ಬೆಂಗಳೂರು: ಹೊಯ್ಸಳ ಪೊಲೀಸ್ ವಾಹನ ಚಾಲಕನಿಗೆ ಕೊರೋನ ಪಾಸಿಟಿವ್

Update: 2020-06-08 17:09 GMT

ಬೆಂಗಳೂರು, ಜೂ.8: ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಹೊಯ್ಸಳ ವಾಹನ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಶಸ್ತ್ರ ಮೀಸಲು ಪಡೆಯ ಕಾನ್‍ಸ್ಟೇಬಲ್‍ಗೆ ಕೊರೋನ ಸೋಂಕು ತಗುಲಿದ್ದು, ಠಾಣೆಯ ಸಿಬ್ಬಂದಿಯ ಆತಂಕಕ್ಕೆ ಕಾರಣವಾಗಿದೆ.

ಕಾನ್‍ಸ್ಟೇಬಲ್ ಸಂಪರ್ಕದಲ್ಲಿದ್ದ ಸೋಲದೇವನಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿ ಸೇರಿದಂತೆ 27 ಮಂದಿಯನ್ನು ಕ್ವಾರಂಟೈನ್ ಮಾಡಿ ಅವರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಠಾಣೆ ಆವರಣದಲ್ಲಿ ರಾಸಾಯನಿಕ ಸಿಂಪಡಿಸಿ ಸ್ಯಾನಿಟೈಸ್ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಿಎಆರ್ ದಕ್ಷಿಣದ ಕಾನ್‍ಸ್ಟೇಬಲ್ ಆಗಿದ್ದ ಸೋಂಕಿತ, ನಗರದ ಗಂಗಮ್ಮನ ಗುಡಿಯಲ್ಲಿ ವಾಸಿಸುತ್ತಿದ್ದು ಪತ್ನಿ ಸೇರಿ ಕುಟುಂಬದವರನ್ನು ಕ್ವಾರಂಟೈನ್ ಮಾಡಲಾಗಿದೆ. ಸೋಂಕಿತ ವ್ಯಕ್ತಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಾನ್‍ಸ್ಟೇಬಲ್ ನೇರ ಸಂಪರ್ಕದಲ್ಲಿದ್ದವರನ್ನು ಗುರುತಿಸಿ ನಿಗಾವಹಿಸಿ ಅವರೆಲ್ಲರನ್ನೂ, ಆರೋಗ್ಯ ತಪಾಸಣೆ ಮಾಡಿ ಕ್ವಾರಂಟೈನ್ ಮಾಡಲಾಗಿದೆ.

ಕಾನ್‍ಸ್ಟೇಬಲ್ ಮೇ 23ರಿಂದ 28ರವರೆಗೆ ರಜೆಯಲ್ಲಿದ್ದರು. ಈ ವೇಳೆ ಗ್ರಾಮದಿಂದ ಹೊರಗೆ ಹೋದಾಗ ಸೋಂಕು ತಗುಲಿರುವ ಸಾಧ್ಯತೆ ಇದೆ. ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ಎಂದು ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News