‘ರಾಜ್ಯದಲ್ಲಿ ಕೊರೋನ ಹರಡಲು ತಬ್ಲೀಗಿಗಳು ಕಾರಣ’ ಎಂಬ ಆರೋಪ ಸುಳ್ಳು ಎನ್ನುವುದನ್ನು ಸಾಬೀತುಪಡಿಸಿದ ಸಿಎಂ ಹೇಳಿಕೆ

Update: 2020-06-16 13:32 GMT

ಬೆಂಗಳೂರು: ರಾಜ್ಯದಲ್ಲಿ ಕೊರೋನ ವೈರಸ್ ವ್ಯಾಪಕವಾಗಿ ಹರಡಲು ತಬ್ಲೀಗಿ ಜಮಾತ್ ಸದಸ್ಯರು ಕಾರಣ ಎಂದು ರಾಜ್ಯದ ಮಾಧ್ಯಮಗಳು ಮತ್ತು ಸಂಘಪರಿವಾರ  ಮಾಡಿದ್ದ ಆರೋಪಗಳು ಸುಳ್ಳು ಎನ್ನುವುದು ನಿನ್ನೆ ಮುಖ್ಯಮಂತ್ರಿ ಯಡಿಯೂರಪ್ಪನವರು ನೀಡಿದ ಹೇಳಿಕೆಯಿಂದ ಬಹಿರಂಗಗೊಂಡಿದೆ.

ರಾಜ್ಯದಲ್ಲಿ ಕೊರೋನ ವೈರಸ್ ನಿಯಂತ್ರಣ, ಕ್ವಾರಂಟೈನ್ ಬಗ್ಗೆ ನಿನ್ನೆ ಮಾಹಿತಿ ನೀಡಿದ್ದ ಸಿಎಂ ರಾಜ್ಯದಲ್ಲಿ ಒಟ್ಟು 7,000 ಪ್ರಕರಣಗಳು ದಾಖಲಾಗಿವೆ ಎಂದಿದ್ದರು. ಮಹಾರಾಷ್ಟ್ರದಿಂದ ಬರುವವರು 7 ದಿನ ಕ್ವಾರಂಟೈನ್ ನಲ್ಲಿ, 7 ದಿನಗಳ ಕಾಲ ಮನೆಗಳಲ್ಲಿ ಕ್ವಾರಂಟೈನ್ ನಲ್ಲಿ ಇರಬೇಕು. ಇತರ ರಾಜ್ಯಗಳಿಂದ ಬರುವವರು 14 ದಿನಗಳ ಕಾಲ ಹೋಮ್ ಕ್ವಾರಂಟೈನ್ ನಲ್ಲಿ ಇರಬೇಕು ಎಂದು ಸರಕಾರದ ಪ್ರಕಟನೆ ತಿಳಿಸಿತ್ತು.

ಕೊರೋನ ನಿಯಂತ್ರಣದ ಹಿನ್ನೆಲೆಯಲ್ಲಿ ಸಚಿವರೊಂದಿಗೆ ಮಾತುಕತೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ, “ರಾಜ್ಯದಲ್ಲಿ ವರದಿಯಾದ 7,000 ಪ್ರಕರಣಗಳಲ್ಲಿ 4,386 ಪ್ರಕರಣಗಳು ಮಹಾರಾಷ್ಟ್ರದಿಂದ ಬಂದವರದ್ದು ಮತ್ತು 1,340 ಪ್ರಕರಣಗಳು ಅವರ ಸಂಪರ್ಕದಿಂದ ತಗಲಿದ್ದಾಗಿದೆ. ಇನ್ನುಳಿದಂತೆ 216 ಮಂದಿ ವಿದೇಶದಿಂದ ಬಂದವರಲ್ಲಿ, 87 ಪ್ರಕರಣಗಳು ದಿಲ್ಲಿಯಿಂದ ಬಂದವರಲ್ಲಿ ಮತ್ತು 67 ಪ್ರಕರಣಗಳು ತಮಿಳುನಾಡಿನಿಂದ ಬಂದವರಲ್ಲಿ ದೃಢಪಟ್ಟಿದೆ” ಎಂದು ಮಾಹಿತಿ ನೀಡಿದ್ದರು.

