ಕಂಠೀರವ ಕ್ರೀಡಾಂಗಣ ಸೇರಿ ಹಲವೆಡೆ ಕ್ವಾರಂಟೈನ್ ಗೆ ವ್ಯವಸ್ಥೆ: ಸಚಿವ ಡಾ.ಸುಧಾಕರ್

Update: 2020-06-12 16:38 GMT

ಬೆಂಗಳೂರು, ಜೂ.12: ರಾಜಧಾನಿಯಲ್ಲಿ ಕೊರೋನ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ಕಂಠೀರವ ಕ್ರೀಡಾಂಗಣ, ಸಮಾವೇಶ ಕೇಂದ್ರಗಳು ಸೇರಿದಂತೆ ವಿವಿಧ ಕಡೆಗಳಲ್ಲಿ ಕ್ವಾರಂಟೈನ್‍ಗೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಗುರುವಾರ ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಎಲ್ಲೆಲ್ಲಿ ಸಾಧ್ಯವಾಗುತ್ತದೆಯೋ ಅಲ್ಲಿ ಸ್ಥಳಗಳನ್ನು ಗುರುತಿಸಿ, ಮಾತುಕತೆ ನಡೆಸಲಾಗುತ್ತಿದೆ. ಇದುವರೆಗೂ ನಗರದಲ್ಲಿ ವರದಿಯಾದ ಒಟ್ಟಾರೆ ಪ್ರಕರಣಗಳ ಪೈಕಿ ಶೇಕಡ ಅರ್ಧದಷ್ಟು ಮಂದಿ ಗುಣಮುಖರಾಗಿದ್ದಾರೆ. ಉಳಿದವರದಲ್ಲಿ ಶೇ.97 ಮಂದಿಯಲ್ಲಿ ರೋಗ ಲಕ್ಷಣಗಳನ್ನು ಬಹಿರಂಗವಾಗಿ ಗೋಚರಿಸಿಲ್ಲ. ಹೀಗಾಗಿ, ಶೇ.3ರಷ್ಟು ಮಂದಿಗೆ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಶೀತಜ್ವರ ಮಾದರಿಯ ಅನಾರೋಗ್ಯ ಸಮಸ್ಯೆಯಿಂದ (ಐಎಲ್‍ಐ) ಬಳಲುತ್ತಿರುವವರು ಕೂಡಲೇ ಹತ್ತಿರದ ಜ್ವರದ ಕ್ಲಿನಿಕ್‍ಗೆ ತೆರಳಿ, ತಪಾಸಣೆ ಮಾಡಿಸಿಕೊಳ್ಳಬೇಕು. 60 ವರ್ಷ ಮೇಲ್ಪಟ್ಟವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕು. ಕುಟುಂಬದ ಸದಸ್ಯರು ಕೂಡ ವೃದ್ಧರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಹೇಳಿದರು.

ಸೋಂಕಿತನ ಮನೆ ಮಾತ್ರ: ಇದೀಗ ಕಂಟೈನ್ಮೆಂಟ್ ಪ್ರದೇಶಗಳ ವ್ಯಾಖ್ಯಾನ ಬದಲಾಗಿದ್ದು, ಮೊದಲು ಕೋವಿಡ್ ಪ್ರಕರಣ ವರದಿಯಾದ ಪೂರ್ಣ ವಾರ್ಡ್‍ಗಳನ್ನು ಅಥವಾ 1 ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ಕಂಟೈನ್‍ಮೆಂಟ್ ಆಗಿ ಘೋಷಿಸಲಾಗುತ್ತಿತ್ತು. ಈಗ ಅದು ಸೋಂಕಿತ ವ್ಯಕ್ತಿಯ ಮನೆಗೆ ಮಾತ್ರ ಸೀಮಿತವಾಗಿದೆ ಎಂದು ಸುಧಾಕರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News