲ್ಲಿಮರಿಗೂ ಗೌರವಧನ ನೀಡಬೇಕು ಎಂಬ ಬೇಡಿಕೆಯೂ ಇದೆ.
''ರಾಜ್ಯ ಸರಕಾರವು ವಕ್ಫ್ ಬೋರ್ಡ್‌ಗೆ 2019-20ನೆ ಸಾಲಿನಲ್ಲಿ ಬಿಡುಗಡೆಗೊಳಿಸಿದ 95 ಕೋ.ರೂ. ಪೈಕಿ 55 ಕೋ.ರೂ.ವನ್ನು ಗೌರವಧನ ನೀಡುವುದಕ್ಕಾಗಿ ಮೀಸಲಿಡಲಾಗಿದೆ. ಅದರಂತೆ ರಾಜ್ಯದ ವಕ್ಫ್ ಮಂಡಳಿಯಲ್ಲಿ ನೋಂದಾಯಿಸಲ್ಪಟ್ಟಿರುವ 6,258 ಇಮಾಮ್ ಮತ್ತು 6,165 ಮುಅದ್ಸಿನ್‌ರಿಗೆ 4,35,27,000 (ನಾಲ್ಕು ಕೋಟಿ ಮೂವತ್ತೈದು ಲಕ್ಷದ ಇಪ್ಪತ್ತೇಳು ಸಾವಿರ) ರೂ.ವನ್ನು ಬಿಡುಗಡೆಗೊಳಿಸಲಾಗಿದೆ. ಅಂದರೆ 6,258 ಇಮಾಮರಿಗೆ 2,50,32,000 ರೂ. ಮತ್ತು 6,165 ಮುಅದ್ಸಿನ್‌ರಿಗೆ 1,84,95,000 ರೂ.ಪಾವತಿಸಲಾಗಿದೆ. ಇದರಿಂದ ರಾಜ್ಯದ ಇಮಾಮ್ ಮತ್ತು ಮುಅದ್ಸಿನ್ ಸಹಿತ 12,423 ಸಿಬ್ಬಂದಿ ವರ್ಗಕ್ಕೆ ಅನುಕೂಲವಾಗಿದೆ. ಇನ್ನೂ ಅರ್ಹರಿಗೆ ಗೌರವಧನ ಸಿಗಬೇಕಿದೆ. ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಲಾಗಿದೆ''.
- ಮೌಲಾನ ಶಾಫಿ ಸಅದಿ
ಸದಸ್ಯರು, ರಾಜ್ಯ ವಕ್ಫ್ ಮಂಡಳಿ-ಬೆಂಗಳೂರು
''ದ.ಕ.ಜಿಲ್ಲೆಯ 740 ಸಂಸ್ಥೆಗಳು (ಮಸೀದಿ/ಮದ್ರಸ/ದರ್ಗಾ ಇತ್ಯಾದಿ) ವಕ್ಫ್ ಬೋರ್ಡ್‌ನಲ್ಲಿ ನೋಂದಣಿಗೊಂಡಿದೆ. ಆ ಪೈಕಿ ಇದೀಗ 399 ಇಮಾಮ್ ಮತ್ತು 365 ಮುಅದ್ಸಿನರು ಗೌರವಧನ ಪಡೆಯುತ್ತಿದ್ದಾರೆ. ಇನ್ನು 65 ಇಮಾಮರು ಮತ್ತು 63 ಮುಅದ್ಸಿನ್ ಸಹಿತ 128 ಮಂದಿ ಸಲ್ಲಿಸಿದ ಅರ್ಜಿಯನ್ನು ಮುಖ್ಯ ಕಚೇರಿಗೆ ಕಳುಹಿಸಿಕೊಡಲಾಗಿದೆ. ಇನ್ನೂ ಹಲವು ಸಂಸ್ಥೆಗಳಿಂದ ಈ ಬಗ್ಗೆ ಅರ್ಜಿ ಸಲ್ಲಿಕೆಯಾಗಿಲ್ಲ. ಈ ನಿಟ್ಟಿನಲ್ಲಿ ಪ್ರಯತ್ನ ಸಾಗಿಸಲಾಗಿದೆ. ಆರಂಭದಲ್ಲಿ 574 ಇಮಾಮ್ ಮತ್ತು 511 ಮುಅದ್ಸಿನ್‌ರು ಇದರ ಪ್ರಯೋಜನ ಪಡೆಯು ತ್ತಿದ್ದರು. ಆವಾಗ ನಾವು ಪ್ರಥಮ ಸ್ಥಾನದಲ್ಲಿದ್ದೆವು. ಇದೀಗ ತೃತೀಯ ಸ್ಥಾನದಲ್ಲಿದ್ದೇವೆ. ಗೌರವಧನ ಪಡೆಯುವವರ ಸಂಖ್ಯೆಯಲ್ಲಿ ಇಳಿಮುಖಗೊಳ್ಳಲು ನಾನಾ ಕಾರಣಗಳಿವೆ. ಅಂದರೆ ಕೆಲವು ಜಮಾಅತ್‌ನ ಆಡಳಿತ ಕಮಿಟಿಯವರು ಮಸೀದಿಯ ಇಮಾಮ್/ಮುಅದ್ಸಿನ್‌ರು ಕೆಲಸ ಬಿಟ್ಟು ಹೋದ ಮತ್ತು ಹೊಸಬರು ಸೇರ್ಪಡೆಗೊಂಡ ಬಗ್ಗೆ ನಮಗೆ ಮಾಹಿತಿ ನೀಡುತ್ತಿಲ್ಲ. ಇನ್ನು ಕೆಲವು ಮಸೀದಿಗಳಿಂದ ಅರ್ಜಿಯೇ ಬರುತ್ತಿಲ್ಲ. ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ''.
- ಅಬೂಬಕರ್ ಮೋಂಟುಗೋಳಿ,
ಜಿಲ್ಲಾ ಅಧಿಕಾರಿ, ವಕ್ಫ್ ಇಲಾಖೆ, ದ.ಕ.ಜಿಲ್ಲೆ
''ಮಸೀದಿ/ಮದ್ರಸಗಳಲ್ಲಿ ಸೇವೆ ಸಲ್ಲಿಸುವ ಇಮಾಮ್ ಮತ್ತು ಮುಅದ್ಸಿನ್‌ರಿಗೆ ಅರ್ಹವಾಗಿ ಸಲ್ಲಬೇಕಾದ ಗೌರವಧನ ಇದಾಗಿದೆ. ಕೊರೋನ ದಂತಹ ಸಂದರ್ಭ ಅನೇಕ ಇಮಾಮ್/ಮುಅದ್ಸಿನ್‌ಗೆ ಇದು ಆಸರೆಯಾಗಿದೆ. ಮದ್ರಸಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮುಅಲ್ಲಿಂ(ಶಿಕ್ಷಕ)ರಿಗೂ ಈ ಗೌರವ ಧನ ಸಿಗಬೇಕಾಗಿದೆ. ಈ ಬಗ್ಗೆ ಮಸೀದಿ ಕಮಿಟಿಯವರು ಜನಪ್ರತಿನಿಧಿಗಳು ಮತ್ತು ವಕ್ಫ್ ಬೋರ್ಡ್ ಮೂಲಕ ರಾಜ್ಯ ಸರಕಾರಕ್ಕೆ ಒತ್ತಡ ಹೇರಬೇಕಾಗಿದೆ''.
- ಅನ್ವೀಝ್ ಕೆ.ಸಿ,ರೋಡ್
ಇಂಜಿನಿಯರ್, ಸಾಮಾಜಿಕ ಕಾರ್ಯಕರ್ತ