ಮರದ ಸೇತುವೆ ನಿರ್ಮಾಣದ ಕೌಶಲ್ಯ ಉಳಿಸುವ ‘ಸೇತುಬಂಧ’ ಅಭಿಯಾನ

Update: 2020-06-13 14:04 GMT

ಉಡುಪಿ, ಜೂ.13: ಕಂಗು, ಬೊಂಬು, ಬಿಳಲುಗಳಿಂದ ಸೇತುವೆ ನಿರ್ಮಿಸುವ ಹಳ್ಳಿಯ ಶ್ರಮಿಕ ಜನರ ಸ್ಥಳೀಯ ಕೌಶಲ್ಯವನ್ನು ಉಳಿಸುವ ಉದ್ದೇಶದಿಂದ ಮಾಳ ಮಣ್ಣಪಾಪು ಮನೆ ಮತ್ತು ಪ್ರಾಚಿ ಪ್ರತಿಷ್ಠಾನದ ವತಿಯಿಂದ ‘ಸೇತು ಬಂಧ’ ಎಂಬ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

ಅನೇಕ ತೊರೆಗಳನ್ನು ಹೊಂದಿರುವ ಕಾರ್ಕಳ ತಾಲೂಕಿನ ಮಾಳನಂತಹ ಹಳ್ಳಿಯಲ್ಲಿ ಸೇತುವೆಗಳು ಜನರ ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ. ಇಲ್ಲಿ ಕಾಂಕ್ರೀಟ್ ಸೇತುವೆಗಳು ದಶಕಗಳವರೆಗೆ ಇದ್ದರೆ, ಮರದ ಸೇತುವೆಗಳನ್ನು ಪ್ರತಿ ವರ್ಷ ಅಥವಾ ಎರಡು ಬಾರಿ ನಿರ್ಮಿಸಲಾಗುತ್ತದೆ. ಈ ಮರದ ಸೇತುವೆ ಯನ್ನು ನಿರ್ಮಿಸಲು ಇಲ್ಲಿನ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆ ಮರಗಳನ್ನು ಬಳಸಲಾಗುತ್ತದೆ. ಈ ಅಭಿಯಾನದ ಪ್ರಯುಕ್ತ ಮಾಳದಲ್ಲಿ ಮುಂದಿನ ಕೆಲವು ದಿನಗಳಲ್ಲಿ ಸ್ಥಳೀಯರು ಮತ್ತು ನುರಿತ ಸಿಬ್ಬಂದಿಗಳ ಸಹಾಯದಿಂದ ಸುಮಾರು 4-5 ಮರದ ಸೇತುವೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಪ್ರತಿಯೊಂದು ಸೇತುವೆ ವಿಭಿನ್ನ ವಿನ್ಯಾಸವನ್ನು ಹೊಂದಿರುತ್ತದೆ.

ಸ್ಥಳೀಯ ಸೇತುವೆಗಳ ನಿರ್ಮಾಣದಲ್ಲಿ ಹೆಚ್ಚು ನುರಿತರಾದ ಸ್ಥಳೀಯ ನಿವಾಸಿ ಶ್ರೀನಿವಾಸ್, ಅಪ್ಪಣ್ಣ ಮತ್ತು ತಂಡದ ಸಹಾಯದಿಂದ ಮೊದಲ ಸೇತುವೆ ಈಗಾಗಲೇ ಪೂರ್ಣ ಗೊಂಡಿದೆ. ಇದೇ ತಂಡ ನಿರ್ಮಿಸುತ್ತಿರುವ ಎರಡನೆ ಸೇತುವೆ ಅಂತಿಮ ಹಂತ ದಲ್ಲಿದೆ.‘ಇಲ್ಲಿನ ಜೀವಂತ ಸಂಸ್ಕೃತಿಯಾಗಿರುವ ಈ ಸೇತುವೆಗಳು ಇಲ್ಲಿನ ಜನರನ್ನು ಪರಸ್ಪರ ಸಂಪರ್ಕಿಸುವ ಕೆಲಸ ಮಾಡುತ್ತದೆ. ಇಂದು ಸೇತುವೆ ನಿರ್ಮಿಸುವ ಈ ವಾರ್ಷಿಕ ಆಚರಣೆ ಮರೆಯಾಗುತ್ತಿದೆ.

ಈಗಲೂ ಈ ಸೇತುವೆಗಳ ಬಳಕೆ ಇರುವುದರಿಂದ ನೈಸರ್ಗಿಕ ವಸ್ತುಗಳನ್ನು ಮಾತ್ರ ಬಳಸಿಕೊಂಡು ಅಡಿಕೆ ಮರದ ಸೇತುವೆಗಳನ್ನು ನಿರ್ಮಿಸುವ ಈ ಕೌಶಲ್ಯವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ. ಇಂತಹ ಕಾರ್ಯದಿಂದ ಜನ ಒಟ್ಟಿಗೆ ಸೇರಲು ಒಂದು ಅವಕಾಶ ಸಿಕ್ಕಿದಂತಾಗುತ್ತದೆ ಮತ್ತು ಒಂದು ಪ್ರಮುಖ ಕೌಶಲ್ಯವನ್ನು ಉಳಿಸಿದಂತೆ ಆಗುತ್ತದೆ’ ಎಂದು ಮಣ್ಣಪಾಪುವಿನ ಪುರುಷೋತ್ತಮ ಅಡ್ವೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News