ಸ್ವತಃ ಮುಖ್ಯಮಂತ್ರಿಯವರೇ ನೀಡಿದ ಈ ಮಾಹಿತಿಯಿಂದ ಕೇವಲ 87 ಪ್ರಕರಣಗಳು ದಿಲ್ಲಿಯಿಂದ ಬಂದವರಲ್ಲಿ ವರದಿಯಾಗಿತ್ತು ಎನ್ನುವುದು ದೃಢಪಟ್ಟಿದೆ. ಒಂದು ವೇಳೆ ಇವರೆಲ್ಲರೂ ತಬ್ಲೀಗಿ ಜಮಾತ್ ಗೆ ಸೇರಿದವರಾಗಿದ್ದರೂ ರಾಜ್ಯದ ಒಟ್ಟು ಪ್ರಕರಣಗಳಲ್ಲಿ ಈ ಪಾಲು ಅತ್ಯಂತ ಕನಿಷ್ಟ. ಅಂದರೆ ಇತರ ಪ್ರಕರಣಗಳ ಪಾಲು ಸುಮಾರು 98.75 ಶೇಕಡ.

ಕೊರೋನ ವೈರಸ್ ಪ್ರಕರಣಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗಿರುವುದು ಮಹಾರಾಷ್ಟ್ರದಿಂದ ಬಂದವರಲ್ಲಿ ಮತ್ತು ಸೋಂಕಿತರ ಸಂಪರ್ಕ ಹೊಂದಿದವರಲ್ಲಿ. ಈ ಮೂಲಕ ಕೊರೋನ ಬಿಕ್ಕಟ್ಟಿನ ಆರಂಭದಲ್ಲಿ ವೈರಸ್ ಹೆಚ್ಚಲು ತಬ್ಲೀಗಿಗಳೇ ಕಾರಣ ಎಂದು ಮಾಧ್ಯಮಗಳು, ಸಂಘಪರಿವಾರ ಮಾಡಿದ್ದ ಆರೋಪಗಳು ಸುಳ್ಳು ಎನ್ನುವುದು ಸಾಬೀತಾಗಿದೆ.

ದೇಶದಲ್ಲಿ ಹಲವು ಘಟನೆಗಳನ್ನು ಮುಂದಿಟ್ಟು ತಬ್ಲೀಗಿಗಳನ್ನು ದೂಷಿಸುವ, ಕೊರೋನ ಹೆಸರಲ್ಲಿ ಒಂದು ಸಮುದಾಯದ ಮೇಲೆ ಆರೋಪ ಹೊರಿಸುವ ಹಲವಾರು ಪ್ರಯತ್ನಗಳು ನಡೆದಿದ್ದವು. ತಬ್ಲೀಗಿಗಳು, ಒಂದು ಸಮುದಾಯದ ಜನರು ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆ, ಕ್ವಾರಂಟೈನ್ ನಲ್ಲಿ ಗದ್ದಲ ನಡೆಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ದ್ವೇಷ ಹರಡಲಾಯಿತು. ಆದರೆ ನಂತರ ಈ ಎಲ್ಲಾ ಆರೋಪಗಳು ಸುಳ್ಳು ಎನ್ನುವುದು ಸಾಬೀತಾಗಿದೆ. ಇದೀಗ ಕನ್ನಡ ಮಾಧ್ಯಮಗಳು, ದ್ವೇಷ ಹರಡುವವರು ಹರಡಿದ ಆರೋಪಗಳು ಸುಳ್ಳು ಎನ್ನುವುದು  ಸ್ವತಃ ಮುಖ್ಯಮಂತ್ರಿಯವರ ಹೇಳಿಕೆಯ ಮೂಲಕ ಸಾಬೀತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News